ಉಪಾವಾಸ ಸತ್ಯಾಗ್ರಾಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್‌ಗೆ ಬಲವಂತವಾಗಿ ದ್ರವಾಹಾರ ನೀಡುವಂತೆ ದೆಹಲಿ ಹೈಕೋರ್ಟ್‌ಗೆ ಪಿಐಎಲ್
Sonam Wangchuk: ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಜೀವ ಉಳಿಸಲು ತಕ್ಷಣವೇ ಬಲವಂತವಾಗಿ ದ್ರವಾಹಾರ ನೀಡುವಂತೆ ಕೋರಿ ದೆಹಲಿ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಕೆಯಾಗಿದೆ. ಉಪವಾಸ ಸತ್ಯಾಗ್ರಹ ಮುಂದುವರಿಸಿದರೆ ಅವರು ಎರಡು ದಿನಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಉಪಾವಾಸ ಸತ್ಯಾಗ್ರಾಹ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ -
ನವದೆಹಲಿ, ಜು.15: 18ನೇ ದಿನಕ್ಕೆ ಕಾಲಿಟ್ಟಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮುಂದುವರಿಸಿದರೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ (Sonam Wangchuk) ಎರಡು ದಿನಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಿಲ್ಲ ಎಂದು ತುರ್ತು ಮಧ್ಯಪ್ರವೇಶ ಕೋರಿ ದೆಹಲಿ ಹೈಕೋರ್ಟ್‌ಗೆ (Delhi High Court) ಅರ್ಜಿ ಸಲ್ಲಿಸಲಾಗಿದೆ. ಅವರ ಜೀವ ಉಳಿಸಲು ತಕ್ಷಣವೇ ಬಲವಂತವಾಗಿ ದ್ರವಾಹಾರ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಕೆಯಾಗಿದೆ.
ರಾಜ್ಯವು ಕಡಿಮೆ ಕಾಳಜಿ ವಹಿಸುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದ್ದು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪದ ಮೇಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ಕಾರ್ಯಕರ್ತನಿಗೆ ಒತ್ತಾಯಪೂರ್ವಕವಾಗಿ ದ್ರವಾಹಾರ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಮನವಿ ಮಾಡಲಾಗಿದೆ. ಈ ಅರ್ಜಿಯನ್ನು ನಾಳೆ ವಿಚಾರಣೆ ನಡೆಸುವುದಾಗಿ ದೆಹಲಿ ಹೈಕೋರ್ಟ್ ತಿಳಿಸಿದೆ.
ಹೈಕೋರ್ಟ್‌ನ ಬಾರ್ ಅಸೋಸಿಯೇಷನ್ ಕರೆ ನೀಡಿದ್ದ ಕೆಲಸದಿಂದ ಗೈರುಹಾಜರಾದ ನಡುವೆಯೂ ಅಧಿಕಾರಿಗಳ ಪರವಾಗಿ ಯಾರೂ ಹಾಜರಾಗದಿರುವುದನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ಪೀಠವು, ಪಿಐಎಲ್‌ನ ವಿಚಾರಣೆಯನ್ನು ಮುಂದೂಡಿತು.
ಸಿಜೆಪಿ ಪ್ರತಿಭಟನೆ: 18 ದಿನಗಳ ಉಪವಾಸದಲ್ಲಿ 8.2 ಕೆಜಿ ತೂಕ ಕಳೆದುಕೊಂಡ ಸೋನಮ್ ವಾಂಗ್‌ಚುಕ್
ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ 59 ವರ್ಷದ ಕಾರ್ಯಕರ್ತ ಸುಮಾರು 8.5 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲ ರಾಕೇಶ್ ಕುಮಾರ್ ಸೈನಿ ಅವರು ಅರ್ಜಿ ಸಲ್ಲಿಸಿದ್ದಾರೆ. ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಮಾನವ ದೇಹವು ಬದುಕಲು ಅಗತ್ಯವಾದ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ದ್ರವ ಆಹಾರದ ಮೂಲಕ ಬಲವಂತವಾಗಿ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ದೇಶದ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಾಗೂ ಪ್ರಜಾಸತ್ತಾತ್ಮಕ ಹಕ್ಕಾಗಿದೆ ಎಂದು ಅವರು ಹೇಳಿದ್ದಾರೆ. ದೇಶಕ್ಕಾಗಿ ಹೋರಾಡುತ್ತಿರುವ ಇಂತಹ ಮಹಾನ್ ವ್ಯಕ್ತಿ ಅನ್ನಾಹಾರವಿಲ್ಲದೆ ಪ್ರಾಣ ಕಳೆದುಕೊಂಡರೆ, ಅದು ನಮ್ಮ ದೇಶಕ್ಕೆ ಮತ್ತು ಜಗತ್ತಿಗೆ ಸಲ್ಲುವ ಅವಮಾನ ಎಂದು ಅವರು ಹೇಳಿದರು.
ಸರ್ಕಾರವು ಕಾರ್ಯಕರ್ತನನ್ನು ಒಬ್ಬ ಅಪರಾಧಿ, ಭಯೋತ್ಪಾದಕ ಅಥವಾ ರಾಷ್ಟ್ರದ್ರೋಹಿ ಎಂಬಂತೆ ನಡೆಸಿಕೊಳ್ಳುತ್ತಿದೆ. ಅವರ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ ಎಂದು ಅರ್ಜಿದಾರರು ಆಕ್ರೋಶ ಹೊರಹಾಕಿದ್ದಾರೆ.
ಯುವಕರಿಂದ, ಯುವಕರಿಗಾಗಿ ರೂಪಿತವಾಗಿರುವ ಯುವಕರ ರಾಜಕೀಯ ರಂಗ ಎಂದು ಕರೆಸಿಕೊಳ್ಳುವ ಕಾಕ್ರೋಚ್ ಜನತಾ ಪಾರ್ಟಿಯು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡ ನಂತರ, ವಾಂಗ್ಚುಕ್ ಜೂನ್ 28 ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸದ್ಯ ಈ ಹೋರಾಟಕ್ಕೆ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.