ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Naveen Sagar Column: ಇದ್ದರೆ ಅನಂತ್ ನಾಗ್ ಅಭಿಮಾನಿಯಂತಿರಬೇಕು

ಅನಂತನಾಗ್ ನಮ್ಮಪ್ಪಾಜಿಯ ಪರಮ ಫೇವರಿಟ್ ನಟ. ಸಿನಿಮಾದಲ್ಲಿ ಅನಂತನಾಗ್ ಇದ್ದಾರೆ ಅಂದರೆ ಅದೆಂಥದೇ ಸಿನಿಮಾ ಆಗ್ಲೀ ನೋಡಬೇಕೆಂದು ಇಂದಿಗೂ ಹಾತೊರೆಯುತ್ತಾರೆ. ಟಿವಿಯಲ್ಲಿ ರಿಮೋಟ್ ಬಟನ್ ಒತ್ತುವಾಗ ಅನಂತನಾಗ್ ಕಾಣಿಸಿದರೆ ಸ್ಕ್ರೋಲಿಂಗ್ ಅಲ್ಲಿಯೇ ನಿಲ್ಲುತ್ತದೆ. ಅಪ್ಪಾಜಿಗೂ ಅನಂತ ನಾಗ್‌ಗೂ ಕೆಲವು ತಿಂಗಳುಗಳ ವ್ಯತ್ಯಾಸವಷ್ಟೇ. ಇಬ್ಬರೂ ಎಪ್ಪತ್ತೇಳರ ಹರೆಯದಲ್ಲಿದ್ದಾರೆ.

ಇದ್ದರೆ ಅನಂತ್ ನಾಗ್ ಅಭಿಮಾನಿಯಂತಿರಬೇಕು

-

ಪದಸಾಗರ

ವಿಶ್ವೇಶ್ವರ ಭಟ್ಟರು ಈ ವರ್ಷದ ತಮ್ಮ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಿರಿಯ ನಟ ಅನಂತ ನಾಗ್ ಅವರನ್ನು ಮುಖ್ಯ ಅತಿಥಿಯಾಗಿ ಕರೆಯುತ್ತಿದ್ದಾರಂತೆ. ಈ ವಿಷಯ ಕಿವಿ ತಲುಪುತ್ತಿದ್ದಂತೆಯೇ ಕಣ್ಣಲ್ಲಿ ಮಿಂಚು, ನಗುತುಂಬಿದ ತುಟಿಯಂಚು.

ಅನಂತನಾಗ್ ನಮ್ಮಪ್ಪಾಜಿಯ ಪರಮ ಫೇವರಿಟ್ ನಟ. ಸಿನಿಮಾದಲ್ಲಿ ಅನಂತನಾಗ್ ಇದ್ದಾರೆ ಅಂದರೆ ಅದೆಂಥದೇ ಸಿನಿಮಾ ಆಗ್ಲೀ ನೋಡಬೇಕೆಂದು ಇಂದಿಗೂ ಹಾತೊರೆಯುತ್ತಾರೆ. ಟಿವಿಯಲ್ಲಿ ರಿಮೋಟ್ ಬಟನ್ ಒತ್ತುವಾಗ ಅನಂತನಾಗ್ ಕಾಣಿಸಿದರೆ ಸ್ಕ್ರೋಲಿಂಗ್ ಅಲ್ಲಿಯೇ ನಿಲ್ಲುತ್ತದೆ. ಅಪ್ಪಾಜಿಗೂ ಅನಂತನಾಗ್‌ಗೂ ಕೆಲವು ತಿಂಗಳುಗಳ ವ್ಯತ್ಯಾಸವಷ್ಟೇ. ಇಬ್ಬರೂ ಎಪ್ಪತ್ತೇಳರ ಹರೆಯದಲ್ಲಿದ್ದಾರೆ.

ಮಿಂಚಿನ ಓಟ, ಆಕ್ಸಿಡೆಂಟ್ ಕಾಲದಿಂದ ನೋಡಿಕೊಂಡು ಬಂದ ಅಪ್ಪಾಜಿಯ ವಯಸ್ಸಿನವರಿಗೂ, ಬೆಳದಿಂಗಳ ಬಾಲೆ ಕಾಲದ ಯುವಕರಾದ ನನ್ನಂಥವರಿಗೂ, ಮುಂಗಾರು ಮಳೆ, ಗಾಳಿಪಟ ಸಮಯ ದ ಮಿಲೆನಿಯಲ್ ಕಿಡ್ಸ್‌ಗೂ, ಕೆಜಿಎಫ್ ಕಾಲದ ಜೆನ್ ಜೀ ಕಿಡ್ಸ್‌ಗೂ ಫೇವರಿಟ್ ಆಗಿ ಉಳಿದಿರುವ, ಔಟ್ ಡೇಟೆಡ್ ಆಗದೇ ನಿಂತಿರುವ ನಟ ಅಂದರೆ ಅದು ಅನಂತನಾಗ್. ಇದು ಕೇವಲ ಹುಡುಗರ ಮಾತಾಯ್ತು. ಹೆಣ್ಣುಮಕ್ಕಳ ಎದೆಯಲ್ಲಿ ಅನಂತನಾಗ್‌ಗೊಂದು ರೊಮ್ಯಾಂಟಿಕ್ ದೇವಸ್ಥಾನವೇ ಇದೆ. ಬಯಲು ದಾರಿ, ಬೆಂಕಿಯ ಬಲೆ, ಮುದುಡಿದ ತಾವರೆ ಅರಳಿತು, ಇಬ್ಬನಿ ಕರಗಿತು, ಅರುಣರಾಗ.. ಈ ಸಮಯದಿಂದ ಹುಟ್ಟಿಕೊಂಡ ಕ್ರಶ್ ಅದು.

ಇದನ್ನೂ ಓದಿ:Naveen Sagar Column: ನಾವ್ಯಾರೂ ಮನುಷ್ಯರಲ್ಲ.. ಕೇವಲ ಕಂಟೆಂಟ್‌ಗಳು!

ಬಾಲಿವುಡ್‌ನಲ್ಲಿ ಅಮಿತಾಭ್ ಹೇಗೆ ಫಿಟ್ ಆಂಡ್ ಫೈನ್ ವೃದ್ಧರಾಗಿದ್ದಾರೋ, ಇಲ್ಲಿ ನಮ್ಮ ಅನಂತನಾಗ್ ಅಷ್ಟೇ ಚೆಂದದ ಸಾಲ್ಟ್ ಆಂಡ್ ಪೆಪ್ಪರ್ ತಲೆಗೂದಲು, ಗಡ್ಡ-ಮೀಸೆಯ ಚೆಂದದ ಓಲ್ಡ್ ಮ್ಯಾನ್.. ಅಲ್ಲಲ್ಲ ಯಂಗ್‌ಮ್ಯಾನ್ ಆಗಿದ್ದಾರೆ. ಕುರ್ತಾ ಹಾಕಿದ್ರೂ ಚೆಂದ, ಸೂಟ್ ಹಾಕಿದ್ರೂ ಚೆಂದ, ಸೀದಾಸಾದಾ ಫಾರ್ಮಲ್ ಶರ್ಟ್ ಪ್ಯಾಂಟ್ ಹಾಕಿ ಇನ್ ಶರ್ಟ್ ಮಾಡಿದ್ರೂ ಚೆಂದ. ಇಂದಿಗೂ ಆ ದೊಡ್ಡ ಕಣ್ಣುಗಳು ಸಾವಿರ ಮಾತನಾಡುತ್ತವೆ.

ಹಣೆಮೇಲೆ ಜಾರುವ ಕೂದಲ ರಾಶಿ ಮಾತಾಡುತ್ತದೆ. ನಟನೆ ಮಾಡಿದ್ದೇ ಗೊತ್ತಾಗದಂತೆ ನಟಿಸಿ ಬಿಡುವ, ಅಷ್ಟು ಸುಲಭಕ್ಕೆ ಯಾರಿಂದಲೂ ಅನುಕರಿಸಲಾಗದ ಶೈಲಿ ಹೊಂದಿರುವ ಅನಂತ್‌ಗೆ ಅನಂತ್‌ರೇ ಸಾಟಿ.

ಕನ್ನಡಿಗರ ತಪಸ್ಸಿನ ಫಲ ಎಂಬಂತೆ ಅವರಿಗೆ ಪದ್ಮಭೂಷಣ ಘೋಷಣೆಯಾದಾಗ, ಸಂತಸದಲ್ಲಿ ಅವರ ಚಿತ್ರಗಳ ಬಗ್ಗೆ, ಅವರ ಸಿನಿ ಜರ್ನಿಯ ಬಗ್ಗೆ ಹಲವಾರು ನೆನಪುಗಳು ಹರಿದಾಡಿದವು. ಅವರ ನಟನೆಯ ಅತ್ಯುತ್ತಮ ದೃಶ್ಯಗಳೆಲ್ಲವೂ ಕಣ್ಮುಂದೆ ಬಂದು ಹೋದವು. ಬೆಳದಿಂಗಳ ಬಾಲೆ, ಉಂಡೂ ಹೋದ ಕೊಂಡೂ ಹೋದ, ಹೆಂಡ್ತಿಗ್ಹೇಳ್ಬೇಡಿ, ಉದ್ಭವ, ಗಣೇಶನ ಸರಣಿ ಚಿತ್ರಗಳು, ಹೆಸರಿಸುತ್ತಾ ಹೋದರೆ ಮುಗಿಯದ ಪಟ್ಟಿ. ಸೀರಿಯಸ್ ಪಾತ್ರಗಳಿಂದ ಸಾಂಸಾರಿಕ ಪಾತ್ರಗಳಿಗೆ ಹೊರಳಿ, ಅಲ್ಲಿಂದ ಹಾಸ್ಯ ಪಾತ್ರಗಳಿಗೆ ಜಿಗಿದು, ನೋಡನೋಡುತ್ತಿದ್ದಂತೆ ಸೆಕೆಂಡ್ ಇನ್ನಿಂಗ್ಸ್‌ʼನಲ್ಲಿ ಅತ್ಯಂತ ಬೇಡಿಕೆಯ ಪೋಷಕ ನಟನಾಗಿ ಇಂದಿಗೂ ಬೇಡಿಕೆ ಉಳಿಸಿಕೊಂಡು ಸಾಗುತ್ತಿರುವ ಬಗೆ ಅಚ್ಚರಿ ಹುಟ್ಟಿಸುತ್ತದೆ.

Ananthnag

ಇಷ್ಟೆಲ್ಲ ಅಭಿಮಾನಿಗಳನ್ನು ಹೊಂದಿರುವ ಅನಂತ್‌ನಾಗ್ ಅವರಿಗೆ ಅಭಿಮಾನಿ ಸಂಘವೇ ಇಲ್ಲ. ಹೌದು. ನಂಬಲೇಬೇಕು. ಅನಂತನಾಗ್ ಅಭಿಮಾನಿ ಸಂಘ ಯಾಕಿಲ್ಲ? ಅನಂತ್ ನಾಗ್ ಸಿನಿಮಾ ರಿಲೀಸಾದ್ರೆ ಯಾಕೆ ಅಭಿಮಾನಿಗಳು ಇದುವರೆಗೂ ಥಿಯೇಟರ್ ಮುಂದೆ ಹಬ್ಬ ಮಾಡಿಲ್ಲ? ಯಾಕೆ ಕಟೌಟ್ ನಿಲ್ಲಿಸಿ ಹಾಲು ಸುರಿದಿಲ್ಲ? ಯಾಕೆ ಪಟಾಕಿ ಹಚ್ಚಿಲ್ಲ? ಯಾಕೆ ಅನಂತನಾಗ್ ಜನ್ಮದಿನ ದಂದು ಇತರ ಸ್ಟಾರ್ ನಟರ ಜನ್ಮದಿನದಂದು ಕಾಣಿಸೋ ಅಬ್ಬರ ಎಂದೂ ಕಾಣಿಸಿಲ್ಲ? ನಾನು ಇವತ್ತಿನ ಅನಂತನಾಗ್ ಬಗ್ಗೆ ಕೇಳ್ತಾ ಇಲ್ಲ. ಅನಂತನಾಗ್ ಹಿಟ್ ಮೇಲೆ ಹಿಟ್ ಸಿನಿಮಾ ಕೊಟ್ಟಾ ಗಲೂ ಇಂಥ ಯಾವ ಚಿತ್ರಣವನ್ನೂ ನಾವು ಕಂಡಿಲ್ಲ ಕೇಳಿಲ್ಲ. ಯಾಕೆ? ಇದಕ್ಕೆ ನಾನು ಕಂಡು ಕೊಂಡ ಉತ್ತರ ಏನು ಗೊತ್ತಾ?

ಅನಂತನಾಗ್ ನಟಿಸಿರುವ ಚಿತ್ರಗಳು, ನಿರ್ವಹಿಸಿದ ಪಾತ್ರಗಳು, ನಿಜಜೀವನದಲ್ಲಿ ಕಟ್ಟಿಕೊಂಡು ಬಂದ ವ್ಯಕ್ತಿತ್ವ ಅವರ ಅಭಿಮಾನಿಗಳನ್ನೂ ಅದೇ ರೀತಿ ಸ್ತಿಮಿತದಲ್ಲಿ ಇಡುವಲ್ಲಿ ಯಶಸ್ವಿಯಾಗಿದೆ.

ಅನಂತನಾಗ್ ಯಾವ ಸ್ಟಾರ್‌ಗೂ ಕಮ್ಮಿ ಇಲ್ಲದ ನಟ. ಸ್ಟಾರ್ ನಟರೇ. ಆದರೆ ಅವರು ಸಿನಿಮಾ ವನ್ನು ಪ್ರೊಫೆಷನ್ ಎಂಬಂತೆ ಪರಿಗಣಿಸಿ, ಪ್ಯಾಶನೇಟ್ ಆಗಿ ನಿರ್ವಹಿಸುತ್ತಾ ಬಂದ ನಟ. ಎಲ್ಲ ಉದ್ಯೋಗಗಳಂತೆ ಇದೂ ಒಂದು ಉದ್ಯೋಗ ಎಂಬಷ್ಟೇ ಸಹಜವಾಗಿ ಮಾಡ್ಕೊಂಡು ಬಂದವ್ರು. ಅಭಿಮಾನಿಗಳನ್ನು ಎಷ್ಟು ಹತ್ತಿರ ಇಡಬೇಕು.. ಎಷ್ಟು ದೂರ ಇಡಬೇಕು ಅನ್ನೋದರ ಸ್ಪಷ್ಟತೆ ಇದ್ದವರು. ಅವರ ಅಭಿಮಾನಿಗಳೂ ಅಷ್ಟೇ ಸೆನ್ಸಿಬಲ್. ಅನಂತನಾಗ್ ಅವರ ಸಿನಿಮಾ ಒಂದು ಚೆನ್ನಾಗಿಲ್ಲ ಅಂತ ವಿಮರ್ಶೆ ಬಂದರೆ ಅದನ್ನು ಅಭಿಪ್ರಾಯವಾಗಿ ಪರಿಗಣಿಸೋ ಪ್ರಬುದ್ಧರು ಮತ್ತು ಸಂಭಾವಿತರು. ತಾವೂ ಕೂಡ ಅಷ್ಟೇ ನಿಷ್ಠುರವಾಗಿ ವಿಮರ್ಶಿಸುವವರು. ಇದೇ ಕಾರಣಕ್ಕೆ ಅನಂತನಾಗ್ ಫ್ಯಾನ್ ವಾರ್ ನೋಡಲಿಲ್ಲ.

ಹೇಟರ್‌ಗಳನ್ನು ನೋಡಲಿಲ್ಲ. ಚೇಲಾಗಳನ್ನು ಸೃಷ್ಟಿಸಲಿಲ್ಲ. ಸುತ್ತಮುತ್ತ ಪಟಾಲಮ್ಮು, ಬೌನ್ಸರ್‌ ಗಳು, ಇತ್ಯಾದಿಗಳ್ಯಾವುವೂ ಇಲ್ಲದೇ ಸ್ವತಂತ್ರವಾಗಿ, ಸರಳವಾಗಿ ನೆಮ್ಮದಿಯಾಗಿ ಯಾವ ಇಮೇಜಿನ ಹ್ಯಾಂಗೋ ವರ್ರೂ ಇಲ್ಲದೇ ಅದ್ಭುತವಾಗಿ ಐವತ್ತು ವರ್ಷಗಳ ಸಿನಿಜರ್ನಿ ಪೂರೈಸಿದರು. ಸೋಲು ಗೆಲುವುಗಳು ಅವರನ್ನು ಬಾಧಿಸಲಿಲ್ಲ. ಅವರು ಸ್ಪರ್ಧೆಗೆ ಬೀಳಲಿಲ್ಲ. ಭ್ರಮೆಗೆ ಒಳಗಾಗ ಲಿಲ್ಲ. ಆದ್ದರಿಂದಲೇ ಯಾರೂ ಮಾಡದಷ್ಟು ವಿಭಿನ್ನ ವಿಶಿಷ್ಟ ಪಾತ್ರಗಳನ್ನು ಮಾಡೋದಕ್ಕೆ ಸಾಧ್ಯ ವಾಯ್ತು. ಇನ್ ಫ್ಯಾಕ್ಟ್‌ ಅನಂತನಾಗ್ ಹಾದಿಯ ಸಾಗುವಂತೆ ಕಂಡಿದ್ದ ರಮೇಶ್ ಅರವಿಂದ್ ಅವ್ರಿಗೂ ಇಂಥ ಜರ್ನಿ ಸಾಧ್ಯ ಆಗಲಿಲ್ಲ. ಹೀಗಾಗಿ ಅನಂತನಾಗ್ ಅವರಿಗೆ ಹೋಲಿಸುವ ಇನ್ನೊಬ್ಬರು ಸಿಗೋದಿಲ್ಲ.

ನನ್ನ ಪ್ರಕಾರ, ನಟ ತನ್ನ ಅಭಿಮಾನಿಯನ್ನು ರೂಪಿಸುತ್ತಾನೆ. ಇನ್ನೂ ಸರಿಯಾಗಿ ಹೇಳೋದಾದರೆ ನಟ ತನ್ನ ಅಭಿಮಾನಿಯನ್ನು ರೂಪಿಸಬೇಕು. ಯಥಾ ರಾಜಾ ತಥಾ ಪ್ರಜಾ ಅನ್ನೋದು ಇಲ್ಲಿ ಬಹಳ ಸಮಂಜಸ. ಇಂದಿನ ಸ್ಟಾರ್ ನಟರು, ನಿನ್ನೆ ಮೊನ್ನೆ ಬಂದ ಭ್ರಮಾಧೀನ ನಟರು ಅದ್ಯಾಕೆ ಸುಮ್ಮನೆ ತಮ್ಮ ಸುತ್ತ ಕೋಟೆ ಕಟ್ಕೋತಾರೆ. ಕೆಟ್ಟ ಅಭಿಮಾನಿಗಳನ್ನು ಬೆಳೆಸುತ್ತಾರೆ. ಕೇವಲ ತಮ್ಮ ಹೊಗಳಿಕೆಯನ್ನೇ ಬಯಸುತ್ತಾರೆ.. ಯಾಕೆ ಫ್ಯಾನ್ ವಾರ್‌ಗಳನ್ನು ಪ್ರೋತ್ಸಾಹಿಸುತ್ತಾರೆ? ತಮ್ಮ ಅಭಿಮಾನಿಗಳನ್ನು ಯಾಕೆ ಹತೋಟಿಯಲ್ಲಿ ಇಡೋ ಪ್ರಯತ್ನ ಮಾಡುವುದಿಲ್ಲ?

ರಾಶಿ ರಾಶಿ ಹಿಟ್ ಕೊಟ್ಟ ರವಿಚಂದ್ರನ್ ಯಾವತ್ತಿಗೂ ತಮ್ಮ ಅಭಿಮಾನಿ ಸಂಘಗಳನ್ನು ಪ್ರೋತ್ಸಾಹಿಸ ಲಿಲ್ಲ. ‘ಎಲ್ಲ ಅಭಿಮಾನಿಗಳ ಸಂಘ ನನ್ನ ಸಂಗ’ ಅಂತ ತೊಂಬತ್ತರ ದಶಕದ ಅತ್ಯಂತ ಪ್ರಬುದ್ಧ ಹೇಳಿಕೆ ಕೊಟ್ಟಿದ್ದರು ರವಿಚಂದ್ರನ್. ಅಂದಿಗೆ ರವಿಚಂದ್ರನ್‌ಗೆ ಕೋಟ್ಯಂತರ ಅಭಿಮಾನಿ ಗಳಿದ್ದರು. ಅವರ ಸಿನಿಮಾಗಳಿಗೆ ಪ್ರೇಕ್ಷಕ ಬಕಪಕ್ಷಿಯಂತೆ ಕಾಯುತ್ತಿದ್ದ. ಆದರೆ ರವಿಚಂದ್ರನ್ ಅಭಿಮಾನಿಗಳು, ರವಿಯ ಸಮಕಾಲೀನ ಸ್ಟಾರ್ ನಟರೆದುರು ಎಂದಿಗೂ ವಾಗ್ಯುದ್ಧಕ್ಕೆ ಇಳಿದ ಉದಾಹರಣೆ ಇಲ್ಲ. ರವಿಚಂದ್ರನ್ ಅದನ್ನು ಉತ್ತೇಜಿಸಿರುವ ಇತಿಹಾಸವೂ ಇಲ್ಲ.

ಇದೆಲ್ಲಿಂದ ಶುರು ಆಯ್ತು ಫ್ಯಾನ್ ವಾರ್?

ಸೋಷಿಯಲ್ ಮೀಡಿಯಾ ಯುಗಾರಂಭದ ನಂತರ ಇದು ಇನ್ನಷ್ಟು ಅತಿರೇಕ ತಲುಪಿಬಿಟ್ಟಿತಾ? ಅಥವಾ ನಟರಲ್ಲಿ ಕಲ್ಚರ್ ಕೊರತೆ ಕಡಿಮೆ ಆಗಿರೋದು, ಭ್ರಮೆಗಳು, ಕಮರ್ಷಿಯಲ್ ಹಪಾಹಪಿ ಗಳು, ಕೀಳು ಮಟ್ಟದ ಸ್ಪರ್ಧೆಗಳು, ನಂಬರ್ ಒನ್ ಆಗೋ ಹಟ ಇವೆಲ್ಲವೂ ಫ್ಯಾನ್‌ಗಳನ್ನು ಅದೇ ಸ್ಥಿತಿಗೆ ತಂದಿಡುತ್ತಿದೆ ಯಾ?

ರಾಜ್ ಬಿ ಶೆಟ್ಟಿ ಒಂದು ಸಂದರ್ಶನದಲ್ಲಿ ‘ನಾವು ನಟರು. ಬೇರೆ ಎಲ್ಲಾ ಉದ್ಯೋಗಗಳ ಹಾಗೆ ಇದೂ ಒಂದು ಉದ್ಯೋಗ. ಅದಕ್ಕಿಂತ ನಾವು ಹೆಚ್ಚಲ್ಲ. ನಮ್ಮನ್ನು ವಿಶೇಷವಾಗಿ ನೋಡೋ ಅಗತ್ಯ ಇಲ್ಲ. ತೆರೆಯಿಂದ ಆಚೆ ನಾವು ನಿಮ್ಮಷ್ಟೇ ಸಾಮಾನ್ಯರು. ನಿಮ್ಮಂತೆಯೇ ಎಲ್ಲ ದೌರ್ಬಲ್ಯಗಳ ಜೊತೆ ಬದುಕ್ತಾ ಇರೋವ್ರು. ದೌರ್ಬಲ್ಯಗಳನ್ನು ಮೀರೋದಕ್ಕೆ ಪ್ರಯತ್ನ ಪಡ್ತಾ ಇರೋವ್ರು. ಜಗತ್ತಿನ ಎಲ್ಲ ವಿಚಾರಗಳಿಗೂ ಪ್ರತಿಕ್ರಿಯಿಸುವಷ್ಟು ಪರಿಣಿತರು ವಿಶೇಷರು ನಾವಲ್ಲ.

ನಮ್ಮ ಜನ್ಮದಿನ ವಿಶೇಷ ಅಲ್ಲ, ನಮ್ಮ ಸಿನಿಮಾ ಬಿಡುಗಡೆ ಅನ್ನೋದು ಕೂಡ ಒಂದು ಘಟನೆ ಅಷ್ಟೆ.’ ಹೀಗೆ ಅತ್ಯಂತ ಮೆಚೂರ್ಡ್ ಆಗಿ ಒಬ್ಬ ನಟನನ್ನು ಜನ ಹೇಗೆ ನೋಡಬೇಕು.. ಮೀಡಿಯಾ ಹೇಗೆ ನೋಡಬೇಕು ಅನ್ನೋದನ್ನು ವಿವರಿಸಿದ್ದರು. ಆದರೆ ಅದರ ಜೊತೆಯ ಅವ್ರು ಇನ್ನೊಂದು ಮಾತನ್ನೂ ಸೇರಿಸಿದ್ರು. ‘ನಾವು ಜವಾಬ್ದಾರಿಯಿಂದ ವರ್ತಿಸಬೇಕು. ನಮ್ಮನ್ನು ಜನ ಗಮನಿಸುತ್ತಾರೆ. ಬೇಡ ಅಂದ್ರೂ ಫಾಲೋ ಮಾಡ್ತಾರೆ. ನಾವು ಕಾನೂನಿಗೆ ಅತೀತರಲ್ಲ. ಪ್ರಶ್ನೆಗೆ ಅತೀತರಲ್ಲ’ ಅಂತ.

ಎಲ್ಲ ನಟರೂ ಇಷ್ಟು ಸೆನ್ಸಿಬಲ್ ಆಗಿ ಇದ್ದಿದ್ದರೆ ಸಿನಿಮಾ ಇಂಡಸ್ಟ್ರಿ ನಿಜಕ್ಕೂ ಅದ್ಭುತವಾಗಿರ ಬಹುದಿತ್ತು.

ಅಂದ ಹಾಗೆ, ಸ್ಟಾರ್ ನಟರ ಅಭಿಮಾನಿಗಳು ಯಾಕೆ ಅತಿರೇಕದಿಂದ ವರ್ತಿಸುತ್ತಾರೆ? ಸೋಷಿಯಲ್ ಮೀಡಿಯಾ ಮೂಲಕ ನಟನನ್ನು ತಲುಪಬಹುದು ಅಂತಾನಾ? ಅಥವಾ ಇದು ಗಮನ ಸೆಳೆಯುವ ಪ್ರಚಾರ ಪಡೆಯುವ ಫೇಮಸ್ ಆಗುವ ಶಾರ್ಟ್ ಕಟ್ ಅಂದ್ಕೊಂಡಿದ್ದಾರಾ? ಅಥವಾ ಅಮಾಯಕತೆ ಮತ್ತು ಅಂಧಭಕ್ತಿಯಾ? ಹುಂಬತನವಾ?

ದರ್ಶನ್ ಜೈಲಿಗೆ ಹೋಗಿದ್ರೂ ಆತನ ಅಭಿಮಾನಿಗಳ ದುರ್ವರ್ತನೆ ಇಂದಿಗೂ ನಿಂತಿಲ್ಲ. ಸುದೀಪ್ ಅಭಿಮಾನಿಗಳು ದರ್ಶನ್ ಅಭಿಮಾನಿಗಳನ್ನು ಕೆಣಕೋದು, ದರ್ಶನ್ ಅಭಿಮಾನಿಗಳು ಸುದೀಪ್ ಅಭಿಮಾನಿಗಳಿಗೆ ಅಶ್ಲೀಲ ಬಯ್ಗುಳಗಳ ಸುರಿಮಳೆ ಸುರಿಸೋದು, ಇಹಲೋಕವನ್ನೇ ತ್ಯಜಿಸಿರೋ ಪುನೀತ್ ವಿರುದ್ಧ ದರ್ಶನ್ ಅಭಿಮಾನಿಗಳು ಅವಾಚ್ಯ ನಿಂದನೆ ನಡೆಸೋದು ಇವೆಲ್ಲವೂ ನಿಜಕ್ಕೂ ಅಸಹ್ಯ ತರಿಸುತ್ತದೆ. ಅದನ್ನೂ ಬಿಡಿ. ಸಿನಿಮಾಗಳ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ವ್ಯಕ್ತಪಡಿಸಿದರೆ, ಸ್ಟಾರ್ ನಟನ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದ್ರೆ ಅಭಿಮಾನಿಗಳು ಕೊಲ್ಲುವ ಮಾತುಗಳನ್ನಾ ಡ್ತಾರೆ. ಬೆದರಿಕೆ ಹಾಕ್ತಾರೆ, ಸೊಂಟದ ಕೆಳಗಿನ ಬಯ್ಗುಳ ಪ್ರಯೋಗ ಮಾಡ್ತಾರೆ, ಅಮ್ಮ ಅಕ್ಕ ಎಲ್ಲರನ್ನು ಬಳಸಿ ಬಯ್ಯುತ್ತಾರೆ. ಇದನ್ನು ಯಾರು ನಿಯಂತ್ರಿಸೋದು?

ಸ್ಟಾರ್ ನಟರು ಇದರ ವಿರುದ್ಧ ಯಾಕೆ ಮಾತಾಡೋದಿಲ್ಲ. ತಾವೇ ಮುಂದೆ ನಿಂತು ಅವರನ್ನು ತಿದ್ದೋದಿಲ್ಲ?

ನಟರೇ ಮುಂದೆ ಬಂದು, ತಮ್ಮ ಪರವಾಗಿ ಅಂಧಾಭಿಮಾನ ಮೆರೆಯುತ್ತಾ, ಈ ರೀತಿ ಅಶ್ಲೀಲ ಬಯ್ಗುಳ ಪ್ರಯೋಗಿಸಿ ಬೆದರಿಕೆ ಒಡ್ಡೋವ್ರನ್ನು ಹಿಡಿದು ಪೊಲೀಸರಿಗೆ ಕೊಟ್ಟು ಶಿಕ್ಷೆಗೆ ಆಗ್ರಹಿಸೋದು ಸಾಧ್ಯ ಇಲ್ವಾ? ‘ಇಂಥವ್ರನ್ನು ನಾನು ಅಭಿಮಾನಿ ಅಂತ ಹೇಳ್ಕೊಳೋದಕ್ಕೆ ಅಸಹ್ಯ ಪಡ್ತೀನಿ. ಬುದ್ಧಿ ಕಲಿಸಿ ಸರ್ ಇವ್ರಿಗೆ’ ಅಂತ ಹೇಳಿ, ಆ ರೀತಿಯ ಹಿಂಡನ್ನು ಪೊಲೀಸರಿಗೆ ಒಂದೇ ಒಂದು ಸಲ ಒಪ್ಪಿಸಿಬಿಡ್ಲಿ, ಈ ಕೆಟ್ಟ ಅಭಿಮಾನಿ ಗಳ ಸಂತತಿಯೇ ಬದಲಾಗಿ ಹೋಗದೇ ಇದ್ರೆ ಹೇಳಿ.

‘ನನ್ನ ಅಭಿಮಾನಿಗಳು ಅನಿಸಿಕೊಂಡವ್ರು ಒಂದು ಸಾವಿರ ಶುಲ್ಕ ಕಟ್ಟಿ ರಿಜಿಸ್ಟರ್ ಆಗಬೇಕು. ಅವ್ರು ಮಾತ್ರ ನನ್ನ ಹೊಣೆ. ಅವ್ರು ತಪ್ಪು ಮಾಡಿದ್ರೆ ನಾನು ಶಿಕ್ಷೆ ಅನುಭವಿಸ್ತೀನಿ. ಅವ್ರು ಬಯ್ಗುಳ ಪ್ರಯೋಗ ಮಾಡಿದ್ರೆ ನಾನು ಕ್ಷಮೆ ಕೇಳ್ತೀನಿ. ಮಿಕ್ಕವ್ರು ಅಭಿಮಾನಿ ಅನ್ನೋ ಹೆಸರಲ್ಲಿ ಏನೇ ಪುಂಡಾಟಿಕೆ ಮೆರೆದ್ರೂ ನಾನೇ ಅವರನ್ನು ಪೊಲೀಸ್ರಿಗೆ ಹಿಡ್ಕೊಡ್ತೀನಿ’ ಅನ್ನೋ ಎಚ್ಚರಿಕೆಯನ್ನು ಒಬ್ಬ ನಟ ರವಾನೆ ಮಾಡಲಿ. ಈ ಫ್ಯಾನ್ ವಾರ್ ತಣ್ಣಗಾಗದೇ ಹೋದ್ರೆ ನೋಡಿ.

ಪುಕ್ಕಟೆ ಅಂದಾಗ ಅಭಿಮಾನ ತೋರಿಸೋದಕ್ಕೆ ಏನು ಕಷ್ಟ ಹೇಳಿ? ಸೋಷಿಯಲ್ ಮೀಡಿಯಾದಲ್ಲಿ ಇಷ್ಟೆ ಮೆರೆಯೋ ಅಭಿಮಾನಿಗಳು ಹಣ ಖರ್ಚು ಮಾಡಿ ಸಿನಿಮಾ ಕೂಡ ನೋಡೋದಿಲ್ಲ. ಈ ಸೋ ಕಾಲ್ಡ್ ಅಭಿಮಾನಿಗಳೆಲ್ಲರೂ ಮುಗಿಬಿದ್ದು ಸಿನಿಮಾ ನೋಡಿದರೂ ಸ್ಟಾರ್ ನಟರ ಇಂದಿನ ಸಿನಿಮಾದ ಬಜೆಟ್ಟಿನ ಹತ್ತು ಪರ್ಸೆಂಟ್ ಕೂಡ ಅದು ಟಚ್ ಮಾಡಲ್ಲ.

ಅಭಿಮಾನಿಗಳು ನಟನನ್ನು ಹಾದಿ ತಪ್ಪಿಸ್ತಾ ಇದಾರೆ. ನಟ ಅಭಿಮಾನಿಗಳ ವರ್ತನೆಯನ್ನು ತಿದ್ದದೇ ಅವರನ್ನು ಇನ್ನಷ್ಟು ಹಾಳುಮಾಡುತ್ತಿzನೆ. ಇದರ ಪರಿಣಾಮ ಇಂಡಸ್ಟ್ರಿಯ ಹಾಗೂ ಸಮಾಜದ ಮೇಲಾಗ್ತಾ ಇದೆ.

ಇತರ ನಟರು ಮತ್ತು ಅವರ ಅಭಿಮಾನಿಗಳು, ಅನಂತನಾಗ್ ಮತ್ತು ಅವರ ಅಭಿಮಾನಿಗಳಿಂದ ಕಲಿಯುವುದಿದೆ. ಅನಂತನಾಗ್ ಇಂದಿಗೂ ತಮ್ಮ ಶೂಟಿಂಗ್ ಸೆಟ್‌ಗಳಲ್ಲಿ ಮತ್ತು ಇನ್ನಿತರ ಸಂದರ್ಭ‌ಗಳಲ್ಲಿ ಮಸ್ಕಾ ಹೊಡೆಯುವವರನ್ನು, ಅತಿರೇಕದ ಅಭಿಮಾನ ತೋರುವವರನ್ನು ಹತ್ತಿರಕ್ಕೂ ಸೇರಿಸುವು ದಿಲ್ಲ. ಬಕೆಟ್ ಹಿಡೀತಿದಾನೆ ಅನಿಸಿದರೆ ನೇರವಾಗಿ ಹೇಳಿ ದೂರವಿಡುತ್ತಾರೆ. ಅವರು ನಾಯಕನಾಗಿ ಹಿಟ್ ಕೊಡುತ್ತಿದ್ದ ದಿನಗಳಿಂದ ಇಂದಿನ ತನಕ ಅದ್ಯಾರೇ ಅಭಿಮಾನಿ ಸಂಘ ಮಾಡುತ್ತೇವೆ ಎಂದು ಕೇಳಿಕೊಂಡು ಬಂದರೂ ಉಗಿದು ಅಟ್ಟಿದ್ದಾರೆ. ಅನಂತನಾಗ್ ಅವರನ್ನು ಗುರು, ಅಣ್ಣ, ಬಾಸ್ ಇತ್ಯಾದಿ ಇತ್ಯಾದಿ ಬಳಸಿ ಕರೆದದ್ದು ಕಾಣುವುದಿಲ್ಲ. ಎಷ್ಟೇ ಪ್ರೀತಿ ಇದ್ದರೂ ಏಕವಚನ ಬಳಸುವುದಿಲ್ಲ. ಅನಂತನಾಗ್ ಸಿನಿಮಾ ಪ್ರಪಂಚದ ಅತಿಸಭ್ಯ ರಾಯಭಾರಿ. ಅವರ ಅಭಿಮಾನಿಗಳು ಸಭ್ಯ ಅಭಿಮಾನದ ರಾಯಭಾರಿಗಳು. ಅಪರೂಪಕ್ಕೆ ಕೆಲವು ವ್ಯಕ್ತಿಗಳ ಜತೆ ನನ್ನದೊಂದು ಫೋಟೋ ಬೇಕು ಅನಿಸುತ್ತದೆ. ಆ ಲಿಸ್ಟಿನಲ್ಲಿ ಅನಂತನಾಗ್ ಒಬ್ಬರು. ಆ ಘಳಿಗೆ ಹತ್ತಿರವಾಗಿದೆ. ಕಾಯುತ್ತಿದ್ದೇನೆ.