ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇ20 ಪೆಟ್ರೋಲ್ ಬಳಕೆಗೆ ಎಂಜಿನ್ ಬದಲಾವಣೆ ಬೇಡ; ಕೆಲವು ರಬ್ಬರ್ ಭಾಗಗಳಷ್ಟೇ ಬದಲಿಸಿ: ನಿತಿನ್ ಗಡ್ಕರಿ

2016ಕ್ಕೂ ಮೊದಲು ತಯಾರಾದ ಕೆಲವು ಬಿಎಸ್-3 ವಾಹನಗಳಲ್ಲಿ ಇ20 ಪೆಟ್ರೋಲ್ ಬಳಕೆಗೆ ಮುನ್ನ ಕೆಲವು ರಬ್ಬರ್ ಭಾಗಗಳು ಮತ್ತು ಗ್ಯಾಸ್ಕೆಟ್‌ಗಳನ್ನು ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಆದರೆ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಅಧ್ಯಯನಗಳು ತಿಳಿಸಿವೆ.

ಇ20 ಪೆಟ್ರೋಲ್‌ಗೆ ಹೊಂದಾಣಿಕೆ ಕುರಿತು ಗಡ್ಕರಿ ಹೇಳಿದ್ದೇನು?

ನಿತಿನ್ ಗಡ್ಕರಿ -

Profile
Sushmitha Jain Jul 30, 2026 10:27 AM

ನವದೆಹಲಿ: 2005ರ ಏಪ್ರಿಲ್ 1ರಿಂದ ಪರಿಚಯಿಸಲಾದ ಹಾಗೂ 2016ಕ್ಕೂ ಮೊದಲು ತಯಾರಿಸಲಾದ ಕೆಲವು ಬಿಎಸ್-3 (BS-III) ವಾಹನಗಳಲ್ಲಿ ಇ20 ಬಳಸುವ ಮೊದಲು ಕೆಲವು ರಬ್ಬರ್ ಭಾಗಗಳು (Rubber Parts) ಮತ್ತು ಗ್ಯಾಸ್ಕೆಟ್‌ಗಳನ್ನು (Gaskets) ಬದಲಾಯಿಸಬೇಕಾಗಬಹುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ (Union Road Transport and Highways Minister) ನಿತಿನ್ ಗಡ್ಕರಿ (Nitin Gadkari) ರಾಜ್ಯಸಭೆಗೆ (Rajya Sabha) ತಿಳಿಸಿದ್ದಾರೆ.


ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ ಅವರು, ಭಾರತೀಯ ತೈಲ ನಿಗಮ, ಡೆಹ್ರಾಡೂನ್‌ನ ಭಾರತೀಯ ಪೆಟ್ರೋಲಿಯಂ ಸಂಸ್ಥೆ, ಭಾರತೀಯ ವಾಹನ ತಯಾರಕರ ಸಂಘ ಹಾಗೂ ವಾಹನ ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನಗಳ ಪ್ರಕಾರ, ಇ20 ಪೆಟ್ರೋಲ್ ಬಳಕೆಗೆ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಅಧ್ಯಯನಗಳಲ್ಲಿ, ಹಳೆಯ ವಾಹನಗಳಲ್ಲಿಯೂ ಇ20 ಪೆಟ್ರೋಲ್ ಬಳಸಿದ ನಂತರ ಕಾರ್ಯಕ್ಷಮತೆಯಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸ ಅಥವಾ ಅಸಹಜ ಸವೆತ ಕಂಡುಬಂದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ವಾಹನ ಚಾಲನೆ, ವಾಹನ ಪ್ರಾರಂಭವಾಗುವ ಸಾಮರ್ಥ್ಯ, ಲೋಹ ಹಾಗೂ ಪ್ಲಾಸ್ಟಿಕ್ ಭಾಗಗಳ ಹೊಂದಾಣಿಕೆ ಸೇರಿದಂತೆ ಯಾವುದೇ ಸಮಸ್ಯೆಗಳು ವರದಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ʼʼನನಗೆ ಯಾವುದೇ ಲಾಭವಿಲ್ಲʼʼ: ಎಥನಾಲ್ ವಿವಾದ, ಆರೋಪ ತಳ್ಳಿ ಹಾಕಿದ ನಿತಿನ್ ಗಡ್ಕರಿ

ಆದರೆ, 2005ರಿಂದ ಪರಿಚಯಿಸಲಾದ ಮತ್ತು 2016ಕ್ಕೂ ಮೊದಲು ತಯಾರಿಸಲಾದ ಕೆಲವು ಬಿಎಸ್-3 ವಾಹನಗಳಲ್ಲಿ ಮಾತ್ರ ಕೆಲವು ರಬ್ಬರ್ ಭಾಗಗಳು ಹಾಗೂ ಗ್ಯಾಸ್ಕೆಟ್‌ಗಳನ್ನು ಬದಲಾಯಿಸುವ ಅಗತ್ಯ ಉಂಟಾಗಬಹುದು ಎಂದು ತಿಳಿಸಿರುವ ಅವರು, ಇದನ್ನು ವಾಹನದ ನಿಯಮಿತ ಸರ್ವೀಸ್ ವೇಳೆ ಸುಲಭವಾಗಿ ನಿರ್ವಹಿಸಬಹುದು ಎಂದಿದ್ದಾರೆ.
ಇಂಧನ ದಕ್ಷತೆ ಕುರಿತು ವ್ಯಕ್ತವಾಗಿರುವ ಆತಂಕಗಳಿಗೆ ಪ್ರತಿಕ್ರಿಯಿಸಿದ ಗಡ್ಕರಿ, ವಾಹನದ ಮೈಲೇಜ್ ಹಲವು ಅಂಶಗಳ ಮೇಲೆ ಅವಲಂಬಿತವಾಗಿದ್ದು, ಅದನ್ನು ಇ20 ಪೆಟ್ರೋಲ್ ಬಳಕೆಗೆ ಮಾತ್ರ ಸಂಬಂಧಿಸಲು ಸಾಧ್ಯವಿಲ್ಲ ಎಂದು ವಾಹನ ತಯಾರಕರು ಹಾಗೂ ಪರೀಕ್ಷಾ ಸಂಸ್ಥೆಗಳು ಸ್ಪಷ್ಟಪಡಿಸಿವೆ ಎಂದು ಹೇಳಿದರು.

2020ರ ಡಿಸೆಂಬರ್‌ನಲ್ಲಿ ನೀತಿ ಆಯೋಗ ರಚಿಸಿದ್ದ ಅಂತರ-ಸಚಿವಾಲಯ ಸಮಿತಿಯು ಎಥನಾಲ್ ಮಿಶ್ರಿತ ಪೆಟ್ರೋಲ್ ಬಳಕೆಯ ವಾಹನಗಳ ಹೊಂದಾಣಿಕೆ, ಮೈಲೇಜ್ ಹಾಗೂ ಕಾರ್ಯಕ್ಷಮತೆ ಕುರಿತು ಸಮಗ್ರ ಪರಿಶೀಲನೆ ನಡೆಸಿತ್ತು. ಈ ವರದಿಯನ್ನು 2021ರ ಜೂನ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಇದಲ್ಲದೆ, ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಯನ್ನು ವೈಜ್ಞಾನಿಕ ಅಧ್ಯಯನ ಹಾಗೂ ಹಂತ ಹಂತವಾಗಿ ಜಾರಿಗೊಳಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಬ್ರೆಜಿಲ್ ಸೇರಿದಂತೆ ಹಲವು ದೇಶಗಳಲ್ಲಿ ಶೇ.20ಕ್ಕಿಂತಲೂ ಹೆಚ್ಚಿನ ಎಥನಾಲ್ ಮಿಶ್ರಿತ ಇಂಧನವನ್ನು ಹಲವು ದಶಕಗಳಿಂದ ಯಶಸ್ವಿಯಾಗಿ ಬಳಸಲಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.