ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Congress-Turkey Row: ಸುಳ್ಳು ಮಾಹಿತಿ ಆರೋಪ; ಅಮಿತ್‌ ಮಾಳವಿಯಾ, ಅರ್ನಬ್‌ ಗೋಸ್ವಾಮಿ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆ

ಅಮಿತ್‌ ಮಾಳವಿಯಾ ಮತ್ತು ಅರ್ನಾಬ್‌ ಗೋಸ್ವಾಮಿ ಅವರು ಬಹಿರಂಗವಾಗಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿಯ ಶ್ರೀಕಾಂತ್‌ ಸ್ವರೂಪ್‌ ಅವರು ಮೇ 20ರಂದು ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದರು. ಈ ಕೇಸ್‌ಗೆ ಹೈಕೋರ್ಟ್‌ ತಡೆ ನೀಡಿದೆ.

ಅಮಿತ್‌ ಮಾಳವಿಯಾ, ಅರ್ನಬ್‌ ಗೋಸ್ವಾಮಿ ವಿರುದ್ಧದ ಎಫ್‌ಐಆರ್‌ಗೆ ತಡೆ

Profile Prabhakara R May 23, 2025 2:33 PM

ಬೆಂಗಳೂರು: ಟರ್ಕಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಕಚೇರಿ (Congress-Turkey Row) ಹೊಂದಿದೆ ಎಂದು ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಬಿಜೆಪಿಯ ಸಾಮಾಜಿಕ ಮಾಧ್ಯಮದ ಮುಖ್ಯಸ್ಥ ಅಮಿತ್‌ ಮಾಳವಿಯಾ ಮತ್ತು ರಿಪಬ್ಲಿಕ್‌ ಸುದ್ದಿ ವಾಹಿನಿ ಪ್ರಧಾನ ಸಂಪಾದಕ ಅರ್ನಬ್‌ ಗೋಸ್ವಾಮಿ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್‌ ಗುರುವಾರ ತಡೆಯಾಜ್ಞೆ ನೀಡಿದೆ. ಎಫ್‌ಐಆರ್‌ ರದ್ದು ಮಾಡುವಂತೆ ಅಮಿತ್‌ ಮಾಳವಿಯಾ ಮತ್ತು ಅರ್ನಬ್‌ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌. ರಾಚಯ್ಯ ಅವರ ರಜಾಕಾಲೀನ ಏಕಸದಸ್ಯ ಪೀಠವು ವಿಚಾರಣೆ ನಡೆಸಿ, ಎಫ್‌ಐಆರ್‌ಗೆ ತಡೆ ನೀಡಿದೆ.

ಇದೇ ವೇಳೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸೀಂ ಮುನೀರ್‌ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಸಂಬಂಧ ಬೆಸೆದು ಟ್ವೀಟ್‌ ಮಾಡಿದ ಮತ್ತೊಂದು ಪ್ರಕರಣದ ಸಂಬಂಧ ಅಮಿತ್‌ ಮಾಳವಿಯಾ ವಿರುದ್ಧ ದಾಖಲಾಗಿದ್ದ ಮತ್ತೊಂದು ಎಫ್‌ಐಆರ್‌ಗೂ ಹೈಕೋರ್ಟ್‌ ತಡೆ ನೀಡಿದೆ.

ಅಮಿತ್‌ ಮಾಳವಿಯಾ ಮತ್ತು ಅರ್ನಬ್‌ ಗೋಸ್ವಾಮಿ ಅವರು ಬಹಿರಂಗವಾಗಿ ಸುಳ್ಳು ಮಾಹಿತಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿ ಕೆಪಿಸಿಸಿ ಪದಾಧಿಕಾರಿ ಶ್ರೀಕಾಂತ್‌ ಸ್ವರೂಪ್‌ ಬಿ.ಎನ್‌. ಅವರು ಮೇ 20ರಂದು ನೀಡಿದ್ದ ದೂರಿನ ಅನ್ವಯ ಬೆಂಗಳೂರಿನ ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಟರ್ಕಿಯ ಇಸ್ತಾನ್‌ಬುಲ್‌ ಕಾಂಗ್ರೆಸ್‌ ಕೇಂದ್ರವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಕಚೇರಿ ಎಂದು ಸುಳ್ಳು ಮಾಹಿತಿ ನೀಡಿದ್ದರಿಂದ ಪ್ರಕರಣ ದಾಖಲಾಗಿತ್ತು.

ಅರ್ನಬ್‌ ಮತ್ತು ಮಾಳವಿಯಾ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು, “ಕಾಂಗ್ರೆಸ್‌ ಪಕ್ಷವು ಟರ್ಕಿಯಲ್ಲಿ ಕಚೇರಿ ಹೊಂದಿದೆ ಎಂದು ಇತರೆ ಸುದ್ದಿ ಮಾಧ್ಯಮಗಳು ಪ್ರಕಟಿಸಿರುವ ಮಾಹಿತಿ ಪರಿಶೀಲಿಸಬಹುದು. ಅರ್ನಾಬ್‌ ಗೋಸ್ವಾಮಿ ಅವರು ತಮ್ಮ ರಿಪಬ್ಲಿಕ್‌ ಟಿವಿಯಲ್ಲಿ ಈ ಸುದ್ದಿ ಪ್ರಸಾರ ಮಾಡಿ, ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಪ್ರಶ್ನೆ ಮಾಡಿದ್ದಾರೆ. ಟರ್ಕಿಯು ಭಾರತದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಇದೇ ವಿಚಾರವನ್ನು ಡಿಜಿಟಲ್‌ ಮಾಧ್ಯಮದಲ್ಲಿ ಪ್ರಕಟಿಸಲಾಗಿದ್ದು, ತಪ್ಪಾದ ಚಿತ್ರವನ್ನು ಬಳಕೆ ಮಾಡಲಾಗಿತ್ತು. ಆನಂತರ ಅದನ್ನು ಹಿಂಪಡೆದು, ತಿದ್ದುಪಡಿ ಪ್ರಕಟಿಸಲಾಗಿದೆ. ಇದು ಅಚಾತುರ್ಯದಿಂದ ನಡೆದ ಘಟನೆಯಾಗಿದೆ. ಇದರಲ್ಲಿ ಯಾವುದೇ ಅಪರಾಧವಾಗುವಂಥ ಪ್ರಕರಣವಿಲ್ಲ” ಎಂದರು.

ಈ ಸುದ್ದಿಯನ್ನೂ ಓದಿ | Congress: ಟರ್ಕಿಯಲ್ಲಿ ಕಾಂಗ್ರೆಸ್ ಕಚೇರಿ ತೆರೆದಿರುವ ಬಗ್ಗೆ ಸುಳ್ಳು ಸುದ್ದಿ: ಅಮಿತ್ ಮಾಳವೀಯ, ಅರ್ನಬ್ ಗೋಸ್ವಾಮಿ ವಿರುದ್ಧ ದೂರು

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಅವರು, “ಅಪಪ್ರಚಾರದ ದೃಷ್ಟಿಯಿಂದ ಸುದ್ದಿ ಪ್ರಕಟಿಸಲಾಗಿದ್ದು, ಅದು ಕಾಂಗ್ರೆಸ್‌ ಪಕ್ಷಕ್ಕೆ ಸಂಬಂಧಿಸಿಲ್ಲ. ಸುಳ್ಳು ಸುದ್ದಿಯನ್ನು ಪ್ರಕಟಿಸಲಾಗಿದೆ. ರಿಪಬ್ಲಿಕ್‌ ಟಿವಿ ತಿದ್ದುಪಡಿ ಪ್ರಕಟಿಸಿರಬಹುದು, ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ. ಪೊಲೀಸರು ಅರ್ನಬ್‌ ಬಂಧಿಸಲು ಹೋಗಿಲ್ಲ, ನೋಟಿಸ್‌ ನೀಡಲು ಮಾತ್ರ ಹೋಗಿದ್ದರು. ಅರ್ನಾಬ್‌ ಮತ್ತು ಮಾಳವಿಯಾ ತನಿಖೆಗೆ ಸಹಕರಿಸಬೇಕು” ಎಂದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ಎರಡೂ ಪ್ರಕರಣಗಳಿಗೂ ಮುಂದಿನ ವಿಚಾರಣೆವರೆಗೆ ತಡೆ ನೀಡಿದೆ.