ರೈಲಿನಲ್ಲಿ ಮೊಬೈಲ್ ಬಳಕೆಗೆ ಹೊಸ ನಿಯಮ; ಹುಷಾರ್! ಜೋರಾಗಿ ಸಂಗೀತ ಹಾಕಿದರೆ ಬೀಳುತ್ತೆ ದಂಡ
Southern Railway: ರೈಲು ಪ್ರಯಾಣದ ವೇಳೆ ಮೊಬೈಲ್ ಸ್ಪೀಕರ್ನಲ್ಲಿ ಜೋರಾಗಿ ಹಾಡು, ವಿಡಿಯೊ ಪ್ಲೇ ಮಾಡಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟುಮಾಡುವುದನ್ನು ತಡೆಯಲು ದಕ್ಷಿಣ ರೈಲ್ವೆ ಹೊಸ ಸೂಚನೆ ನೀಡಿದೆ. ನಿಯಮ ಉಲ್ಲಂಘನೆಗೆ ₹1,000ವರೆಗೆ ದಂಡ ವಿಧಿಸುವುದಾಗಿ ತಿಳಿಸಿದೆ. ಪದೇ ಪದೆ ಕಿರಿಕಿರಿ ಉಂಟು ಮಾಡಿದರೆ ಕಾನೂನಿನ ಪ್ರಕಾರ ಜೈಲು ಶಿಕ್ಷೆ ಅಥವಾ ಹೆಚ್ಚಿನ ದಂಡ ವಿಧಿಸುವ ಸಾಧ್ಯತೆ ಇದೆ.
ಎಐ ರಚಿತ ಚಿತ್ರ -
ಚೆನ್ನೈ, ಅ. 19: ರೈಲು ಪ್ರಯಾಣದ ವೇಳೆ ಮೊಬೈಲ್ ಸ್ಪೀಕರ್ನಲ್ಲಿ ಜೋರಾಗಿ ಹಾಡುಗಳನ್ನು ಕೇಳುವುದು, ವಿಡಿಯೊಗಳನ್ನುವೀಕ್ಷಿಸುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿದ್ದರೆ ಇನ್ಮುಂದೆ ದಂಡ ವಿಧಿಸುವ ಸಾಧ್ಯತೆಯಿದೆ. ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಜೋರಾದ ಧ್ವನಿಯಲ್ಲಿ ಸಂಗೀತ ಹಾಗೂ ಆಡಿಯೋ ಪ್ಲೇ ಮಾಡುವುದನ್ನು ನಿಯಂತ್ರಿಸಲು ದಕ್ಷಿಣ ರೈಲ್ವೆ (Southern Railway) ಹೊಸ ಸೂಚನೆಗಳನ್ನು ನೀಡಿದೆ. ನಿಯಮ ಉಲ್ಲಂಘಿಸಿದವರಿಗೆ ₹1,000ವರೆಗೆ ದಂಡ ವಿಧಿಸಬಹುದಾಗಿದೆ. ಎಚ್ಚರಿಕೆ ನೀಡಿದರೂ ಪದೇ ಪದೆ ಕಿರಿಕಿರಿ ಉಂಟುಮಾಡಿದರೆ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ₹5,000ವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ ಎಂದು ಸೂಚನೆಗಳಲ್ಲಿ ಉಲ್ಲೇಖಿಸಲಾಗಿದೆ.
ಚೆನ್ನೈಯ ದಕ್ಷಿಣ ರೈಲ್ವೆ ಪ್ರಧಾನ ಕಚೇರಿಯಿಂದ ಹೊರಡಿಸಲಾದ ಪತ್ರದಲ್ಲಿ, ರೈಲುಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಮೊಬೈಲ್ ಸ್ಪೀಕರ್ಗಳ ಮೂಲಕ ಜೋರಾಗಿ ಸಂಗೀತ ಮತ್ತು ಆಡಿಯೋ ಪ್ಲೇ ಮಾಡುವುದರಿಂದ ಇತರ ಪ್ರಯಾಣಿಕರ ಪ್ರಯಾಣ ಹಾಗೂ ವಿಶ್ರಾಂತಿಗೆ ತೊಂದರೆಯಾಗುತ್ತದೆ ಎಂದು ತಿಳಿಸಲಾಗಿದೆ.
ಈ ಕುರಿತು ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಸಾರ್ವಜನಿಕ ಪ್ರಕಟಣಾ ವ್ಯವಸ್ಥೆ ಮೂಲಕ ಜಾಗೃತಿ ಮೂಡಿಸಲು ವಿಭಾಗಗಳಿಗೆ ಸೂಚಿಸಲಾಗಿದೆ. ಹಿಂದಿ, ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಣೆ ನೀಡುವಂತೆ ತಿಳಿಸಲಾಗಿದೆ.
2012ರ ರೈಲ್ವೆ ಮಂಡಳಿ ಸೂಚನೆಗಳ ಉಲ್ಲೇಖ
2012ರ ಜುಲೈ 23ರಂದು ರೈಲ್ವೆ ಮಂಡಳಿ ನೀಡಿದ್ದ ಸೂಚನೆಗಳನ್ನೂ ದಕ್ಷಿಣ ರೈಲ್ವೆ ತನ್ನ ಪತ್ರದಲ್ಲಿ ಉಲ್ಲೇಖಿಸಿದೆ. ಮೊಬೈಲ್ನಲ್ಲಿ ಜೋರಾಗಿ ಅಥವಾ ದೀರ್ಘಕಾಲ ಮಾತನಾಡುವುದು ಹಾಗೂ ಜೋರಾದ ರಿಂಗ್ಟೋನ್ಗಳನ್ನು ಬಳಸುವುದರಿಂದ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಮಂಡಳಿ ತಿಳಿಸಿತ್ತು.
ವಿಶೇಷವಾಗಿ ಹವಾನಿಯಂತ್ರಿತ ಬೋಗಿಗಳಲ್ಲಿ ಇಂತಹ ವರ್ತನೆ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಬಹುದು. ಹೀಗಾಗಿ ಮೊಬೈಲ್ಗಳನ್ನು ಸೈಲೆಂಟ್ ಅಥವಾ ವೈಬ್ರೇಷನ್ ಮೋಡ್ನಲ್ಲಿ ಇಡುವುದು, ರಿಂಗ್ಟೋನ್ ಧ್ವನಿಯನ್ನು ಕಡಿಮೆ ಮಾಡುವುದು ಮತ್ತು ಜೋರಾಗಿ ಮಾತನಾಡುವುದನ್ನು ತಪ್ಪಿಸುವಂತೆ ಜಾಗೃತಿ ಮೂಡಿಸಲು ಸೂಚಿಸಲಾಗಿತ್ತು.
ಮೊಬೈಲ್ ಇಂಟರ್ನೆಟ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರೈಲುಗಳಲ್ಲಿ ಮತ್ತು ನಿಲ್ದಾಣಗಳಲ್ಲಿ ಸ್ಪೀಕರ್ ಮೂಲಕ ಹಾಡು, ವಿಡಿಯೊ ಹಾಗೂ ಇತರ ಆಡಿಯೋಗಳನ್ನು ಪ್ಲೇ ಮಾಡುವುದರ ಮೇಲೂ ನಿಗಾ ಇಡಲು ಸೂಚಿಸಲಾಗಿದೆ.
ರೈಲ್ವೆ ಕಾಯ್ದೆಯ ಸೆಕ್ಷನ್ 145 ಏನು ಹೇಳುತ್ತದೆ?
ದಕ್ಷಿಣ ರೈಲ್ವೆಯ ಪತ್ರದಲ್ಲಿ, 2026ರ ಜನ ವಿಶ್ವಾಸ್ (ತಿದ್ದುಪಡಿ) ಕಾಯ್ದೆಯ ಮೂಲಕ ತಿದ್ದುಪಡಿ ಮಾಡಲಾಗಿದೆ ಎಂದು ಉಲ್ಲೇಖಿಸಿರುವ ರೈಲ್ವೆ ಕಾಯ್ದೆಯ ಸೆಕ್ಷನ್ 145ರ ಅಡಿಯಲ್ಲಿ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಲಾಗಿದೆ. ರೈಲ್ವೆ ಆವರಣದಲ್ಲಿ ಉಪದ್ರವ ಉಂಟು ಮಾಡುವುದು, ಅಸಭ್ಯವಾಗಿ ವರ್ತಿಸುವುದು ಅಥವಾ ರೈಲ್ವೆ ಆಡಳಿತ ಒದಗಿಸಿರುವ ಸೌಲಭ್ಯಗಳಿಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದರ ವಿರುದ್ಧ ಈ ಸೆಕ್ಷನ್ ಅನ್ವಯಿಸಬಹುದು.
ಮೊದಲ ಕ್ರಮ: ರೈಲ್ವೆ ಆವರಣದಲ್ಲಿ ಕಿರಿಕಿರಿ ಉಂಟುಮಾಡುವ ವ್ಯಕ್ತಿಯನ್ನು ರೈಲ್ವೆ ಸಿಬ್ಬಂದಿ ಹೊರ ಹಾಕಬಹುದು. ಸಂದರ್ಭಕ್ಕೆ ಅನುಗುಣವಾಗಿ ಅವರ ಪಾಸ್ ಅಥವಾ ಟಿಕೆಟ್ ವಶಪಡಿಸಿಕೊಳ್ಳುವ ಜೊತೆಗೆ ₹1,000ವರೆಗೆ ದಂಡ ವಿಧಿಸಬಹುದು.
ಪುನರಾವರ್ತಿತ ಉಲ್ಲಂಘನೆ: ರೈಲ್ವೆ ಸಿಬ್ಬಂದಿಯ ಕಾನೂನುಬದ್ಧ ಸೂಚನೆಯ ಹೊರತಾಗಿಯೂ ವ್ಯಕ್ತಿ ಕಿರಿಕಿರಿ ಮುಂದುವರಿಸಿದರೆ, ಆರು ತಿಂಗಳವರೆಗೆ ಸರಳ ಜೈಲು ಶಿಕ್ಷೆ ಅಥವಾ ₹5,000ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.
ರೈಲ್ವೆ ಸಿಬ್ಬಂದಿಯ ಅಧಿಕಾರ: ದಕ್ಷಿಣ ರೈಲ್ವೆಯ ಸೂಚನೆಯ ಪ್ರಕಾರ, ಟಿಕೆಟ್ ಪರೀಕ್ಷಕರ ಹುದ್ದೆಗಿಂತ ಕಡಿಮೆಯಲ್ಲದ ಅಧಿಕೃತ ವಾಣಿಜ್ಯ ಸಿಬ್ಬಂದಿಗೆ ಇಂತಹ ಪ್ರಕರಣಗಳಲ್ಲಿ ₹1,000 ದಂಡ ವಿಧಿಸುವ ಅಧಿಕಾರವಿರುತ್ತದೆ. ಆದರೆ ಮೊಬೈಲ್ನಲ್ಲಿ ಹಾಡು ಕೇಳುವುದರಿಂದಲೇ ಪ್ರತಿಯೊಂದು ಸಂದರ್ಭದಲ್ಲೂ ಜೈಲು ಶಿಕ್ಷೆಯಾಗುವುದಿಲ್ಲ. ಪ್ರಕರಣದ ಪರಿಸ್ಥಿತಿ ಮತ್ತು ಅನ್ವಯವಾಗುವ ಕಾನೂನು ನಿಯಮಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ಟೈಗರ್ ಶ್ರಾಫ್ ಮೇಲಿನ ದಾಳಿ ಬೆನ್ನಲ್ಲೇ ಲಾರೆನ್ಸ್ ಗ್ಯಾಂಗ್ನ ಅನಿಲ್ ಪಂಡಿತ್ ಹೆಸರು ಮುನ್ನೆಲೆಗೆ
ರೈಲು ವಿಭಾಗಗಳಿಗೆ ನೀಡಿರುವ ಸೂಚನೆಗಳೇನು?
ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ದಕ್ಷಿಣ ರೈಲ್ವೆ ತನ್ನ ಎಲ್ಲ ಸಂಬಂಧಿತ ವಿಭಾಗಗಳಿಗೆ ಈ ಕೆಳಗಿನ ಸೂಚನೆಗಳನ್ನು ನೀಡಿದೆ:
- ರೈಲು ಮತ್ತು ನಿಲ್ದಾಣಗಳಲ್ಲಿ ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಪ್ರಕಟಣೆ ನೀಡಬೇಕು.
- ಮೊಬೈಲ್ ಸ್ಪೀಕರ್ಗಳಲ್ಲಿ ಜೋರಾಗಿ ಹಾಡು ಅಥವಾ ವಿಡಿಯೊ ಪ್ಲೇ ಮಾಡದಂತೆ ಮನವಿ ಮಾಡಬೇಕು
- ಮೊಬೈಲ್ನಲ್ಲಿ ಜೋರಾಗಿ ಮಾತನಾಡುವುದನ್ನು ತಪ್ಪಿಸುವಂತೆ ತಿಳಿ ಹೇಳಬೇಕು.
- ಇಯರ್ಫೋನ್ಗಳನ್ನು ಬಳಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಬೇಕು.
- ರೈಲು ಮತ್ತು ನಿಲ್ದಾಣಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು.
- ಸಹ ಪ್ರಯಾಣಿಕರಿಗೆ ತೊಂದರೆಯಾಗುವ ರೀತಿಯಲ್ಲಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳುವುದು.
ಈ ಸೂಚನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ವರದಿಯನ್ನು 2026ರ ಅಕ್ಟೋಬರ್ 20ರೊಳಗೆ ಪ್ರಧಾನ ಕಚೇರಿಗೆ ಸಲ್ಲಿಸುವಂತೆ ದಕ್ಷಿಣ ರೈಲ್ವೆ ವಿಭಾಗಗಳಿಗೆ ಸೂಚಿಸಿದೆ.
ಪ್ರಯಾಣಿಕರ ಮೇಲೆ ಏನು ಪರಿಣಾಮ?
ಪ್ರಯಾಣಿಕರಿಗೆ ಶಾಂತಿಯುತ ಮತ್ತು ಆರಾಮದಾಯಕ ಪ್ರಯಾಣದ ಅನುಭವ ಒದಗಿಸುವುದು ಈ ಕ್ರಮದ ಉದ್ದೇಶ ಎಂದು ದಕ್ಷಿಣ ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೂರದ ಪ್ರಯಾಣದ ರೈಲುಗಳಲ್ಲಿ ಮೊಬೈಲ್ನಲ್ಲಿ ಜೋರಾಗಿ ಹಾಡು ಕೇಳುವುದು, ವಿಡಿಯೊ ವೀಕ್ಷಿಸುವುದು ಹಾಗೂ ಫೋನ್ನಲ್ಲಿ ಜೋರಾಗಿ ಮಾತನಾಡುವುದರಿಂದ ಇತರರಿಗೆ ತೊಂದರೆಯಾಗುತ್ತದೆ. ಹೀಗಾಗಿ ಮೊಬೈಲ್ ಬಳಸುವಾಗ ಸುತ್ತಮುತ್ತಲಿನ ಪ್ರಯಾಣಿಕರ ಅನುಕೂಲವನ್ನೂ ಗಮನದಲ್ಲಿಟ್ಟುಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.