ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ಧಂತೆ ಜನರಿಂದ ಪಡೆದ ಲಂಚದ ಹಣ ವಾಪಸ್‌ ನೀಡುತ್ತಿರುವ ಟಿಎಂಸಿ ನಾಯಕರು

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕರು ಸರ್ಕಾರಿ ಯೋಜನೆಗಳ ಹೆಸರಿನಲ್ಲಿ ಜನರಿಂದ ಪಡೆದಿದ್ದ ‘ಕಟ್‌ ಮನಿ’ ಅಥವಾ ಕಮಿಷನ್ ಹಣವನ್ನು ಮರಳಿಸಲು ಆರಂಭಿಸಿರುವ ವಿಡಿಯೋಗಳು ವೈರಲ್ ಆಗಿವೆ. ಕೆಲವು ಕಡೆ ನಾಯಕರು ಸಾರ್ವಜನಿಕವಾಗಿ ಹಣ ಹಿಂದಿರುಗಿಸುತ್ತಿದ್ದರೆ, ಬಂಧನ ಭೀತಿ ಹಾಗೂ ಜನರ ಆಕ್ರೋಶದಿಂದ ಕೆಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಟಿಎಂಸಿ ಪಕ್ಷದೊಳಗೂ ಭಿನ್ನಮತ ಹೆಚ್ಚಾಗಿದ್ದು, ಪಕ್ಷ ವಿಭಜನೆಯ ಚರ್ಚೆಯೂ ಜೋರಾಗಿದೆ.

ಕಮಿಷನ್ ಹಣ ಹಿಂದಿರುಗಿಸಿದ ಟಿಎಂಸಿ ಮುಖಂಡರು

ಫಲಾನುಭವಿಗಳಿಗೆ ಹಣ ಹಿಂದಿರುಗಿಸುತ್ತಿರುವ ಟಿಎಂಸಿ ನಾಯಕರು -

Profile
Sushmitha Jain Jun 3, 2026 3:51 PM

ಕೋಲ್ಕತಾ, ಜೂ. 3: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬೆಳವಣಿಗೆಗಳು (West Bengal Politics) ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿವೆ. ಸರ್ಕಾರದ ಕಠಿಣ ಕ್ರಮ ಹಾಗೂ ಜನರ ಆಕ್ರೋಶದ ಭೀತಿಯಿಂದಾಗಿ ಟಿಎಂಸಿ ನಾಯಕರೇ (TMC leaders) ಹಿಂದೆ ಜನರಿಂದ ಪಡೆದಿದ್ದ 'ಕಟ್ ಮನಿ' (Cut Money) ಅಥವಾ ಕಮಿಷನ್ ಹಣವನ್ನು ಈಗ ಸಾರ್ವಜನಿಕವಾಗಿ ಹಿಂತಿರುಗಿಸುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಯೋಜನೆಗಳ ಸೌಲಭ್ಯ ಒದಗಿಸುವ ಭರವಸೆ ನೀಡಿ ಕೆಲ ಟಿಎಂಸಿ ನಾಯಕರು ಮತ್ತು ಕಾರ್ಯಕರ್ತರು ಫಲಾನುಭವಿಗಳಿಂದ ಹಣ ಸಂಗ್ರಹಿಸಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಈಗ ಅಧಿಕಾರ ಬದಲಾದ ನಂತರ, ಆ ಹಣವನ್ನು ವಾಪಸ್ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ದಕ್ಷಿಣ 24 ಪರಗಣ ಜಿಲ್ಲೆಯ ನಾಮ್‌ಖಾನಾ ಪ್ರದೇಶದಲ್ಲಿ ಸ್ಥಳೀಯ ಟಿಎಂಸಿ ನಾಯಕರೊಬ್ಬರು, ಪ್ರಧಾನ ಮಂತ್ರಿ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸುವುದಾಗಿ ಹೇಳಿ 45 ಜನರಿಂದ ತಲಾ 5,000 ರುಪಾಯಿ ಪಡೆದಿದ್ದರು ಎನ್ನಲಾಗಿದೆ. ಇದೀಗ ಅದೇ ಹಣವನ್ನು ಸಾರ್ವಜನಿಕವಾಗಿ ಎಲ್ಲ ಫಲಾನುಭವಿಗಳಿಗೆ ಹಿಂತಿರುಗಿಸಿರುವುದು ಗಮನ ಸೆಳೆದಿದೆ.

ವೈರಲ್‌ ವಿಡಿಯೊ ಇಲ್ಲಿದೆ:



ಅದೇ ರೀತಿ, ಪಚಗಢ ಗ್ರಾಮ ಪಂಚಾಯತ್ ವ್ಯಾಪ್ತಿಯ ಫಕೀರರ್ ಕುಥಿ ಪ್ರದೇಶದಲ್ಲಿ ಪಂಚಾಯತ್ ಸದಸ್ಯರೊಬ್ಬರು ಶಾಲಾ ಮೈದಾನದಲ್ಲಿ ಗ್ರಾಮಸ್ಥರನ್ನು ಸೇರಿಸಿ ಕಮಿಷನ್ ರೂಪದಲ್ಲಿ ಪಡೆದ ಹಣವನ್ನು ಮರಳಿಸಿದ್ದಾರೆ. ಕೆಲವು ಕಡೆ ಆರೋಪ ಎದುರಿಸುತ್ತಿರುವ ಟಿಎಂಸಿ ನಾಯಕರು ತಲೆಮರೆಸಿಕೊಂಡಿದ್ದು, ಅವರ ಕುಟುಂಬಸ್ಥರೇ ಹಣವನ್ನು ಹಿಂದಿರುಗಿಸುತ್ತಿರುವ ಘಟನೆಗಳೂ ವರದಿಯಾಗಿವೆ.

ಕೇರಳಂ ವಿಧಾನಸಭೆಯಲ್ಲೂ ಮೊಳಗಿದ ಕನ್ನಡ; ಬಸವಣ್ಣನ ವಚನ ವಾಚಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ ಶಾಸಕ ಅಶ್ರಫ್

ಇತ್ತೀಚೆಗೆ ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಕೆಲ ಟಿಎಂಸಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಕೆಲವರ ಬಂಧನವೂ ಆಗಿದೆ . ಇದರಿಂದ ಕಾನೂನು ಕ್ರಮದ ಭೀತಿ ಹೆಚ್ಚಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಟಿಎಂಸಿಯಲ್ಲಿ ಭಿನ್ನಮತ?

ಇದರ ನಡುವೆ ಟಿಎಂಸಿ ಪಕ್ಷದೊಳಗಿನ ಅಸಮಾಧಾನವೂ ಬಹಿರಂಗವಾಗುತ್ತಿದೆ. ಉಚ್ಚಾಟಿತ ನಾಯಕರು ಪಕ್ಷದಲ್ಲಿ ದೊಡ್ಡ ಮಟ್ಟದ ಭಿನ್ನಮತವಿದೆ ಎಂದು ಹೇಳುತ್ತಿದ್ದು, ಶಿವಸೇನೆ ಮಾದರಿಯಲ್ಲಿ ಟಿಎಂಸಿಯಲ್ಲೂ ವಿಭಜನೆಯ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೆಲವು ನಾಯಕರು ಪಕ್ಷದೊಳಗೆ ಪ್ರತ್ಯೇಕ ಬಣ ರೂಪುಗೊಂಡಿದೆ ಎಂದು ಹೇಳಿಕೊಳ್ಳುತ್ತಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

‘ಕಟ್ ಮನಿ’ ಎಂದರೇನು?

ಸರ್ಕಾರದ ಯೋಜನೆಗಳ ಲಾಭ ಪಡೆಯಲು ಫಲಾನುಭವಿಗಳಿಂದ ಕಮಿಷನ್ ಅಥವಾ ಶುಲ್ಕದ ಹೆಸರಿನಲ್ಲಿ ಹಣ ಪಡೆಯುವ ಪದ್ಧತಿಯನ್ನು ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯವಾಗಿ ʼಕಟ್ ಮನಿʼ ಎಂದು ಕರೆಯಲಾಗುತ್ತದೆ. ಮಮತಾ ಬ್ಯಾನರ್ಜಿ ಆಡಳಿತದ ಅವಧಿಯಲ್ಲಿ ಈ ಆರೋಪಗಳು ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು. ಈಗ ಅದೇ ಹಣವನ್ನು ಕೆಲ ನಾಯಕರು ಹಿಂದಿರುಗಿಸುತ್ತಿರುವುದು ಹೊಸ ರಾಜಕೀಯ ಬೆಳವಣಿಗೆಯಾಗಿ ಗಮನ ಸೆಳೆದಿದೆ.