ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ನೇಮಕದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದ ಪಾಕಿಸ್ತಾನದ ಸಾಮಾಜಿಕ ಮಾಧ್ಯಮ ಖಾತೆ: ಪಿಐಬಿ ಫ್ಯಾಕ್ಟ್ ಚೆಕ್‌ನಿಂದ ಮಾಹಿತಿ ಬಹಿರಂಗ
PIB Fact Check: ಪಾಕಿಸ್ತಾನ ಭಾರತದ ವಿರುದ್ಧ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪಿತೂರಿ ನಡೆಸುತ್ತಲೇ ಇರುತ್ತದೆ. ಇದೀಗ ಪಾಕಿಸ್ತಾನ ಬೆಂಬಲಿತ ಎಕ್ಸ್ ಖಾತೆಯೊಂದು ಭಾರತದಲ್ಲಿ ಅಸ್ಥಿರತೆಯನ್ನು ಹರಡಲು ಪ್ರಯತ್ನಿಸುತ್ತಿದೆ. ಸರ್ಕಾರದ ಸತ್ಯ ಪರಿಶೀಲನಾ ಸಂಸ್ಥೆ ಪಿಐಬಿ ಅಸಲಿ ವಿಚಾರವನ್ನು ಬಹಿರಂಗಪಡಿಸಿದೆ.
ಭಾರತದ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಪಾಕಿಸ್ತಾನ -
ನವದೆಹಲಿ, ಜೂ. 15: ದೇಶ ವಿರೋಧಿ ಶಕ್ತಿಗಳು ಭಾರತದ ವಿರುದ್ಧ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪಿತೂರಿ ನಡೆಸುತ್ತಲೇ ಇರುತ್ತವೆ. ಇದೀಗ ಪಾಕಿಸ್ತಾನ (Pakistan) ಬೆಂಬಲಿತ ಎಕ್ಸ್ ಖಾತೆಗಳು ಭಾರತದಲ್ಲಿ ಅಸ್ಥಿರತೆಯನ್ನು ಹರಡಲು ಪ್ರಯತ್ನಿಸುತ್ತಿವೆ. ಈ ಬಾರಿ 'ದಿ ವೈರ್' ಮಾಧ್ಯಮದ್ದೆಂದು ಬಿಂಬಿಸುವ ಎಡಿಟ್ ಮಾಡಿದ ಸ್ಕ್ರೀನ್‌ಶಾಟ್ ಒಂದನ್ನು ಹರಡುತ್ತಿವೆ. ಅದರಲ್ಲಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಸುಳ್ಳು ಮಾಹಿತಿ ನೀಡಲಾಗಿದ್ದು, ಲೆಫ್ಟಿನೆಂಟ್ ಜನರಲ್ ಪಿ.ಆರ್. ಶಂಕರ್ ಅವರು ಹೇಳಿಕೆ ನೀಡಿದ್ದಾರೆ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ. ಈ ವಿಚಾರ ಇದೀಗ ಸರ್ಕಾರದ ಸತ್ಯ-ಪರಿಶೀಲನಾ ಸಂಸ್ಥೆ ಪಿಐಬಿ (PIB Fact Check) ಫ್ಯಾಕ್ಟ್‌ಚೆಕ್‌ನಲ್ಲಿ ಬಯಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪಾಕಿಸ್ತಾನದ ಪ್ರಚಾರ (ಪ್ರೊಪಗಾಂಡಾ) ಖಾತೆಗಳು ‘ದಿ ವೈರ್’ ಪ್ರಕಟಿಸಿದೆ ಎಂದು ಹೇಳಲಾದ ಎಡಿಟ್ ಮಾಡಿದ ಸ್ಕ್ರೀನ್‌ಶಾಟ್ ಹರಡುತ್ತಿವೆ. ಜನರಲ್ ಧೀರಜ್ ಸೇಠ್ ಸೇನಾ ಮುಖ್ಯಸ್ಥರಾಗಲು ಲಂಚ ನೀಡಿದ್ದಾರೆ ಹಾಗೂ ಸಂಪೂರ್ಣ ಆಯ್ಕೆ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಲೆಫ್ಟಿನೆಂಟ್ ಜನರಲ್ ಪಿ.ಆರ್. ಶಂಕರ್ ಆರೋಪಿಸಿದ್ದಾರೆ ಎಂಬ ಸುಳ್ಳು ಮಾಹಿತಿಯನ್ನು ಹರಡಲಾಗಿದೆ.
ಇಲ್ಲಿದೆ ಪೋಸ್ಟ್:
Pakistani propaganda accounts are circulating an edited screenshot purportedly from The Wire, falsely claiming irregularities in the appointment process of Lt Gen Dhiraj Seth and attributing remarks to Lt Gen PR Shankar.#PIBFactCheck:
— PIB Fact Check (@PIBFactCheck) June 15, 2026
❌ The circulated image is #Fake
✅ The… pic.twitter.com/ALUedfsdzw
ಈ ಸುದ್ದಿ ಹರಡುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲ ಭುಗಿಲೆದ್ದಿತು. ʼದಿ ವೈರ್ʼ ಹಂಚಿಕೊಂಡ ಸ್ಕ್ರೀನ್‌ಶಾಟ್ ಅನ್ನು ಪರಿಶೀಲಿಸಿದ ನಂತರ, ಸರ್ಕಾರಿ ಸುದ್ದಿ ಸಂಸ್ಥೆ ಪಿಐಬಿ ಫ್ಯಾಕ್ಟ್ ಚೆಕ್ ಮಾಡಿದ್ದು, ʼದಿ ವೈರ್ʼ ಅಂತಹ ಯಾವುದೇ ಲೇಖನವನ್ನು ಪ್ರಕಟಿಸಿಲ್ಲ ಎಂದು ಸ್ಪಷ್ಟಪಡಿಸಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಚಿತ್ರ ನಕಲಿ ಎಂಬುದು ಸ್ಪಷ್ಟವಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಹತ್ಯಾಕಾಂಡಕ್ಕೆ ಭಾರತ ಖಂಡನೆ; ವಿದೇಶಾಂಗ ಸಚಿವಾಲಯ ಹೇಳಿದ್ದೇನು?
ಭಾರತೀಯ ಸೇನಾ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಆಯ್ಕೆ
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ತೆರವಾಗಿರುವ ಸ್ಥಾನಕ್ಕೆ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೇಮಿಸಲಾಗಿದೆ. ಪ್ರಸ್ತುತ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಜೂನ್ 30ರಂದು ನಿವೃತ್ತಿಯಾಗಲಿದ್ದು, ಅಂದಿನಿಂದ ಜಾರಿಗೆ ಬರುವಂತೆ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ನೇಮಿಸಲಾಗಿದೆ.
ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಸೇಠ್, ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿ. ಅವರನ್ನು 1986ರ ಡಿಸೆಂಬರ್‌ನಲ್ಲಿ ಆರ್ಮರ್ಡ್ ಕಾರ್ಪ್ಸ್‌ಗೆ ನಿಯೋಜಿಸಲಾಯಿತು. ಸುಮಾರು ನಾಲ್ಕು ದಶಕಗಳ ಕಾಲದ ಮಿಲಿಟರಿ ವೃತ್ತಿ ಜೀವನದಲ್ಲಿ ಅವರು ವ್ಯಾಪಕ ಅನುಭವವನ್ನು ಹೊಂದಿದ್ದು, ತಮ್ಮ ಸೇವಾವಧಿಯಲ್ಲಿ ಭಾರತೀಯ ಸೇನೆಯ ಯುದ್ಧಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ಸೇನೆಯ ದೀರ್ಘಕಾಲೀನ ಆಧುನೀಕರಣ ಹಾಗೂ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
ಜನರಲ್ ಉಪೇಂದ್ರ ದ್ವಿವೇದಿ 2024ರ ಜೂನ್‌ನಲ್ಲಿ ಜನರಲ್ ಮನೋಜ್ ಪಾಂಡೆ (ನಿವೃತ್ತ) ಅವರಿಂದ 30ನೇ ಸೇನಾ ಮುಖ್ಯಸ್ಥರಾಗಿ (COAS) ಅಧಿಕಾರ ವಹಿಸಿಕೊಂಡಿದ್ದರು. ಜನರಲ್ ದ್ವಿವೇದಿ ಸಶಸ್ತ್ರ ಪಡೆಗಳಲ್ಲಿ 40 ವರ್ಷಗಳಿಗೂ ಹೆಚ್ಚು ಸೇವೆ ಸಲ್ಲಿಸಿರುವ ನಿಪುಣ ಮಿಲಿಟರಿ ನಾಯಕರಾಗಿದ್ದಾರೆ.