ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕಕ್ಕೆ ತೆರಳಲು 'ಕತ್ತೆ ಮಾರ್ಗ'ದ ಆಯ್ಕೆ: ಅಜೆರ್ಬೈಜಾನ್‌ನಲ್ಲಿ ಇಬ್ಬರು ಭಾರತೀಯರ ಅಪಹರಣ, ಲೈವ್ ಸ್ಟ್ರೀಮ್‌ನಲ್ಲೇ ಚಿತ್ರಹಿಂಸೆ

ಅಮೆರಿಕಕ್ಕೆ ಅಕ್ರಮವಾಗಿ ತೆರಳಲು ಬಳಸಲಾಗುವ ‘ಕತ್ತೆ ಮಾರ್ಗ’ದ ಮೂಲಕ ಪ್ರಯಾಣಿಸುತ್ತಿದ್ದ ಇಬ್ಬರು ಭಾರತೀಯರು ಅಜೆರ್ಬೈಜಾನ್‌ನಲ್ಲಿ ಅಪಹರಣಕ್ಕೊಳಗಾಗಿದ್ದಾರೆ. ಅಪಹರಣಕಾರರು ಅವರನ್ನು ಬಂಧಿಸಿ ಚಿತ್ರಹಿಂಸೆ ನೀಡಿದ ದೃಶ್ಯಗಳನ್ನು ಲೈವ್ ಸ್ಟ್ರೀಮ್ ಮಾಡಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಘಟನೆ ಅಕ್ರಮ ವಲಸೆ ಮಾರ್ಗಗಳ ಅಪಾಯವನ್ನು ಮತ್ತೊಮ್ಮೆ ಬಯಲಿಗೆಳೆದಿದೆ.

ಅಜೆರ್ಬೈಜಾನ್‌ನಲ್ಲಿ ಇಬ್ಬರು ಭಾರತೀಯರ ಅಪಹರಣ; ಚಿತ್ರಹಿಂಸೆ

ಸಾಂದರ್ಭಿಕ ಚಿತ್ರ -

Profile
Sushmitha Jain Feb 12, 2026 11:10 PM

ನವದೆಹಲಿ, ಫೆ. 12: ಅಕ್ರಮವಾಗಿ ಅಮೆರಿಕಕ್ಕೆ(America) ಪ್ರವೇಶಿಸಲು 'ಕತ್ತೆ ಮಾರ್ಗ'ದ (Donkey Route) ಮೊರೆ ಹೋಗಿದ್ದ ಗುಜರಾತ್‌ನ(Gujarat) ಆನಂದ್ (Anand) ಜಿಲ್ಲೆಯ ಇಬ್ಬರು, ಅಜೆರ್ಬೈಜಾನ್‌ನಲ್ಲಿ(Azerbaijan) ಅಪಹರಣಕ್ಕೊಳಗಾಗಿ ನರಕಯಾತನೆ ಅನುಭವಿಸಿ, ಕೊನೆಗೆ ಭಾರತ ಸರ್ಕಾರದ ರಾಜತಾಂತ್ರಿಕ ಹಸ್ತಕ್ಷೇಪದಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧ್ರುವ್ ಪಟೇಲ್ (22) ಮತ್ತು ದೀಪಿಕಾ ಪಟೇಲ್ (32) ಎಂಬುವವರೇ ರಕ್ಷಿಸಲ್ಪಟ್ಟವರು. ಇವರು ಅಜೆರ್ಬೈಜಾನ್ ರಾಜಧಾನಿ ಬಾಕು ನಗರದಲ್ಲಿ ಅಪಹರಣಕ್ಕೊಳಗಾಗಿದ್ದರು. ಇವರನ್ನು ಬಿಡುಗಡೆ ಮಾಡಲು ಕಿಡ್ನಾಪರ್ಸ್ ಹಣಕ್ಕಾಗಿ ಬೇಡಿಕೆಯಿಟ್ಟು, ಚಿತ್ರಹಿಂಸೆ ನೀಡಿದ್ದಲ್ಲದೆ, ಇವರ ಕಿಡ್ನಿಗಳನ್ನು ಕಿತ್ತು ಮಾರಾಟ ಮಾಡುವುದಾಗಿ ಬೆದರಿಕೆ ಹಾಕಿದ್ದರು.

ಏನಿದು ಘಟನೆ?

ಮುಂಬೈ ಮೂಲದ ಏಜೆಂಟರ ಮಾತು ನಂಬಿ ಈ ಇಬ್ಬರು ಜನವರಿ 30ರಂದು ಅಕ್ರಮ ಹಾದಿಯ ಮೂಲಕ ಅಮೆರಿಕ ತಲುಪಲು ಭಾರತವನ್ನು ತೊರೆದಿದ್ದರು. ಫೆಬ್ರವರಿ 1ರಂದು ಅಜೆರ್ಬೈಜಾನ್ ತಲುಪಿದ ತಕ್ಷಣ, ಅಪರಿಚಿತ ಗ್ಯಾಂಗ್ ಇವರನ್ನು ಅಪಹರಿಸಿ ಪಾಳುಬಿದ್ದ ಮನೆಯೊಂದರಲ್ಲಿ ಬಂಧಿಸಿಟ್ಟಿತು. ಇವರನ್ನು ಅಮೆರಿಕಕ್ಕೆ ಕಳುಹಿಸುವ ಬದಲು, ಒತ್ತೆಯಾಳನ್ನಾಗಿ ಇರಿಸಿಕೊಳ್ಳಲಾಯಿತು.

ಲೈವ್ ಸ್ಟ್ರೀಮ್‌ನಲ್ಲಿ ಚಿತ್ರಹಿಂಸೆ ಮತ್ತು ಸುಲಿಗೆ

ಅಪಹರಣಕಾರರು ವಾಟ್ಸಾಪ್ ವಿಡಿಯೊ ಕಾಲ್ ಮೂಲಕ ಗುಜರಾತ್‌ನಲ್ಲಿರುವ ಇವರ ಕುಟುಂಬದವರನ್ನು ಸಂಪರ್ಕಿಸಿದ್ದರು. ವಿಡಿಯೊ ಕಾಲ್‌ನಲ್ಲೇ ಧ್ರುವ್‌ನನ್ನು ಮನಬಂದಂತೆ ಹೊಡೆದು, ಅವರ ಕಿಡ್ನಿಗಳನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡುವುದಾಗಿ ಹೆದರಿಸಿದ್ದರು. ಕುಟುಂಬದವರು ಈಗಾಗಲೇ ನಗದು ಮತ್ತು ಕ್ರಿಪ್ಟೋಕರೆನ್ಸಿ ಮೂಲಕ 65 ಲಕ್ಷ ರುಪಾಯಿ ನೀಡಿದ್ದರೂ, ಕಿಡ್ನಾಪರ್ಸ್ ಬೇಡಿಕೆ ಮಾತ್ರ ಮುಗಿದಿರಲಿಲ್ಲ.

ಸಲೂನ್ ಸಿಬ್ಬಂದಿಯ ಎಡವಟ್ಟು: ಮಾಡೆಲ್‌ನ ಕೂದಲು ಹೆಚ್ಚು ತುಂಡರಿಸಿದ್ದಕ್ಕೆ ಬಿತ್ತು 25 ಲಕ್ಷ ರುಪಾಯಿ ದಂಡ!

'ಆಪರೇಷನ್ ಮಹಿಸಾಗರ್' ಮತ್ತು ಸರ್ಕಾರದ ಮಧ್ಯಸ್ಥಿಕೆ

ಸಂತ್ರಸ್ತರ ಪೋಷಕರು ಆನಂದ್ ಕ್ಷೇತ್ರದ ಸಂಸದ ಮಿತೇಶ್ ಪಟೇಲ್ ಅವರನ್ನು ಭೇಟಿ ಮಾಡಿ ಸಹಾಯ ಕೋರಿದ್ದರು. ಸಂಸದರು ತಕ್ಷಣ ನವದೆಹಲಿಗೆ ತೆರಳಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಗಮನಕ್ಕೆ ಈ ವಿಷಯ ತಂದರು. ಭಾರತದ ವಿದೇಶಾಂಗ ಸಚಿವಾಲಯವು (MEA) ಬಾಕು ನಗರದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಸಮರೋಪಾದಿಯಲ್ಲಿ 'ಆಪರೇಷನ್ ಮಹಿಸಾಗರ್' ಕಾರ್ಯಾಚರಣೆ ನಡೆಸಿತ್ತು. ಕೇವಲ 24 ಗಂಟೆಗಳ ಒಳಗಾಗಿ ಇಬ್ಬರನ್ನೂ ಸುರಕ್ಷಿತವಾಗಿ ರಕ್ಷಿಸಿ, ರಾಯಭಾರ ಕಚೇರಿಯ ಆವರಣಕ್ಕೆ ಕರೆತರಲಾಯಿತು. ಸದ್ಯ ಇಬ್ಬರೂ ಭಾರತ ಸರ್ಕಾರದ ರಕ್ಷಣೆಯಲ್ಲಿದ್ದಾರೆ.

ಡಾಂಕಿ ರೂಟ್ ಬಗ್ಗೆ ಎಚ್ಚರಿಕೆ

ಈ ಕಾರ್ಯಾಚರಣೆಯ ಯಶಸ್ಸಿನ ಬಳಿಕ ಮಾತನಾಡಿದ ಸಂಸದರು, "ನಮ್ಮ ಸರ್ಕಾರದ ತ್ವರಿತ ಕ್ರಮದಿಂದಾಗಿ ಈ ಇಬ್ಬರಿಗೂ ಪುನರ್ ಜನ್ಮ ಸಿಕ್ಕಂತಾಗಿದೆ. ಇಂತಹ ನಕಲಿ ಏಜೆಂಟರು ನೀಡುವ 'ಡೆಡ್ಲಿ ಶಾರ್ಟ್‌ಕಟ್' ಅಥವಾ ಅಕ್ರಮ ಹಾದಿಗಳಿಗೆ ಯಾರೂ ಬಲಿಯಾಗಬೇಡಿ" ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ತನಿಖೆ

ಈ ಜಾಲದ ಹಿಂದೆ ಇರಾನ್ ಮೂಲದ 'ಬಾಬಾ ಖಾನ್' ಮತ್ತು ಅವನ ಸಹಚರ ಪವನ್ ರಾಕಿ ಎಂಬುವವರ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ. ಇವರು ಈ ಹಿಂದೆಯೂ ಗುಜರಾತ್‌ನ ಯುವಕರನ್ನು ಗುರಿಯಾಗಿಸಿಕೊಂಡಿದ್ದರು. ಮುಂಬೈ ಮೂಲದ ಐವರು ಏಜೆಂಟರಿಗಾಗಿ ಗುಜರಾತ್ ಪೊಲೀಸರು ಇದೀಗ ಶೋಧಕಾರ್ಯ ನಡೆಸಿದ್ದಾರೆ.