ಪಶ್ಚಿಮ ಬಂಗಾಳ ಹೆಸರು ಬದಲಾವಣೆ: ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರದಿಂದ ಮಹತ್ವದ ಹೆಜ್ಜೆ
CM Suvendu Adhikari: ಪಶ್ಚಿಮ ಬಂಗಾಳ ರಾಜ್ಯದ ಹೆಸರನ್ನು ಬದಲಾಯಿಸುವ ಬಹುದಿನಗಳ ಬೇಡಿಕೆಗೆ ಇದೀಗ ಮತ್ತೆ ವೇಗ ಸಿಕ್ಕಿದ್ದು, ರಾಜ್ಯಕ್ಕೆ ಹೊಸ ಹೆಸರಿಡಲು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 'ಪಶ್ಚಿಮ ಬಂಗಾಳ' ಹೆಸರನ್ನು 'ಪಶ್ಚಿಮ ಬಂಗ' ಎಂದು ಮರುನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದೇ ಡಿಸೆಂಬರ್ 9ರಂದು ವಿಧಾನಸಭೆಯಲ್ಲಿ ಅಧಿಕೃತ ನಿರ್ಣಯ ಮಂಡನೆಯಾಗಲಿದೆ.
West Bengal Chief Minister Suvendu Adhikari -
ಕೋಲ್ಕತ್ತಾ, ನ.24: ಕೆಲವೇ ತಿಂಗಳ ಹಿಂದಷ್ಟೇ ಕೇರಳ ರಾಜ್ಯದ ಹೆಸರನ್ನು 'ಕೇರಳಂ' (Keralam) ಎಂದು ಬದಲಾಯಿಸಲಾಗಿತ್ತು. ಇದೀಗ ಮತ್ತೊಂದು ರಾಜ್ಯದ ಹೆಸರು ಬದಲಾವಣೆಗೆ ಸಿದ್ಧತೆ ನಡೆದಿದ್ದು, ಪಶ್ಚಿಮ ಬಂಗಾಳವನ್ನು 'ಪಶ್ಚಿಮ ಬಂಗ' (Paschim Banga) ಎಂದು ಮರುನಾಮಕರಣ ಮಾಡಲು ಇದೇ ಡಿಸೆಂಬರ್ 9ರಂದು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಲು ಸರ್ಕಾರ ಮುಂದಾಗಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ರಾಜ್ಯ ಸಚಿವ ಸಂಪುಟವು ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು, ಆಡಳಿತಾತ್ಮಕ ಸ್ಪಷ್ಟತೆ ಮತ್ತು ರಾಷ್ಟ್ರ ಮಟ್ಟದ ಸಭೆಗಳಲ್ಲಿ ರಾಜ್ಯಕ್ಕೆ ಸಿಗಬೇಕಾದ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಈ ಹೆಜ್ಜೆ ಇಡಲಾಗಿದೆ.
ಸೋಮವಾರ ಸಚಿವಾಲಯದಲ್ಲಿ ನಡೆದಿದ್ದ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುವೇಂದು ಅಧಿಕಾರಿ, ಹೆಸರು ಬದಲಾವಣೆಯ ಪ್ರಕ್ರಿಯೆ ಮತ್ತು ಅದರ ಹಿನ್ನೆಲೆಯನ್ನು ವಿವರಿಸಿದರು. ಡಿಸೆಂಬರ್ 4ರಿಂದ 14ರವರೆಗೆ ಒಟ್ಟು 11 ದಿನಗಳ ಕಾಲ ವಿಧಾನಸಭೆಯ ಚಳಿಗಾಲದ ಅಧಿವೇಶನ ನಡೆಯಲಿದ್ದು, ಅಧಿವೇಶನದ ಪ್ರಮುಖ ಘಟ್ಟವಾಗಿ ಡಿಸೆಂಬರ್ 9ರಂದು ಹೆಸರು ಬದಲಾವಣೆ ಕುರಿತ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಲಾಗುತ್ತದೆ. ಸದನದಲ್ಲಿ ನಿರ್ಣಯ ಅಂಗೀಕಾರಗೊಂಡ ಬಳಿಕ, ಮುಂದಿನ ಸಾಂವಿಧಾನಿಕ ಪ್ರಕ್ರಿಯೆ ಮತ್ತು ಅಂತಿಮ ಅನುಮೋದನೆಗಾಗಿ ಕೇಂದ್ರ ಸರ್ಕಾರ ಹಾಗೂ ಸಂಸತ್ತಿಗೆ ಕಳುಹಿಸಿಕೊಡಲಾಗುತ್ತದೆ.
ಸುವೇಂದು ಅಧಿಕಾರಿ ಪತ್ರಿಕಾ ಗೋಷ್ಠಿಯ ವಿಡಿಯೊ ನೋಡಿ:
#WATCH | Kolkata: West Bengal CM Suvendu Adhikari says, "In English, too, West Bengal will be 'Paschim Banga'. 'Paschim Banga'—it must be written exactly as is. We are bringing a resolution to the Legislative Assembly on the 9th; following that, it will go to the Government of India and then to Parliament. The Cabinet has given its approval today, and we will move the resolution in the Legislative Assembly on the 9th. This is a matter of history—the history surrounding the formation of West Bengal, which took place in 1947. This change is something that ought to happen. Instead of 'West Bengal', it will be 'Paschim Banga'."
— ANI (@ANI) November 23, 2026
ಪಶ್ಚಿಮ ಬಂಗಾಳದ ಹೆಸರು ಬದಲಾವಣೆ
ಬಂಗಾಳಿ ಭಾಷೆಯಲ್ಲಿ ಈಗಾಗಲೇ 'ಪಶ್ಚಿಮ ಬಂಗ' ಎಂದು ಕರೆಯಲಾಗುತ್ತಿದ್ದರೂ, ಇಂಗ್ಲಿಷ್ನಲ್ಲಿ 'West Bengal' ಎಂದು ಉಳಿದುಕೊಂಡಿತ್ತು. ಇನ್ನು ಮುಂದೆ ಇಂಗ್ಲಿಷ್ನಲ್ಲೂ 'Paschim Banga' ಎಂದೇ ಇರಬೇಕು ಮತ್ತು ಬಂಗಾಳಿ, ಇಂಗ್ಲಿಷ್ ಹಾಗೂ ಹಿಂದಿ ಈ ಮೂರೂ ಭಾಷೆಗಳಲ್ಲೂ ಒಂದೇ ಹೆಸರನ್ನು ಅಳವಡಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. 1947ರಲ್ಲಿ ಪಶ್ಚಿಮ ಬಂಗಾಳ ರಚನೆಯಾದ ಐತಿಹಾಸಿಕ ಹಿನ್ನೆಲೆ ಮತ್ತು ಭಾಷಾ ಏಕರೂಪತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಬದಲಾವಣೆ ಅಗತ್ಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ಗದ್ದಲದ ನಡುವೆಯೇ 2 ಮಸೂದೆಗೆ ಅಂಗೀಕಾರ: ಕೇರಳ ಇನ್ಮುಂದೆ ಕೇರಳಂ
ಹೆಸರು ಬದಲಾವಣೆಗೆ ಕಾರಣ
ಇಂಗ್ಲಿಷ್ ವರ್ಣಮಾಲೆಯ ಕ್ರಮದ ಪ್ರಕಾರ 'W' ಅಕ್ಷರದಿಂದ ಆರಂಭವಾಗುವ 'West Bengal' ಹೆಸರಿನಿಂದಾಗಿ, ಕೇಂದ್ರ ಸರ್ಕಾರ ನಡೆಸುವ ಅಂತರ-ರಾಜ್ಯ ಸಭೆಗಳು, ನೀತಿ ಆಯೋಗದ ಸಭೆಗಳು ಹಾಗೂ ರಾಷ್ಟ್ರ ಮಟ್ಟದ ಸಮ್ಮೇಳನಗಳಲ್ಲಿ ರಾಜ್ಯದ ಹೆಸರು ಕೊನೆಯಲ್ಲಿ ಬರುತ್ತದೆ. ಇದರಿಂದಾಗಿ ಮುಖ್ಯಮಂತ್ರಿಗಳು ಮತ್ತು ರಾಜ್ಯದ ಅಧಿಕಾರಿಗಳಿಗೆ ಮಾತನಾಡಲು ಹಾಗೂ ರಾಜ್ಯದ ಪ್ರಮುಖ ವಿಷಯಗಳನ್ನು ಮಂಡಿಸಲು ಕೊನೆಯವರೆಗೂ ಕಾಯಬೇಕಾಗುತ್ತದೆ. ಆದರೆ 'Paschim Banga' ಎಂದು ಬದಲಾದರೆ 'P' ಅಕ್ಷರದ ಸಾಲಿಗೆ ಬರುವುದರಿಂದ, ರಾಷ್ಟ್ರೀಯ ವೇದಿಕೆಗಳಲ್ಲಿ ರಾಜ್ಯಕ್ಕೆ ಬೇಗ ಅವಕಾಶ ಸಿಗುವ ಜತೆಗೆ ಚರ್ಚೆಯಲ್ಲಿ ಭಾಗವಹಿಸಲು ಹೆಚ್ಚಿನ ಸಮಯ ದೊರೆಯುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿದೆ.
ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಹೆಸರು ಬದಲಾವಣೆಗೆ ಪ್ರಯತ್ನ
ಈ ಹಿಂದೆ ಎಡಪಕ್ಷಗಳ ಸರ್ಕಾರ ಹಾಗೂ ಮಮತಾ ಬ್ಯಾನರ್ಜಿ ನೇತೃತ್ವದ ಹಿಂದಿನ ಸರ್ಕಾರಗಳು ರಾಜ್ಯದ ಹೆಸರನ್ನು 'ಬಾಂಗ್ಲಾ' ಎಂದು ಬದಲಾಯಿಸಲು ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ನೆರೆಯ ಬಾಂಗ್ಲಾದೇಶದ ಹೆಸರಿಗೆ ಹೋಲಿಕೆಯಾಗುತ್ತದೆ ಎಂಬ ಕಾರಣ ಹಾಗೂ ವಿಭಜನೆಯ ಐತಿಹಾಸಿಕ ಹಿನ್ನೆಲೆಯಿಂದ ಎದುರಾದ ಆಕ್ಷೇಪಗಳಿಂದಾಗಿ ಆ ಪ್ರಸ್ತಾವನೆಗಳು ಮುಂದುವರಿದಿರಲಿಲ್ಲ. ಹೀಗಾಗಿ 'ಬಾಂಗ್ಲಾ' ಹೆಸರಿನ ಸುತ್ತ ಇದ್ದ ವಿವಾದವನ್ನು ತಪ್ಪಿಸಿ, ಎಲ್ಲಾ ಕಡೆಯೂ ಒಪ್ಪಿತವಾಗುವ ಮತ್ತು ಗೊಂದಲಕ್ಕೆ ಎಡೆಮಾಡಿಕೊಡದ 'ಪಶ್ಚಿಮ ಬಂಗ' ಹೆಸರಿನೊಂದಿಗೆ ಹೊಸ ನಿರ್ಣಯ ಮಂಡಿಸಲು ಸುವೇಂದು ಅಧಿಕಾರಿ ಸರ್ಕಾರ ಮುಂದಾಗಿದೆ.