ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಇಂದಿರಾ ಉತ್ತರಾಧಿಕಾರಿ ಸಂಜಯ್‌ ಅಲ್ಲ, ರಾಜೀವ್‌"! ಜ್ಯೋತಿಷಿ ನುಡಿದಿದ್ದ ಭವಿಷ್ಯ ನಿಜವಾಯ್ತು, ಹಳೆಯ ನೆನಪು ಹಂಚಿಕೊಂಡ ಸೋನಿಯಾ

Sonia Gandhi: ಭವಿಷ್ಯ ಹೇಳಲು ಮನೆಗೆ ಬಂದಿದ್ದ ಹಸ್ತಸಾಮುದ್ರಿಕನೊಬ್ಬನನ್ನು ಸೋನಿಯಾ ಗಾಂಧಿ ಮನೆಯಿಂದ ಹೊರಗೆ ಓಡಿಸಿದಾಗ, ಆತ ಓಡುತ್ತಲೇ ನುಡಿದ ಭವಿಷ್ಯವೊಂದು ವರ್ಷಗಳ ನಂತರ ನಿಜವಾದ ಕುತೂಹಲಕಾರಿ ಘಟನೆಯನ್ನು ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಹಂಚಿಕೊಂಡಿದ್ದಾರೆ.

ಸಂಜಯ್‌ ಇದ್ದಾಗಲೇ ರಾಜೀವ್ ಪ್ರಧಾನಿಯಾಗುವ ಭವಿಷ್ಯ ನುಡಿದಿದ್ದ ಜ್ಯೋತಿಷಿ!

-

Vishakha Bhat Heggar
Vishakha Bhat Heggar Nov 12, 2026 11:19 AM

ನವದೆಹಲಿ: ಭವಿಷ್ಯ ಹೇಳಲು ಮನೆಗೆ ಬಂದಿದ್ದ ಹಸ್ತಸಾಮುದ್ರಿಕನೊಬ್ಬನನ್ನು ಸೋನಿಯಾ ಗಾಂಧಿ (Sonia Gandhi) ಮನೆಯಿಂದ ಹೊರಗೆ ಓಡಿಸಿದಾಗ, ಆತ ಓಡುತ್ತಲೇ ನುಡಿದ ಭವಿಷ್ಯವೊಂದು ವರ್ಷಗಳ ನಂತರ ನಿಜವಾದ ಕುತೂಹಲಕಾರಿ ಘಟನೆಯನ್ನು ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ಹಂಚಿಕೊಂಡಿದ್ದಾರೆ. ನವೆಂಬರ್ 10ರಂದು ಬಿಡುಗಡೆಯಾದ ತಮ್ಮ 'ಬಿಲಾಂಗಿಂಗ್' (Belonging: A Journey of Love) ಪುಸ್ತಕದಲ್ಲಿ ಅವರು ಈ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. 1970ರ ದಶಕದ ಅಂತ್ಯದಲ್ಲಿ ಇಂದಿರಾ ಗಾಂಧಿಯವರು ಅಧಿಕಾರ ಕಳೆದುಕೊಂಡು ದೆಹಲಿಯ ವಿಲ್ಲಿಂಗ್ಡನ್ ಕ್ರೆಸೆಂಟ್‌ನ ಬಂಗಲೆ ಸಂಖ್ಯೆ 12ರಲ್ಲಿ ವಾಸವಿದ್ದಾಗ ಈ ಘಟನೆ ನಡೆದಿತ್ತು.

ಒಂದು ದಿನ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ಅಂಗೈ ಅಚ್ಚಿರುವ ಕಾಗದವನ್ನು ಹಿಡಿದು ಮನೆಯೊಳಗೆ ಬಂದು ಭವಿಷ್ಯ ಹೇಳುವುದಾಗಿ ಒತ್ತಾಯಿಸಿದ್ದನು. ಜ್ಯೋತಿಷ್ಯದಲ್ಲಿ ನಂಬಿಕೆಯಿಲ್ಲದ ಸೋನಿಯಾ ಗಾಂಧಿ, ನನಗೆ ಭವಿಷ್ಯ ತಿಳಿಯುವ ಆಸಕ್ತಿಯಿಲ್ಲ ಎಂದು ಹೇಳಿ ಆತನನ್ನು ಕೋಪದಿಂದ ಹೊರಗೆ ಓಡಿಸಿದ್ದರು. ಆಗ ಆ ವ್ಯಕ್ತಿ ಓಡುತ್ತಲೇ ಸಂಜಯ್ ಅಲ್ಲ, ನಿಮ್ಮ ಪತಿ ರಾಜೀವ್ ಒಂದು ದಿನ ಪ್ರಧಾನ ಮಂತ್ರಿಯಾಗುತ್ತಾರೆ ಎಂದು ಕೂಗಿ ಹೇಳಿದ್ದನು.

ಆ ಸಮಯದಲ್ಲಿ ರಾಜೀವ್ ಗಾಂಧಿ ವಾಣಿಜ್ಯ ಪೈಲಟ್ ಆಗಿದ್ದು, ರಾಜಕೀಯದಿಂದ ದೂರವಿದ್ದರು. ಇಂದಿರಾ ಗಾಂಧಿಯವರ ರಾಜಕೀಯ ಉತ್ತರಾಧಿಕಾರಿ ಎಂದೇ ಸಂಜಯ್ ಗಾಂಧಿಯವರನ್ನು ಪರಿಗಣಿಸಲಾಗಿತ್ತು. ಆ ದಿನ ಹಸ್ತಸಾಮುದ್ರಿಕನ ಮಾತು ಕೇಳಿ ರಾಜೀವ್ ನಕ್ಕಿದ್ದರೆ, ಸೋನಿಯಾ ಗಾಂಧಿ ಕೋಣೆಗೆ ಹೋಗಿ ಅತ್ತಿದ್ದರು. ಆದರೆ 1980ರಲ್ಲಿ ಸಂಜಯ್ ಗಾಂಧಿ ವಿಮಾನ ಅಪಘಾತದಲ್ಲಿ ಮೃತಪಟ್ಟರು ಮತ್ತು 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ರಾಜೀವ್ ಗಾಂಧಿ ಅನಿವಾರ್ಯವಾಗಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಆ ಭವಿಷ್ಯ ನಿಜವಾಯಿತು.

1999ರಲ್ಲಿ ಸರ್ಕಾರ ರಚಿಸಲು ಮುಂದಾಗಿ ಕೈ ಸುಟ್ಟುಕೊಂಡಿದ್ದ ಸೋನಿಯಾ ಗಾಂಧಿ; ʼಆತುರದʼ ಈ ನಿರ್ಧಾರಕ್ಕೆ ಕಾರಣವೇನಾಗಿತ್ತು?

ಅಪಶಕುನದ ನೆನಪು

ತಾವು ಮೂಢನಂಬಿಕೆಯವರಲ್ಲದಿದ್ದರೂ ಕೆಲವು ಘಟನೆಗಳು ಮನಸ್ಸಿಗೆ ನೋವು ತಂದಿದ್ದನ್ನು ಸೋನಿಯಾ ಬರೆದುಕೊಂಡಿದ್ದಾರೆ. 1985ರ ಆಗಸ್ಟ್‌ನಲ್ಲಿ ರಾಜೀವ್ ಅವರ 41ನೇ ಹುಟ್ಟುಹಬ್ಬದ ರಾತ್ರಿಯ ಊಟದ ಸಮಯದಲ್ಲಿ ಪಂಜಾಬ್‌ನಲ್ಲಿ ಅಕಾಲಿ ನಾಯಕ ಹರ್ಚಂದ್ ಸಿಂಗ್ ಲಾಂಗೋವಾಲ್ ಹತ್ಯೆಯಾದ ಸುದ್ದಿ ಬಂದಿತ್ತು. ಹುಟ್ಟುಹಬ್ಬದಂದೇ ಇಂತಹ ದುರಂತ ನಡೆದಿದ್ದು ಕಾಕತಾಳೀಯವೋ ಅಥವಾ ಎಚ್ಚರಿಕೆಯೋ ಎಂದು ಆ ಕ್ಷಣದಲ್ಲಿ ತಮಗೆ ಅನಿಸಿತ್ತು ಎಂದು ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ.