ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Election Commission of India: ಮತಗಳ್ಳತನ ಆರೋಪ ಸಾಬೀತಾಗದಿದ್ದರೆ ಕ್ಷಮೆಯಾಚಿಸಿ; ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದ ಸವಾಲು

Rahul Gandhi: ಎನ್‌ಡಿಎ ಸರ್ಕಾರ ಮತ್ತು ಚುನಾವಣೆ ಆಯೋಗವು ಶಾಮೀಲಾಗಿ ಮತಗಳ್ಳತನ ನಡೆಸಿದೆ ಎನ್ನುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆರೋಪ ಸದ್ಯ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಇದೀಗ ಚುನಾವಣೆ ಆಯೋಗ ಈ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದೆ.

ಮತಗಳ್ಳತನ ಸಾಬೀತಾಗದಿದ್ದರೆ ಕ್ಷಮೆಯಾಚಿಸಿ; ಚುನಾವಣಾ ಆಯೋಗ

Ramesh B Ramesh B Aug 8, 2025 5:00 PM

ದೆಹಲಿ: ಎನ್‌ಡಿಎ (NDA) ಸರ್ಕಾರ ಮತ್ತು ಚುನಾವಣೆ ಆಯೋಗವು (Election Commission of India) ಶಾಮೀಲಾಗಿ ಮತಗಳ್ಳತನ ನಡೆಸಿದೆ ಎನ್ನುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi) ಆರೋಪ ಸದ್ಯ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಇದೀಗ ಚುನಾವಣೆ ಆಯೋಗ ಈ ಆರೋಪಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದೆ. ಇದನ್ನು "ಅಸಂಬದ್ಧ ವಿಶ್ಲೇಷಣೆ" ಎಂದು ಕರೆದಿದೆ. ಈ ಕುರಿತು ಅಧಿಕೃತವಾಗಿ ದೂರು ಸಲ್ಲಿಸಬೇಕು ಇಲ್ಲವೇ ಸುಳ್ಳು ಆರೋಪ ಹೊರಿಸಿದ್ದಕ್ಕೆ ರಾಷ್ಟ್ರದ ಕ್ಷಮೆಯಾಚಿಸಬೇಕು ಎಂದು ಸವಾಲು ಒಡ್ಡಿದೆ. ಆ ಮೂಲಕ ರಾಹುಲ್‌ ಗಾಂಧಿ ಮತ್ತು ಚುನಾವಣಾ ಆಯೋಗದ ಸಂಘರ್ಷ ಇನ್ನೊಂದು ಹಂತ ತಲುಪಿದೆ.

"ರಾಹುಲ್ ಗಾಂಧಿ ತಮ್ಮ ಆರೋಪದಲ್ಲಿ ನಂಬಿಕೆ ಇಟ್ಟರೆ ಮತದಾರರ ನೋಂದಣಿ ನಿಯಮ, 1960ರ ನಿಯಮ 20 (3) (ಬಿ) ಅಡಿಯಲ್ಲಿ ಲಗತ್ತಿಸಲಾದ ಘೋಷಣೆ/ಪ್ರಮಾಣಪತ್ರಕ್ಕೆ ಸಹಿ ಹಾಕಿ ನಮಗೆ ಸಲ್ಲಿಸಲಿ. ಘೋಷಣೆಗೆ ಸಹಿ ಹಾಕದಿದ್ದರೆ ಅವರು ತಮ್ಮ ವಿಶ್ಲೇಷಣೆ ಮತ್ತು ಆರೋಪಗಳಲ್ಲಿ ನಂಬಿಕೆ ಇಡುವುದಿಲ್ಲ ಎಂದರ್ಥ. ಹೀಗಾಗಿ ಅವರು ರಾಷ್ಟ್ರದ ಕ್ಷಮೆಯಾಚಿಸಬೇಕು. ಅವರ ಮುಂದೆ ಎರಡು ಆಯ್ಕೆಗಳಿವೆ" ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.



ಈ ಸುದ್ದಿಯನ್ನೂ ಓದಿ: CM Siddaramaiah: ''ಬಿಜೆಪಿಯಿಂದ ದೇಶಾದ್ಯಂತ ಯಾವ ರೀತಿ ಮತಗಳ್ಳತನ ನಡೆದಿದೆ ಎನ್ನುವ ವಿವರ ರಾಹುಲ್‌ ಗಾಂಧಿಯಿಂದ ಬಹಿರಂಗ'': ಸಿದ್ದರಾಮಯ್ಯ

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ಮತಗಳ್ಳತನ ನಡೆದಿದೆ ಎಂದು ಗುರುವಾರ (ಆಗಸ್ಟ್‌ 7) ರಾಹುಲ್‌ ಗಾಂಧಿ ಆರೋಪಿಸಿದ್ದರು. ʼʼ2024ರ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದ ಕಾರಣದಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್‌ 6 ಸೀಟುಗಳನ್ನು ಕಳೆದುಕೊಂಡಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯುಪಿಎ ಮೃತ್ರಿಕೂಟ ನಿರೀಕ್ಷೆಯಷ್ಟು ಸೀಟುಗಳನ್ನು ಪಡೆಯದಿರಲು ಮತವಂಚನೆಯೇ ಕಾರಣ. ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಅಕ್ರಮದ ಕಾರಣ ಆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲುವಂತಾಯಿತು. ಅಲ್ಲಿ 1 ಲಕ್ಷಕ್ಕೂ ಹೆಚ್ಚು ಮತಕಳವು ನಡೆದಿದೆʼʼ ಎಂದು ರಾಹುಲ್‌ ಗಾಂಧಿ ದೂರಿದ್ದರು.

ಸಹಿ ಸಮೇತ ದಾಖಲೆ ಸಲ್ಲಿಸಲು ಸೂಚನೆ

ರಾಹುಲ್‌ ಗಾಂಧಿಯ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ರಾಜ್ಯ ಚುನಾವಣಾ ಆಯೋಗ ಗುರುವಾರವೇ ಸಹಿ ಸಮೇತ ದಾಖಲೆ ಸಲ್ಲಿಸುವಂತೆ ಸೂಚಿಸಿತ್ತು. ರಾಜುಲ್‌ ಗಾಂಧಿಗೆ ಪತ್ರ ಬರೆದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬು ಕುಮಾರ್‌, ʼʼಅಗತ್ಯ ಕ್ರಮಗಳನ್ನು ಪ್ರಾರಂಭಿಸಲು ಸಾಧ್ಯವಾಗುವಂತೆ ಮತದಾರರ ನೋಂದಣಿ ನಿಯಮ, 1960ರ ನಿಯಮ 20 (3) (ಬಿ) ಅಡಿಯಲ್ಲಿ ಲಗತ್ತಿಸಲಾದ ಘೋಷಣೆ/ಪ್ರಮಾಣಪತ್ರಕ್ಕೆ ಸಹಿ ಹಾಕಿ ಆಯೋಗಕ್ಕೆ ಸಲ್ಲಿಸಿ. ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ಮುನ್ನ ಕಾಂಗ್ರೆಸ್‌ ನಾಯಕರಿಗೆ ಕರಡು ಪ್ರತಿ ನೀಡಲಾಗಿತ್ತು. ಆಗ ಯಾವುದೇ ಆಕ್ಷೇಪಣೆ ಬಂದಿಲ್ಲ. ಈಗ ಮಾತ್ರ ಸುದ್ದಿಗೋಷ್ಠಿಯಲ್ಲಿ ಮತದಾರರ ಪಟ್ಟಿಯಲ್ಲಿ ನಕಲಿ ಮತದಾರು ಇದ್ದಾರೆ ಎಂದು ಹೇಳಿದ್ದೇಕೆ?ʼʼ ಎಂದು ಪ್ರಶ್ನಿಸಿದ್ದರು.

ಬೆಂಗಳೂರಿನಲ್ಲಿ ರ‍್ಯಾಲಿ

ಮತಗಳ್ಳತನ ಆರೋಪಿಸಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನಾ ಸಮಾವೇಶ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತಿತರರು ಪಾಲ್ಗೊಂಡಿದ್ದಾರೆ.