ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಆತ್ಮಚರಿತ್ರೆ ಬರೆಯುವ ಮೊದಲೇ ವೈಯಕ್ತಿಕ ಅನುಭವ ಹಂಚಿಕೊಂಡಿದ್ದ ಸೋನಿಯಾ ಗಾಂಧಿ: ಎಲ್ಲಿ, ಯಾವಾಗ ?

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಆತ್ಮಚರಿತ್ರೆ ಬರೆಯುವ ಮೊದಲೇ ತಮ್ಮ ಜೀವನಾನುಭವವನ್ನು ಹಂಚಿಕೊಂಡಿದ್ದರು. ಶಾಂತಿಯುತವಾಗಿದ್ದ ಕೌಟುಂಬಿಕ ಜೀವನದಿಂದ ರಾಜಕೀಯದ ಬಿರುಗಾಳಿಯೊಂದಿಗಿನ ಹೋರಾಟದ ನೆನಪುಗಳನ್ನು ಅವರು ಯವರೆಗೆ ನೆದರ್‌ಲ್ಯಾಂಡ್ಸ್‌ನ ಹೇಗ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಅಲ್ಲಿ ಏನು ಹೇಳಿದ್ದರು ? ಇಲ್ಲಿದೆ ಸಂಪೂರ್ಣ ಮಾಹಿತಿ.

ನೆದರ್‌ಲ್ಯಾಂಡ್ಸ್‌ನಲ್ಲಿ ಜೀವನಾನುಭವ ಹಂಚಿಕೊಂಡಿದ್ದ ಸೋನಿಯಾ ಗಾಂಧಿ

ಸಂಗ್ರಹ ಚಿತ್ರ -

ನವದೆಹಲಿ: ಕಾಂಗ್ರೆಸ್ ನಾಯಕಿ (Congress parliamentary party chairperson) ಸೋನಿಯಾ ಗಾಂಧಿ (Sonia Gandhi) ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey Of Love) ನವೆಂಬರ್ 10ರಂದು ಮಾರುಕಟ್ಟೆಗೆ ಬರಲಿದೆ. ಈ ಆತ್ಮಚರಿತ್ರೆಯನ್ನು ಬರೆಯುವ ಮೊದಲೇ ಅವರು ತಮ್ಮ ಬದುಕಿನ ಅನುಭವಗಳ ಬಗ್ಗೆ ನೆದರ್‌ಲ್ಯಾಂಡ್ಸ್‌ನ ಹೇಗ್ (Netherlands Hague)ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದರು. ಶಾಂತಿಯುತ ಕೌಟುಂಬಿಕ ಜೀವನ, ರಾಜಕೀಯ ಬಿರುಗಾಳಿಗಳು ಕುರಿತು ಹೇಳಿಕೊಂಡಿದ್ದ ಅವರು, ಪ್ರಧಾನಿ ರಾಜೀವ್ ಗಾಂಧಿ (Rajiv Gandhi) ಅವರೊಂದಿಗಿನ ಒಡನಾಟದ ಬಗ್ಗೆಯೂ ತಿಳಿಸಿದ್ದರು.

ತಮ್ಮ ವೈಯಕ್ತಿಕ ಜೀವನದ ಕುರಿತು 2007ರಲ್ಲಿ ನೀಡಿದ ಏಕೈಕ ಭಾಷಣದಲ್ಲಿ ಅವರು ಉತ್ತರ ಇಟಲಿಯ ಮಧ್ಯಮ ವರ್ಗದ ಕುಟುಂಬವೊಂದರಿಂದ ಭಾರತದ ಅತ್ಯಂತ ಪ್ರಮುಖ ರಾಜಕೀಯ ಕುಟುಂಬದವರೆಗಿನ ತಮ್ಮ ಪಯಣವನ್ನು ನೆನಪಿಸಿಕೊಂಡಿದ್ದರು.

ದುಲಾರ್‌ಚಂದ್ ಕೊಲೆ ಪ್ರಕರಣ: ಅನಂತ್ ಸಿಂಗ್‌ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ತಮ್ಮ ಆರಂಭಿಕ ದಿನಗಳು, ಇಂದಿರಾ ಗಾಂಧಿ ಅವರ ಮನೆಯ ವಾತಾವರಣ, ರಾಜಕೀಯದ ಬಗ್ಗೆ ತಮಗಿದ್ದ ವಿರೋಧ ಭಾವನೆ, ರಾಜೀವ್ ಮತ್ತು ಇಂದಿರಾ ಗಾಂಧಿ ಅವರ ಹತ್ಯೆಗಳ ಕುರಿತು ಸ್ಮರಿಸಿಕೊಂಡ್ಡಿದ್ದ ಅವರು ತಮ್ಮ ಜೀವನವನ್ನು ರೆಂಬ್ರಾಂಡ್ ಮತ್ತು ವ್ಯಾನ್ ಗಾಗ್ ಅವರ ವರ್ಣಚಿತ್ರಗಳಿಗೆ ಹೋಲಿಸಿದ್ದರು.

ನೆದರ್‌ಲ್ಯಾಂಡ್ಸ್‌ನ ಮಾಜಿ ಪ್ರಧಾನಿ ಮತ್ತು ರಾಜೀವ್ ಅವರ ಆಪ್ತ ಸ್ನೇಹಿತರಾದ ರೂಡ್ ಲುಬ್ಬರ್ಸ್ ಅವರ ಆಹ್ವಾನದ ಮೇರೆಗೆ 2007ರ ಜೂನ್ 9ರಂದು ‘ನೆಕ್ಸಸ್ ಇನ್‌ಸ್ಟಿಟ್ಯೂಟ್’ ನಲ್ಲಿ “ಲಿವಿಂಗ್ ಪಾಲಿಟಿಕ್ಸ್: ವಾಟ್ ಇಂಡಿಯಾ ಹ್ಯಾಸ್ ಥಾಟ್ ಮೀ” ರಾಜಕೀಯದೊಂದಿಗೆ ಬದುಕುವುದು: ಭಾರತ ನನಗೆ ಕಲಿಸಿದ್ದೇನು? ಎಂಬ ವಿಷಯದ ಕುರಿತು ಮಾತನಾಡಿದ ಅವರು ತಮ್ಮ ಭಾಷಣದಲ್ಲಿ ಹೀಗೆ ಹೇಳಿದ್ದರು.

ಈ ಆಕರ್ಷಕ ದೇಶದಲ್ಲಿ ನಾನು ಹೇಳಹೊರಟಿರುವ ಕಥೆಯು ನಿಮ್ಮ ದೇಶದ ಇಬ್ಬರು ಶ್ರೇಷ್ಠ ಕಲಾವಿದರ ಕಲಾಕೃತಿಗಳನ್ನು ಹೋಲುತ್ತದೆ. ರೆಂಬ್ರಾಂಡ್ ಅವರ ಕಲಾಕೃತಿಗಳಂತೆ ಇದು ಬೆಳಕು ಮತ್ತು ಕತ್ತಲೆ, ನಿಗೂಢತೆ ಮತ್ತು ವಿಧಿಯ ಗುಪ್ತ ಹಸ್ತದ ಕಥೆಯಾಗಿದೆ. ವ್ಯಾನ್ ಗಾಗ್ ಅವರ ಕೃತಿಗಳಂತೆ ಇದು ಆಂತರಿಕ ಸಂಘರ್ಷ ಮತ್ತು ಯಾತನೆಯ ಕಥೆಯೂ ಹೌದು. ಕಳೆದುಕೊಳ್ಳುವಿಕೆಯ ಅನುಭವವು ಜೀವನಕ್ಕೆ ಹೇಗೆ ಆಳವಾದ ಅರ್ಥವನ್ನು ನೀಡಬಲ್ಲದು ಎಂಬುದನ್ನು ಇದು ವಿವರಿಸುತ್ತದೆ ಎಂದು ತಿಳಿಸಿದ್ದರು.

ಯುರೋಪ್‌ನಲ್ಲಿ ಜನಿಸಿದ ನನ್ನನ್ನು ಶೀಘ್ರದಲ್ಲೇ ಹೆಚ್ಚು ವೈವಿಧ್ಯಮಯ ಮತ್ತು ಪ್ರಾಚೀನವಾದ ಮತ್ತೊಂದು ಜಗತ್ತು ಸೆಳೆದುಕೊಂಡಿತು. ಅದು ಇತಿಹಾಸ ಅಥವಾ ರಾಜಕೀಯದ ಮೂಲಕವಲ್ಲ. ಬದಲಾಗಿ ರಾಜೀವ್ ಗಾಂಧಿ ಅವರೊಂದಿಗಿನ ತಮ್ಮ ಸಂಬಂಧದ ಮೂಲಕ. ತಾವು ಭಾರತವನ್ನು ಹೇಗೆ ಕಂಡುಕೊಂಡೆ ಎಂಬುದನ್ನು ವಿವರಿಸಿದ ಅವರು ರಾಜೀವ್ ಗಾಂಧಿ ಅವರನ್ನು ಮೊದಲ ಬಾರಿಗೆ ಕೇಂಬ್ರಿಡ್ಜ್‌ನ ರೆಸ್ಟೋರೆಂಟ್ ಒಂದರಲ್ಲಿ ಭೇಟಿಯಾಗಿದ್ದೆ ಎಂದು ತಿಳಿಸಿದರು.

ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಹೇಳುವಂತೆ ಒಬ್ಬ ಭಾರತೀಯನಿಗೆ ಸಾವಿನ ವಿಚಾರದಲ್ಲಿ ಅತ್ಯಂತ ದುಃಖ ಮತ್ತು ಹತಾಶೆ ಉಂಟುಮಾಡುವ ಸಂಗತಿಯೆಂದರೆ ಇನ್ನು ಮುಂದೆ ತಾನು ವಾದ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು. ಈ ಸಾಲುಗಳನ್ನು ಉಲ್ಲೇಖಿಸಿದ ಸೋನಿಯಾ, ತಾನು ವಾದ ಪ್ರಿಯ ಭಾರತೀಯಳಾಗಲು ಸಾಕಷ್ಟು ದೂರ ಸಾಗಬೇಕಿದೆ ಎಂದು ಹೇಳಿದ್ದರು.

ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಸೋನಿಯಾ ಗಾಂಧಿ, ಆ ಕಾಲಕ್ಕೆ ತಕ್ಕಂತೆ ಅತ್ಯಂತ ನಿಕಟ ಬಾಂಧವ್ಯ ಹೊಂದಿದ್ದ, ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ನನಗೆ ಆಗ ಅದು ಸಾಂಪ್ರದಾಯಿಕ ಭಾರತೀಯ ಕುಟುಂಬದಂತೆ ಭಾಸವಾಗಿತ್ತು. ನಿಷ್ಠೆ, ವಿಧೇಯತೆ, ವಿನಯ, ಸತ್ಯಪ್ರಿಯತೆ, ಉದಾರತೆ ಮತ್ತು ಹಿರಿಯರಿಗೆ ಗೌರವ ನೀಡುವಂತಹ ಮೌಲ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು ಎಂದು ತಿಳಿಸಿದರು.

ತಂದೆ ಕಠಿಣ ಸ್ವಭಾವದವರಾಗಿದ್ದು, ಭಾಷೆಗಳನ್ನು ಕಲಿಯಲು, ವಿದೇಶಗಳಿಗೆ ಪ್ರಯಾಣಿಸಲು ನನ್ನನ್ನು ಪ್ರೋತ್ಸಾಹಿಸಿದ್ದರು. ಶಾಲೆಯಲ್ಲಿದ್ದಾಗ ಇಟಲಿಯ ಏಕೀಕರಣ ಚಳುವಳಿ ಬಗ್ಗೆ ತಿಳಿದುಕೊಂಡೆ. ಆದರೆ ಭಾರತದ ಭವ್ಯ ಇತಿಹಾಸ, ಅದು ಆಧುನಿಕ ರಾಷ್ಟ್ರವಾಗಿ ರೂಪುಗೊಂಡ ಬಗೆ ಏನೂ ತಿಳಿದಿರಲಿಲ್ಲ. ಭಾರತದೊಂದಿಗಿನ ನನ್ನ ಪರಿಚಯವು ಒಬ್ಬ ಅಸಾಧಾರಣ ವ್ಯಕ್ತಿಯ ಭೇಟಿಯಿಂದ ಆಯಿತು. ಅದು ಮುಂದೆ ನನ್ನ ಸಂಪೂರ್ಣ ಜೀವನವಾಯಿತು ಎಂದು ತಿಳಿಸಿದರು.

ರಾಜಕೀಯ ಹಿನ್ನಲೆಯುಳ್ಳ ಕುಟುಂಬಕ್ಕೆ ವಧುವಾಗಿ ಬಂದ ಮೇಲೆ ವಯಕ್ತಿಕ ಜೀವನದ ಮೇಲೆ ಅತಿಯಾದ ಹಸ್ತಕ್ಷೇಪವನ್ನು ಸಹಿಸಿಕೊಳ್ಳುವುದು ಅತ್ಯಂತ ಕಷ್ಟವಾಯಿತು. ಸ್ವಾಭಾವಿಕತೆ ಮತ್ತು ನೇರನುಡಿಯ ಸ್ವಭಾವವನ್ನು ನಿಯಂತ್ರಿಸಲು ಕಲಿಯಬೇಕಾಯಿತು. ಜೊತೆಗೆ ಸುಳ್ಳು ಆರೋಪಗಳು ಮತ್ತು ಅಪಪ್ರಚಾರಗಳು ಎದುರಾದಾಗ ಪ್ರತಿಕ್ರಿಯಿಸದಿರಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಬೇಕಾಯಿತು. ಎಲ್ಲವನ್ನೂ ಸಹಿಸಿಕೊಳ್ಳುವುದನ್ನು ಕಲಿಯಬೇಕಾಯಿತು ಎಂದರು.

ಇಂದಿರಾ ಅವರ ಮೊದಲ ರಾಜಕೀಯ ಪಾಠಶಾಲೆ ಎಂದರೆ 1971ರ ಬಿಕ್ಕಟ್ಟು ಎಂದ ಸೋನಿಯಾ ಗಾಂಧಿ ಬಳಿಕ ಅವರು ಒಬ್ಬ ಸಮರ್ಥ ರಾಜ ನೀತಿಜ್ಞೆಯಾದರು. ಇಂದಿರಾ ಅವರ ಹತ್ಯೆ ಬಳಿಕ ಅವರ ಉತ್ತರಾಧಿಕಾರಿಯಾಗಿ ಆ ಸ್ಥಾನವನ್ನು ಸ್ವೀಕರಿಸದಂತೆ ತಾನು ರಾಜೀವ್ ಗಾಂಧಿಯವರಲ್ಲಿ ಮನವಿ ಮಾಡಿದ್ದಾಗಿ ಕೂಡ ಅವರು ತಮ್ಮ ಭಾಷಣದಲ್ಲಿ ನೆನಪಿಸಿಕೊಂಡರು. ಆದರೆ ಅವರಿಗೆ ಬೇರೆ ದಾರಿ ಇರಲಿಲ್ಲ ಎಂದರು.

ಪ್ರಧಾನ ಮಂತ್ರಿಯ ಪತ್ನಿಯಾಗಿ ತಮಗೆ ಅಧಿಕೃತ ಕರ್ತವ್ಯಗಳಿದ್ದವು. ಆದರೆ ಅದರೊಂದಿಗೆ ಕುಟುಂಬ ಜೀವನವನ್ನು ನಿಭಾಯಿಸುವುದು, ಮಕ್ಕಳಿಗೆ ಸಾಧ್ಯವಾದಷ್ಟು ಸಹಜವಾದ ಬದುಕನ್ನು ಒದಗಿಸಿಕೊಡುವುದು ಕೂಡ ತಮ್ಮ ಜವಾಬ್ದಾರಿಯಾಗಿತ್ತು ಎಂದು ಅವರು ವಿವರಿಸಿದರು.

ತಮ್ಮ ರಾಜಕೀಯ ಪ್ರವೇಶದ ಬಗ್ಗೆಯೂ ಮಾತನಾಡಿದ್ದ ಅವರು, ಕಾಂಗ್ರೆಸ್ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿತ್ತು. ವಿಭಜನೆ ಮತ್ತು ದ್ವೇಷವನ್ನು ಹರಡುವ ಸಂಕುಚಿತ ಮನಸ್ಥಿತಿಯ ಶಕ್ತಿಗಳನ್ನು ನೋಡಿ ನಾನು ಸುಮ್ಮನಿರಲು ಸಾಧ್ಯವಾಗಲಿಲ್ಲ. ನನ್ನ ಕುಟುಂಬ ಯಾವ ಮೌಲ್ಯಗಳಿಗಾಗಿ ಬದುಕಿದರೋ ಮತ್ತು ಪ್ರಾಣವನ್ನೇ ಅರ್ಪಿಸಿದರೋ ಅದನ್ನು ನಾನು ಕಡೆಗಣಿಸಿ ಸುಮ್ಮನೆ ಕೈಕಟ್ಟಿ ಕೂರಲು ಸಾಧ್ಯವಾಗಲಿಲ್ಲ. ಹೀಗಾಗಿ ರಾಜಕೀಯ ಜೀವನವು ನನ್ನನ್ನು ಆರಿಸಿಕೊಂಡಿತು ಎಂದು ಅವರು ತಿಳಿಸಿದರು.

ಮತದಾರರ ಪಟ್ಟಿ ಪರಿಷ್ಕರಣೆ: ಹೆಸರು ಕೈಬಿಟ್ಟ ಕ್ರಮವನ್ನು ಸಮರ್ಥಿಸಿದ ಕಾಂಗ್ರೆಸ್ ಸಚಿವ, ರಾಹುಲ್ ಗಾಂಧಿ ನಿಲುವಿಗೆ ಬಿಜೆಪಿ ಟೀಕೆ

ಸಾಕಷ್ಟು ನೋವು ಮತ್ತು ಕಷ್ಟಗಳ ನಡುವೆ ನನ್ನ ಹೊಸ ಬದುಕಿನಲ್ಲಿ ನನಗೆ ತೃಪ್ತಿ ಮತ್ತು ಒಂದು ದೊಡ್ಡ ಉದ್ದೇಶದ ಅರಿವು ಸಿಕ್ಕಿದೆ. ನಾನು ನನ್ನ ನಿಷ್ಠೆಯನ್ನು ಸಮರ್ಪಿಸಿದ್ದು ಒಂದು ಮನೆಯ ಚೌಕಟ್ಟಿನೊಳಗಿನ ಕುಟುಂಬಕ್ಕೆ. ಆದರೆ ಇಂದು ನನ್ನ ನಿಷ್ಠೆಯು ಒಂದು ವಿಶಾಲವಾದ ಕುಟುಂಬ ಅಂದರೆ ನನ್ನ ದೇಶವಾದ ಭಾರತವನ್ನು ಇದು ಒಳಗೊಂಡಿದೆ ಎಂದು ಹೇಳಿದರು.