100ನೇ ವಸಂತಕ್ಕೆ ಎಲ್.ಕೆ. ಅಡ್ವಾಣಿ ; ಮೋದಿ ವಿಶೇಷ ಲೇಖನದ ಮೂಲಕ ಶುಭ ಕೋರಿದ ಮೋದಿ
ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಿರಿಯ ಧುರಿತ ಹಾಗೂ ದೇಶದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು ಭಾನುವಾರ (ನವೆಂಬರ್ 8) 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಲೇಖನವೊಂದನ್ನು ಬರೆದಿದ್ದಾರೆ.
-
ನವದೆಹಲಿ: ಭಾರತೀಯ ಜನತಾ ಪಕ್ಷದ (BJP) ಹಿರಿಯ ಧುರಿತ ಹಾಗೂ ದೇಶದ ಮಾಜಿ ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರು (L.K Advani) ಭಾನುವಾರ (ನವೆಂಬರ್ 8) 100 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಿಶೇಷ ಲೇಖನವೊಂದನ್ನು ಬರೆಯುವ ಮೂಲಕ ಅಡ್ವಾಣಿ ಅವರ ರಾಜಕೀಯ ಜೀವನ, ಪಕ್ಷದ ಬೆಳವಣಿಗೆಗೆ ನೀಡಿದ ಕೊಡುಗೆ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗಿನ ಅವರ ಒಡನಾಟವನ್ನು ಸ್ಮರಿಸಿದ್ದಾರೆ.
1947 ರ ದೇಶ ವಿಭಜನೆಯ ಸಂದರ್ಭದಲ್ಲಿ ಕರಾಚಿಯಿಂದ ಭಾರತಕ್ಕೆ ಬಂದು ಶೂನ್ಯದಿಂದ ಜೀವನ ಆರಂಭಿಸಿದ ಅಡ್ವಾಣಿ ಅವರ ದೃಢ ಸಂಕಲ್ಪವೇ ಅವರ ರಾಜಕೀಯ ಯಶಸ್ಸಿಗೆ ಕಾರಣ ಎಂದು ಪ್ರಧಾನಿ ಹೇಳಿದ್ದಾರೆ. ಜನಸಂಘ ಹಾಗೂ ಬಿಜೆಪಿಯನ್ನು ದೇಶದ ಪ್ರಮುಖ ರಾಜಕೀಯ ಶಕ್ತಿಯಾಗಿ ಬೆಳೆಸುವಲ್ಲಿ ಮತ್ತು 'ರಾಷ್ಟ್ರವೇ ಮೊದಲು' ಎಂಬ ತತ್ವದಡಿ ಪಕ್ಷದ ಬುನಾದಿ ಹಾಕುವಲ್ಲಿ ಅವರ ಪಾತ್ರ ದೊಡ್ಡದಿದೆ. 1996 ರಲ್ಲಿ ಬಿಜೆಪಿ ಮೊದಲ ಬಾರಿಗೆ ಸಂಸತ್ತಿನಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲು ಅಡ್ವಾಣಿ ಅವರ ನಾಯಕತ್ವವೇ ಕಾರಣವಾಗಿತ್ತು.
1991 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಗುಜರಾತ್ನ ಗಾಂಧಿನಗರ ಕ್ಷೇತ್ರದಿಂದ ಅಡ್ವಾಣಿ ಅವರು ಸ್ಪರ್ಧಿಸಿದ್ದಾಗ, ತಾವು ಅವರ ಚುನಾವಣಾ ಏಜೆಂಟ್ ಆಗಿ ನಾಮಪತ್ರ ಸಲ್ಲಿಕೆ ಹಾಗೂ ಪ್ರಚಾರ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದನ್ನು ಪ್ರಧಾನಿ ಮೋದಿ ನೆನಪಿಸಿಕೊಂಡಿದ್ದಾರೆ. ದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಗೃಹ ಸಚಿವರಾಗಿ ಮತ್ತು ಉಪಪ್ರಧಾನಿಯಾಗಿ ಅಡ್ವಾಣಿ ಅವರು ತೆಗೆದುಕೊಂಡ ನಿರ್ಧಾರಗಳು ಹಾಗೂ ದೇಶಾದ್ಯಂತ ಸಂಚಲನ ಮೂಡಿಸಿದ್ದ ಸೋಮನಾಥ-ಅಯೋಧ್ಯೆ ರಥಯಾತ್ರೆಯಲ್ಲಿ ಅವರ ದೈಹಿಕ ಶಕ್ತಿ ಮತ್ತು ಬದ್ಧತೆಯನ್ನು ಮೋದಿ ಲೇಖನದಲ್ಲಿ ಮೋದಿ ಬರೆದುಕೊಂಡಿದ್ದಾರೆ.
ಅಡ್ವಾಣಿ ಅವರ ಜನ್ಮದಿನದ ಅಂಗವಾಗಿ ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ವಿಶೇಷ ಪೂಜೆ ಮತ್ತು ಹವನವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಅವರ ಜೀವನ ಮತ್ತು ರಾಜಕೀಯ ಪಯಣವನ್ನು ಒಳಗೊಂಡ 20 ನಿಮಿಷಗಳ ವಿಶೇಷ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಭಾಗವಹಿಸಲಿದ್ದಾರೆ.