ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

‘ʼಅವರು ನನ್ನನ್ನು ಕೊಲ್ಲಬಹುದು, ಬಂಧಿಸಬಹುದು, ಆದರೂ ಬಾಂಗ್ಲಾದೇಶಕ್ಕೆ ಮರಳುತ್ತೇನೆʼʼ; ಸ್ವದೇಶ ಪ್ರಯಾಣ ಖಚಿತಪಡಿಸಿದ ಶೇಖ್ ಹಸೀನಾ

Sheikh Hasina: ʼʼನಾನು ಈ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ತೆರಳುತ್ತೇನೆ. ನಾನು ಯಾವುದಕ್ಕೂ ಭಯಪಡುವುದಿಲ್ಲ. ನನ್ನನ್ನು ಬಾಂಗ್ಲಾದೇಶ ಸರ್ಕಾರ ಹತ್ಯೆ ಮಾಡಬಹುದು, ಬಂಧಿಸಬಹುದು ಅಥವಾ ಹಿಂಸೆ ನೀಡಬಹುದು. ಅದೇನೇ ಇದ್ದರೂ ಸ್ವದೇಶಕ್ಕೆ ಮರಳುವುದು ನನ್ನ ಕರ್ತವ್ಯʼʼ ಎಂದು‌ ಭಾರತದಲ್ಲಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್‌ ಹಸೀನಾ ತಿಳಿಸಿದ್ದಾರೆ.

ಬಾಂಗ್ಲಾದೇಶಕ್ಕೆ ಮರಳುವುದನ್ನು ಖಚಿತಪಡಿಸಿದ ಶೇಖ್ ಹಸೀನಾ

ಶೇಕ್‌ ಹಸೀನಾ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Oct 20, 2026 4:32 PM

ದೆಹಲಿ, ಅ. 20: ಸುಮಾರು 2 ವರ್ಷಗಳಿಂದ ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ (Sheikh Hasina) ಶೀಘ್ರದಲ್ಲೇ ಸ್ವದೇಶಕ್ಕೆ ಮರಳುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಬಾಂಗ್ಲಾದೇಶಕ್ಕೆ ಮರಳುವುದು ಕರ್ತವ್ಯ ಎಂದು ತಿಳಿಸಿದ ಅವರು ತಮ್ಮ ಮೇಲೆ ದಾಳಿ ನಡೆಯುವ ಸಾಧ್ಯತೆ ಇರುವುದಾಗಿಯೂ ಹೇಳಿದ್ದಾರೆ. ಅಲ್ಲಿಗೆ ಕಾಲಿಡುತ್ತಿದ್ದಂತೆ ತಾರಿಕ್‌ ರೆಹಮಾನ್‌ ನೇತೃತ್ವದ ಸರ್ಕಾರ ತಮ್ಮನ್ನು ಬಂಧಿಸಬಹುದು, ಹತ್ಯೆ ಮಾಡಬಹುದು ಇಲ್ಲವೇ ಹಿಂಸೆ ನೀಡಬಹುದು. ಅದೇನೆ ಇರಲಿ ತಾವು ಸ್ವದೇಶಕ್ಕೆ ಮರಳುವುದಾಗಿ ಹೇಳಿದ್ದಾರೆ.

2024ರಲ್ಲಿ ಬಾಂಗ್ಲಾದೇಶದಲ್ಲಿ ಶೇಖ್‌ ಹಸೀನಾ ಮತ್ತು ಅವರ ಪಕ್ಷ ಅವಾಮಿ ಲೀಗ್‌ ವಿರುದ್ದ ದಂಗೆ ಭುಗಿಲೆದ್ದಾಗ ಅವರು ಆಶ್ರಯ ಕೋರಿ ಭಾರತಕ್ಕೆ ಬಂದಿದ್ದರು. ಅದಾದ ಬಳಿಕ ಅವರು ಇಲ್ಲೇ ವಾಸವಾಗಿದ್ದಾರೆ.

ಶೇಖ್‌ ಹಸೀನಾ ಹೇಳಿದ್ದೇನು?

ಬಾಂಗ್ಲಾದೇಶಕ್ಕೆ ಮರಳುವುದರಿಂದ ಅಪಾಯ ಎದುರಾಗಲಿದೆ ಎಂದು ಗೊತ್ತಿದ್ದರೂ ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ. ʼʼನಾನು ಈ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶಕ್ಕೆ ತೆರಳುತ್ತೇನೆ. ನಾನು ಯಾವುದಕ್ಕೂ ಭಯಪಡುವುದಿಲ್ಲ. ನನ್ನನ್ನು ಬಾಂಗ್ಲಾದೇಶ ಸರ್ಕಾರ ಹತ್ಯೆ ಮಾಡಬಹುದು, ಬಂಧಿಸಬಹುದು ಅಥವಾ ಹಿಂಸೆ ನೀಡಬಹುದು. ಅದೇನೇ ಇದ್ದರೂ ಸ್ವದೇಶಕ್ಕೆ ಮರಳುವುದು ನನ್ನ ಕರ್ತವ್ಯʼʼ ಎಂದು ಅವರು ಹೇಳಿದ್ದಾರೆ. ʼʼಯಾವ ಅಪಾಯದ ಪರಿಸ್ಥಿತಿ ಬಂದರೂ ನಾನು ಎದೆಗುಂದುವುದಿಲ್ಲ. ನಾನು ನನ್ನ ದೇಶಕ್ಕೆ ಹೋಗುತ್ತೇನೆʼʼ ಎಂದು ಸ್ಪಷ್ಟಪಡಿಸಿದ್ದಾರೆ.

ʼʼಈ ವರ್ಷ ಸ್ವದೇಶಕ್ಕೆ ಮರಳುತ್ತೇನೆʼʼ: ಭಾರತದಲ್ಲಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಘೋಷಣೆ

ಶೇಕ್‌ ಹಸೀನಾ ಬಾಂಗ್ಲಾದೇಶಕ್ಕೆ ಹಿಂದಿರುಗುವ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಅವರ ಪುತ್ರ ಸಜೀಬ್‌ ವಾಝೇದ್‌ ಮಾಹಿತಿ ನೀಡಿದ್ದಾರೆ. ಡಿಸೆಂಬರ್‌ ಆರಂಭದಲ್ಲಿ ದಿನಾಂಕ ಪ್ರಕಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ ಶೇಕ್‌ ಹಸೀನಾ

ಇದೇ ವೇಳೆ ಶೇಕ್‌ ಹಸೀನಾ ತಮಗೆ ಆಶ್ರಯ ನೀಡಿದ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. 1975ರ ಮಿಲಿಟರಿ ಕಾರ್ಯಾಚರಣೆಯ ವೇಳೆ ತಾವು ಮತ್ತು ಸಹೋದರಿ ಪಾರಾದ ಘಟನೆಯನ್ನು ಈ ವೇಳೆ ಅವರು ಸ್ಮರಿಸಿಕೊಂಡಿದ್ದಾರೆ. 1975ರಲ್ಲಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಮಿಲಿಟರಿ ದಂಗೆಯಲ್ಲಿ ಶೇಕ್‌ ಹಸೀನಾ ಅವರ ತಂದೆ ಶೇಕ್‌ ಮುಜಿಬರ್‌ ರೆಹಮಾನ್‌, ಅವರ ಪತ್ನಿ, ಮೂವರು ಮಕ್ಕಳು ಮತ್ತು ಕುಟುಂಬಸ್ಥರನ್ನು ಸಾಮೂಹಿಕ ಹತ್ಯೆ ಮಾಡಲಾಗಿತ್ತು. ಈ ವೇಳೆ ಶೇಕ್‌ ಹಸೀನಾ ಪಾರಾಗಿದ್ದರು.

ಬಾಂಗ್ಲಾದೇಶದಲ್ಲಿನ ಪ್ರಸ್ತುತ ಸರ್ಕಾರ ತಮ್ಮ ಹಾಗೂ ತಮ್ಮ ಬಾಂಗ್ಲಾದೇಶ ಅವಾಮಿ ಲೀಗ್‌ (BAL) ಪಕ್ಷದ ವಿರುದ್ಧ ಕಾನೂನು ಬಾಹಿರವಾಗಿ ಕ್ರಮ ಕೈಗೊಳ್ಳುತ್ತಿದೆ ಎಂದೂ ಆರೋಪಿಸಿದ್ದಾರೆ. ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ.

ಶೇಕ್‌ ಹಸೀನಾ ಸುದ್ದಿಗೋಷ್ಠಿಯಿಂದ ಅಂತರ ಕಾಯ್ದುಕೊಂಡ ಭಾರತ

2024ರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳನ್ನು ಅವರ ಸರ್ಕಾರ ಕ್ರೂರವಾಗಿ ಹತ್ತಿಕ್ಕಿದೆ ಎನ್ನುವ ಆರೋಪದ ಮೇಲೆ 2025ರ ನವೆಂಬರ್‌ನಲ್ಲಿ ಢಾಕಾದ ವಿಶೇಷ ನ್ಯಾಯಮಂಡಳಿಯು ಹಸೀನಾ ಅವರಿಗೆ ಮರಣದಂಡನೆ ವಿಧಿಸಿತ್ತು. ಈ ತೀರ್ಪಿನ ನಂತರ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಭಾರತದ ಮೇಲೆ ಒತ್ತಡ ಹೇರುತ್ತಿದೆ. ಈ ವಿಚಾರವನ್ನು ಪರಿಶೀಲಿಸುವುದಾಗಿ ಭಾರತ ಹೇಳಿದೆ. ಈ ಮಧ್ಯೆ ಜೂನ್‌ನಲ್ಲಿ ಹಸೀನಾ ಬಾಂಗ್ಲಾದೇಶಕ್ಕೆ ಮರಳುವುದಾಗಿ ಪ್ರಕಟಿಸಿದ್ದರು.

ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.