ಆಪರೇಷನ್ ಸಿಂದೂರ್ ಯಶಸ್ಸಿನಲ್ಲಿತ್ತು ರಷ್ಯಾದ ಪ್ರಮುಖ ಪಾತ್ರ
ಆಪರೇಷನ್ ಸಿಂದೂರ್ ಯಶಸ್ಸು ಕೇವಲ ಭಾರತದ್ದು ಮಾತ್ರವಲ್ಲ ರಷ್ಯಾದ್ದು ಕೂಡ ಆಗಿದೆ. ಯಾಕೆಂದರೆ ಆಪರೇಷನ್ ಸಿಂದೂರ್ ನಲ್ಲಿ ಭಾರತದ ಯಶಸ್ಸಿನಲ್ಲಿ ರಷ್ಯಾ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಇದೀಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುತ್ತಿರುವುದು ಕೂಡ ಕೂಡ ಈ ಯಶಸ್ಸಿನ ಒಂದು ಭಾಗವೆನ್ನಬಹುದು.
ಸಾಂದರ್ಭಿಕ ಚಿತ್ರ -
ನವದೆಹಲಿ: ಭಯೋತ್ಪಾದನೆಯ (terrorist) ನಿಗ್ರಹದಲ್ಲಿ ಭಾರತ ನಡೆಸಿರುವ ಆಪರೇಷನ್ ಸಿಂದೂರ್ (Operation Sindoor) ಮುಂದಿನ ಪೀಳಿಗೆಯೂ ಮರೆಯಲಾಗದ ಒಂದು ಘಟನೆ. ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯಲ್ಪಟ್ಟಿರುವ ಭಾರತೀಯ ವಾಯುಸೇನೆಯ (Indian air force) ಈ ಕಾರ್ಯಾಚರಣೆಯ ಯಶಸ್ಸಿನಲ್ಲಿ ರಷ್ಯಾದ (russia) ಪಾಲೂ ಇದೆ. ಆಪರೇಷನ್ ಸಿಂದೂರ್ ಯಶಸ್ಸು ಕೇವಲ ಭಾರತದ್ದು ಮಾತ್ರವಲ್ಲ ರಷ್ಯಾದ್ದು ಕೂಡ ಆಗಿದೆ. ಸದಾ ಕಾಲ ಭಾರತದ ಸ್ನೇಹಿತನಾಗಿ (Indo-Russian friendship) ಗುರುತಿಸಿಕೊಂಡಿರುವ ರಷ್ಯಾ ಆಪರೇಷನ್ ಸಿಂದೂರ್ ನಲ್ಲಿ ಪ್ರಮುಖ ಪಾತ್ರವಹಿಸಿದೆ. ಯುದ್ಧ ಭೂಮಿಯಲ್ಲಿ ಭಾರತದ ಗೆಲುವಿಗೆ ಇದು ಭದ್ರ ಬುನಾದಿಯನ್ನು ಹಾಕಿಕೊಟ್ಟಿದೆ.
ಇದೇ ಮೊದಲ ಬಾರಿಗೆ ಆಪರೇಷನ್ ಸಿಂದೂರ್ ಯಶಸ್ಸಿನ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಎರಡು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ಡಿಸೆಂಬರ್ 4ರಂದು ಭಾರತಕ್ಕೆ ಆಗಮಿಸಲಿರುವ ಅವರು ಡಿಸೆಂಬರ್ 5ರಂದು ಹಿಂದಿರುಗಲಿದ್ದಾರೆ. ಈ ಸಂದರ್ಭದಲ್ಲಿ ಭಾರತ ಮತ್ತು ರಷ್ಯಾ ನಡುವೆ ದೊಡ್ಡ ಮೊತ್ತದ ರಕ್ಷಣಾ ಒಪ್ಪಂದಗಳು ಅಂತಿಮವಾಗುವ ಸಾಧ್ಯತೆ ಇದೆ. ಇದರಲ್ಲಿ ಮುಖ್ಯವಾಗಿ ಉನ್ನತ ಮಟ್ಟದ ರಕ್ಷಣಾ ಸಹಕಾರ ಮತ್ತು ಹೊಸ ಎಸ್-400 ಕ್ಷಿಪಣಿ ಒಪ್ಪಂದ ಕೂಡ ಸೇರಿದೆ ಎನ್ನಲಾಗುತ್ತಿದೆ.
ವ್ಲಾಡಿಮಿರ್ ಪುಟಿನ್ ಭಾರತ ಭೇಟಿ: ರಕ್ಷಣಾ ಸಹಕಾರ ಒಪ್ಪಂದದ ನಿರೀಕ್ಷೆ
23ನೇ ವಾರ್ಷಿಕ ಶೃಂಗಸಭೆಗಾಗಿ ಡಿಸೆಂಬರ್ 4 ಮತ್ತು 5ರಂದು ಭಾರತಕ್ಕೆ ಆಗಮಿಸಲಿರುವ ಪುಟಿನ್ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಲಿದ್ದಾರೆ. ಇದು ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ. ಇದರಿಂದ ಭಾರತದ ಮಹತ್ವಾಕಾಂಕ್ಷೆಯ ಸುದರ್ಶನ ಚಕ್ರದ ಅಭಿವೃದ್ಧಿ ಪಾಲುದಾರಿಯಲ್ಲಿ ರಷ್ಯಾದ ಸಹಕಾರ ಪಡೆಯಲು ಸಾಧ್ಯವಾಗಬಹುದು.
ಆಪರೇಷನ್ ಸಿಂದೂರ್ ನಲ್ಲಿ ಭಾರತ ಮತ್ತು ರಷ್ಯಾ ನಡುವಿನ ಶಾಶ್ವತ ಪಾಲುದಾರಿಕೆಯ ಯಶಸ್ಸು ಎನ್ನಬಹುದು. ಇದರಿಂದಾಗಿಯೇ ಭಾರತ ಯುದ್ಧಭೂಮಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು. ಈ ಯುದ್ಧದಲ್ಲಿ ಪ್ರಮುಖ ಪಾತ್ರವಹಿಸಿರುವ ಕ್ಷಿಪಣಿಗಳಿಂದ ವಾಯು ರಕ್ಷಣಾ ವ್ಯವಸ್ಥೆಗಳು, ಫೈಟರ್ ಜೆಟ್‌ಗಳಲ್ಲಿ ರಷ್ಯಾದ ತಂತ್ರಜ್ಞಾನವು ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹೀಗಾಗಿ ನವದೆಹಲಿಯಲ್ಲಿ ನಡೆಯಲಿರುವ ಮೋದಿ ಮತ್ತು ಪುಟಿನ್ ನಡುವಿನ ಶೃಂಗಸಭೆಯು ಮತ್ತೊಮ್ಮೆ ಇಂಡೋ-ರಷ್ಯಾ ಮಿಲಿಟರಿ ಸಂಬಂಧಗಳ ವೃದ್ಧಿಯ ಮೇಲೆ ಹೆಚ್ಚಿನ ಗಮನ ಹರಿಸಲಿದೆ. ಈಗಾಗಲೇ ಭಾರತ ರಷ್ಯಾದಿಂದ ಹೆಚ್ಚುವರಿ ಬ್ಯಾಚ್‌ಗಳ ಎಸ್ -400 ಕ್ಷಿಪಣಿ ಖರೀದಿಸಲು ಸಿದ್ಧತೆ ನಡೆಸುತ್ತಿದೆ.
ಭಾರತ ಮತ್ತು ರಷ್ಯಾ ನಡುವಿನ ರಕ್ಷಣಾ ಸಹಯೋಗ ಇಂದು ನಿನ್ನೆಯದಲ್ಲ. 1970 ರ ದಶಕದಲ್ಲೇ ಇದು ಪ್ರಾರಂಭವಾಗಿದೆ. ಭಾರತೀಯ ವಾಯುಪಡೆಯು ರಷ್ಯಾದಿಂದ ಖರೀದಿ ಮಾಡಲಾದ ಎಸ್ ಎಎಂ -2 ಕ್ಷಿಪಣಿ, ಮಿಗ್ -21, 23, 27, 29, 25 ನಂತಹ ಅನೇಕ ಯುದ್ಧ ವಿಮಾನಗಳನ್ನು ಬಳಸಿದೆ.ಟ್ಯಾಂಕ್‌ಗಳಲ್ಲಿ ಟಿ-90 ಕೂಡ ಸೇರಿದೆ. ಇವೆಲ್ಲವೂ ಭಾರತೀಯ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಖ್ಯಾತ ಕ್ಷಿಪಣಿ ವಿಜ್ಞಾನಿ ಮತ್ತು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಸಾರಸ್ವತ್ ತಿಳಿಸಿದ್ದಾರೆ.
ಕಳೆದ ಎರಡು ಅಥವಾ ಮೂರು ದಶಕಗಳಲ್ಲಿ ಈ ಸಹಯೋಗ ಕೇವಲ ಖರೀದಿಗೆ ಮಾತ್ರವಲ್ಲ ತಂತ್ರಜ್ಞಾನ ಸಹಯೋಗಕ್ಕಾಗಿಯೂ ಬಳಸಲಾಗುತ್ತಿದೆ. ಇದರಿಂದ ಭಾರತದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಅಭಿವೃದ್ಧಿ ಮತ್ತು ಉತ್ಪಾದನೆ ಸಾಧ್ಯವಾಯಿತು ಎಂದು ಅವರು ಹೇಳಿದರು.
ಎಐ ಕ್ರಾಂತಿಯಿಂದ ಉದ್ಯೋಗವೇ ಅನಗತ್ಯ: ಉದ್ಯಮಿ ಎಲಾನ್ ಮಸ್ಕ್
ಆಪರೇಷನ್ ಸಿಂದೂರ್ ನಲ್ಲಿ ಬ್ರಹ್ಮೋಸ್ ಒಬ್ಬಂಟಿಯಾಗಿರಲಿಲ್ಲ. ರಷ್ಯಾದಿಂದ ಪಡೆಯಲಾದ ಎಸ್ -400 ಕೂಡ ಪ್ರಮುಖ ಪಾತ್ರ ವಹಿಸಿದೆ. ಇದುವೇ ನಿಜವಾಗಿಯು ಯುದ್ಧದಲ್ಲಿ ಭಾರತದ ಗೆಲುವಿಗೆ ಕಾರಣವಾಗಿದ್ದು. ಶತ್ರು ಕಡೆಯಿಂದ ಬರುತ್ತಿದ್ದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಎದುರಿಸಲು ಇದನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು. ಭಾರತದ ವಾಯು ಶಕ್ತಿಯ ಪ್ರಮುಖ ಆಧಾರ ಮತ್ತು ರಷ್ಯಾದ ಪರವಾನಗಿಯಡಿಯಲ್ಲಿ ಭಾರತದಲ್ಲಿ ತಯಾರಿಸಲ್ಪಟ್ಟ ಸುಖೋಯ್ ಫೈಟರ್ ಜೆಟ್‌ಗಳು ಕೂಡ ಯುದ್ಧ ಭೂಮಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಅವರು ತಿಳಿಸಿದರು.
ಕೇವಲ ಶಸ್ತ್ರಾಸ್ತ್ರ ಮಾತ್ರವಲ್ಲ ಭಾರತ-ರಷ್ಯಾ ಪಾಲುದಾರಿಕೆಯು ಪರಮಾಣು ಶಕ್ತಿಯಿಂದ ಬಾಹ್ಯಾಕಾಶ ಪರಿಶೋಧನೆ ಮತ್ತು ಜಲಾಂತರ್ಗಾಮಿ ಅಭಿವೃದ್ಧಿಯವರೆಗೆ ಕಾರ್ಯತಂತ್ರದ ತಂತ್ರಜ್ಞಾನಗಳಲ್ಲೂ ವ್ಯಾಪಿಸಿದೆ. ಹೀಗಾಗಿ ಭಾರತ ಮತ್ತು ರಷ್ಯಾ ರಕ್ಷಣಾ ಸಹಯೋಗವು ಯಾವಾಗಲೂ ಅಗ್ರಸ್ಥಾನದಲ್ಲಿದೆ ಎಂದು ಡಾ. ಸಾರಸ್ವತ್ ತಿಳಿಸಿದ್ದಾರೆ.