Operation Sindoor: ಆಪರೇಷನ್ ಸಿಂದೂರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ; ಪ್ರಾಧ್ಯಾಪಕ ಅಲಿ ಖಾನ್ ಅರೆಸ್ಟ್
Ali Khan Mahmudabad: ಭಾರತೀಯ ಸೇನೆಯ ಆಪರೇಶನ್ ಸಿಂದೂರ್ ಕಾರ್ಯಾಚರಣೆ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದ ಹರಿಯಾಣದ ಸೋನಿಪತ್ ಅಶೋಕ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್‌ನನ್ನು ಪೊಲೀಸರು ದಿಲ್ಲಿಯಲ್ಲಿ ಬಂಧಿಸಿದ್ದಾರೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿರುದ್ಧ ಮಹ್ಮದಾಬಾದ್ ಪೋಸ್ಟ್ ಹಂಚಿಕೊಂಡಿದ್ದ.


ಚಂಡೀಗಢ: ಭಾರತೀಯ ಸೇನೆ (Indian Army) ಕೈಗೊಂಡಿದ್ದ ಆಪರೇಶನ್ ಸಿಂದೂರ್ (Operation Sindoor) ಕಾರ್ಯಾಚರಣೆ ಬಗ್ಗೆ ಇತ್ತೀಚೆಗೆ ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ (Kothur Manjunath) ವ್ಯಂಗ್ಯವಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಹರಿಯಾಣದ ಸಹಾಯಕ ಪ್ರಾಧ್ಯಾಪಕನೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಆಪರೇಷನ್ ಸಿಂದೂರ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡು ಪೊಲೀಸರ ಅತಿಥಿಯಾಗಿದ್ದಾನೆ. ಹರಿಯಾಣದ ಸೋನಿಪತ್ ಅಶೋಕ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್ (Ali Khan Mahmudabad) ಬಂಧಿತ. ಈತನನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ. ಬಿಜೆಪಿ ಯುವ ಮೋರ್ಛಾ ನಾಯಕರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಲಿ ಖಾನ್ ಮಹ್ಮದಾಬಾದ್‌ನನ್ನು ದಿಲ್ಲಿಯಲ್ಲಿ ಬಂಧಿಸಲಾಗಿದೆ ಎನ್ನುವುದನ್ನು ಎಸಿಪಿ (Assistant Commissioner of Police) ಅಜೀತ್ ಸಿಂಗ್ ಖಚಿಪಡಿಸಿದ್ದಾರೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮತ್ತು ಮಹಿಳಾ ಅಧಿಕಾರಿಗಳ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಮಹ್ಮದಾಬಾದ್‌ನನ್ನು ಬಂಧಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
"ಪ್ರೊಫೆಸರ್ ಅಲಿ ಖಾನ್ ಮಹ್ಮದಾಬಾದ್‌ನನ್ನು ಭಾನುವಾರ (ಮೇ 18) ಬೆಳಗ್ಗೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ವಿವರಗಳನ್ನು ಕಲೆ ಹಾಕುತ್ತಿದ್ದೇವೆʼʼ ಎಂದು ಅಶೋಕ ವಿಶ್ವವಿದ್ಯಾಲಯ ತಿಳಿಸಿದೆ. "ತನಿಖೆಯ ವೇಳೆ ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ವಿಶ್ವವಿದ್ಯಾಲಯವು ಸಂಪೂರ್ಣವಾಗಿ ಸಹಕರಿಸಲಿದೆʼʼ ಎಂದೂ ಭರವಸೆ ನೀಡಿದೆ.
Sonipat, Haryana: On the arrest of Ashoka University's Professor Ali Khan Mahmudabad, DCP (Crime) Narender Kadian says, "The FIR filed by the Sarpanch of Jatheri includes sections 196 BNS, 197, 152, and 299 BNS. Meanwhile, the FIR lodged by Renu Bhatia, who is the Chairperson… pic.twitter.com/QRHcuanqrx
— IANS (@ians_india) May 18, 2025
ಆಪರೇಷನ್ ಸಿಂದೂರ್ ಕುರಿತಾದ ಮಹ್ಮದಾಬಾದ್ ಹೇಳಿಕೆಗೆ ಹರಿಯಾಣ ರಾಜ್ಯ ಮಹಿಳಾ ಆಯೋಗವು ನೋಟಿಸ್ ನೀಡಿದ ಕೆಲವು ದಿನಗಳ ನಂತರ ಈ ಬಂಧನವಾಗಿದೆ. ಸೋನಿಪತ್ ಅಶೋಕ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಹ್ಮದಾಬಾದ್ ಮೇ 7ರಂದು ನೀಡಿದ ಆಕ್ಷೇಪಾರ್ಹ ಹೇಳಿಕೆಗೆ ಮೇ 12ರಂದು ನೋಟಿಸ್ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: Kothur Manjunath: ಆಪರೇಶನ್ ಸಿಂದೂರಕ್ಕೆ ವ್ಯಂಗ್ಯವಾಡಿದ ಕೊತ್ತೂರು ಮಂಜುನಾಥ್ ಈಗ ಉಲ್ಟಾ!
ಆಪರೇಷನ್ ಸಿಂದೂರ್ ಕಾರ್ಯಾಚರಣೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದ ಮಹಿಳಾ ಅಧಿಕಾರಿಗಳಾದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ವಿರುದ್ಧ ಆತ ನಾಲಿಗೆ ಹರಿಯಬಿಟ್ಟಿದ್ದ. ಸೋಫಿಯಾ ಖುರೇಷಿ ಮತ್ತು ವ್ಯೋಮಿಕಾ ಸಿಂಗ್ ಅವರ ಮಾಧ್ಯಮ ಸಂವಾದವು ಬೂಟಾಟಿಕೆ ಎಂದು ಮಹ್ಮದಾಬಾದ್ ಹೇಳಿದ್ದ. ಈ ಕುರಿತಾದ ಆತನ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಸಂಬಂಧ ಹರಿಯಾಣ ರಾಜ್ಯ ಮಹಿಳಾ ಆಯೋಗವು ನೋಟಿಸ್ ಕಳುಹಿಸಿತ್ತು.
ಅಲಿ ಖಾನ್ ಮಹ್ಮದಾಬಾದ್ ಎಕ್ಸ್ ಪೋಸ್ಟ್:
My statement re the summons that I received from the Haryana State Women’s Commission.
— Ali Khan Mahmudabad (@Mahmudabad) May 14, 2025
The posts that were misunderstood and objected to can be accessed on my Facebook page. pic.twitter.com/U4rZrAXhFx
ಈ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ್ದ ಮಹ್ಮದಾಬಾದ್ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದ. ʼʼಮಹಿಳಾ ಆಯೋಗವು ನನ್ನ ಪೋಸ್ಟ್‌ಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದೆ. ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸಲು, ಭಾರತೀಯ ಸಶಸ್ತ್ರ ಪಡೆಗಳ ದೃಢನಿಶ್ಚಯದ ಕ್ರಮಕ್ಕಾಗಿ ಶ್ಲಾಘಿಸಲು ಹಾಗೂ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುವವರನ್ನು ಟೀಕಿಸಲು ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಬಳಸಿದ್ದೇನೆʼʼ ಎಂದು ತಿಳಿಸಿದ್ದ.
ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸೇಡು ತೀರಿಸಿಕೊಂಡ ಭಾರತ ಮೇ 7ರಂದು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಭಯೋತ್ಪಾದಕ ನೆಲೆಯನ್ನು ಧ್ವಂಸಗೊಳಿಸಿದೆ. ಈ ಕಾರ್ಯಾಚರಣೆಗೆ ಕೇಂದ್ರ ಸರ್ಕಾರ ಆಪರೇಷನ್ ಸಿಂದೂರ್ ಎಂಬ ಹೆಸರಿಟ್ಟಿದೆ.