ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಪ್ರಧಾನಿ ಮೋದಿ ಚಾಲನೆ; ಹೌರಾ-ಗುವಾಹಟಿ ನಡುವೆ ಸಂಚರಿಸುವ ಈ ರೈಲಿನ ವೈಶಿಷ್ಟ್ಯವೇನು?
ಭಾರತದ ಮೊದಲ ವಂದೇ ಭಾರತ ಸ್ಲೀಪರ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮಾಲ್ಡಾ ಟೌನ್‌ನಿಂದ ಹಸಿರು ನಿಶಾನೆ ತೋರಿದರು. ಪಶ್ಚಿಮ ಬಂಗಾಳದ ಹೌರಾ ಮತ್ತು ಅಸ್ಸಾಂನ ಗುವಾಹಟಿ–ಕಾಮಾಖ್ಯ ನಡುವಿನ ಈ ಅತ್ಯಾಧುನಿಕ ರೈಲು ವಿಮಾನ ಮಾದರಿಯ ಪ್ರೀಮಿಯಂ ಸೌಕರ್ಯಗಳೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ದೀರ್ಘದೂರ ಪ್ರಯಾಣದ ಅನುಭವವನ್ನು ನೀಡಲಿದೆ.
ವಂದೇ ಭಾರತ ಸ್ಲೀಪರ್ ರೈಲು -
ಕೋಲ್ಕತ್ತಾ, ಜ. 17: ಭಾರತದ ಮೊದಲ ವಂದೇ ಭಾರತ ಸ್ಲೀಪರ್ ರೈಲಿಗೆ (Vande Bharat sleeper train) ಪಶ್ಚಿಮ ಬಂಗಾಳದ ಮಾಲ್ಡಾ ಟೌನ್‌ನಲ್ಲಿ ಶನಿವಾರ (ಜನವರಿ 17) ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅಧಿಕೃತವಾಗಿ ಹಸಿರು ನಿಶಾನೆ ತೋರಿದ್ದಾರೆ. ಈ ಅತ್ಯಾಧುನಿಕ ಸ್ಲೀಪರ್ ರೈಲು ಪಶ್ಚಿಮ ಬಂಗಾಳದ ಹೌರಾ (Howrah) ಮತ್ತು ಅಸ್ಸಾಂನ ಗುವಾಹಟಿ (Guwahati)ಯ ಕಾಮಾಖ್ಯ (Kamakhya) ನಡುವೆ ಸಂಚರಿಸಲಿದ್ದು, ಪ್ರಯಾಣಿಕರಿಗೆ ವಿಮಾನ ಮಾದರಿಯ ಪ್ರೀಮಿಯಂ ಸೌಕರ್ಯಗಳನ್ನು ಒದಗಿಸಲಿದೆ. ಮತ್ತೊಂದು ಗಮನಿಸಬೇಕಾದ ಸಂಗತಿ ಎಂದರೆ ಈ ಎರಡೂ ರಾಜ್ಯಗಳಲ್ಲೂ ಹತ್ತಿರದಲ್ಲೇ ಚುನಾವಣೆ ನಡೆಯಲಿದೆ.
“ಆಧುನಿಕ ಭಾರತದ ಹೆಚ್ಚುತ್ತಿರುವ ಸಾರಿಗೆ ಅಗತ್ಯಗಳನ್ನು ಪೂರೈಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾದ, ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯುಳ್ಳ ವಂದೇ ಭಾರತ ಸ್ಲೀಪರ್ ರೈಲು ಪ್ರಯಾಣಿಕರಿಗೆ ಕಡಿಮೆ ದರದಲ್ಲಿ ವಿಮಾನಯಾನದಂತಹ ಪ್ರಯಾಣದ ಅನುಭವ ನೀಡಲಿದೆ. ಇದು ದೂರದ ಪ್ರಯಾಣಗಳನ್ನು ಇನ್ನಷ್ಟು ವೇಗ, ಸುರಕ್ಷಿತ ಮತ್ತು ಆರಾಮದಾಯಕವನ್ನಾಗಿ ಮಾಡಲಿದೆ. ಹೌರಾ–ಗುಹಾಟಿ (ಕಾಮಾಖ್ಯ) ಮಾರ್ಗದಲ್ಲಿ ಪ್ರಯಾಣ ಸಮಯವನ್ನು ಸುಮಾರು 2.5 ಗಂಟೆಗಳಷ್ಟು ಕಡಿಮೆ ಮಾಡುವ ಮೂಲಕ, ಧಾರ್ಮಿಕ ಸ್ಥಳಗಳ ಪ್ರವಾಸ ಮತ್ತು ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ನೀಡಲಿದೆ” ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
‘ವಂದೇ ಭಾರತ್ ಸ್ಲೀಪರ್’ ರೈಲಿಗೆ ಚಾಲನೆ ನೀಡಿದ ಮೋದಿ:
A memorable interaction with my young friends at Malda Station. There is immense enthusiasm on the flagging off of the first Vande Bharat sleeper train! pic.twitter.com/miiTvXWZ6Z
— Narendra Modi (@narendramodi) January 17, 2026
ಭಾರತದ ಮೊದಲ ವಂದೇ ಭಾರತ ಸ್ಲೀಪರ್ ರೈಲಿನ ವೈಶಿಷ್ಟ್ಯಗಳು
ಮಿಂಚಿನ ವೇಗ: ಈ ರೈಲು ಗರಿಷ್ಠವಾಗಿ ಪ್ರತಿ ಗಂಟೆಗೆ 180 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದರೂ, ಪ್ರಾಯೋಗಿಕವಾಗಿ 120–130 ಕಿ.ಮೀ./ಗಂಟೆಗೆ ವೇಗದಲ್ಲಿ ಸಂಚರಿಸಲಿದೆ.
ಆರಾಮದಾಯಕ: ಈ ರೈಲಿನಲ್ಲಿ ಬರ್ತ್‌ಗಳನ್ನು ಎರ್ಗೋನಾಮಿಕ್ ವಿನ್ಯಾಸದಲ್ಲಿ ರೂಪಿಸಲಾಗಿದ್ದು, ವಿಶ್ವಮಟ್ಟದ ಸಸ್ಪೆನ್ಶನ್ ವ್ಯವಸ್ಥೆಯೊಂದಿಗೆ ಅತ್ಯಂತ ಮೃದುವಾದ ಪ್ರಯಾಣದ ಅನುಭವವನ್ನು ಒದಗಿಸಲಿದೆ.
ಸ್ವಚ್ಛತೆ: ರೈಲಿನಲ್ಲಿ ಅತ್ಯಾಧುನಿಕ ಸೋಂಕುನಾಶಕ ತಂತ್ರಜ್ಞಾನವನ್ನು ಬಳಸಲಾಗಿದ್ದು, ಇದು ಶೇ. 99ರಷ್ಟು ಸೂಕ್ಷ್ಮಾಣುಗಳನ್ನು ನಾಶಮಾಡುವ ಸಾಮರ್ಥ್ಯ ಹೊಂದಿದೆ. ಎಲ್ಲ ಪ್ರಯಾಣಿಕರಿಗೆ ಒಗೆದ ಮಾಡಲಾದ ಬೆಡ್‌ಶೀಟ್, ಟವಲ್‌ಗಳನ್ನು ಒದಗಿಸಲಾಗುತ್ತದೆ.
ಯುಪಿಐ ಮೂಲಕ ಇಪಿಎಫ್ ಹಣ ಪಡೆಯಲು ಅವಕಾಶ; ಯಾವಾಗ, ಹೇಗೆ?
ಭದ್ರತೆ: ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದೇಶೀಯವಾಗಿ ಅಭಿವೃದ್ಧಿಪಡಿಸಲಾದ ‘ಕವಚ್’ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಜತೆಗೆ ಸಂಪೂರ್ಣ ರೈಲಿನಲ್ಲಿ ನಿಗಾ ವ್ಯವಸ್ಥೆಯೂ ಇರುತ್ತದೆ.
ಸ್ವಯಂಚಾಲಿತ ಬಾಗಿಲು: ಈ ರೈಲಿನಲ್ಲಿ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳನ್ನು ಅಳವಡಿಸಲಾಗಿದ್ದು, ಪ್ರಯಾಣದ ಅವಧಿ ಪೂರ್ತಿಯಾಗುವವರೆಗೆ ಮುಚ್ಚಿದ ಸ್ಥಿತಿಯಲ್ಲೇ ಇರುತ್ತವೆ. ರೈಲು ನಿಲ್ದಾಣಕ್ಕೆ ತಲುಪಿದಾಗ ಮಾತ್ರ ಅವು ತೆರೆಯುತ್ತವೆ.
ರೈಲಿನೊಳಗಿನ ಸ್ಥಳೀಯ ಆಹಾರ: ಈ ರೈಲಿನಲ್ಲಿ ವೇಗ, ಸ್ವಚ್ಛತೆ ಮತ್ತು ಭದ್ರತೆ ಜತೆಗೆ, ಪ್ರಯಾಣಿಕರಿಗೆ ಪ್ರೀಮಿಯಂ ವಿಮಾನಯಾನ ಸೇವೆಗಳಂತೆ ಸ್ಥಳೀಯ ಆಹಾರವನ್ನೂ ಒದಗಿಸಲಾಗುತ್ತದೆ. ಟಿಕೆಟ್ ದರದಲ್ಲೇ ಕ್ಯಾಟರಿಂಗ್ ಶುಲ್ಕವೂ ಸೇರ್ಪಡೆಗೊಂಡಿದ್ದು, ಸ್ಥಳೀಯ ರುಚಿ ಮತ್ತು ಪಾಕಶೈಲಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಕಾಮಾಖ್ಯದಿಂದ ಹೌರಾಕ್ಕೆ ಪ್ರಯಾಣಿಸುವವರಿಗೆ ಅಸ್ಸಾಂನ ಆಹಾರಗಳು ದೊರೆಯಲಿದ್ದು, ಹೌರಾದಿಂದ ಕಾಮಾಖ್ಯಕ್ಕೆ ಮರಳುವ ಪ್ರಯಾಣಿಕರಿಗೆ ಬೆಂಗಾಲಿ ಖಾದ್ಯಗಳನ್ನು ಸವಿಯುವ ಅವಕಾಶ ದೊರೆಯಲಿದೆ.
ಟಿಕೆಟ್ ದರ
ಈ ರೈಲು ಮೂರು ತರಗತಿಗಳಲ್ಲಿ ಪ್ರಯಾಣ ಸೌಲಭ್ಯ ಒದಗಿಸಲಿದ್ದು, ಟಿಕೆಟ್ ದರಗಳು 2,300 ರುಪಾಯಿಯಿಂದ 3,600 ರುಪಾಯಿವರೆಗೆ ಇರಲಿವೆ. ಏಕಮುಖ ಪ್ರಯಾಣದ ಅಂದಾಜು ದರಗಳು ಹೀಗಿವೆ:
3 ಎಸಿ - ಸುಮಾರು 2,300 ರುಪಾಯಿ
2 ಎಸಿ - ಸುಮಾರು 3,000 ರುಪಾಯಿ
1 ಎಸಿ - ಸುಮಾರು 3,600 ರುಪಾಯಿ