ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಂದಿಗ್ರಾಮದಿಂದ ನಬನ್ನದವರೆಗೆ: ಸುವೇಂದು ಅಧಿಕಾರಿ ಬಂಗಾಳದ ನೂತನ ಮುಖ್ಯಮಂತ್ರಿಯಾಗಲು ಕಾರಣವಾದ ಪ್ರಮುಖ ಹಂತಗಳು

ನಂದಿಗ್ರಾಮ ಚಳುವಳಿಯಿಂದ ಆರಂಭವಾದ ಸುವೇಂದು ಅಧಿಕಾರಿ ಅವರ ರಾಜಕೀಯ ಪಯಣ, ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆ, ಮಮತಾ ಬ್ಯಾನರ್ಜಿ ವಿರುದ್ಧದ ಐತಿಹಾಸಿಕ ಗೆಲುವು ಮತ್ತು 2026ರ ಭರ್ಜರಿ ಚುನಾವಣಾ ವಿಜಯದ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಪದವಿವರೆಗೆ ತಲುಪಿದೆ.

ಸುವೇಂದು ಅಧಿಕಾರಿಯ ರಾಜಕೀಯ ಪಯಣ ಹೇಗಿತ್ತು?

ಸುವೇಂದು ಅಧಿಕಾರಿ (ಸಂಗ್ರಹ ಚಿತ್ರ) -

Profile
Sushmitha Jain May 8, 2026 7:45 PM

ಕೋಲ್ಕತ್ತಾ, ಮೇ 8: ಬಿಜೆಪಿ ಹಿರಿಯ ನಾಯಕ ಸುವೇಂದು ಅಧಿಕಾರಿ (Suvendu Adhikari) ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ಬೃಹತ್ ಜನ ಚಳುವಳಿಗಳು, ಕಾರ್ಯತಂತ್ರದ ಪಕ್ಷಾಂತರ ಮತ್ತು ಹೈ-ವೋಲ್ಟೇಜ್ ಚುನಾವಣಾ ಕದನಗಳ ಮೂಲಕ ಅವರ ರಾಜಕೀಯ ಜೀವನವು ಈ ಉತ್ತುಂಗಕ್ಕೇರಿದೆ. ಸುವೇಂದು ಅವರ ಈ ಐತಿಹಾಸಿಕ ಪಯಣದ ಪ್ರಮುಖ ಘಟ್ಟಗಳು ಇಲ್ಲಿದೆ.

ಸುವೇಂದು ಅವರ ರಾಜಕೀಯ ಜೀವನದ ಮೊದಲ ದೊಡ್ಡ ತಿರುವು 2007ರ ನಂದಿಗ್ರಾಮ ಭೂಸ್ವಾಧೀನ ವಿರೋಧಿ ಪ್ರತಿಭಟನೆ. ಅಂದಿನ ಎಡರಂಗ ಸರ್ಕಾರದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿದ್ದ ಅವರು ಇಡೀ ರಾಜ್ಯದ ಗಮನ ಸೆಳೆದಿದ್ದರು. ಈ ಚಳುವಳಿಯು ಎಡಪಕ್ಷಗಳ ಗ್ರಾಮೀಣ ಭದ್ರಕೋಟೆಯನ್ನು ಸಡಿಲಗೊಳಿಸಿ, ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್‌ನ ಏಳಿಗೆಗೆ ಭದ್ರವಾದ ಅಡಿಪಾಯ ಹಾಕಿತು. ಇದು ಸುವೇಂದು ಅವರನ್ನು ಜನಸಾಮಾನ್ಯರ ನಾಯಕನನ್ನಾಗಿ ರೂಪಿಸಿತು.

ತೃಣಮೂಲದ ಸಂಘಟನಾ ಶಕ್ತಿ

ಟಿಎಂಸಿಯ ಪ್ರಬಲ ಸಂಘಟಕರಾಗಿ ಬೆಳೆದ ಸುವೇಂದು, ದಕ್ಷಿಣ ಬಂಗಾಳ ಮತ್ತು ಜಂಗಲ್ ಮಹಲ್ ಭಾಗಗಳಲ್ಲಿ ಪಕ್ಷವನ್ನು ಭದ್ರವಾಗಿ ಬೇರೂರಿಸಿದರು. 2009ರಲ್ಲಿ ತಮ್ಲುಕ್ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾದರು. ನಂತರ 2016ರಲ್ಲಿ ಮಮತಾ ಬ್ಯಾನರ್ಜಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡು, ರಾಜ್ಯ ರಾಜಕಾರಣದಲ್ಲಿ ಅತ್ಯಂತ ಪ್ರಭಾವಿ ಮತ್ತು ವಿಶ್ವಾಸಾರ್ಹ ನಾಯಕರಾಗಿ ಮಿಂಚಿದರು.

ಅಮಿತ್‌ ಶಾ ಆಯ್ಕೆಯ ನಾಯಕ ಸುವೇಂದು ಅಧಿಕಾರಿ

ಬಿಜೆಪಿಗೆ ಸೇರ್ಪಡೆ ಮತ್ತು ಮಹತ್ವದ ಬದಲಾವಣೆ

2020 ರ ಡಿಸೆಂಬರ್‌ನಲ್ಲಿ ಸುವೇಂದು ಟಿಎಂಸಿ ತೊರೆದು ಬಿಜೆಪಿಗೆ ಸೇರಿದ್ದು ಬಂಗಾಳ ರಾಜಕಾರಣದ ದಿಕ್ಕನ್ನೇ ಬದಲಿಸಿತು. ಇದು ಬಿಜೆಪಿಗೆ ಪ್ರಬಲ 'ಬಂಗಾಳಿ' ಮುಖವನ್ನು ನೀಡಿತು. 2021ರ ಚುನಾವಣೆಯಲ್ಲಿ ಸ್ವತಃ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೇ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲಿಸುವ ಮೂಲಕ ಸುವೇಂದು ಇಡೀ ದೇಶದ ಗಮನ ಸೆಳೆದರು. ಅದಿಕಾರಕ್ಕೆ ಬರುವಲ್ಲಿ ಬಿಜೆಪಿ ಸೋತರೂ ಧೃತಿಗೆಡದ ಅವರು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಡಳಿತಾರೂಢ ಸರ್ಕಾರವನ್ನು ಸದನದ ಒಳಗೆ ಮತ್ತು ಹೊರಗೆ ಸಮರ್ಥವಾಗಿ ಎದುರಿಸಿದರು.

ವಿರೋಧ ಪಕ್ಷದ ನಾಯಕನಿಂದ ಮುಖ್ಯಮಂತ್ರಿಯವರೆಗೆ

2026ರ ವಿಧಾನಸಭಾ ಚುನಾವಣೆಯು ಸುವೇಂದು ಅವರ ಜೀವನದ ಅತಿದೊಡ್ಡ ಯಶಸ್ಸು. ಬಂಗಾಳದಲ್ಲಿ ಬಿಜೆಪಿ 207 ಸ್ಥಾನಗಳೊಂದಿಗೆ ಐತಿಹಾಸಿಕ ಜಯ ಗಳಿಸಿದ ಹಿನ್ನೆಲೆಯಲ್ಲಿ, ಪಕ್ಷದ ಶಾಸಕಾಂಗ ಸಭೆಯು ಸುವೇಂದು ಅವರ ಹೆಸರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಅಂತಿಮಗೊಳಿಸಿದೆ. ಹದಿನಾಲ್ಕು ವರ್ಷಗಳ ಹಿಂದಿನ ಜನಪರ ಹೋರಾಟದಿಂದ ಆರಂಭವಾದ ಅವರ ಈ ಸುದೀರ್ಘ ಪಯಣ ಈಗ ಬಂಗಾಳದ ಆಡಳಿತ ಕೇಂದ್ರವಾದ 'ನಬನ್ನ'ವನ್ನು ತಲುಪಿದೆ. ಇದು ಬಂಗಾಳದ ರಾಜಕೀಯ ಇತಿಹಾಸದಲ್ಲೇ ಒಂದು ಸುವರ್ಣ ಅಧ್ಯಾಯವಾಗಿ ದಾಖಲಾಗಲಿದೆ. ಸದ್ಯಕ್ಕೆ ಅವರು ಬಂಗಾಳದ ಹೊಸ ಯುಗದ ಹರಿಕಾರನಾಗಿ ಹೊರಹೊಮ್ಮಿದ್ದಾರೆ.