Vande Bharat train: ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
PM Narendra Modi: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶನಿವಾರ ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಬನಾರಸ್‌ನಿಂದ ಖಜುರಾಹೊ, ಲಕ್ನೋದಿಂದ ಸಹಾರನ್‌ಪುರ, ಫಿರೋಜ್‌ಪುರದಿಂದ ದೆಹಲಿ ಮತ್ತು ಎರ್ನಾಕುಲಂನಿಂದ ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ಈ ನಾಲ್ಕು ಹೊಸ ವಂದೇ ಭಾರತ್ ರೈಲುಗಳು ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಿದೆ ಎಂದು ಕೇಂದ್ರ ಸರ್ಕಾರವು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿಯವರು ವಂದೇ ಭಾರತ್ ರೈಲುಗಳಿಗೆ ಚಾಲನೆ ಕೊಟ್ಟರು. -
ವಾರಣಾಸಿ: ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಬೆಳವಣಿಗೆಯಲ್ಲಿ ಮೂಲಸೌಕರ್ಯವು ಪ್ರಮುಖ ಅಂಶವಾಗಿರುತ್ತದೆ. ಭಾರತವು ಅಭಿವೃದ್ಧಿಯ ಹಾದಿಯಲ್ಲಿ ಅತ್ಯಂತ ವೇಗವಾಗಿ ಚಲಿಸುತ್ತಿದೆ. ಮೂಲಸೌಕರ್ಯಗಳೆಂದರೆ ಕೇವಲ ದೊಡ್ಡ ಸೇತುವೆಗಳು ಮತ್ತು ಹೆದ್ದಾರಿಗಳು ಮಾತ್ರವಲ್ಲ. ಆದರೆ ಎಲ್ಲಿಯಾದರೂ ಅಂತಹ ವ್ಯವಸ್ಥೆಗಳು ಅಭಿವೃದ್ಧಿಗೊಂಡಾಗ ಅದು ಆ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ನಾಂದಿ ಹಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ಅವರು ವಾರಣಾಸಿಯಲ್ಲಿ (Varanasi) ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ (Vande Bharat train) ಚಾಲನೆ ನೀಡಿ ಮಾತನಾಡಿದರು.
ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶನಿವಾರ ಬನಾರಸ್ ನಿಂದ ಖಜುರಾಹೊ, ಲಕ್ನೋದಿಂದ ಸಹಾರನ್‌ಪುರ, ಫಿರೋಜ್‌ಪುರದಿಂದ ದೆಹಲಿ ಮತ್ತು ಎರ್ನಾಕುಲಂನಿಂದ ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸುವ ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬಳಿಕ ಸಾರ್ವಜನಿಕ ರಾಲಿಯನ್ನು ಉದ್ದೇಶಿಸಿ ಮಾತನಾಡಿದರು.
ವಂದೇ ಭಾರತ್ ರೈಲುಗಳು ನಾಗರಿಕರೊಂದಿಗಿನ ಸಂಪರ್ಕವನ್ನು ಹೆಚ್ಚಿಸುತ್ತವೆ ಮತ್ತು ಅವರಿಗಾಗಿ ಹೆಚ್ಚಿನ ಸೌಕರ್ಯವನ್ನು ಒದಗಿಸುತ್ತವೆ ಎಂದು ಹೇಳಿದರು. ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ್ ಭಾರತ್‌ನಂತಹ ರೈಲುಗಳು ಹೊಸ ಪೀಳಿಗೆಯ ಭಾರತೀಯ ರೈಲ್ವೆಗೆ ಅಡಿಪಾಯ ಹಾಕುತ್ತಿವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
#WATCH | Varanasi, UP | PM Narendra Modi flags off four new Vande Bharat Express trains from Banaras Railway Station
— ANI (@ANI) November 8, 2025
The new Vande Bharat Express trains will operate on the Banaras–Khajuraho, Lucknow–Saharanpur, Firozpur–Delhi, and Ernakulam–Bengaluru routes
(Source: DD) pic.twitter.com/2GfI45aVGt
ರೈಲುಗಳ ವಿಶೇಷತೆ
ಪ್ರಧಾನಿ ನರೇಂದ ಮೋದಿ ಅವರು ಚಾಲನೆ ನೀಡಿದ ರೈಲುಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಸರ್ಕಾರ ರೈಲುಗಳ ವಿಶೇಷತೆ ಬಗ್ಗೆ ಮಾಹಿತಿಯನ್ನು ನೀಡಿದೆ. ಬನಾರಸ್ ನಿಂದ ಖಜುರಾಹೊಗೆ ಸಾಗುವ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ನೇರ ಸಂಪರ್ಕವನ್ನು ಹೊಂದಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಶೇಷ ರೈಲುಗಳಿಗೆ ಹೋಲಿಸಿದರೆ ಇದು ಸುಮಾರು ಎರಡು ಗಂಟೆ 40 ನಿಮಿಷಗಳನ್ನು ಉಳಿಸುತ್ತದೆ. ಈ ರೈಲು ವಾರಣಾಸಿ, ಪ್ರಯಾಗರಾಜ್, ಚಿತ್ರಕೂಟ ಮತ್ತು ಖಜುರಾಹೊ ಸೇರಿದಂತೆ ಭಾರತದ ಶ್ರೇಷ್ಠ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳನ್ನು ಸಂಪರ್ಕಿಸುತ್ತದೆ. ಇದರಿಂದ ಪ್ರವಾಸೋದ್ಯಮದಲ್ಲಿ ಅಭಿವೃದ್ಧಿ ಸಾಧ್ಯವಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಖಜುರಾಹೊಗೆ ಪ್ರಯಾಣಿಕರು ವೇಗ, ಆಧುನಿಕ ಮತ್ತು ಆರಾಮದಾಯಕ ಪ್ರಯಾಣವನ್ನು ಅನುಭವಿಸಬಹುದಾಗಿದೆ.
ಲಕ್ನೋದಿಂದ ಸಹಾರನ್‌ಪುರ ವಂದೇ ಭಾರತ್ ಸುಮಾರು ಏಳು ಗಂಟೆ 45 ನಿಮಿಷಗಳಲ್ಲಿ ಪ್ರಯಾಣ ಪೂರ್ತಿಗೊಳಿಸಲಿದ್ದು, ಇದರಿಂದ ಸುಮಾರು ಒಂದು ಗಂಟೆ ಪ್ರಯಾಣದ ಸಮಯ ಉಳಿತಾಯವಾಗುವುದು. ಈ ರೈಲು ಲಕ್ನೋ, ಸೀತಾಪುರ, ಶಹಜಹಾನ್‌ಪುರ, ಬರೇಲಿ, ಮೊರಾದಾಬಾದ್, ಬಿಜ್ನೋರ್ ಮತ್ತು ಸಹರಾನ್‌ಪುರದ ಪ್ರಯಾಣಿಕರಿಗೆ ಹೆಚ್ಚು ಪ್ರಯೋಜನವನ್ನು ನೀಡಲಿದೆ. ರೂರ್ಕಿ ಮೂಲಕ ಪವಿತ್ರ ನಗರವಾದ ಹರಿದ್ವಾರಕ್ಕೆ ಸಂಪರ್ಕವನ್ನು ಸುಲಭಗೊಳಿಸುತ್ತದೆ. ಈ ಸಂಪರ್ಕದಿಂದ ಪ್ರಾದೇಶಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Sheikh Hasina: ಬಾಂಗ್ಲಾ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಜೀವ ಉಳಿಸಿದ್ದು ಭಾರತದಿಂದ ಹೋದ ಒಂದು ಫೋನ್ ಕಾಲ್...!
ಫಿರೋಜ್‌ಪುರದಿಂದ ದೆಹಲಿಗೆ ಸಂಚರಿಸುವ ವಂದೇ ಭಾರತ್ ರೈಲು ಈ ಮಾರ್ಗದಲ್ಲಿ ಪ್ರಯಾಣಿಸುವ ಅತ್ಯಂತ ವೇಗದ ರೈಲು ಆಗಿದೆ. ಇದರ ಪ್ರಯಾಣ ಅವಧಿ ಆರು ಗಂಟೆ 40 ನಿಮಿಷಗಳು. ಇದು ದೆಹಲಿ ಮತ್ತು ಪಂಜಾಬ್‌ನ ಪ್ರಮುಖ ನಗರಗಳಾದ ಫಿರೋಜ್‌ಪುರ, ಬಟಿಂಡಾ ಮತ್ತು ಪಟಿಯಾಲ ನಡುವೆ ಸಂಪರ್ಕ ಕಲ್ಪಿಸುತ್ತದೆ. ಇದು ಪ್ರವಾಸೋದ್ಯಮ, ಉದ್ಯೋಗಾವಕಾಶ, ಗಡಿ ಪ್ರದೇಶಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವುದು ಎನ್ನಲಾಗುತ್ತದೆ.
ಎರ್ನಾಕುಲಂನಿಂದ ಬೆಂಗಳೂರಿಗೆ ಸಂಪರ್ಕಿಸುವ ವಂದೇ ಭಾರತ್ ರೈಲು ಎರಡು ಗಂಟೆ ಸಮಯವನ್ನು ಉಳಿತಾಯ ಮಾಡುತ್ತದೆ. ಇದು ಎಂಟು ಗಂಟೆ 40 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ಣಗೊಳಿಸುತ್ತದೆ. ಪ್ರಮುಖ ಐಟಿ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಈ ರೈಲು ಮಾರ್ಗವು ಕೇರಳ, ತಮಿಳುನಾಡು, ಕರ್ನಾಟಕ ನಡುವೆ ಆರ್ಥಿಕ ಚಟುವಟಿಕೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ.