ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Faridabad Terror Module: ದೆಹಲಿ ಸ್ಫೋಟದ ಹಿಂದೆ ಫರಿದಾಬಾದ್‌ನಲ್ಲಿ ಸೆರೆಸಿಕ್ಕ ಭಯೋತ್ಪಾದಕರ ಕೈವಾಡ?

Delhi Blast: ನವೆಂಬರ್‌ 10ರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಆತ್ಮಹತ್ಯಾ ಬಾಂಬರ್‌ಗಳು ಕಾರು ಸ್ಫೋಟಿಸಿ 10ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದ ಪ್ರಕರಣಕ್ಕೂ ಹರಿಯಾಣದ ಫರಿದಾಬಾದ್‌ನಲ್ಲಿ ಬರೋಬ್ಬರಿ 2,900 ಕೆಜಿ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೂ ಸಂಬಂಧವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ದೆಹಲಿ ಸ್ಫೋಟಕ್ಕೆ ಫರಿದಾಬಾದ್‌ನಲ್ಲಿ ಸಂಚು?

ಫರಿದಾಬಾದ್‌ನಲ್ಲಿ ಬಂಧಿತರಾದ ಡಾ. ಮುಜಮ್ಮಿಲ್ ಗನೈ, ಡಾ. ಅದೀಲ್ ಅಹ್ಮದ್ ರಾಥರ್ ಮತ್ತು ಡಾ. ಶಾಹೀನ್ ಸಯೀದ್ -

Ramesh B
Ramesh B Nov 11, 2025 4:13 PM

ದೆಹಲಿ, ನ. 11: ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಬಳಿಕ ಇದೀಗ ಮತ್ತೊಂದು ಬೃಹತ್‌ ಪ್ರಮಾಣದ ಆಕ್ರಮಣ ನಡೆದಿದೆ (Delhi Blast). ನವೆಂಬರ್‌ 10ರ ಸಂಜೆ ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪುಕೋಟೆ ಬಳಿ ಆತ್ಮಹತ್ಯಾ ಬಾಂಬರ್‌ಗಳು ಕಾರು ಸ್ಫೋಟಿಸಿ 10ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದ್ದಾರೆ. ಸದ್ಯ ತನಿಖೆ ಚುರುಕುಗೊಂಡಿದ್ದು, ಒಂದೊಂದೇ ರಹಸ್ಯ ಹೊರ ಬೀಳುತ್ತಿದೆ. ಹರಿಯಾಣದ ಫರಿದಾಬಾದ್‌ನಲ್ಲಿ ಬರೋಬ್ಬರಿ 2,900 ಕೆಜಿ ಸ್ಫೋಟಕ ಪತ್ತೆಯಾದ ಪ್ರಕರಣದಲ್ಲಿ ಪೊಲೀಸರು ಇದೀಗ ಮೂವರು ವೈದ್ಯರನ್ನು ಬಂಧಿಸಿದ್ದು (Faridabad Terror Module), ಇವರಿಗೂ ದೆಹಲಿ ಸ್ಫೋಟಕ್ಕೂ ನಂಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಸ್ಫೋಟಕ ಸಂಗ್ರಹಿಸಿದ ಆರೋಪದಲ್ಲಿ ಬಂಧಿತರಾದ ಮೂವರು ವೈದ್ಯರ ಪೈಕಿ ಇಬ್ಬರು ಜಮ್ಮು ಮತ್ತು ಕಾಶ್ಮೀರ ಮೂಲದವರು. ಬಂಧಿತ ಮೂವರನ್ನು ಡಾ. ಮುಜಮ್ಮಿಲ್ ಗನೈ, ಡಾ. ಅದೀಲ್ ಅಹ್ಮದ್ ರಾಥರ್ ಮತ್ತು ಡಾ. ಶಾಹೀನ್ ಸಯೀದ್ ಎಂದು ಗುರುತಿಸಲಾಗಿದೆ.

ಕೆಂಪು ಕೋಟೆ ಬಳಿ ಸ್ಫೋಟ ನಡೆಯುವ ಕೆಲವೇ ಗಂಟೆಗಳ ಮೊದಲು ಹರಿಯಾಣದ ಫರಿದಾಬಾದ್‌ನಲ್ಲಿರುವ ಡಾ. ಮುಜಮ್ಮಿಲ್ ಗನೈಯ ಬಾಡಿಗೆ ಮನೆಯಿಂದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಈ ಸುದ್ದಿಯನ್ನೂ ಓದಿ: Delhi Blast: ಆಪರೇಷನ್‌ ಸಿಂದೂರ್‌ ಆನ್‌; ದೆಹಲಿ ಸ್ಫೋಟದ ಬೆನ್ನಲ್ಲೇ ಉಗ್ರರಿಗೆ ಖಡಕ್‌ ಸಂದೇಶ

ಫರಿದಾಬಾದ್‌ನಲ್ಲಿ ಪತ್ತೆಯಾದ ಭಯೋತ್ಪಾದಕ ಮಾಡ್ಯೂಲ್‌ಗೂ ಕೆಂಪು ಕೋಟೆ ಸಮೀಪ ನಡೆದ ಕಾರು ಸ್ಫೋಟಕ್ಕೂ ನೇರ ಸಂಪರ್ಕವಿದೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದಾಗ್ಯೂ ತನಿಖಾ ಸಂಸ್ಥೆಗಳು ಇನ್ನೂ ಈ ವಿಚಾರವನ್ನು ದೃಢಪಡಿಸಿಲ್ಲ.

ʼʼಜಮ್ಮು ಮತ್ತು ಕಾಶ್ಮೀರ, ಹರಿಯಾಣ ಮತ್ತು ಉತ್ತರ ಪ್ರದೇಶದಾದ್ಯಂತ ವ್ಯಾಪಿಸಿರುವ ಜೈಶ್-ಎ-ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಸಂಘಟನೆಯ ಭಯೋತ್ಪಾದನಾ ಮಾಡ್ಯೂಲ್‌ನ ಭಾಗವಾಗಿದ್ದಾರೆ ಎಂಬ ಆರೋಪದ ಮೇಲೆ ಈಗಾಗಲೇ ಡಾ. ಮುಜಮ್ಮಿಲ್ ಸೇರಿದಂತೆ 8 ಜನರನ್ನು ಬಂಧಿಸಲಾಗಿದೆʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾರು ಈ ಡಾ. ಮುಜಮ್ಮಿಲ್ ಗನೈ?

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ನಿವಾಸಿ ಡಾ. ಮುಜಮ್ಮಿಲ್ ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್‌ನ ಉದ್ಯೋಗಿಯಾಗಿದ್ದ. ಫರಿದಾಬಾದ್‌ನಲ್ಲಿರುವ ಆತನ ನಿವಾಸದಿಂದ ಪೊಲೀಸರು 360 ಕೆಜಿ ಅಮೋನಿಯಂ ನೈಟ್ರೇಟ್ ಮತ್ತು 2,500 ಕೆಜಿ ಸ್ಫೋಟಕ ತಯಾರಿಸುವ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ಜತೆಗೆ 1 ಕ್ಯಾರಮ್ ಕಾಕ್ ರೈಫಲ್, 2 ಸ್ವಯಂಚಾಲಿತ ಪಿಸ್ತೂಲ್‌ ಮತ್ತು 84 ಕಾರ್ಟ್ರಿಡ್ಜ್‌ ಪತ್ತೆಯಾಗಿದೆ.

ಡಾ. ಅದೀಲ್ ಅಹ್ಮದ್ ರಾಥರ್ ಹಿನ್ನೆಲೆ?

ಅದೀಲ್ ಅಹ್ಮದ್ ರಾಥರ್ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯವನಾಗಿದ್ದು, ಕೆಲವು ವರ್ಷಗಳಿಂದ ಫರಿದಾಬಾದ್‌ನ ಅಲ್-ಫಲಾಹ್ ಸ್ಕೂಲ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್‌ನಲ್ಲಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಶ್ರೀನಗರದಲ್ಲಿ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಅನ್ನು ಬೆಂಬಲಿಸುವ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಆತನೇ ಡಾ. ಮುಜಮ್ಮಿಲ್ ಗನೈ ಬಗ್ಗೆ ಮಾಹಿತಿ ನೀಡಿದ್ದ.

ಈ ಸುದ್ದಿಯನ್ನೂ ಓದಿ: Delhi Blast: ಓದಿದ್ದು MBBS ಆದದ್ದು ಭಯೋತ್ಪಾದಕ; ಆತ್ಮಾಹುತಿ ಬಾಂಬರ್‌ ಡಾ. ಉಮರ್‌ನ ಹಿಸ್ಟರಿ ಕೇಳಿದ್ರೆ ರಕ್ತ ಕುದಿಯುತ್ತೆ

ವೈದ್ಯೆ ಡಾ. ಶಾಹೀನ್ ಸಯೀದ್ ಯಾರು?

ಇನ್ನು ಇವರಿಗೆ ನೆರವಾಗುತ್ತಿದ್ದ ವೈದ್ಯೆ ಡಾ. ಶಾಹೀನ್ ಸಯೀದ್ ಉತ್ತರ ಪ್ರದೇಶದ ಲಖನೌ ನಿವಾಸಿ. ಆಕೆ ಕೂಡ ಅಲ್-ಫಲಾಹ್ ಸೆಂಟರ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಳು. ಆಕೆಯ ಕಾರಿನಲ್ಲಿ ಕಾರಿನಲ್ಲಿ ಕ್ರಿಂಕೋವ್ ಅಸಾಲ್ಟ್ ರೈಫಲ್ ಪತ್ತೆಯಾಗಿದ್ದು, ಇದನ್ನು ಡಾ. ಮುಜಮ್ಮಿಲ್ ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಸ್ಫೋಟದ ರೂವಾರಿ ಡಾ. ಉಮರ್ ಮೊಹಮ್ಮದ್ ಜತೆ ಸಂಬಂಧ ಹೊಂದಿದ್ದ ಡಾ. ಶಾಹೀನ್ ಸಯೀದ್ ಆತನೊಂದಿಗೆ ಸೇರಿ ಸಂಚು ರೂಪಿಸಿದ್ದಳು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ತನಿಖೆ ಮುಂದುವರಿದಿದೆ.