ಕಿಶ್ತ್ವಾರ್‌ನಲ್ಲಿ ಎನ್‌ಕೌಂಟರ್; ಜೈಶ್ ಉಗ್ರರರ ಸುತ್ತುವರಿದ ಸೇನೆ, ಹಲವು ಸೈನಿಕರಿಗೆ ಗಾಯ
Kishtwar encounter: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಹಲವಾರು ಸೈನಿಕರು ಗಾಯಗೊಂಡಿದ್ದಾರೆ. ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಜೈಶ್ ಸಂಘಟನೆಯ ಭಯೋತ್ಪಾದಕರು ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ಕಿಶ್ತ್ವಾರ್: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ (Kishtwar encounter) ದೂರದ ಅರಣ್ಯ ಪ್ರದೇಶದಲ್ಲಿ ಭಾನುವಾರ (ಜನವರಿ 18) ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಹಲವಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಛಾತ್ರು ಪ್ರದೇಶದ ಮಂದ್ರಲ್-ಸಿಂಗೂರ ಬಳಿಯ ಸೋನ್ನಾರ್ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನದ ಸುಮಾರಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಗುಂಡಿನ ಚಕಮಕಿ ನಡೆಯಿತು. ಜೈಶ್ ಸಂಘಟನೆಯ ಭಯೋತ್ಪಾದಕರು (Jaish terrorists) ಸಿಕ್ಕಿಬಿದ್ದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬರಬೇಕಿದೆ.
ಮೂಲಗಳ ಪ್ರಕಾರ, ಭಯೋತ್ಪಾದಕರು ಶೋಧ ತಂಡದ ಮೇಲೆ ಗುಂಡು ಹಾರಿಸಿದರು. ಇದು ಭದ್ರತಾ ಪಡೆಗಳಿಂದ ತಕ್ಷಣದ ಪ್ರತೀಕಾರಕ್ಕೆ ಕಾರಣವಾಯಿತು. ಗುಂಡಿನ ಚಕಮಕಿಯ ನಂತರ, ಇಡೀ ಪ್ರದೇಶವನ್ನು ಸುತ್ತುವರಿಯಲಾಯಿತು ಮತ್ತು ಕಾರ್ಯಾಚರಣೆಯನ್ನು ಬಲಪಡಿಸಲು ಸೇನೆ, ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಪೊಲೀಸರಿಂದ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಯಿತು.
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಹಯೋಗದೊಂದಿಗೆ ನಡೆಯುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಭಾಗವಾಗಿ ನಡೆಸಿದ ಉದ್ದೇಶಿತ ಶೋಧ ಕಾರ್ಯಾಚರಣೆಯಲ್ಲಿ, ಛಾತ್ರುವಿನ ಉತ್ತರಪೂರ್ವದಲ್ಲಿರುವ ಸೋನ್ ನಾರ್ ಪ್ರದೇಶದ ಸುತ್ತಮುತ್ತ ಭಯೋತ್ಪಾದಕರೊಂದಿಗೆ ಸಂಪರ್ಕ ಸ್ಥಾಪಿಸಲಾಗಿದೆ ಎಂದು ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್ ಎಕ್ಸ್‌ನಲ್ಲಿ (ಹಳೆಯ ಟ್ವಿಟರ್) ಹಂಚಿಕೊಂಡಿದೆ.
ಸವಾಲಿನ ಭೂಪ್ರದೇಶ ಮತ್ತು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಉಗ್ರರ ಗುಂಡಿನ ದಾಳಿಗೆ ಸೇನಾ ಸಿಬ್ಬಂದಿ ಅತ್ಯುತ್ತಮ ವೃತ್ತಿಪರತೆ ಮತ್ತು ಸಂಕಲ್ಪವನ್ನು ಪ್ರದರ್ಶಿಸಿದರು. ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ಕಾರ್ಡನ್‌ನ್ನು ಬಲಪಡಿಸಲು ಹೆಚ್ಚುವರಿ ಪಡೆಗಳನ್ನು ಸೇರಿಸಲಾಗಿದೆ. ನಾಗರಿಕ ಆಡಳಿತ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಈ ಕಾರ್ಯಾಚರಣೆಗಳಿಗೆ ಬೆಂಬಲ ನೀಡಲಾಗುತ್ತಿದೆ ಎಂದು ಅದು ತಿಳಿಸಿದೆ.
#WATCH | J&K | Exchange of fire between security forces and terrorists breaks out in the Chatroo area of Kishtwar. Police Operation underway.
— ANI (@ANI) January 18, 2026
(Visuals deferred by unspecified time) https://t.co/pewmoQVIgl pic.twitter.com/QkT1yTFHI7
ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರು ಸಿಕ್ಕಿಬಿದ್ದಿರುವ ಸಾಧ್ಯತೆ
ಮೂಲಗಳ ಪ್ರಕಾರ, ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರ ಗುಂಪು ಈ ಪ್ರದೇಶದಲ್ಲಿ ಸಿಕ್ಕಿಬಿದ್ದಿದೆ ಎಂದು ಹೇಳಲಾಗಿದೆ. ಆದರೆ, ಭಯೋತ್ಪಾದಕರ ಗುರುತು ಮತ್ತು ಅವರ ಸಂಖ್ಯೆಗೆ ಸಂಬಂಧಿಸಿದ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಕಾರ್ಯಾಚರಣೆ ಮುಂದುವರೆದಂತೆ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ.
ಈ ವರ್ಷ ಜಮ್ಮು ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಮೂರನೇ ಎನ್‌ಕೌಂಟರ್ ಇದಾಗಿದೆ. ಇದಕ್ಕೂ ಮೊದಲು, ಜನವರಿ 7 ಮತ್ತು 13 ರಂದು ಕಥುವಾ ಜಿಲ್ಲೆಯ ಬಿಲ್ಲಾವರ್ ಪ್ರದೇಶದ ಕಹೋಗ್ ಮತ್ತು ನಜೋಟೆ ಕಾಡುಗಳಲ್ಲಿ ಎರಡು ಎನ್‌ಕೌಂಟರ್‌ಗಳು ವರದಿಯಾಗಿವೆ.
ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣ; ಎರಡನೇ ಆತ್ಮಹತ್ಯಾ ಬಾಂಬರ್ ನೇಮಕಕ್ಕೆ ಮುಂದಾಗಿದ್ದ ಮಾಸ್ಟರ್ ಮೈಂಡ್
ಡಿಸೆಂಬರ್ 15 ರಂದು, ಉಧಮ್‌ಪುರ ಜಿಲ್ಲೆಯ ಮಜಲ್ಟಾ ಪ್ರದೇಶದ ಸೋನ್ ಗ್ರಾಮದಲ್ಲಿ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಹುತಾತ್ಮರಾದರು. ಆದರೆ, ಭಯೋತ್ಪಾದಕರು ದಟ್ಟವಾದ ಕಾಡುಗಳು ಮತ್ತು ಕತ್ತಲೆಯ ಲಾಭವನ್ನು ಪಡೆದುಕೊಂಡು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಈ ಎನ್‌ಕೌಂಟರ್‌ಗಳು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಜಮ್ಮು ಸಮೀಪದ ಅರಣ್ಯ ಪ್ರದೇಶಗಳಲ್ಲಿ ಆರಂಭಿಸಲಾದ ಮಹತ್ವದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಮುಂದುವರಿಕೆಯಾಗಿದೆ. ಅಲ್ಲಿ ಅಡಗಿಕೊಂಡಿದ್ದ ಸುಮಾರು 18 ಮಂದಿ ಭಯೋತ್ಪಾದಕರನ್ನು ಹೊರಹಾಕಲು ಪ್ರಾರಂಭಿಸಲಾದ ಪ್ರಮುಖ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ನಂತರ ಈ ಎನ್‌ಕೌಂಟರ್‌ಗಳು ನಡೆದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.