Mumbai Train Blast: ಮುಂಬೈ ರೈಲು ಸರಣಿ ಸ್ಫೋಟ ಪ್ರಕರಣ; ಆರೋಪಿಗಳ ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ತಡೆ
2006ರ ಜುಲೈ 11ರಂದು ಮುಂಬೈನ ಲೋಕಲ್ ರೈಲುಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲ 12 ಆರೋಪಿಗಳನ್ನು ಖುಲಾಸೆಗೊಳಿಸಿ ಬಾಂಬೇ ಹೈ ಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಗುರುವಾರ ತಡೆ ನೀಡಿದೆ.


ನವದೆಹಲಿ: 2006ರ ಜುಲೈ 11ರಂದು ಮುಂಬೈನ ಲೋಕಲ್ ರೈಲುಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಕರಣದ ಎಲ್ಲ 12 (Mumbai Train Blast) ಆರೋಪಿಗಳನ್ನು ಖುಲಾಸೆಗೊಳಿಸಿ ಬಾಂಬೇ ಹೈ ಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ (Supreme Court) ಗುರುವಾರ ತಡೆ ನೀಡಿದೆ. ರೈಲು ಸ್ಫೋಟ ಪ್ರಕರಣದ 12 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದ್ದು, ಅವರನ್ನು ಮತ್ತೆ ಬಂಧಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಭವಿಷ್ಯದ ಪ್ರಕರಣಗಳಲ್ಲಿ ಹೈಕೋರ್ಟ್ ತೀರ್ಪನ್ನು ಪೂರ್ವನಿದರ್ಶನವಾಗಿ ಪರಿಗಣಿಸಬಾರದು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಎಂಎಂ ಸುಂದ್ರೇಶ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು, ಪ್ರಕರಣದ ಎಲ್ಲ ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ಕುರಿತು ಅವರ ಪ್ರತಿಕ್ರಿಯೆ ಕೋರಿದೆ. ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ಸಂಭವಿಸಿದೆ.
ಈ ಪ್ರಕರಣದ ತುರ್ತು ವಿಚಾರಣೆಯನ್ನು ಕೋರಿ ಮಹಾರಾಷ್ಟ್ರ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, "ಇದು ಸರ್ಕಾರದ ದೃಷ್ಟಿಕೋನದಿಂದ ಗಂಭೀರ ವಿಷಯವಾಗಿದೆ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅಧ್ಯಕ್ಷತೆಯ ಪೀಠಕ್ಕೆ ತಿಳಿಸಿದ್ದರು. ಹೈಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಈ ತೀರ್ಪನ್ನು "ಆಘಾತಕಾರಿ" ಎಂದು ಬಣ್ಣಿಸಿದ್ದು, ರಾಜ್ಯವು ಇದರ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಹೋಗಲಿದೆ ಎಂದು ಹೇಳಿದ್ದಾರೆ. ಬಾಂಬೆ ಹೈಕೋರ್ಟ್‌ನ ಅನಿಲ್ ಕಿಲೊರ್ ಹಾಗೂ ಶ್ಯಾಮ್ ಚಾಂದಕ್ ನೇತೃತ್ವದ ನ್ಯಾಯಪೀಠವು, ಆರೋಪಿಗಳೆಲ್ಲರೂ ಅಪರಾಧ ಎಸಗಿದ್ದಾರೆ ಎಂದು ನಂಬಲು ಕಷ್ಟವಾಗಿತ್ತು. ಪ್ರಕರಣವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಎಲ್ಲ 12 ಆರೋಪಿಗಳನ್ನು ದೋಷಮುಕ್ತಗೊಳಿಸಿ ಸೋಮವಾರ ತೀರ್ಪು ನೀಡಿದೆ.
ಈ ಸುದ್ದಿಯನ್ನೂ ಓದಿ: Honeymoon Murder Case: ಹನಿಮೂನ್ ಕೊಲೆ ಪ್ರಕರಣ- ಸೋನಮ್ ನೋಡಲು ಯಾರೂ ಬಂದಿಲ್ಲ, ಆಕೆ ಯಾರಿಗೂ ಕರೆ ಮಾಡಿಲ್ಲ..
ಅಪರಾಧ ಕೃತ್ಯಕ್ಕೆ ಬಳಸಿದ್ದ ಬಾಂಬ್ ಮಾದರಿಗಳನ್ನು ಮುಂದಿಡಲು ಪ್ರಾಸಿಕ್ಯೂಷನ್ ಸಂಪೂರ್ಣವಾಗಿ ವಿಫಲವಾಗಿದೆ. ಈಗ ಪ್ರಸ್ತುತಪಡಿಸಿರುವ ಸಾಕ್ಷ್ಯಗಳು ಆರೋಪಿಗಳನ್ನು ಶಿಕ್ಷಿಸಲು ನಿರ್ಣಾಯಕವಾಗಿಲ್ಲ. ಸಾಕ್ಷಿ ಹೇಳಿಕೆಗಳು ಹಾಗೂ ಆರಾಪಿಗಳಿಂದ ವಶಕ್ಕೆ ಪಡೆಯಲಾದ ವಸ್ತುಗಳಿಗೂ ಸಾಕ್ಷ್ಯದ ಮೌಲ್ಯವಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.