ಪ್ರತಿಭಟನೆ ವೇಳೆ ರಷ್ಯಾದಲ್ಲಿದ್ದರೂ ಬಿಹಾರದ ಯುವಕನ ಹೆಸರಲ್ಲಿ ಪ್ರಕರಣ: ಪೊಲೀಸರಿಂದ ನಡೆಯಿತಾ ಯಡವಟ್ಟು?
NEET Protest: ರಷ್ಯಾದಲ್ಲಿ ನಾಲ್ಕು ತಿಂಗಳಿಂದ ವಾಸವಾಗಿರುವುದಾಗಿ ಹೇಳಿರುವ ಬಿಹಾರದ ಯುವಕ ಮೊಹಮ್ಮದ್ ಸದಾಕತ್, ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆ ಪ್ರಕರಣದಲ್ಲಿ ತನ್ನ ಹೆಸರನ್ನು ಅನ್ಯಾಯವಾಗಿ ಸೇರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ, ಪ್ರತಿಭಟನೆಗೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ.
ಮೊಹಮ್ಮದ್ ಸದಾಕತ್ -
ಪಾಟ್ನಾ, ಜು. 29: ಬಿಹಾರದ ಕಿಶನ್‌ಗಂಜ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಸದಾಕತ್ (Mohammad Sadaqat), ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿಸಿ ಕಳೆದ ವಾರ ನಡೆದ ಪ್ರತಿಭಟನೆಗೆ (NEET Protest) ಸಂಬಂಧಿಸಿದ ಪ್ರಕರಣದಲ್ಲಿ ತಮ್ಮ ಹೆಸರನ್ನು ತಪ್ಪಾಗಿ ಸೇರಿಸಿರುವುದಾಗಿ ಆರೋಪಿಸಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ತಾವು ರಷ್ಯಾದಲ್ಲಿ ವಾಸವಾಗಿರುವುದರಿಂದ ಪ್ರತಿಭಟನೆಯಲ್ಲಿ ಭಾಗವಹಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಮಾತನಾಡಿರುವ ಸದಾಕತ್, ಜುಲೈ 25ರಂದು ಬಹಾದುರ್ಗಂಜ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ತಾವು ರಷ್ಯಾದಲ್ಲೇ ಇದ್ದೆ ಎಂದು ತಿಳಿಸಿದ್ದಾರೆ. ತಮ್ಮ ಹೆಸರನ್ನು ಪ್ರಕರಣದಿಂದ ಕೈಬಿಟ್ಟು, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಅವರು ಸರ್ಕಾರ ಮತ್ತು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ. ಆದಾಗ್ಯೂ, ವೈರಲ್ ಆಗಿರುವ ಈ ವಿಡಿಯೋದ ನೈಜತೆಯನ್ನು ದೃಢೀಕರಿಸಲಾಗಿಲ್ಲ.
ವೈರಲ್ ಆಗಿರುವ ಮೊಹಮ್ಮದ್ ಸದಾಕತ್ ವಿಡಿಯೊ:
4 महीनों से रशिया में है।
— I am Janvi (@jaanvii0) July 29, 2026
बिहार पुलिस ने स्टूडेंट प्रोटेस्ट में उनके खिलाफ भी FIR दर्ज कर दी है ! pic.twitter.com/lP2ZZ8ieUU
ತಮ್ಮ ವೈಫಲ್ಯಕ್ಕೆ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆ ನೆಪ ಮಾಡಿದ್ದಾರೆ: ಬಿಜೆಪಿ ನಾಯಕ ನಿಶಿಕಾಂತ್ ದುಬೆ
ಇದೇ ವೇಳೆ, ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಎಲ್ಲ ಪ್ರಕರಣಗಳು, ದೂರುಗಳು ಹಾಗೂ ನೋಟಿಸ್‌ಗಳನ್ನು ಹಿಂತೆಗೆದುಕೊಳ್ಳುವುದಾಗಿ ಬಿಹಾರ ಸರ್ಕಾರ ಘೋಷಿಸಿದೆ. ಜುಲೈ 26ರ ಬೆಳಗ್ಗೆ 6 ಗಂಟೆಯೊಳಗೆ ನಡೆದ ಘಟನೆಗಳಿಗೆ ಸಂಬಂಧಿಸಿದ ಎಲ್ಲ ಕ್ರಮಗಳನ್ನು ರದ್ದುಗೊಳಿಸುವುದಾಗಿ ಗೃಹ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಎಲ್ಲರನ್ನು ತಕ್ಷಣ ಬಿಡುಗಡೆ ಮಾಡುವಂತೆ ಸರ್ಕಾರ ಸೂಚಿಸಿದೆ. ರಾಜ್ಯವ್ಯಾಪಿ ಬಂದ್ ವೇಳೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಒಟ್ಟು 694 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ ಸುಮಾರು ಅರ್ಧದಷ್ಟು ಮಂದಿ ಅಪ್ರಾಪ್ತ ವಯಸ್ಕರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕಿಶನ್‌ಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿ ಮೋಹನ್ ಶುಕ್ಲಾ, ಸದಾಕತ್ ಅವರ ಆರೋಪವನ್ನು ದೃಢಪಡಿಸದೇ ಅಥವಾ ತಳ್ಳಿಹಾಕದೇ, ಪ್ರತಿಭಟನೆ ಪ್ರಕರಣಗಳಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೆ ಸಂಬಂಧಪಟ್ಟವರು ಪೊಲೀಸ್ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.