ಹಾಲನ್ನು ತಾಜಾವಾಗಿ ಇರಿಸಲು ಪಾತ್ರೆಯೊಳಗೆ ಜೀವಂತ ಕಪ್ಪೆ ಬಿಡುತ್ತಿದ್ದರು! ಫ್ರಿಜ್ ಕಂಡುಹಿಡಿಯುವ ಮೊದಲು ಜನಪ್ರಿಯವಾಗಿದ್ದ ಈ ವಿಧಾನದ ಬಗ್ಗೆ ನಿಮಗೆಷ್ಟು ಗೊತ್ತು?
Viral News: ಬಹಳ ಹಿಂದೆ ರಷ್ಯಾದ ಹಳ್ಳಿಯಲ್ಲಿ ಹಾಲು ಕೆಡದಂತಿರಲು ವಿಚಿತ್ರ ಪದ್ದತಿ ಅಳವಡಿಸಲಾಗಿತ್ತು ಎಂದರೆ ನೀವು ನಂಬುತ್ತೀರಾ? ಹೌದು ರಷ್ಯಾ ಮತ್ತು ಫಿನ್‌ಲ್ಯಾಂಡ್‌ನ ಹಳ್ಳಿಗಳಲ್ಲಿ ಹಾಲಿನ ಪಾತ್ರೆಗೆ ಜೀವಂತ ಕಪ್ಪೆಯನ್ನು ಬಿಡುವ ಮೂಲಕ ತಾಜಾವಾಗಿ ಇರಿಸುತ್ತಿದ್ದರು. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಂಟರ್‌ನೆಟ್ ಚಿತ್ರ -
ಮಾಸ್ಕೊ, ಜೂ. 15: ಸಾಮಾನ್ಯವಾಗಿ ನಾವು ಯಾವುದೇ ಆಹಾರ ವಸ್ತು ಕೆಡದಂತೆ ಇಡಲು ಫ್ರಿಜ್ ಬಳಸುತ್ತವೆ. ಇದರ ತಂಪು ವಾತಾವರಣ ಯಾವುದೇ ತರಕಾರಿ, ಹಾಲು, ಹಣ್ಣು ಹಂಪಲುಗಳನ್ನು ತಾಜಾವಾಗಿ ಇರಿಸುತ್ತದೆ. ಆದರೆ ಫ್ರಿಜ್ ಇರದ ಕಾಲದಲ್ಲಿ ಅಂದರೆ ಶತಮಾನಗಳಷ್ಟು ಹಿಂದೆ ರಷ್ಯಾ ಮತ್ತು ಫಿನ್‌ಲ್ಯಾಂಡ್‌ನ ಹಳ್ಳಿಗಳಲ್ಲಿ ಹಾಲನ್ನು ಕೆಡದಂತೆ ಇಡಲು ಒಂದು ವಿಚಿತ್ರ ಪದ್ಧತಿ ಅಳವಡಿಸಲಾಗಿತ್ತು. ಹಲವು ವರ್ಷಗಳ ಹಿಂದೆ ರಷ್ಯಾ ಮತ್ತು ಫಿನ್‌ಲ್ಯಾಂಡ್‌ನ ಹಳ್ಳಿಗಳಲ್ಲಿ ಜೀವಂತ ಕಪ್ಪೆಯನ್ನು ಪಾತ್ರೆಯೊಳಗೆ ಬಿಡುವ ಮೂಲಕ ಹಾಲನ್ನು ಕೆಡದಂತೆ ತಾಜಾವಾಗಿ ಇರಿಸಲಾಗುತ್ತಿತ್ತು. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಈ ಆಧುನಿಕ ಯುಗದಲ್ಲಿ ಈ ಅಭ್ಯಾಸವು ವಿಚಿತ್ರವೆನಿಸಬಹುದು. ಆದರೆ ಶತಮಾನಗಳಷ್ಟು ಹಳೆಯದಾದ ಸಂಪ್ರದಾಯದ ಹಿಂದೆ ವೈಜ್ಞಾನಿಕ ಕಾರಣವೂ ಇತ್ತು ಎಂದು ತಜ್ಞರು ಉಲ್ಲೇಖಿಸಿದ್ದಾರೆ. ಇಲ್ಲಿನ ಜನರು ಹಾಲನ್ನು ತಾಜಾವಾಗಿ ಇರಿಸಲು ಬದುಕಿರುವ ಕಪ್ಪೆಯನ್ನು ಹಾಲಿನ ಪಾತ್ರೆಗೆ ಹಾಕುತ್ತಿದ್ದರು ಎನ್ನುವ ಸುದ್ದಿ ಇದೀಗ ಬಹಿರಂಗಗೊಂಡಿದೆ.
ಒಂದೇ ಬೈಕ್‍ನಲ್ಲಿ 6 ಮಂದಿಯ ಸವಾರಿ; ಕ್ಯಾಮರಾ ನೋಡಿ ಏನು ಮಾಡಿದ್ರು ಗೊತ್ತಾ?
ರಷ್ಯಾ ಮತ್ತು ಫಿನ್‌ಲ್ಯಾಂಡ್‌ನ ಗ್ರಾಮೀಣ ಸಮುದಾಯದವರು ಹಾಲನ್ನು ತಾಜಾವಾಗಿ ಇಡಲು ಸಾಮಾನ್ಯ ಕಂದು ಕಪ್ಪೆಯನ್ನು (ರಾಣಾ ಟೆಂಪೊರೇರಿಯಾ) ಬಳಸುತ್ತಿದ್ದರು. ಕಪ್ಪೆಯನ್ನು ಹಾಲಿನ ಪಾತ್ರೆಯಲ್ಲಿ ಇರಿಸಿ ನಂತರ ಅದಕ್ಕೆ ಹಾನಿಯಾಗದಂತೆ ಹೊರಗೆ ತೆಗೆಯುತ್ತಿದ್ದರು. 2012ರಲ್ಲಿ ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕರು ತನಿಖೆ ಮಾಡಿದಾಗ ಈ ವಿಧಾನ ಬೆಳಕಿಗೆ ಬಂತು.
ಕಂದು ಕಪ್ಪೆಯ ಚರ್ಮವು ಆ್ಯಂಟಿಮೈಕ್ರೊಬಿಯಲ್ ಪೆಪ್ಟೈಡ್ ಉತ್ಪಾದಿಸುತ್ತದೆ. ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ವಿರುದ್ಧ ಹೋರಾಡುವ ಸಾಮರ್ಥ್ಯವಿರುವ ಸಣ್ಣ ಪ್ರೋಟೀನ್ ಅಣುಗಳನ್ನು ಇದು ಹೊಂದಿದೆ. ಈ ನೈಸರ್ಗಿಕ ಸಂಯುಕ್ತಗಳು ಹಾಲು ಹಾಳಾಗಲು ಕಾರಣವಾಗುವ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.
ಈ ಆಧುನಿಕ ಯುಗದಲ್ಲಿ ಇದನ್ನು ಬಳಕೆ ಮಾಡುವುದು ತಪ್ಪು. ಕಪ್ಪೆಯ ಚರ್ಮದಲ್ಲಿ ಬ್ಯಾಕ್ಟೀರಿಯಾ ನಿವಾರಕ ಗುಣಗಳಿದ್ದರೂ, ಕಾಡು ಕಪ್ಪೆಗಳ ದೇಹದ ಮೇಲೆ ಸಾಲ್ಮೊನೆಲ್ಲಾ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುತ್ತವೆ. ಇವು ನಮ್ಮ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ.