ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

"ಸಮವಸ್ತ್ರ ಹರಿದು, ಕಚ್ಚಿದ್ದಾರೆ"; ರಾಹುಲ್ ಗಾಂಧಿ ಬಂಧನದ ವೇಳೆ ಪ್ರತಿಭಟನಾಕಾರರಿಂದ ದೆಹಲಿ ಪೊಲೀಸರ ಮೇಲೆ ಹಲ್ಲೆ?

Police Assault Allegation: ಪ್ರತಿಭಟನಾಕಾರರ ಗುಂಪೊಂದು ತಮ್ಮನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಪೇದೆಯೊಬ್ಬರು ಆರೋಪಿಸಿದ್ದಾರೆ. ಬುಧವಾರ (ಅ.7) ವಿರೋಧ ಪಕ್ಷಗಳ ಪ್ರತಿಭಟನೆ ವೇಳೆ ಜನದಟ್ಟಣೆ ನಿಯಂತ್ರಿಸಲು ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ಈ ಆರೋಪ ಮಾಡಿದ್ದಾರೆ. ಪ್ರತಿಭಟನಾಕಾರರ ಗುಂಪೊಂದು ತಮ್ಮನ್ನು ಸುತ್ತುವರಿದು ಹಲ್ಲೆ ನಡೆಸಿದೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಬಂಧನದ ವೇಳೆ ಪೊಲೀಸ್ ಮೇಲೆ ಹಲ್ಲೆ?

ಪೊಲೀಸ್ ಪೇದೆ ಅಂಕಿತ್ ಕಸಾನಾ -

Priyanka P
Priyanka P Oct 8, 2026 1:48 PM

ನವದೆಹಲಿ, ಅ.8: ಪ್ರತಿಭಟನಾಕಾರರ ಗುಂಪೊಂದು ತಮ್ಮನ್ನು ಸುತ್ತುವರಿದು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಪೇದೆಯೊಬ್ಬರು ಆರೋಪಿಸಿದ್ದಾರೆ (Police Assault Allegation). ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿರೋಧಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ವಶಕ್ಕೆ ಪಡೆಯುತ್ತಿದ್ದ ವೇಳೆ ತಮ್ಮ ಸಮವಸ್ತ್ರ ಹರಿದುಹಾಕಲಾಗಿದ್ದು, ಉಗುರುಗಳಿಂದ ಗೀರಲಾಗಿದೆ ಹಾಗೂ ಕಚ್ಚಲಾಗಿದೆ ಎಂದು ಪೊಲೀಸ್ ಸಿಬ್ಬಂದಿ ಆರೋಪಿಸಿದ್ದಾರೆ.

ಬುಧವಾರ (ಅ.7) ವಿರೋಧ ಪಕ್ಷಗಳ ಪ್ರತಿಭಟನೆ ವೇಳೆ ಜನದಟ್ಟಣೆ ನಿಯಂತ್ರಿಸಲು ನಿಯೋಜನೆಗೊಂಡಿದ್ದ ಪೊಲೀಸ್ ಪೇದೆಯೊಬ್ಬರು ಈ ಆರೋಪ ಮಾಡಿದ್ದಾರೆ. ಪ್ರತಿಭಟನಾಕಾರರ ಗುಂಪೊಂದು ತಮ್ಮನ್ನು ಸುತ್ತುವರಿದು ಹಲ್ಲೆ ನಡೆಸಿದೆ ಎಂದು ಹೇಳಿದ್ದಾರೆ. ಪೊಲೀಸ್ ಪೇದೆಯನ್ನು ಅಂಕಿತ್ ಕಸಾನಾ ಎಂದು ಗುರುತಿಸಲಾಗಿದೆ. ಅವರು ಸಂಸತ್‍ನ ಪೊಲೀಸ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಬುಧವಾರ (ಅ.7) ಇಂಡಿಯಾ ಬ್ಲಾಕ್‌ನ ಸಂಸದರು ಜಂತರ್ ಮಂತರ್ ಸಮೀಪ ಹಠಾತ್ ಪ್ರತಿಭಟನೆ ನಡೆಸಿದ ವೇಳೆ ಕರ್ತವ್ಯದಲ್ಲಿದ್ದರು. ಪ್ರತಿಭಟನೆಯಿಂದ ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಪುರುಷರು ಮತ್ತು ಮಹಿಳೆಯರು ಸೇರಿದಂತೆ ಸುಮಾರು 30 ರಿಂದ 35 ಜನರು ಸುತ್ತುವರೆದು ತನ್ನ ಮೇಲೆ ದಾಳಿ ಮಾಡಿದರು. ಗುಂಪು ತನ್ನನ್ನು ನಿಂದಿಸಿ, ತನ್ನ ಸಮವಸ್ತ್ರವನ್ನು ಹರಿದು, ಉಗುರುಗಳು ಪರಚಿದರು ಮತ್ತು ಕಚ್ಚಿದರು ಎಂದು ಅವರು ಆರೋಪಿಸಿದ್ದಾರೆ. ಹಲ್ಲೆ ನಡೆದ ನಂತರ ಕಸಾನಾ ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ (ಆರ್‌ಎಂಎಲ್) ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಘಟನೆಯ ನಂತರ ಅವರು ಭಯಭೀತರಾಗಿರುವುದಾಗಿ ಹೇಳಿದರು. ಅವರು ತಮ್ಮ ಮತ್ತು ತಮ್ಮ ಕುಟುಂಬದ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿ ನೀಡಿದ ಕೂಲ್‌ ಡಿಂಕ್ಸ್‌ ನಿರಾಕರಿಸಿದ ಪ್ರಿಯಾಂಕಾ ಗಾಂಧಿ: ಕುಟುಂಬ ಸದಸ್ಯರಿಗೇ ನಂಬಿಕೆ ಇಲ್ಲ, ಇನ್ನು ದೇಶ ಹೇಗೆ ನಂಬುತ್ತೆ ಎಂದು ಕುಟುಕಿದ ಬಿಜೆಪಿ

“ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದಂತೆಯೇ ಸುಮಾರು 35ರಿಂದ 40 ಮಂದಿ ಅಲ್ಲಿಗೆ ಬಂದು ನಡೆಯುತ್ತಿದ್ದ ಘಟನೆಯನ್ನು ನೋಡಿ ನನ್ನ ಮೇಲೆ ಹಲ್ಲೆ ಮಾಡಲು ಆರಂಭಿಸಿದರು. ಅವರಲ್ಲಿ ಕೆಲವು ಮಹಿಳೆಯರು, ಪುರುಷರು ಹಾಗೂ ಹಿರಿಯ ನಾಗರಿಕರೂ ಇದ್ದರು. ನಾನು ನನ್ನ ಕರ್ತವ್ಯ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇನೆ ಎಂಬುದನ್ನು ಅವರು ಗಮನಿಸಲಿಲ್ಲ. ಅವರು ನನ್ನ ಸಮವಸ್ತ್ರವನ್ನು ಹರಿದು, ಹಿಂದಿನಿಂದ ನನ್ನನ್ನು ಎಳೆದರು. ಉಗುರುಗಳಿಂದ ನನ್ನನ್ನು ಗೀರಿದರು. ಒಬ್ಬ ವ್ಯಕ್ತಿ ನನ್ನ ಕೈಗೆ ಕಚ್ಚಿದ” ಎಂದು ಅವರು ಆರೋಪಿಸಿದ್ದಾರೆ.

“ದಯವಿಟ್ಟು ನನ್ನನ್ನು ಬಿಡಿ ಎಂದು ಪದೇಪದೇ ವಿನಂತಿಸುತ್ತಿದ್ದೆ. ನಿಜವಾಗಿಯೂ ನಾನು ಅವರ ಬಳಿ ಅಂಗಲಾಚುತ್ತಿದ್ದೆ. ಅದೃಷ್ಟವಶಾತ್, ನನ್ನ ಸಹ ಸಿಬ್ಬಂದಿ ಅಲ್ಲಿಗೆ ಬಂದು ನನಗೆ ಸಹಾಯ ಮಾಡಿ, ನನ್ನನ್ನು ಅವರಿಂದ ರಕ್ಷಿಸಿದರು. ಇಲ್ಲದಿದ್ದರೆ, ಬಹುಶಃ ನಾನು ಇಂದು ಇಲ್ಲಿ ಕುಳಿತಿರುತ್ತಿರಲಿಲ್ಲ” ಎಂದು ತಿಳಿಸಿದ್ದಾರೆ.

ಸಿಜೆಪಿ ಪ್ರತಿಭಟನೆಯ ಸಂದರ್ಭದಲ್ಲೂ ತಾನು ಅನುಚಿತ ವರ್ತನೆಯನ್ನು ಎದುರಿಸಿದ್ದೇನೆ ಎಂದು ಕಾನ್‌ಸ್ಟೇಬಲ್ ಆರೋಪಿಸಿದ್ದಾರೆ. ಪ್ರತಿಭಟನೆಗಳ ಸಮಯದಲ್ಲಿ ನಿಯೋಜಿಸಲಾದ ಪೊಲೀಸ್ ಸಿಬ್ಬಂದಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಆದರೆ ಉದ್ವಿಗ್ನತೆ ಹೆಚ್ಚಾದಾಗ ಸ್ವತಃ ಗುರಿಯಾಗಬಹುದು ಎಂದು ಅವರು ಹೇಳಿದರು.

ದೆಹಲಿ ಪೊಲೀಸರು ಪ್ರಸ್ತುತ ಕಸಾನಾ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತಿದ್ದು, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸುವ ಸಾಧ್ಯತೆ ಇದೆ. ಘಟನೆಯ ಕುರಿತು ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.