ನೀರಿನ ಹೊಂಡಕ್ಕೆ ಬಿದ್ದ ಟೆಕ್ಕಿಯನ್ನು ಕಾಪಾಡಲು ಸೊಂಟಕ್ಕೆ ಹಗ್ಗ ಕಟ್ಟಿ ಹಾರಿದ ಡೆಲಿವರಿ ಬಾಯ್; ನೀರು ತಣ್ಣಗಿದೆ ಎಂದು ನೆರವಿಗೆ ಬಾರದ ರಕ್ಷಣಾ ಸಿಬ್ಬಂದಿ
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನೀರು ತುಂಬಿದ ಗುಂಡಿಗೆ ಕಾರು ಬಿದ್ದ ಪರಿಣಾಮ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮೃತಪಟ್ಟಿದ್ದಾರೆ. ನೀರು ತಣ್ಣಗಿದೆ ಹಾಗೂ ಗುಂಡಿಯಲ್ಲಿ ಕಬ್ಬಿಣದ ರಾಡುಗಳಿವೆ ಎಂಬ ಕಾರಣ ನೀಡಿ ತುರ್ತು ರಕ್ಷಣಾ ಸಿಬ್ಬಂದಿ ಕಾಪಾಡಲು ಮುಂದಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಡೆಲಿವರಿ ಬಾಯ್ ಒಬ್ಬರು ತಮ್ಮ ಪ್ರಾಣದ ಅಪಾಯವನ್ನೂ ಲೆಕ್ಕಿಸದೆ ರಕ್ಷಣೆಗೆ ಮುಂದಾಗಿದ್ದಾರೆ.
ಸಾವನ್ನಪ್ಪಿದ ಸಾಫ್ಟ್‌ವೇರ್ ಎಂಜಿನಿಯರ್ -
ದೆಹಲಿ, ಜ. 19: ನೀರಿನ ಗುಂಡಿಗೆ ಕಾರ್ ಬಿದ್ದ (Car fell into water-filled pit) ಪರಿಣಾಮ 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಸಾವನ್ನಪ್ಪಿದ (Software engineer death) ಘಟನೆ ಗ್ರೇಟರ್ ನೊಯ್ಡಾದಲ್ಲಿ ನಡೆದಿದೆ(Greater Noida accident). ನೀರು ತಣ್ಣಗಿದೆ ಹಾಗೂ ಗುಂಡಿಗೆ ಇಳಿಯಲು ಸಾಧ್ಯವಿಲ್ಲ ಎಂದು ತುರ್ತು ರಕ್ಷಣಾ ಸಿಬ್ಬಂದಿ (NDRF) ತುರ್ತು ಕ್ರಮ ಕೈಗೊಳ್ಳಲು ನಿರಾಕರಿಸಿದ್ದೇ ಈ ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರಾದರೂ, ನೀರು ತುಂಬಾ ತಣ್ಣಗಿದೆ ಮತ್ತು ಗುಂಡಿಯಲ್ಲಿ ಕಬ್ಬಿಣದ ರಾಡುಗಳಿವೆ ಎಂದು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅದೇ ವೇಳೆ ಡೆಲಿವರಿ ಬಾಯ್ ಮೊನಿಂದರ್, ರಾತ್ರಿ ಸುಮಾರು 1.45ರ ವೇಳೆಗೆ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಸಿಬ್ಬಂದಿಯ ಹಿಂಜರಿತ ಕಂಡು ತಾನೇ ಗುಂಡಿಗೆ ಯುವಕನ ರಕ್ಷಣೆಗೆ ಮುಂದಾಗಿದ್ದಾರೆ.
“ನಾನು ತಲುಪುವ 10 ನಿಮಿಷಗಳ ಮೊದಲಷ್ಟೇ ಯುವಕ ನೀರಿನಲ್ಲಿ ಮುಳುಗಿದ್ದ. ಪೊಲೀಸರು, ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳದಲ್ಲೇ ಇದ್ದರೂ, ಯಾರೂ ಸಹಾಯ ಮಾಡಲಿಲ್ಲ. ರಕ್ಷಣಾ ಸಿಬ್ಬಂದಿಗೆ ಹೊರಗೆ ಬರಲು ಹೇಳಿ, ನಾನೇ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ನೀರಿಗೆ ಇಳಿದು ಕನಿಷ್ಠ 50 ಮೀಟರ್ ದೂರ ನೀರಿನೊಳಗೆ ಹೋದೆ. ಸುಮಾರು 30 ನಿಮಿಷಗಳ ಕಾಲ ಹುಡುಕಾಟ ನಡೆಸಿದರೂ ಯುವಕ ಸಿಗಲಿಲ್ಲ. ಸರಿಯಾದ ಸಮಯಕ್ಕೆ ರಕ್ಷಣಾ ಕಾರ್ಯ ನಡೆದಿದ್ದರೆ ಯುವಕನ ಜೀವ ಉಳಿಸಬಹುದಿತ್ತು" ಎಂದು ಮೊನಿಂದರ್ ಪತ್ರಕರ್ತರಿಗೆ ತಿಳಿಸಿದ್ದಾರೆ.
ರಾಜ್ ಕುಮಾರ್ ಮೆಹ್ತಾ ಹೇಳಿಕೆ:
#WATCH | Greater Noida, UP | Father of the deceased, Rajkumar Mehta, says, "My son was struggling to save himself... My son was crying out for help, asking people to help him, but most of the crowd was just watching. Some people were making videos... My son struggled for 2 hours… pic.twitter.com/RmODfXF8h8
— ANI (@ANI) January 19, 2026
“ಬೆಳಗ್ಗೆ 5.30ರವರೆಗೂ ಯುವಕನ ಶವ ಪತ್ತೆಯಾಗಿರಲಿಲ್ಲ. ಆತನ ವಾಹನವನ್ನು ಹೊರತೆಗೆದಿರಲಿಲ್ಲ. ಬಳಿಕ ನಾನು ಮನೆಗೆ ಮರಳಿದೆ” ಎಂದು ಮೊನಿಂದರ್ ತಿಳಿಸಿದ್ದಾರೆ.
ಗ್ರೇಟರ್ ನೊಯ್ಡಾ ಟೆಕ್ಕಿ ಗುಂಡಿಗೆ ಬಿದ್ದದ್ದು ಹೇಗೆ?
ಸಂತ್ರಸ್ತ ಯುವಕ ಯುವರಾಜ್ ಮೇಹ್ತಾ ಗುರುಗ್ರಾಮದಲ್ಲಿ ಕೆಲಸ ಮುಗಿಸಿ ಸೆಕ್ಟರ್ 150ರ ಟಾಟಾ ಯುರೇಕಾ ಪಾರ್ಕ್‌ನಲ್ಲಿರುವ ತನ್ನ ಮನೆಗೆ ಮರಳುತ್ತಿದ್ದ. ಮಧ್ಯರಾತ್ರಿ ರಸ್ತೆಬದಿಯ ಚರಂಡಿ ದಾಟಿ, ಖಾಲಿ ಜಾಗದಲ್ಲಿದ್ದ ಗುಂಡಿಗೆ ಆತನ ಕಾರ್ ಬಿದ್ದಿದೆ ಎಂದು ವರದಿಯಾಗಿದೆ. ಪೊಲೀಸರು ಹಾಗೂ ಎಫ್‌ಐಆರ್ ಪ್ರಕಾರ, ಆ ಗುಂಡಿ ಸುಮಾರು 50 ಅಡಿ ಆಳವಾಗಿದ್ದು, ಮಳೆನೀರಿನಿಂದ ತುಂಬಿತ್ತು. ಯಾವುದೇ ತಡೆಗೋಡೆ ಅಥವಾ ಎಚ್ಚರಿಕೆ ಬೋರ್ಡ್‌ಗಳು ಇರಲಿಲ್ಲ.
ಸಿಎಂ ಯೋಗಿ- ಬಾಲಕನ ಮಧ್ಯೆ ನಡೆದ 'ಚಿಪ್ಸ್ ಡೀಲ್' ಸಕ್ಸಸ್
"ಅಧಿಕಾರಿಗಳ ನಿರ್ಲಕ್ಷ್ಯದಿಂದ ನನ್ನ ಮಗ ಸಾವನ್ನಪ್ಪಿದ್ದಾನೆ"
ʼʼತಣ್ಣನೆಯ ನೀರು ಹಾಗೂ ಗುಂಡಿಯಲ್ಲಿ ಇಳಿಯಲು ಅಪಾಯವಿದೆ ಎಂಬ ಕಾರಣ ಹೇಳಿ ತುರ್ತು ರಕ್ಷಣಾ ಸಿಬ್ಬಂದಿ ಕ್ರಮ ಕೈಗೊಳ್ಳಲು ವಿಳಂಬ ಮಾಡಿದ್ದರಿಂದಲೇ ನನ್ನ ಮಗ ಸಾವನ್ನಪ್ಪಿದ್ದಾನೆʼʼ ಎಂದು ಮೃತನ ಕುಟುಂಬ ಆರೋಪಿಸಿದೆ. “ಅಪಘಾತಕ್ಕೂ ಮುನ್ನ ನಾನು ಫೋನ್‌ನಲ್ಲಿ ಅವನೊಂದಿಗೆ ಮಾತನಾಡಿದ್ದೆ. ಮನೆಗೆ ಬರುತ್ತಿದ್ದೇನೆ ಎಂದಿದ್ದ. ಸ್ವಲ್ಪ ಸಮಯದ ನಂತರ ಆತಂಕದಲ್ಲಿ ಮತ್ತೆ ಕರೆ ಮಾಡಿ, ಕಾರು ಅಪಘಾತವಾಗಿ ಚರಂಡಿಗೆ ಬಿದ್ದಿದೆ, ರಕ್ಷಿಸಿ ಎಂದ. ಗಾಬರಿಯಾಗಬೇಡ, ನಾವು ನಿನಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಮಗನಿಗೆ ಹೇಳಿದ್ದೆʼʼ ಎಂದು ರಾಜ್ ಕುಮಾರ್ ಮೆಹ್ತಾ ತಿಳಿಸಿದರು.
ರಕ್ಷಣಾ ಪ್ರಯತ್ನಗಳು ಸರಿಯಾಗಿ ನಡೆದಿವೆ: ಪೊಲೀಸರು
ಹೆಚ್ಚುವರಿ ಪೊಲೀಸ್ ಆಯುಕ್ತ ರಾಜೀವ್ ನಾರಾಯಣ ಮಿಶ್ರಾ, ನಿರ್ಲಕ್ಷ್ಯದ ಆರೋಪವನ್ನು ತಳ್ಳಿ ಹಾಕಿದ್ದು, "ಪೊಲೀಸ್ ಮತ್ತು ಅಗ್ನಿಶಾಮಕ ದಳ ಕ್ರೇನ್, ಏಣಿ, ತಾತ್ಕಾಲಿಕ ದೋಣಿ ಮೂಲಕ ರಕ್ಷಣಾ ಕಾರ್ಯ ನಡೆಸಿದ್ದವು. ಆದರೆ ದಟ್ಟ ಮಂಜಿನಿಂದಾಗಿ ಏನು ಕಾಣಿಸುತ್ತಿರಲಿಲ್ಲ" ಎಂದಿದ್ದಾರೆ. ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಯ್ಡಾ ಅಥಾರಿಟಿಯು, ಟ್ರಾಫಿಕ್‌ಗೆ ಸಂಬಂಧಿತ ಕಾರ್ಯಗಳ ಹೊಣೆ ಹೊತ್ತಿದ್ದ ಕಿರಿಯ ಎಂಜಿನಿಯರ್‌ರನ್ನು ಸೇವೆಯಿಂದ ವಜಾಗೊಳಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್‌ಗಳನ್ನು ಜಾರಿ ಮಾಡಿದೆ.