ಸಮಾಜವಾದಿ ಪಕ್ಷದ ಹಿರಿಯ ನಾಯಕ, 8 ಬಾರಿ ಶಾಸಕರಾಗಿದ್ದ ರಾಮ್ ಗೋವಿಂದ್ ಚೌಧರಿ ನಿಧನ
ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಮಾಜವಾದಿ ಪಕ್ಷದ ಹಿರಿಯ ನಾಯಕ ರಾಮ್ ಗೋವಿಂದ್ ಚೌಧರಿ ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಹೃದಯ ಮತ್ತು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದ ಅವರು, ಎಂಟು ಬಾರಿ ಶಾಸಕರಾಗಿದ್ದು, ಉತ್ತರ ಪ್ರದೇಶದ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು.
ಸಂಗ್ರಹ ಚಿತ್ರ -
ಉತ್ತರಪ್ರದೇಶ: ಸಮಾಜವಾದಿ ಪಕ್ಷದ (SP) ಹಿರಿಯ ನಾಯಕ (Samajwadi Party leader), ಉತ್ತರ ಪ್ರದೇಶದ ಮಾಜಿ ಸಚಿವ ಮತ್ತು ಎಂಟು ಬಾರಿ ಶಾಸಕರಾಗಿದ್ದ ರಾಮ್ ಗೋವಿಂದ್ ಚೌಧರಿ (MLA Ram Govind Chaudhary) ಅವರು ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಲಕ್ನೋದ (Lucknow) ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಎಸ್‌ಜಿಪಿಜಿಐ) ಚಿಕಿತ್ಸೆ ಪಡೆಯುತ್ತಿದ್ದ ಅವರು ರಾತ್ರಿ 9 ಗಂಟೆಗೆ ಕೊನೆಯುಸಿರೆಳೆದರು ಎಂದು ಎಸ್‌ಪಿಯ ಮಾಧ್ಯಮ ಉಸ್ತುವಾರಿ ಸುಶೀಲ್ ಪಾಂಡೆ ತಿಳಿಸಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕರಾಗಿದ್ದ ರಾಮ್ ಗೋವಿಂದ್ ಚೌಧರಿ ಅವರು ದೀರ್ಘಕಾಲದಿಂದ ಹೃದಯ ಮತ್ತು ಮೂತ್ರಪಿಂಡ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದರು. ಈ ಹಿಂದೆ ಅವರು ಲಕ್ನೋದ ಮೇದಾಂತ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಲಕ್ನೋದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ದೀರ್ಘಕಾಲದ ಚಿಕಿತ್ಸೆ ಮತ್ತು ಡಯಾಲಿಸಿಸ್‌ಗೆ ಒಳಗಾಗಿದ್ದರು. ಅವರನ್ನು ಎರಡು ವಾರಗಳ ಹಿಂದೆ ಎಸ್‌ಜಿಪಿಜಿಐಗೆ ದಾಖಲಿಸಲಾಗಿತ್ತು.
Sowjanya case: ಸಿಕ್ಕಿಬಿದ್ದವರು ಇಂದು ಸಂಭ್ರಮಿಸುತ್ತಿದ್ದಾರೆ, ಮುಂದೆ...?: ಎಸ್‌ಐಟಿ ರಚನೆ ಹಿಂದಿನ ತಂಡ ಒಂದೇ!
ರಾಮ್ ಗೋವಿಂದ್ ಚೌಧರಿ ಅವರ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ. ಈ ಕುರಿತು ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಬರೆದಿದ್ದು, ಉತ್ತರ ಪ್ರದೇಶ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಸಚಿವ ರಾಮ್ ಗೋವಿಂದ್ ಚೌಧರಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಶೋಕತಪ್ತ ಕುಟುಂಬಕ್ಕೆ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ನೀಡುವಂತೆ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಎಸ್‌ಪಿ ಮುಖ್ಯಸ್ಥ ಅಖಿలేಶ್ ಯಾದವ್ ಅವರು ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ವಿರೋಧ ಪಕ್ಷದ ನಾಯಕ ರಾಮ್ ಗೋವಿಂದ್ ಚೌಧರಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಶೋಕತಪ್ತ ಕುಟುಂಬಕ್ಕೆ ಈ ಅಪಾರ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಹೇಳಿದ್ದಾರೆ.
ವಿಧಾನಸಭೆಯ ಸ್ಪೀಕರ್ ಸತೀಶ್ ಮಹಾನಾ ಕೂಡ ರಾಮ್ ಗೋವಿಂದ್ ಚೌಧರಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಅಗಲಿಕೆಯಿಂದ ರಾಜ್ಯವು ಒಬ್ಬ ಅನುಭವಿ ರಾಜಕಾರಣಿ ಮತ್ತು ಸಮರ್ಪಿತ ಜನಪ್ರತಿನಿಧಿಯನ್ನು ಕಳೆದುಕೊಂಡಿದೆ. ಸಾರ್ವಜನಿಕ ಜೀವನಕ್ಕೆ ಅವರು ನೀಡಿದ ಕೊಡುಗೆಗಳು ಸದಾ ಸ್ಮರಣೀಯವಾಗಿರುತ್ತವೆ ಎಂದು ತಿಳಿಸಿದ್ದಾರೆ.
1953ರ ಜುಲೈ 9ರಂದು ಬಲ್ಲಿಯಾ ಜಿಲ್ಲೆಯ ಸಿಕಂದರ್‌ಪುರ ಪ್ರದೇಶದ ಹಿಂದುಳಿದ ಗ್ರಾಮವೊಂದರಲ್ಲಿ ಜನಿಸಿದ ರಾಮ್ ಗೋವಿಂದ್ ಚೌಧರಿ ಅವರು ಪುತ್ರ ಸೇರಿದಂತೆ ತಮ್ಮ ದೊಡ್ಡ ಕುಟುಂಬವನ್ನು ಅಗಲಿದ್ದಾರೆ.
ರಾಜಕೀಯ ಜೀವನ
ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಸಿಕಂದರ್‌ಪುರದಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿ ಬಳಿಕ ಬಲ್ಲಿಯಾದ ಸತೀಶ್ ಚಂದ್ರ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದ ಅವರು ಅಧ್ಯಯನದೊಂದಿಗೆ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಹೋರಾಟದ ಮನೋಭಾವದಿಂದಾಗಿ ಅವರನ್ನು ಕಾಲೇಜಿನಿಂದ ಹೊರಹಾಕಲಾಯಿತು. ಬಳಿಕ ಅವರು ಬಲ್ಲಿಯಾದ ಶ್ರೀ ಮುರಳಿ ಮನೋಹರ್ ಟೌನ್ ಸ್ನಾತಕೋತ್ತರ ಕಾಲೇಜಿಗೆ ಸೇರ್ಪಡೆಗೊಂಡರು. ಅಲ್ಲಿದ್ದಾಗ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟರು.
1972ರಲ್ಲಿ ಟೌನ್ ಕಾಲೇಜು ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು 1974ರಲ್ಲಿ ಅದರ ಅಧ್ಯಕ್ಷರಾಗಿ ಆಯ್ಕೆಯಾದರು. ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರೊಂದಿಗೆ ಕೆಲಸ ಮಾಡಿದ್ದ ರಾಮ್ ಗೋವಿಂದ್ ಚೌಧರಿ ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಆಪ್ತರಾಗಿದ್ದರು. 2017 ರಿಂದ 2022 ರವರೆಗೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿದರು. ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಆಡಳಿತಾವಧಿಯಲ್ಲಿ ಎರಡು ಬಾರಿ ಸಚಿವರಾಗಿದ್ದ ರಾಮ್ ಗೋವಿಂದ್ ಚೌಧುರಿ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು.