ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಗೆ ತಾತ್ಕಾಲಿಕ ರಿಲೀಫ್‌; ಕಚೇರಿ ವಿರುದ್ಧದ ಬುಲ್ಡೋಜರ್ ಕ್ರಮಕ್ಕೆ ಹೈಕೋರ್ಟ್ ತಡೆ

ದಕ್ಷಿಣ 24 ಪರಗಣದ ಅಮ್ತಾಲಾದಲ್ಲಿರುವ ತೃಣ ಮೂಲ ಕಾಂಗ್ರೆಸ್ ಪಕ್ಷದ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಲೋಕಸಭಾ ಕ್ಷೇತ್ರದ ಕಚೇರಿಯ ಮೇಲೆ ಬುಲ್ಡೋಜರ್ ಕ್ರಮಕ್ಕೆ ಕೋಲ್ಕತ್ತಾ ಹೈಕೋರ್ಟ್ ತಡೆ ನೀಡಿದೆ. ಮುಂದಿನ ಆದೇಶದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿರುವುದರಿಂದ ಸದ್ಯಕ್ಕೆ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಅಭಿಷೇಕ್ ಬ್ಯಾನರ್ಜಿ ಬಿಗ್ ರಿಲೀಫ್ ನೀಡಿದ ಹೈಕೋರ್ಟ್

ಸಂಗ್ರಹ ಚಿತ್ರ -

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದ (TMC MP), ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ (Abhishek Banerjee) ಅವರ ಸಂಸದ ಕಚೇರಿಯನ್ನು (MP office) ತೆರವುಗೊಳಿಸಲು ಶನಿವಾರ ಬುಲ್ಡೋಜರ್ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಇದೀಗ ಅವರಿಗೆ ಕೋಲ್ಕತ್ತಾ ಹೈಕೋರ್ಟ್ (Calcutta High Court) ಬಿಗ್ ರಿಲೀಫ್ ನೀಡಿದೆ. ಸದ್ಯಕ್ಕೆ ಕಟ್ಟಡ ಕೆಡವುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಲಾಗಿದ್ದು, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಅಮ್ತಾಲಾ ಸಂಸದ ಕಚೇರಿಯನ್ನು ಕೆಡವುವ ಕಾರ್ಯಾಚರಣೆಯನ್ನು ಸದ್ಯಕ್ಕೆ ನಿಲ್ಲಿಸುವಂತೆ ಕೋಲ್ಕತ್ತಾ ಹೈಕೋರ್ಟ್ ಆದೇಶಿಸಿದೆ. ಮುಂದಿನ ವಿಚಾರಣೆಯವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತುರ್ತು ಮನವಿ ಮೇರೆಗೆ ನಿರ್ದೇಶನ ನೀಡಿದೆ.

ಬೆತ್ತಲಾಗಿ ದೇವಸ್ಥಾನದೊಳಗೆ ಪ್ರವೇಶಿಸಿ ವಿಗ್ರಹದ ಜತೆಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ; 1 ಲಕ್ಷ ರುಪಾಯಿ ಮನೆ ಬಾಡಿಗೆ ಪಾವತಿಸುತ್ತಿದ್ದವಳು ಇದ್ದಕ್ಕಿದ್ದಂತೆ ಸಾವಿಗೆ ಶರಣಾಗಿದ್ದು ಏಕೆ?

ಪಶ್ಚಿಮ ಬಂಗಾಳ ಪೊಲೀಸರು ಕಾನೂನು ಬಾಹಿರವಾಗಿ ಕಚೇರಿ ಧ್ವಂಸ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ಅವರ ಕಂಪನಿ ಲೀಪ್ಸ್ ಅಂಡ್ ಬೌಂಡ್ಸ್ ಬುಲ್ಡೋಜರ್ ಕ್ರಮದ ವಿರುದ್ಧ ತುರ್ತು ಹಸ್ತಕ್ಷೇಪ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.

ಅರ್ಜಿದಾರರು ಮಾನ್ಯ ಭೂ ದಾಖಲೆಗಳನ್ನು ಹೊಂದಿದ್ದಾರೆ ಎಂದು ಹೇಳಿಕೊಂಡರೂ ಕಚೇರಿ ಧ್ವಂಸ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಹೀಗಾಗಿ ಈ ಕುರಿತು ತುರ್ತು ವಿಚಾರಣೆ ನಡೆಸುವಂತೆ ನ್ಯಾಯಮೂರ್ತಿ ರಾಜಾ ಬಸು ಚೌಧರಿ ಅವರ ಪೀಠದ ಮುಂದೆ ಕಂಪೆನಿಯು ಮನವಿ ಮಾಡಿತ್ತು.

ತಮ್ಮ ಕಚೇರಿ ಧ್ವಂಸದ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಬರೆದಿರುವ ಅಭಿಷೇಕ್ ಬ್ಯಾನರ್ಜಿ, ಪಶ್ಚಿಮ ಬಂಗಾಳ ಪೊಲೀಸರು ಕಾನೂನುಬಾಹಿರವಾಗಿ ವರ್ತಿಸಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ ಆವರಣದಿಂದ ಬೆಲೆಬಾಳುವ ವಸ್ತುಗಳನ್ನು ತೆಗೆದುಹಾಕಲಾಗಿದೆ. ಬುಲ್ಡೋಜರ್ ಕ್ರಮ ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತೀರ್ಪುಗಳ ಹೊರತಾಗಿಯೂ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ ಎಂದು ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ಪಕ್ಷವು ಇದು ಬಿಜೆಪಿ ನಾಯಕರ ಸಮ್ಮುಖದಲ್ಲಿಯೇ ನಡೆದಿದೆ. ಪ್ರಕರಣ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದ್ದರೂ ಕೂಡ ತರಾತುರಿಯಲ್ಲಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಅಮ್ತಾಲಾ ಸಂಸದ ಕಚೇರಿಯನ್ನು ಕೆಡವುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದೆ.

Viral Video: ಯೋಧ ಯಾವತ್ತಿದ್ದರೂ ಯೋಧನೇ; ಚಾರ್ಜ್‌ ಖಾಲಿಯಾದ ಮಹಿಳೆಯ ಎಲೆಕ್ಟ್ರಿಕ್‌ ಕಾರ್‌ ತಳ್ಳಿದ ಸೈನಿಕ

ಕಚೇರಿ ಧ್ವಂಸದ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಪೊಲೀಸ್ ಸಿಬ್ಬಂದಿ ಲ್ಯಾಪ್‌ಟಾಪ್‌, ಪ್ರಿಂಟರ್‌, ದಾಖಲೆಗಳು, ಪೀಠೋಪಕರಣಗಳು ಮತ್ತು ಇತರ ಕಚೇರಿ ಉಪಕರಣಗಳನ್ನು ಜೊತೆಗೆ ಕೊಂಡೊಯ್ಯುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಧ್ವಂಸವಲ್ಲ ಬದಲಾಗಿ ಸಮವಸ್ತ್ರದಲ್ಲಿ ಕಳ್ಳತನ ಎಂದು ಹೇಳಿದೆ.