ಲೈಂಗಿಕ ದೌರ್ಜನ್ಯಕ್ಕೆ ಸೋಶಿಯಲ್ ಮೀಡಿಯಾ ಕಾರಣ: ವಿವಾದ ಹುಟ್ಟು ಹಾಕಿದ ಎಸ್‌ಪಿ ನಾಯಕ ಎಸ್.ಟಿ. ಹಸನ್
physical Assault Crimes: ಯುವಕರು ಸೋಶಿಯಲ್ ಮೀಡಿಯಾವನ್ನು ದುರುಪಯೋಗಪಡಿಸುವುದರಿಂದ ಮತ್ತು ಮದ್ಯಪಾನ ಮಾಡುವುದರಿಂದ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್ ಹೇಳಿದ್ದಾರೆ. ಅಶ್ಲೀಲ ಕಂಟೆಂಟ್ ಯುವಕರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನು ವೃದ್ಧಿಸುತ್ತದೆ. ಇದರಿಂದಾಗಿ ಅವರಿಗೆ ತಮ್ಮ ಲೈಂಗಿಕ ಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್. -
ನವದೆಹಲಿ, ಜ. 18: ಅತ್ಯಾಚಾರದ ಬಗ್ಗೆ ಕಾಂಗ್ರೆಸ್ ಶಾಸಕ ಫೂಲ್ ಸಿಂಗ್ ಬರೈಯ (Phool Singh Baraiya) ನಾಲಗೆ ಹರಿಯಬಿಟ್ಟು ವಿವಾದಾತ್ಮಕ ಹೇಳಿಕೆ ನೀಡಿ ರಾಜಕೀಯ ಬಿರುಗಾಳಿ ಎಬ್ಬಿಸಿದ ನಂತರ, ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್ (SP leader S.T. Hasan) ಲೈಂಗಿಕ ದೌರ್ಜನ್ಯದಂತಹ ಅಪರಾಧಗಳಿಗೆ ಸಾಮಾಜಿಕ ಮಾಧ್ಯಮ (Social media) ಮತ್ತು ಮದ್ಯದ ಪ್ರಭಾವವೇ ಕಾರಣ ಎಂದು ದೂಷಿಸಿದ್ದಾರೆ. ಈ ಮೂಲಕ ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ್ದಾರೆ.
ಬರೈಯ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ ಹಸನ್, ಸೋಶಿಯಲ್ ಮೀಡಿಯಾದಲ್ಲಿನ ಅಶ್ಲೀಲ ಕಂಟೆಂಟ್ ಯುವಕರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅನ್ನು ಪ್ರಚೋದಿಸುತ್ತದೆ. ಇದರಿಂದಾಗಿ ಅವರು ತಮ್ಮ ಲೈಂಗಿಕ ಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಮಹಿಳೆಯರು ಅಥವಾ ಹುಡುಗಿಯರನ್ನು ನೋಡಿದಾಗ ಇದು ಅಪರಾಧಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೆ ಮದ್ಯಪಾನವು ಒಂದು ಪ್ರಮುಖ ಅಂಶ ಎಂದು ಅವರು ತಿಳಿಸಿದ್ದಾರೆ. ಮದ್ಯ ಸೇವಿಸಿದ ನಂತರ ಪುರುಷನು ತನ್ನ ಹೆಂಡತಿ ಮತ್ತು ಮಗಳ ನಡುವಿನ ವ್ಯತ್ಯಾಸವನ್ನು ಮರೆತುಬಿಡುತ್ತಾನೆ ಎಂದು ಉಲ್ಲೇಖಿಸಿದ್ದಾರೆ. ಈ ಅಪರಾಧಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಸೂಚಿಸಿದ ಹಸನ್, ಅತ್ಯಾಚಾರಿಗಳ ಮೇಲೆ ಗುಂಡು ಹಾರಿಸಬೇಕು ಎಂದು ಆಗ್ರಹಿಸಿದ್ದಾರೆ.
ಎಸ್.ಟಿ. ಹಸನ್ ಅವರ ವಿವಾದಾತ್ಮಕ ಹೇಳಿಕೆ:
#WATCH | Moradabad, UP: On Congress MLA Phool Singh Baraiya's controversial statement, Samajwadi Party leader ST Hasan says, "... I think the internet is a big reason behind this. The vulgarity on the internet gives a testosterone boost to young men, which makes them unable to… pic.twitter.com/4eEwa7azX3
— ANI (@ANI) January 18, 2026
ಎಸ್.ಟಿ. ಹಸನ್ ಹೇಳಿದ್ದೇನು?
ಅತ್ಯಾಚಾರಕ್ಕೆ ಸಾಮಾಜಿಕ ಮಾಧ್ಯಮ ಒಂದು ದೊಡ್ಡ ಕಾರಣ ಎಂದು ನಾನು ಭಾವಿಸುತ್ತೇನೆ. ಇದರಲ್ಲಿನ ಅಶ್ಲೀಲತೆಯು ಯುವಕರಿಗೆ ಟೆಸ್ಟೋಸ್ಟೆರಾನ್ ಉತ್ತೇಜನವನ್ನು ನೀಡುತ್ತದೆ. ಇದರಿಂದ ಅವರ ಲೈಂಗಿಕ ಆಸೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಒಬ್ಬ ಮಹಿಳೆ ಅಥವಾ ಹುಡುಗಿ ತಮ್ಮ ಬಳಿ ಬಂದಾಗ, ಆಕೆಯ ಮೇಲೆ ಅತ್ಯಾಚಾರವಾಗುತ್ತದೆ. ಇದರ ಹಿಂದಿನ ಮುಖ್ಯ ಕಾರಣ ಮದ್ಯಪಾನವೂ ಹೌದು ಎಂದಿದ್ದಾರೆ.
ಅತ್ಯಾಚಾರಕ್ಕೆ ಸುಂದರ ಹುಡುಗಿಯರೇ ಕಾರಣ; ವಿವಾದದ ಕಿಡಿ ಹಚ್ಚಿದ ಶಾಸಕ ಫೂಲ್ ಸಿಂಗ್ ಬರೈಯ
ಮದ್ಯ ಸೇವಿಸಿದ ನಂತರ, ಪುರುಷನು ತನ್ನ ಹೆಂಡತಿ ಮತ್ತು ಮಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಮರೆತು ಬಿಡುತ್ತಾನೆ. ಈ ಪ್ರಕರಣದ ಕುರಿತಾದ ಹಲವು ಉದಾಹರಣೆಗಳನ್ನು ನೋಡಿದ್ದೇವೆ. ಅತ್ಯಾಚಾರಿಗಳನ್ನು ಶಿಕ್ಷಿಸಲು ನಮಗೆ ಕಠಿಣ ಕಾನೂನುಗಳು ಬೇಕಾಗುತ್ತವೆ. ಅವರ ಮೇಲೆ ಸಾರ್ವಜನಿಕವಾಗಿ ಗುಂಡು ಹಾರಿಸಬೇಕು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಹೆಚ್ಚಿನ ಅತ್ಯಾಚಾರಗಳು ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಸಮುದಾಯಗಳ ಮೇಲೆ ನಡೆಯುತ್ತದೆ ಎಂದು ಮಧ್ಯ ಪ್ರದೇಶದ ಭಂದರ್‌ನ ಕಾಂಗ್ರೆಸ್ ಶಾಸಕ ಬರೈಯ ಹೇಳಿದ್ದರು. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಈ ಹೇಳಿಕೆಯ ಬೆನ್ನಲ್ಲೇ ಸಮಾಜವಾದಿ ಪಕ್ಷದ ನಾಯಕ ಎಸ್.ಟಿ. ಹಸನ್ ಮಾತನಾಡಿದ್ದಾರೆ.
ಭಾರತದಲ್ಲಿ ಅತ್ಯಾಚಾರಕ್ಕೆ ಬಲಿಯಾಗುವವರು ಯಾರು? ಹೆಚ್ಚಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳಿಗೆ ಸೇರಿದ ಮಹಿಳೆಯರು. ಒಬ್ಬ ಪುರುಷ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸುಂದರ ಹುಡುಗಿಯನ್ನು ನೋಡಿದರೆ ಅವನು ವಿಚಲಿತನಾಗಿ ಅತ್ಯಾಚಾರ ಎಸಗುತ್ತಾನೆ ಎಂದು ಬರೈಯ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಅತ್ಯಾಚಾರಗಳು ಸಾಮಾನ್ಯವಾಗಿ ಒಬ್ಬ ವ್ಯಕ್ತಿಗಳಿಂದ ಅಲ್ಲದೆ ಗುಂಪುಗಳ ಮೂಲಕ ನಡೆಯುತ್ತವೆ ಎಂದಿದ್ದರು. ಕಾಂಗ್ರೆಸ್ ಶಾಸಕರ ಹೇಳಿಕೆಯನ್ನು ಟೀಕಿಸಿದ ಬಿಜೆಪಿ, ಇದನ್ನು ನಾಚಿಕೆಗೇಡು ಮತ್ತು ಆಘಾತಕಾರಿ ಎಂದು ಬಣ್ಣಿಸಿತ್ತು.