ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದಸರಾ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್‌ಗೆ ಆರ್‌ಎಸ್‌ಎಸ್ ಆಹ್ವಾನ: ಕೇಂದ್ರದ ವಿರುದ್ಧ ಕಾಂಗ್ರೆಸ್ ವ್ಯಂಗ್ಯ

Jagdeep Dhankhar: ಆರ್‌ಎಸ್‌ಎಸ್‌ ತನ್ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಾಪ್ರಹಾರ ನಡೆಸಿದೆ. ಪ್ರತಿ ವರ್ಷ ವಿಜಯ ದಶಮಿಯಂದು ಸಂಸ್ಥೆಯ ಸಂಸ್ಥಾಪನಾ ದಿನವನ್ನು ಗುರುತಿಸಲು ನಡೆಯುವ ಈ ಕಾರ್ಯಕ್ರಮಕ್ಕೆ ಧನಕರ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ.

ಜಗದೀಪ್ ಧನಕರ್‌ಗೆ ಆರ್‌ಎಸ್‌ಎಸ್ ಆಹ್ವಾನ: ಕಾಂಗ್ರೆಸ್ ವ್ಯಂಗ್ಯ

ಜಗದೀಪ್ ಧನಕರ್‌ (ಸಂಗ್ರಹ ಚಿತ್ರ) -

Priyanka P
Priyanka P Oct 15, 2026 1:53 PM

ನಾಗ್ಪುರ, ಅ.15: ಆರ್‌ಎಸ್‌ಎಸ್‌ ತನ್ನ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅವರನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ (Congress) ಟೀಕಾಪ್ರಹಾರ ನಡೆಸಿದೆ. ಒಂದೇ ರಾಜಕೀಯ ವಲಯಕ್ಕೆ ಸೇರಿದವರು ಈಗ ತಮ್ಮೊಳಗೇ ಭಿನ್ನಾಭಿಪ್ರಾಯದಿಂದ ಸಂಘರ್ಷ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ. ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಕಳೆದ ವರ್ಷ ಜುಲೈನಲ್ಲಿ ದಿಢೀರ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡಿದ ಬಳಿಕ ಅವರಿಗೆ ನಿಯಮದ ಪ್ರಕಾರ ಸಿಗಬೇಕಾದ ಅಧಿಕೃತ ನಿವಾಸವನ್ನು ಕೇಂದ್ರ ಸರ್ಕಾರ ಇನ್ನೂ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

2025ರ ಜುಲೈ 21ರಂದು, ಪ್ರಧಾನಿ ಮತ್ತು ಗೃಹ ಸಚಿವರು ಕೆಲವೇ ನಿಮಿಷಗಳಲ್ಲಿ, ಮೂರು ವರ್ಷಗಳ ಹಿಂದೆ ತಾವೇ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದ ಜಗದೀಪ್ ಧನಕರ್ ಅವರಿಂದ ದಿಢೀರ್ ರಾಜೀನಾಮೆ ಕೊಡಿಸಿದರು ಎಂದು ಜೈರಾಮ್ ರಮೇಶ್ ಅವರು ಎಕ್ಸ್‌ನಲ್ಲಿ ಮಾಡಿದ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ರೈತರ ಬೇಡಿಕೆಗಳನ್ನು ಮೋದಿ ಸರ್ಕಾರ ನಿರಂತರವಾಗಿ ನಿರ್ಲಕ್ಷಿಸುತ್ತಿರುವುದನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ತೀವ್ರವಾಗಿ ಟೀಕಿಸುತ್ತಿದ್ದರು. ಪ್ರಧಾನಿ ಮತ್ತು ಗೃಹ ಸಚಿವರು ಎಷ್ಟು ಕ್ಷುಲ್ಲಕವಾಗಿ ವರ್ತಿಸುತ್ತಿದೆ ಎಂದರೆ, ಧನ್ಖರ್ ಅವರಿಗೆ ಇನ್ನೂ ಅವರು ಅರ್ಹರಾಗಿರುವ ಅಧಿಕೃತ ನಿವಾಸವನ್ನೂ ಮಂಜೂರು ಮಾಡಿಲ್ಲ ಎಂದು ಜೈರಾಮ್ ರಮೇಶ್ ಆರೋಪಿಸಿದರು.

ಮೋದಿ ವಿರುದ್ಧ ಅಮೆರಿಕದಿಂದ ಹಣಕಾಸು ನೆರವು: ಪ್ರಧಾನಿ ಬೆಂಬಲಕ್ಕೆ ನಿಲ್ಲುವಂತೆ ಭಾರತೀಯ ಯುವಕರಿಗೆ ಗಾಯಕಿ ಮೇರಿ ಮಿಲ್ಬೆನ್ ಕರೆ!

ವೈದ್ಯಕೀಯ ಕಾರಣಗಳನ್ನು ಉಲ್ಲೇಖಿಸಿ ಜಗದೀಪ್ ಧನಕರ್ ಅವರು ಭಾರತದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. “ಆರೋಗ್ಯಕ್ಕೆ ಆದ್ಯತೆ ನೀಡುವ ಮತ್ತು ವೈದ್ಯಕೀಯ ಸಲಹೆಯನ್ನು ಪಾಲಿಸುವ ಉದ್ದೇಶದಿಂದ, ಸಂವಿಧಾನದ 67(ಎ) ವಿಧಿಯ ಅನುಸಾರ, ತಕ್ಷಣದಿಂದ ಜಾರಿಗೆ ಬರುವಂತೆ ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತಿದ್ದೇನೆ” ಎಂದು ಧನಕರ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಆರ್‌ಎಸ್‌ಎಸ್‌ನ ಆಹ್ವಾನವನ್ನು ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, “ಅಕ್ಟೋಬರ್ 20ರಂದು ನಾಗ್ಪುರದಲ್ಲಿ ನಡೆಯಲಿರುವ ವಾರ್ಷಿಕ ವಿಜಯದಶಮಿ ಕಾರ್ಯಕ್ರಮಕ್ಕೆ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ವಿಶೇಷ ಅತಿಥಿಯಾಗಿ ಆರ್‌ಎಸ್‌ಎಸ್ ಆಹ್ವಾನಿಸಿದೆ. ತಮ್ಮದೇ ವ್ಯವಸ್ಥೆಯೊಳಗೆ ಸಂಘರ್ಷ ನಡೆಯುತ್ತಿದ್ದು, ಅದು ಈಗ ಬಯಲಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ವ್ಯಂಗ್ಯವಾಡಿದರು.

ಪ್ರತಿ ವರ್ಷ ವಿಜಯ ದಶಮಿಯಂದು ಸಂಸ್ಥೆಯ ಸಂಸ್ಥಾಪನಾ ದಿನವನ್ನು ಗುರುತಿಸುವ ಸಲುವಾಗಿ ನಡೆಯುವ ಈ ಕಾರ್ಯಕ್ರಮಕ್ಕೆ ಧನಕರ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ. ಈ ವರ್ಷದ ಕಾರ್ಯಕ್ರಮವು ಅಕ್ಟೋಬರ್ 20 ರಂದು ನಾಗ್ಪುರದ ರೇಶಿಂಬಾಗ್ ಮೈದಾನದಲ್ಲಿ ನಡೆಯಲಿದ್ದು, ಇದು ಆರ್‌ಎಸ್‌ಎಸ್‌ನ ಶತಮಾನೋತ್ಸವ ವರ್ಷದ ಸಮಾರೋಪ ಸಮಾರಂಭವಾಗಿದೆ. ದೈನಿಕ್ ಜಾಗರಣ್ ಪ್ರಧಾನ ಸಂಪಾದಕ ಸಂಜಯ್ ಗುಪ್ತಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.