ಮಮತಾ ಬ್ಯಾನರ್ಜಿ ಆಡಳಿತದಲ್ಲಿ ನಿರ್ಲಕ್ಷಿಸಲ್ಪಟ್ಟ ಮಹಿಳಾ ಪೊಲೀಸ್ ಅಧಿಕಾರಿಗೆ ಉನ್ನತ ಜವಾಬ್ದಾರಿ ನೀಡಿದ ಸುವೇಂದು ಅಧಿಕಾರಿ; ಯಾರು ಈ ದಮಯಂತಿ ಸೇನ್?
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರ ಅಧಿಕಾರಾವಧಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿಯನ್ನು ಗುರುತಿಸಿರುವ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಅವರನ್ನು ಕರೆದು ಈಗ ಉನ್ನತ ಜವಾಬ್ದಾರಿಯನ್ನು ನೀಡಿದ್ದಾರೆ. ಇದು ಈಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಯಾರು ಈ ಅಧಿಕಾರಿ, ಅವರು ಮಾಡಿರುವ ಕಾರ್ಯಗಳು ಏನು ಎಂಬುದರ ಕುರಿತು ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
ಕೋಲ್ಕತ್ತಾ: ವೃತ್ತಿ ಬದುಕಿನಲ್ಲಿ ಉನ್ನತ ಕಾರ್ಯಗಳನ್ನು ಮಾಡಿದರೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರನ್ನು (women police cops) ಗುರುತಿಸಿರುವ ಪಶ್ಚಿಮ ಬಂಗಾಳದ (west bengal) ಬಿಜೆಪಿ ಆಡಳಿತ ಈಗ ಅವರನ್ನು ಕರೆದು ಉನ್ನತ ಜವಾಬ್ದಾರಿಯನ್ನು ನೀಡಿದೆ. 2012 ರ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಪ್ರಕರಣದ (2012 Park Street rape case) ತನಿಖೆಯನ್ನು ಮುನ್ನಡೆಸಿದ್ದ ಸೂಪರ್ ಪೊಲೀಸ್ ಅಧಿಕಾರಿ ಎಂದೇ ಗುರುತಿಸಲ್ಪಟ್ಟಿದ್ದ ದಮಯಂತಿ ಸೇನ್ (Damayanti Sen) ಅವರಿಗೆ ಸುವೇಂದು ಅಧಿಕಾರಿ (West Bengal Chief Minister Suvendu Adhikari) ಅವರ ಸರ್ಕಾರ ಪ್ರಮುಖ ಜವಾಬ್ದಾರಿಯನ್ನು ವಹಿಸಿದೆ.
2012ರಲ್ಲಿ ನಡೆದಿದ್ದ ಪಾರ್ಕ್ ಸ್ಟ್ರೀಟ್ ಅತ್ಯಾಚಾರ ಪ್ರಕರಣದ ಬಳಿಕ ಮಮತಾ ಬ್ಯಾನರ್ಜಿ ಸರ್ಕಾರದಿಂದ ನಿರ್ಲಕ್ಷಿಸಲ್ಪಟ್ಟ ಪೊಲೀಸ್ ಅಧಿಕಾರಿ ದಮಯಂತಿ ಸೇನ್ ಅವರನ್ನು ಈಗ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸರ್ಕಾರ ಮಹಿಳೆಯರು ಮತ್ತು ಮಕ್ಕಳ ಮೇಲಿನ ಹಿಂಸಾಚಾರದ ತನಿಖೆಗಾಗಿ ಮರಳಿ ಕರೆದಿದ್ದಾರೆ.
ಇನ್ನು ಮುಂದೆ ದಮಯಂತಿ ಸೇನ್ ಅವರು ನಿವೃತ್ತ ನ್ಯಾಯಮೂರ್ತಿ ಸಮಪ್ತಿ ಚಟರ್ಜಿ ನೇತೃತ್ವದ ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಜೂನ್ 1ರಿಂದ ಕಾರ್ಯ ನಿರ್ವಹಿಸಲಿರುವ ಈ ಸಮಿತಿಯು ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಪೊಲೀಸ್ ಠಾಣೆಗಳಲ್ಲಿ ದೂರುಗಳನ್ನು ಸ್ವೀಕರಿಸುತ್ತದೆ. ಇದಕ್ಕೂ ಮೊದಲು ಅಧಿಕಾರಿಗಳು ವಿವಿಧ ದತ್ತಾಂಶಗಳ ಸಂಗ್ರಹಣೆ ಕಾರ್ಯವನ್ನು ನಡೆಸಲಿದ್ದಾರೆ.
2012ರ ಫೆಬ್ರವರಿ 6ರಂದು ತಡರಾತ್ರಿ ಪಾರ್ಕ್ ಸ್ಟ್ರೀಟ್‌ನಲ್ಲಿರುವ ನೈಟ್‌ಕ್ಲಬ್‌ನಿಂದ ಹಿಂತಿರುಗುತ್ತಿದ್ದ ಸುಜೆಟ್ ಜೋರ್ಡಾನ್ ಅವರ ಮೇಲೆ ಚಲಿಸುವ ವಾಹನದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಆ ಪ್ರಕರಣದ ತನಿಖೆಯನ್ನು ದಮಯಂತಿ ಸೇನ್ ಅವರು ಮುನ್ನಡೆಸಿದರು. ತನಿಖೆ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದರು. ಇದರ ಬಳಿಕ ಅವರಿಗೆ ಯಾವುದೇ ಪ್ರಮುಖ ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿಲ್ಲ. ಒಂದು ರೀತಿಯಲ್ಲಿ ಅವರನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಈಗ ಸುವೇಂದು ಅಧಿಕಾರಿ ಅವರು ದಮಯಂತಿ ಸೇನ್ ಅವರನ್ನು ಕರೆದು ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ತನಿಖೆ ಮಾಡಲು ಮುಖ್ಯಮಂತ್ರಿ ರಚಿಸಿದ ಹೊಸ ಸಮಿತಿಗೆ ನೇಮಕ ಮಾಡಿದ್ದಾರೆ.
ದಮಯಂತಿ ಸೇನ್ ಯಾರು?
1996 ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ದಮಯಂತಿ ಸೇನ್ ಅವರು ಕೋಲ್ಕತ್ತಾ ಪೊಲೀಸರ ಜಂಟಿ ಪೊಲೀಸ್ ಆಯುಕ್ತರಾಗಿದ್ದರು. ಬಳಿಕ ಅವರನ್ನು ಕೋಲ್ಕತ್ತಾ ಪೊಲೀಸ್ ವಿಶೇಷ ಆಯುಕ್ತರನ್ನಾಗಿ ನೇಮಿಸಲಾಯಿತು. ಇದೇ ಸಂದರ್ಭದಲ್ಲಿ ಅವರು ಪಾರ್ಕ್ ಸ್ಟ್ರೀಟ್ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡರು.
ಋಷಿಕೇಶದಲ್ಲಿ ಉಜ್ಜೈನಿ ಎಕ್ಸ್ಪ್ರೆಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ; ತಪ್ಪಿದ ಭಾರೀ ರೈಲು ದುರಂತ
ಈ ಘಟನೆಯನ್ನು ನಂಬಲು ಸಾಧ್ಯವಿಲ್ಲದ್ದು ಎಂದು ಮಮತಾ ಬ್ಯಾನರ್ಜಿ ಸರ್ಕಾರ ಬಣ್ಣಿಸಿತ್ತು. ಆದರೆ ದಮಯಂತಿ ಸೇನ್ ಅವರು ಆರೋಪಿಗಳನ್ನು ಬಂಧಿಸಿ ಈ ಘಟನೆ ನಿಜವಾಗಿಯೂ ನಡೆದಿದೆ ಎಂದು ಸಾಬೀತು ಪಡಿಸಿದರು. ಇದರ ಬಳಿಕ ತಕ್ಷಣವೇ ಅವರನ್ನು ಲಾಲ್‌ಬಜಾರ್‌ನಲ್ಲಿರುವ ಕೋಲ್ಕತ್ತಾ ಪೊಲೀಸ್ ಪ್ರಧಾನ ಕಚೇರಿಯಿಂದ ಬ್ಯಾರಕ್‌ಪೋರ್ ಕಮಿಷನರೇಟ್‌ನೊಳಗಿನ ಕೆಳಗಿನ ಹುದ್ದೆಗೆ ವರ್ಗಾವಣೆ ಮಾಡಲಾಯಿತು.