ಜೆಎಸ್‌ಎಸ್‌ಸಿ ಪರೀಕ್ಷೆ ರದ್ದು ಮಾತುಕತೆ ವಿಫಲ: ಜಾರ್ಖಂಡ್ ವಿಧಾನಸಭೆಗೆ ವಿದ್ಯಾರ್ಥಿಗಳ ಮೆರವಣಿಗೆ
ಜಾರ್ಖಂಡ್‌ನಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಸೋಮವಾರ ರಾಜ್ಯ ವಿಧಾನಸಭೆಗೆ ಮೆರವಣಿಗೆ ನಡೆಸಲಿದ್ದಾರೆ. ಭಾನುವಾರ ಮತ್ತು ಸೋಮವಾರ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಇದರಲ್ಲಿ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಇರುವುದರಿಂದ ಈ ಮೆರವಣಿಗೆ ನಡೆಸುತ್ತಿರುವುದಾಗಿ ವಿದ್ಯಾರ್ಥಿ ನಾಯಕ ಸಂಜಯ್ ಮೆಹ್ತಾ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ರಾಂಚಿ: ಸರ್ಕಾರದೊಂದಿಗಿನ ಮಾತುಕತೆಗಳು ವಿಫಲವಾಗಿರುವುದರಿಂದ ಸೋಮವಾರ ವಿದ್ಯಾರ್ಥಿಗಳು (Student Protest) ಜಾರ್ಖಂಡ್ (Jharkhand) ರಾಜ್ಯದ ವಿಧಾನಸಭೆಗೆ (state Assembly) ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ. ಜಾರ್ಖಂಡ್‌ನಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಜುಲೈ 25ರಿಂದ ವಿದ್ಯಾರ್ಥಿಗಳು ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರೊಂದಿಗೆ ಕಳೆದೆರಡು ದಿನಗಳಿಂದ ಸರ್ಕಾರ ಮಾತುಕತೆ ನಡೆಸುತ್ತಿದ್ದು, ಆದರೆ ಅಂತಿಮ ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆ ಹರಿಸಲು ಸರ್ಕಾರ ಗಂಭೀರ ಪ್ರಯತ್ನವನ್ನೇ ಮಾಡುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಸೋಮವಾರ ವಿಧಾನಸಭೆಗೆ ಮುತ್ತಿಗೆ ಹಾಕಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನ ಸಭೆ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಭಾನುವಾರ ಮತ್ತು ಸೋಮವಾರ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಇದರಲ್ಲಿ ಯಾವುದೇ ಅಂತಿಮ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಇದ್ದುದರಿಂದ ವಿಧಾನಸಭೆಗೆ ಮೆರವಣಿಗೆ ನಡೆಸುತ್ತಿರುವುದಾಗಿ ವಿದ್ಯಾರ್ಥಿ ನಾಯಕ ಸಂಜಯ್ ಮೆಹ್ತಾ ತಿಳಿಸಿದ್ದಾರೆ.
14ನೇ ಜೆಪಿಎಸ್‌ಸಿ ಪರೀಕ್ಷೆ ರದ್ದು? ನೀಟ್ ಬಳಿಕ ಮತ್ತೊಂದು ವಿವಾದ ಎಬ್ಬಿಸಿದ ಜಾರ್ಖಂಡ್ ನಾಗರಿಕ ಸೇವಾ ಪರೀಕ್ಷೆ
ನೇಮಕಾತಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಮತ್ತು ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ (ಜೆಎಸ್‌ಎಸ್‌ಸಿ) ಪರೀಕ್ಷೆಯನ್ನು ರದ್ದುಗೊಳಿಸಬೇಕೆಂಬ ವಿದ್ಯಾರ್ಥಿಗಳ ಬೇಡಿಕೆಯನ್ನು ಪರಿಹರಿಸುವ ನಿಟ್ಟಿನಲ್ಲಿ ನಡೆದಿರುವ ಮಾತುಕತೆಗಳು ವಿಫಲವಾಗಿದೆ. ಸರ್ಕಾರ ತಮ್ಮ ಬೇಡಿಕೆಗಳನ್ನು ತಿರಸ್ಕರಿಸಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಮಾತುಕತೆಗೆ ಬರುವಂತೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅವರು ಮನವಿ ಮಾಡಿದರೂ ವಿಧಾನಸಭೆ ಮೆರವಣಿಗೆ ನಡೆಸುವುದಾಗಿ ಪ್ರತಿಭಟನಾಕಾರರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಂಚಿಯಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಭಾನುವಾರ ಮತ್ತು ಸೋಮವಾರ ನಡೆದಿರುವ ಹಲವು ಸುತ್ತಿನ ಮಾತುಕತೆಯ ಬಳಿಕ ಸರ್ಕಾರ ನಮ್ಮ ಬೇಡಿಕೆಗಳನ್ನು ಪೂರ್ತಿ ಈಡೇರಿಸುವ ಭರವಸೆ ನೀಡಿಲ್ಲ. ಜಾರ್ಖಂಡ್‌ನ ಎಲ್ಲಾ ಜಿಲ್ಲೆಗಳ ಆಕಾಂಕ್ಷಿಗಳು ಪ್ರತಿಭಟನೆಗೆ ನೈತಿಕ ಬೆಂಬಲ ನೀಡುತ್ತಿದ್ದಾರೆ. ಹಳೆಯ ವಿಧಾನಸಭಾ ಕಟ್ಟಡದಿಂದ ಹೊಸ ಕಟ್ಟಡಕ್ಕೆ ನಾವು ಹೆಚ್ಚಿನ ಸಂಖ್ಯೆಯಲ್ಲಿ ಸಂಪೂರ್ಣವಾಗಿ ಶಾಂತಿಯುತ ಮೆರವಣಿಗೆಯಾಗಿ ನಡೆಸುತ್ತೇವೆ ಎಂದು ಸಂಜಯ್ ಮೆಹ್ತಾ ತಿಳಿಸಿದ್ದಾರೆ.
ನಮ್ಮ ಬೇಡಿಕೆಗಳಲ್ಲಿ ಒಂದೇ ಒಂದು ಬೇಡಿಕೆಯನ್ನು ಸರ್ಕಾರ ಪೂರೈಸಲು ವಿಫಲವಾದರೂ ಕೂಡ ಅವು ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದ ಅವರುಪ್ರತಿಭಟನಾಕಾರರು ಒಗ್ಗಟ್ಟಿನಿಂದ ಮತ್ತು ಶಾಂತಿಯುತವಾಗಿ ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ವಿಧಾನಸಭೆಗೆ ಒಟ್ಟಾಗಿ ಮೆರವಣಿಗೆ ನಡೆಸಬೇಕು. ಪೊಲೀಸರೊಂದಿಗೆ ಘರ್ಷಣೆಗೆ ಇಳಿಯಬಾರದು. ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.
ಉಪವಾಸ ಸತ್ಯಾಗ್ರಹ
ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲವಾಗಿ ಕಳೆದ ಎಂಟು ದಿನಗಳಿಂದ ದೇವೇಂದ್ರ ನಾಥ್ ಮಹತೋ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಜಾರ್ಖಂಡ್‌ನಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸೋಮವಾರ ನಡೆಯಲಿರುವ ಮೆರವಣಿಗೆಯಲ್ಲಿ ಭಾಗವಹಿಸಲು ಕರೆ ನೀಡಿರುವ ಅವರು, ಆಗಸ್ಟ್ 10 ಜಾರ್ಖಂಡ್‌ಗೆ ಬಹಳ ಮುಖ್ಯವಾದ ದಿನ ಎಂದು ಹೇಳಿದ್ದಾರೆ.
ಉಪವಾಸ ಸತ್ಯಾಗ್ರಹ ಆರಂಭಿಸಿದ ಬಳಿಕ ಮಹತೋ ಅವರು 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದ್ದು, ತೀವ್ರ ನೋವಿನಿಂದ ಬಳಲುತ್ತಿದ್ದಾರೆ/ ಆದರೂ ಅವರು ಪ್ರಶ್ನೆಪತ್ರಿಕೆಗಳು ಸೋರಿಕೆಯಿಂದ ವಿದ್ಯಾರ್ಥಿಗಳಿಗೆ ಆಗುವ ನೋವು ನನ್ನ ದೈಹಿಕ ನೋವಿಗಿಂತ ದೊಡ್ಡದಾಗಿದೆ ಎಂದು ತಿಳಿಸಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ತಿಭಟನೆ ಸೋಮವಾರ 17 ನೇ ದಿನಕ್ಕೆ ಕಾಲಿಟ್ಟಿದ್ದು, ಆರು ವಿದ್ಯಾರ್ಥಿಗಳು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳಲ್ಲಿ ಶೇ.98 ರಷ್ಟು ಒಪ್ಪಿಕೊಂಡಿದ್ದೇವೆ ಏನು ಸರ್ಕಾರ ಹೇಳಿದ್ದು, ತಾವು ರದ್ದುಗೊಳಿಸಲು ಕೋರಿದ್ದ 13 ಪರೀಕ್ಷೆಗಳಲ್ಲಿ ಕೇವಲ ಮೂರನ್ನು ಮಾತ್ರ ರದ್ದುಗೊಳಿಸಲು ಸರ್ಕಾರ ಒಪ್ಪಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನೇತೃತ್ವದ ಸರ್ಕಾರವು ವಿದ್ಯಾರ್ಥಿಗಳ ಹೆಚ್ಚಿನ ಬೇಡಿಕೆಗಳಿಗೆ ಒಪ್ಪಿಕೊಂಡಿರುವುದಾಗಿ ಸಮರ್ಥಿಸಿಕೊಂಡಿದೆ. ಆದರೆ ಅವರು ಆಂದೋಲನವನ್ನು ಹಿಂತೆಗೆದುಕೊಳ್ಳಲು ಮತ್ತು ಮಾತುಕತೆಗಳನ್ನು ಮುಂದುವರಿಸಲು ಒಪ್ಪಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಸರ್ಕಾರದ ಭರವಸೆಗಳೇನು?
14ನೇ ಜೆಪಿಎಸ್‌ಸಿ ಪರೀಕ್ಷೆಯನ್ನು ರದ್ದುಗೊಳಿಸಲು ಒಪ್ಪಿಕೊಂಡಿರುವುದಾಗಿ ಹೇಳಿರುವ ಸರ್ಕಾರ, ಜೆಪಿಎಸ್‌ಸಿ ಪರೀಕ್ಷೆಯಲ್ಲಿನ ಹಣಕಾಸಿನ ಅಕ್ರಮಗಳ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆಯನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.ಈ ಕುರಿತು 90 ದಿನಗಳಲ್ಲಿ ಚಾರ್ಜ್‌ಶೀಟ್‌ಗಳನ್ನು ಸಲ್ಲಿಸುವ ಫಾಸ್ಟ್-ಟ್ರ್ಯಾಕ್ ಕೋರ್ಟ್ ಕಾರ್ಯವಿಧಾನವನ್ನು ಸಹ ಅದು ಘೋಷಿಸಿದೆ.
ಪರೀಕ್ಷೆ ಕ್ರಮಗಳಲ್ಲಿ ಸುಧಾರಣೆಗಾಗಿ ಸರ್ಕಾರವು ಐಐಟಿ-ಐಎಸ್ ಎಂ ಧನ್ಬಾದ್, ಐಐಎಂ ರಾಂಚಿ ಮತ್ತು ಎಕ್ಸ್ ಎಲ್ ಆರ್ ಐ ಜಮ್ಶೆಡ್‌ಪುರದ ಪ್ರತಿನಿಧಿಗಳನ್ನು ಒಳಗೊಂಡ ತಜ್ಞರ ಸಮಿತಿಯನ್ನು ರಚಿಸುವುದಾಗಿ ಹೇಳಿದೆ. ಅಲ್ಲದೇ ಜೆಎಸ್ ಎಸ್ ಸಿ-ಸಿಜಿಎಲ್ ಸಮಸ್ಯೆ ಪರಿಶೀಲಿಸಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿ ರಚಿಸುವ ಪ್ರಸ್ತಾಪವನ್ನು ಕೂಡ ವಿದ್ಯಾರ್ಥಿಗಳ ಮುಂದಿರಿಸಿದೆ.
ಪರೀಕ್ಷಾ ಸುಧಾರಣೆಗಳ ಕುರಿತು ವಿದ್ಯಾರ್ಥಿಗಳ ಸಲಹೆಗಳನ್ನು ಕೋರಿ ರಾಜ್ಯವು ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಇದು ಭವಿಷ್ಯದ ನೇಮಕಾತಿ ಪರೀಕ್ಷೆಗಳಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು ರೂಪಿಸಲಿದೆ. ಪರೀಕ್ಷೆಯ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿದ್ದು, ಪರೀಕ್ಷೆಯನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ ಎಂದು ಹೇಳಿದೆ.
ಜೆಪಿಎಸ್‌ಸಿ ಸದಸ್ಯರ ರಾಜೀನಾಮೆ
ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡ ಬಳಿಕ ಜಾರ್ಖಂಡ್ ಸಾರ್ವಜನಿಕ ಸೇವಾ ಆಯೋಗದ (ಜೆಪಿಎಸ್‌ಸಿ) ಮೂವರು ಸದಸ್ಯರು ಭಾನುವಾರ ರಾಜೀನಾಮೆ ನೀಡಿದರು. ಅಜೀತಾ ಭಟ್ಟಾಚಾರ್ಯ, ಅನಿಮಾ ಹನ್ಸ್‌ಡಾ ಮತ್ತು ಜಮಾಲ್ ಅಹ್ಮದ್ ಅವರ ರಾಜೀನಾಮೆಗಳನ್ನು ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಅಂಗೀಕರಿಸಿದ್ದಾರೆ ಎಂಬುದಾಗಿ ಲೋಕಭವನ ತಿಳಿಸಿದೆ.
ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ಆರೋಪಗಳಿಗೆ ಸಂಬಂಧಿಸಿದಂತೆ ಜಾರ್ಖಂಡ್ ಸಿಐಡಿ ಮೂವರು ಸದಸ್ಯರನ್ನು ವಿಚಾರಣೆಗೆ ಕರೆಸಿದ ಅನಂತರ ಅವರು ರಾಜೀನಾಮೆ ನೀಡಿದ್ದಾರೆ. ಜೆಎಂಎಂ ನಾಯಕ ಸುಪ್ರಿಯೋ ಭಟ್ಟಾಚಾರ್ಯ ಅವರ ಪತ್ನಿ ಭಟ್ಟಾಚಾರ್ಯ ಅವರನ್ನು ಆಗಸ್ಟ್ 10, ಅಹ್ಮದ್ ಅವರನ್ನು ಆಗಸ್ಟ್ 12 ಮತ್ತು ಹನ್ಸ್ದಾ ಅವರನ್ನು ಆಗಸ್ಟ್ 14ರಂದು ವಿಚಾರಣೆಗೆ ಒಳಪಡಿಸಲಾಗುವುದು. ಕಳೆದ ಜುಲೈ 22ರಂದು ಜೆಪಿಎಸ್‌ಸಿ ಅಧ್ಯಕ್ಷ ಎಲ್ ಖಿಯಾಂಗ್ಟೆ ರಾಜೀನಾಮೆ ನೀಡಿದ್ದರು. ಜೆಪಿಎಸ್‌ಸಿ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿ ಈವರೆಗೆ 19 ಜನರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಗಿ ಭದ್ರತೆ
ವಿದ್ಯಾರ್ಥಿಗಳ ಮುತ್ತಿಗೆ ಹಿನ್ನೆಲೆಯಲ್ಲಿ ಸೋಮವಾರ ರಾಂಚಿಯಾದ್ಯಂತ ಜಾರ್ಖಂಡ್ ಪೊಲೀಸರು ವ್ಯಾಪಕ ಭದ್ರತೆ ಕೈಗೊಂಡಿದ್ದಾರೆ. ವಿಧಾನಸಭೆ ಆವರಣದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎರಡು ವಾರಗಳ ಕಾಲ ನಡೆದ ಆಂದೋಲನದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಶಾಂತಿ ಮತ್ತು ಶಿಸ್ತನ್ನು ಈ ಸಂದರ್ಭದಲ್ಲಿ ಕೂಡ ಕಾಪಾಡಿಕೊಳ್ಳಲು ಪೊಲೀಸರು ಮನವಿ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ರಾಂಚಿ ಎಸ್‌ಎಸ್‌ಪಿ ರಾಕೇಶ್ ರಂಜನ್, ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವುದರಿಂದ ವಿದ್ಯಾರ್ಥಿಯ ವೃತ್ತಿಜೀವನದ ಮೇಲೆ ಕಳಂಕ ಉಂಟಾಗುತ್ತದೆ. ಇದು ಆಗಬಾರದು ಎಂದು ನಾವು ಬಯಸುತ್ತೇವೆ. ನಗರದಾದ್ಯಂತ ಸಾಕಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆಗಸ್ಟ್ 6 ರಿಂದ ಆಗಸ್ಟ್ 12 ರವರೆಗೆ ವಿಧಾನ ಸಭಾ ಕಟ್ಟಡದ 750 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.