ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನದ ದ್ವಂದ್ವ ನೀತಿ: ವಿಶ್ವಸಂಸ್ಥೆಯಲ್ಲಿ ಭಾರತ ಟೀಕೆ
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಮತ್ತೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ. 2025ರ ಭಾರತದೊಂದಿಗಿನ ಸಂಘರ್ಷದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮಯೋಚಿತ ಮಧ್ಯಸ್ಥಿಕೆಯನ್ನು ಶ್ಲಾಘಿಸಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿಕೆಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿ 9/11 ದಾಳಿಯ ರೂವಾರಿ ಒಸಾಮಾ ಬಿನ್ ಲಾಡೆನ್ ಪ್ರಕರಣವನ್ನು ಉಲ್ಲೇಖಿಸಿದೆ.
ಸಂಗ್ರಹ ಚಿತ್ರ -
ನ್ಯೂಯಾರ್ಕ್: ಪಾಕಿಸ್ತಾನವು (pakistan) ಭಯೋತ್ಪಾದನೆಗೆ (Terrorism) ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ (UN General Assembly) ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆಯನ್ನು ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Pakistan Prime Minister Shehbaz Shari), ಕಾಶ್ಮೀರ ವಿಷಯವನ್ನು ಮತ್ತೆ ಪ್ರಸ್ತಾಪಿಸಿ, 2025ರಲ್ಲಿ ಭಾರತದೊಂದಿಗೆ ನಡೆದ ಸಂಘರ್ಷವನ್ನು ಕೊನೆಗೊಳಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಸರಿಯಾದ ಸಮಯದಲ್ಲಿ ಮಧ್ಯಸ್ಥಿಕೆ ವಹಿಸಿರುವುದಕ್ಕೆ ಶ್ಲಾಘಿಸಿದರು. ಇದಕ್ಕೆ ಶನಿವಾರ ಭಾರತ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದೆ.
ಭಾರತದ ರಾಜತಾಂತ್ರಿಕ ಪೆಟಲ್ ಗೆಹ್ಲೋಟ್ ಅವರು ಶೆಹಬಾಜ್ ಷರೀಫ್ ಅವರ ಹೇಳಿಕೆಗಳು ವಿಚಿತ್ರವಾಗಿದೆ. 9/11 ದಾಳಿಯ ಸಂದರ್ಭದಲ್ಲಿ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿದ್ದನು. ಇತ್ತೀಚೆಗೆ ಅಮೇರಿಕ ಈ ದಾಳಿಯ 25ನೇ ವರ್ಷವನ್ನು ಆಚರಿಸಿತ್ತು ಎಂದು ಹೇಳಿ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿದರು.
ರಾಜಕೀಯ ಮರೆತು ಭಜನೆಯಲ್ಲಿ ತೊಡಗಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ; ‘ಭಜನ್ ಕ್ಲಬ್ಬಿಂಗ್’ ಕಾರ್ಯಕ್ರಮದ ವಿಡಿಯೊ ವೈರಲ್
ಭಯೋತ್ಪಾದನೆಯ ವಿಷಯದಲ್ಲಿ ಪಾಕಿಸ್ತಾನದ ದ್ವಂದ್ವ ನೀತಿಯನ್ನು ಟೀಕಿಸಿದ ಭಾರತ, ಅದು ಹಗಲಿನಲ್ಲಿ ಭದ್ರತೆಗೆ ಒತ್ತು ಕೊಡುವುದಾಗಿ ಹೇಳಿ ರಾತ್ರಿ ಭಯೋತ್ಪಾದನೆಯನ್ನು ನಡೆಸುತ್ತದೆ. ಇದರ ಗಂಭೀರ ಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಭಾರತ ತನ್ನ ರಕ್ಷಣೆಗಾಗಿ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಭಯೋತ್ಪಾದಕರಿಗೆ ಓಡಿಹೋಗಲು ಅಥವಾ ಅಡಗಿಕೊಳ್ಳಲು ಎಲ್ಲಿಯೂ ಜಾಗವಿಲ್ಲ ಎಂಬುದನ್ನು ನಾವು ಕಳೆದ ವರ್ಷ ತೋರಿಸಿಕೊಟ್ಟಿದ್ದೇವೆ. ಭಯೋತ್ಪಾದನೆ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕನ್ನು ನಾವು ಚಲಾಯಿಸುತ್ತೇವೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಮುಂದುವರಿಸಿದರೆ ಅದಕ್ಕೆ ತಕ್ಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಕಳೆದ ವರ್ಷ ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯುಸೇನೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯನ್ನು ನಡೆಸಿತ್ತು. ಇದರ ಬಳಿಕ ಮುಂದುವರಿಯುವ ಸಾಧ್ಯತೆ ಇದ್ದ ಸಂಘರ್ಷವನ್ನು ತಾನೇ ನಿಲ್ಲಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೊಂಡರು. ಆದರೆ ನವದೆಹಲಿ ಇದನ್ನು ನಿರಂತರವಾಗಿ ನಿರಾಕರಿಸಿತ್ತು. ಪಾಕಿಸ್ತಾನ ವರ್ಷದಿಂದ ವರ್ಷಕ್ಕೆ ಸುಳ್ಳುಗಳನ್ನು ಪುನರುಚ್ಚರಿಸುವುದರಿಂದ ಅದು ಸತ್ಯವಾಗುವುದಿಲ್ಲ. ಪಾಕಿಸ್ತಾನದ ದ್ವಂದ್ವ ನಿಲುವು ಮತ್ತು ವಂಚನೆಯಿಂದ ಅದಕ್ಕೆ ಯಾವುದೇ ಪ್ರಯೋಜನ ಸಿಗುವುದಿಲ್ಲ ಎಂದು ತಿಳಿಸಿದರು.
ಶೆಹಬಾಜ್ ಷರೀಫ್ ಅವರು ಸುಮಾರು 23 ನಿಮಿಷಗಳ ತಮ್ಮ ಭಾಷಣದಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ದಕ್ಷಿಣ ಏಷ್ಯಾವನ್ನು 2025ರ ಸಂಘರ್ಷದ ಅಂಚಿಗೆ ತಲುಪದಂತೆ ತಡೆಯಲು ಕಾಶ್ಮೀರ ಸಮಸ್ಯೆಗೆ ನ್ಯಾಯಯುತ ಮತ್ತು ಸೂಕ್ತ ಪರಿಹಾರದ ಅಗತ್ಯವಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗೆಹ್ಲೋಟ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಮಾತನಾಡಿ, ರಾವಲ್‌ಕೋಟ್‌ನ ಜನರ ಮೇಲೆ ಪಾಕಿಸ್ತಾನ ಸರ್ಕಾರ ನಡೆಸುತ್ತಿರುವ ದೌರ್ಜನ್ಯದ ಕುರಿತು ತಿಳಿಸಿದರು.
39 ಲಕ್ಷ ರೂಪಾಯಿ ದಾಖಲೆ ಬೆಲೆಗೆ ಹರಾಜಾಯ್ತು ಹೈದರಾಬಾದ್‌ನ ಪ್ರಸಿದ್ಧ ಬಾಲಾಪುರ್ ಗಣೇಶನ ಲಡ್ಡು ಪ್ರಸಾದ
ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಮಾನವ ಹಕ್ಕುಗಳ ಕುರಿತು ಪಾಕಿಸ್ತಾನ ನೀಡುವ ಕಪಟ ಉಪದೇಶಗಳನ್ನು ತೀವ್ರವಾಗಿ ಟೀಕಿಸಿದ ಅವರು, ಪಾಕಿಸ್ತಾನದ ಆಡಳಿತ ವ್ಯವಸ್ಥೆಯು ದೇವನಿಂದನೆ ವಿರೋಧಿ ಕಾನೂನುಗಳನ್ನೇ ತನ್ನ ಪ್ರಮುಖ ಆಧಾರವನ್ನಾಗಿ ಮಾಡಿಕೊಂಡಿದೆ. ಪಾಕಿಸ್ತಾನವು ತನ್ನ ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಜಗತ್ತಿಗೆ ತಿಳಿದಿದೆ ಎಂದು ತಿಳಿಸಿದರು.
ಸಿಂಧೂ ನದಿ ನೀರು ಒಪ್ಪಂದದ ಕುರಿತು ಪಾಕಿಸ್ತಾನದ ಹೇಳಿಕೆಗೆ ಪ್ರತಿಕ್ರಿಯಿಸಿದ ಪೆಟಲ್ ಗೆಹ್ಲೋಟ್, ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ಪಾಕಿಸ್ತಾನ ಕೊನೆಗೊಳಿಸುವವರೆಗೆ ಈ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಹೇಳಿದರು.