'ʼಅಪ್ಪನನ್ನು ಕೊಲ್ಲಲೆಂದೇ ಭದ್ರತೆ ತೆಗೆದರು'ʼ: ರಾಜೀವ್ ಗಾಂಧಿ ಹತ್ಯೆ ಬಗ್ಗೆ ರಾಹುಲ್ ಗಾಂಧಿ ಹೊಸ ಬಾಂಬ್
Belonging A Journey of Love: ಸೋನಿಯಾ ಗಾಂಧಿ ಅವರ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಕುರಿತಾಗಿ ಸೋನಿಯಾ ಹಾಗೂ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದಲ್ಲಿ ರಾಹುಲ್ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ತಮ್ಮ ತಂದೆಯನ್ನು ಹತ್ಯೆ ಮಾಡಲೆಂದೇ ಉದ್ದೇಶಪೂರ್ವಕವಾಗಿ ಅವರ ಭದ್ರತೆಯನ್ನು ಹಿಂಪಡೆಯಲಾಗಿತ್ತು ಮತ್ತು ಅಂತಹದೊಂದು ವಾತಾವರಣವನ್ನು ಸೃಷ್ಟಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸೋನಿಯಾ ಗಾಂಧಿ ಆತ್ಮಕಥೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕದ ಸಂವಾದ -
ನವದೆಹಲಿ, ನ. 24: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯಾಗಿ ದಶಕಗಳೇ ಉರುಳಿದ್ದರೂ, ಆ ದುರಂತದ ನೆನಪು ಮತ್ತು ನೋವು ಗಾಂಧಿ ಕುಟುಂಬವನ್ನು ಇಂದಿಗೂ ಕಾಡುತ್ತಿದೆ. ಸೋನಿಯಾ ಗಾಂಧಿ ಅವರ 'Belonging: A Journey of Love' ಪುಸ್ತಕದ ಕುರಿತು ನಡೆದ ಆಪ್ತ ಕೌಟುಂಬಿಕ ಸಂವಾದದಲ್ಲಿ, ತಂದೆಯ ಭದ್ರತೆ ಹಿಂಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಫೋಟಕ ಹಾಗೂ ಭಾವುಕ ಮಾತುಗಳು ಹೊರಬಿದ್ದಿವೆ. ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ಭದ್ರತೆಯನ್ನು ಉದ್ದೇಶಪೂರ್ವಕವಾಗಿ ಹಿಂಪಡೆಯಲಾಗಿತ್ತು ಮತ್ತು ಅಂತಹದೊಂದು ಸನ್ನಿವೇಶ ಸೃಷ್ಟಿಸಲಾಗಿತ್ತು ಎಂಬ ಆರೋಪವನ್ನು ರಾಹುಲ್ ಗಾಂಧಿ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದ ನಾಯಕರಾಗಿದ್ದಾಗ ರಾಜೀವ್ ಗಾಂಧಿ ಬಿಹಾರದಲ್ಲಿ ತೆರೆದ ಜೀಪ್‌ನಲ್ಲಿ ಪ್ರವಾಸ ಮಾಡುತ್ತಿದ್ದ ಅವರ ಮೇಲೆ ಕಲ್ಲು ತೂರಾಟ ನಡೆದು, ತೀವ್ರ ಪ್ರತಿಭಟನೆ ಮತ್ತು ಕೂಗಾಟಗಳು ಎದುರಾಗಿದ್ದವು. ವಿಶೇಷವಾಗಿ ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಪ್ರವಾಸದ ಸಂದರ್ಭದಲ್ಲಿ ಅವರ ಭದ್ರತೆಗೆ ಅಗತ್ಯ ಗಮನ ನೀಡಿಲ್ಲ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಅಂತಹ ಒಂದು ಪ್ರವಾಸದಲ್ಲಿ ತಂದೆಯ ಜತೆಗಿದ್ದ ರಾಹುಲ್ ಗಾಂಧಿ, ಪ್ರತಿಭಟನೆ ಮತ್ತು ಕಲ್ಲು ತೂರಾಟವನ್ನು ಕಣ್ಣಾರೆ ಕಂಡು ಮನೆಗೆ ಮರಳಿದಾಗ ವ್ಯಕ್ತಪಡಿಸಿದ್ದ ಆತಂಕವನ್ನು ಸೋನಿಯಾ ವಿವರಿಸಿದ್ದಾರೆ.
ಸಂವಾದದ ವಿಡಿಯೊ ನೋಡಿ:
I wrote Belonging from my memories. Rahul and Priyanka added theirs, and the stories took on a whole new life. My children are my greatest joy, my strength, and the two people who test my patience like nobody else can ☺️
— Sonia Gandhi (@SoniaGandhi) November 24, 2026
ರಾಹುಲ್ ಗಾಂಧಿ ಆತಂಕ ವ್ಯಕ್ತಪಡಿಸಿದ್ದರು
ಪ್ರವಾಸ ಮುಗಿಸಿ ಮನೆಗೆ ಬಂದ ರಾಹುಲ್ ಗಾಂಧಿ, "ಅಮ್ಮಾ, ಅಪ್ಪನ ಭದ್ರತೆ ಬಗ್ಗೆ ನಾವು ಏನಾದರೂ ಕ್ರಮ ಕೈಗೊಳ್ಳದಿದ್ದರೆ, ಶೀಘ್ರದಲ್ಲೇ ಅವರ ಅಂತ್ಯಕ್ರಿಯೆಗೆ ಬರುವಂತಾಗುತ್ತದೆ ಎಂದು ನನಗೆ ಗೊತ್ತಿದೆ" ಎಂದು ಹೇಳಿದ್ದರು ಎಂಬುದನ್ನು ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ. ಈ ಹಿಂದೆಯೂ ತಾವು ಹಲವು ಬಾರಿ ಭದ್ರತಾ ಲೋಪದ ಬಗ್ಗೆ ಧ್ವನಿ ಎತ್ತಿದ್ದರೂ, ಬಿಹಾರ ಪ್ರವಾಸದ ಬಳಿಕ ತಮ್ಮ ಆತಂಕ ಮತ್ತಷ್ಟು ಹೆಚ್ಚಾಯಿತು ಎಂದು ಅವರು ತಿಳಿಸಿದ್ದಾರೆ.
ಸೋನಿಯಾ-ರಾಜೀವ್ ಮೊದಲ ಬಾರಿ ಭೇಟಿಯಾಗಿದ್ದ ರೆಸ್ಟೋರೆಂಟ್‌ಗೆ ಗರ್ಲ್‌ಫ್ರೆಂಡ್ ಜೊತೆ ಹೋಗಿದ್ದ ರಾಹುಲ್!
ಉದ್ದೇಶಪೂರ್ವಕವಾಗಿ ರಾಜೀವ್ ಗಾಂಧಿ ಭದ್ರತೆ ಹಿಂಪಡೆಯಲಾಗಿತ್ತೇ?
ರಾಜೀವ್ ಗಾಂಧಿ ಅವರ ಭದ್ರತೆ ಹಿಂಪಡೆದ ವಿಚಾರವನ್ನು ಪ್ರಸ್ತಾಪಿಸಿದ ರಾಹುಲ್ ಗಾಂಧಿ, "ಅಪ್ಪನನ್ನು ಕೊಲ್ಲಲೆಂದೇ ಭದ್ರತೆ ಹಿಂಪಡೆಯಲಾಗಿತ್ತು. ಭದ್ರತೆ ತೆಗೆದಿದ್ದು ಕೇವಲ ಆಕಸ್ಮಿಕವಲ್ಲ; ಅವರು ಕೊಲೆಯಾಗಲಿ ಎಂಬ ಉದ್ದೇಶದಿಂದಲೇ ಉದ್ದೇಶಪೂರ್ವಕವಾಗಿ ಮಾಡಲಾಗಿತ್ತು" ಎಂದು ಕಟುವಾಗಿ ಆರೋಪಿಸಿದ್ದಾರೆ. ತಮ್ಮ ನೆನಪುಗಳನ್ನು ಆಧರಿಸಿ 'Belonging' ಪುಸ್ತಕ ಬರೆದಿದ್ದು, ರಾಹುಲ್ ಮತ್ತು ಪ್ರಿಯಾಂಕಾ ತಮ್ಮ ನೆನಪುಗಳನ್ನು ಸೇರಿಸಿದ ಬಳಿಕ ಆ ಕಥೆಗಳಿಗೆ ಹೊಸ ಜೀವ ಬಂದಿದೆ ಎಂದು ಸೋನಿಯಾ ಹೇಳಿದ್ದಾರೆ.
500ಕ್ಕೂ ಹೆಚ್ಚು ಪುಟಗಳ ಪುಸ್ತಕದಲ್ಲಿ ಬಿಟ್ಟುಹೋದ ಅಂಶಗಳೇನು?
ಸಂವಾದದ ವಿಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ತಂದೆಯ ಭದ್ರತೆ ಹಿಂಪಡೆಯುವ ಹಿಂದೆ ಒಂದು ಉದ್ದೇಶವಿತ್ತು ಎಂದು ಪುನರುಚ್ಚರಿಸಿದ್ದಾರೆ. "ಆ ಪ್ರಸ್ತಾವನೆ ಯೋಜನೆಯಂತೆ ನಡೆಯಲಿಲ್ಲ, ನನ್ನ ತಾಯಿ ನನ್ನ 7ನೇ ಹುಟ್ಟುಹಬ್ಬಕ್ಕೆ 32 ಮಕ್ಕಳನ್ನು ಆಹ್ವಾನಿಸಿದ್ದರೂ, ಕೇವಲ ಒಬ್ಬನೇ ಒಬ್ಬ ಗೆಳೆಯ ಬಂದಿದ್ದನು. ಉಳಿದವರು ಬಾರದಿದ್ದನ್ನು ಕಂಡು ತಾಯಿ ತುಂಬಾ ಆತಂಕಕ್ಕೊಳಗಾಗಿದ್ದರು. ಆದರೆ ಅಂದು ಬಂದ ಆ ಒಬ್ಬ ಗೆಳೆಯ ಇಂದಿಗೂ ತಮ್ಮ ಸ್ನೇಹಿತನಾಗಿದ್ದಾನೆ. 500ಕ್ಕೂ ಹೆಚ್ಚು ಪುಟಗಳ ಪುಸ್ತಕ ಬರೆದಿದ್ದರೂ, ತಾಯಿ ಕೆಲವು ವಿಚಾರಗಳನ್ನು ಪುಸ್ತಕದಲ್ಲಿ ಬಿಟ್ಟುಬಿಟ್ಟಿದ್ದಾರೆ" ಎಂದು ರಾಹುಲ್ ಬರೆದುಕೊಂಡಿದ್ದಾರೆ.
ಸೋನಿಯಾ ಗಾಂಧಿ ಕಾರ್ಯಕ್ರಮದಲ್ಲಿ 5ನೇ ಸಾಲಲ್ಲಿ ಕುಳಿತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?
ದುರಂತಗಳ ನಡುವೆಯೂ ಧೈರ್ಯ ಮತ್ತು ಘನತೆಯಿಂದ ಬದುಕು
ತಾಯಿ ಸೋನಿಯಾ ಮತ್ತು ಸಹೋದರಿ ಪ್ರಿಯಾಂಕಾ ಜತೆ ಕುಳಿತು ಹಳೆಯ ನೆನಪುಗಳನ್ನು ಮೆಲುಕು ಹಾಕಿದಾಗ ಸಂತೋಷ, ನಗು ಜತೆಗೆ ಅಂದಿನ ನೋವುಗಳೂ ಮರುಕಳಿಸಿದವು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 'Belonging' ಪಯಣವು ಅಪಾರ ಪ್ರೀತಿ ಜತೆಗೆ ಘೋರ ದುರಂತಗಳಿಂದ ತುಂಬಿತ್ತು, ಆದರೆ ತಾಯಿ ಎಲ್ಲವನ್ನೂ ಘನತೆ ಮತ್ತು ಧೈರ್ಯದಿಂದ ಎದುರಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, 1968ರಲ್ಲಿ ಇಟಲಿಯಿಂದ ಭಾರತಕ್ಕೆ ಬಂದ ಆರಂಭದ ದಿನಗಳಲ್ಲಿ ಇಲ್ಲಿನ ಬಡತನವನ್ನು ಕಂಡು ತಮಗೆ ಅತೀವ ಆಘಾತವಾಗಿತ್ತು ಎಂಬುದನ್ನೂ ಸೋನಿಯಾ ಗಾಂಧಿ ಸಂವಾದದಲ್ಲಿ ಹಂಚಿಕೊಂಡಿದ್ದಾರೆ.