ಕೇಂದ್ರ ಸಚಿವ ಸಂಪುಟ ಪುನರ್‌ರಚನೆ: ದೇವೇಂದ್ರ ಫಡ್ನವೀಸ್ ಸೇರಿ ನಾಲ್ವರು ಮುಖ್ಯಮಂತ್ರಿಗಳಿಗೆ ಉನ್ನತ ಸ್ಥಾನ ಸಾಧ್ಯತೆ
Modi 3.0 Cabinet Reshuffle: ಶೀಘ್ರದಲ್ಲೇ ಬಿಜೆಪಿ ಕೇಂದ್ರ ಸಚಿವ ಸಂಪುಟ ಪುನಾರಚನೆಯಾಗಲಿದೆ. ಹೊಸ ರಾಷ್ಟ್ರೀಯ ತಂಡದಲ್ಲಿ ಸಂಘಟನಾ ಜವಾಬ್ದಾರಿ ಪಡೆದ ಮತ್ತು ರಾಜ್ಯಸಭಾ ಅವಧಿ ಪೂರ್ಣಗೊಳಿಸಲಿರುವ ಸಚಿವರ ಸ್ಥಾನಕ್ಕೆ ಹೊಸ ನಾಯಕರ ಆಯ್ಕೆಯಾಗಲಿದೆ. ಇದಕ್ಕಾಗಿ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ನಾಲ್ವರು ಮುಖ್ಯಮಂತ್ರಿಗಳಿಗೆ ಉನ್ನತ ಸ್ಥಾನ ಸಿಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಅವರು ಯಾರು ಎನ್ನುವ ಕುರಿತು ಇಲ್ಲಿದೆ ಮಾಹಿತಿ.
ಸಂಗ್ರಹ ಚಿತ್ರ -
ನವದೆಹಲಿ: ಕೇಂದ್ರ ಸಚಿವ ಸಂಪುಟ (Union Cabinet reshuffle) ಪುನರ್‌ರಚನೆಗೆ ಬಿಜೆಪಿ (BJP parliamentary board) ಸಿದ್ಧತೆ ನಡೆಸುತ್ತಿದೆ. ಇದರೊಂದಿಗೆ ಆಗಸ್ಟ್ 30ರೊಳಗೆ 12 ಸದಸ್ಯರ ಸಂಸದೀಯ ಮಂಡಳಿ ಪುನರ್‌ರಚನೆಯಾಗುವ ಸಾಧ್ಯತೆ ಇದೆ. ಇದರಲ್ಲಿ ಯುವ ನಾಯಕರು ಸೇರಿ ಕನಿಷ್ಠ ನಾಲ್ಕು ಮಂದಿ ಮುಖ್ಯಮಂತ್ರಿಗಳಿಗೆ ಸ್ಥಾನ ದೊರೆಯುವ ನಿರೀಕ್ಷೆ ಇದೆ. ಈಗಾಗಲೇ ಯುವ ಜನರ ಸಂಪರ್ಕಕ್ಕಾಗಿ ಬಿಜೆಪಿಯು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಹೊಸ 65 ಸದಸ್ಯರ ತಂಡವನ್ನು ಘೋಷಿಸಿತ್ತು. ಇದರಲ್ಲಿ ಸಂಘಟನಾ ಜವಾಬ್ದಾರಿ ಪಡೆದ ಮತ್ತು ಶೀಘ್ರದಲ್ಲೇ ರಾಜ್ಯಸಭಾ ಅವಧಿ ಪೂರ್ಣಗೊಳಿಸಲಿರುವ ಸಚಿವರ ಸ್ಥಾನಕ್ಕೆ ಹೊಸ ನಾಯಕರ ಆಯ್ಕೆ ನಡೆಯಲಿದೆ.
ಬಿಜೆಪಿಯ 12 ಸದಸ್ಯರ ಸಂಸದೀಯ ಮಂಡಳಿಯ ಪ್ರಮುಖ ಅಭ್ಯರ್ಥಿಯಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುತಿಸಿಕೊಂಡಿದ್ದಾರೆ. ಇವರೊಂದಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಇವರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕೂಡ ಅಭ್ಯರ್ಥಿಯಾಗಿ ಘೋಷಣೆಯಾಗುವ ನಿರೀಕ್ಷೆ ಇದೆ. ಆದರೆ ಈ ಕುರಿತು ಇನ್ನು ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ.
ಸಂಸದೀಯ ಮಂಡಳಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿರುವ ಅಭ್ಯರ್ಥಿಗಳನ್ನು ಮಂಡಳಿ ಶಿಫಾರಸು ಮಾಡುವುದರಿಂದ ದೇಶದ ರಾಜಕೀಯದಲ್ಲಿ ಸಾಕಷ್ಟು ಮಹತ್ವಪೂರ್ಣ ಬದಲಾವಣೆಗಳಾಗುವ ನೀರಿಕ್ಷೆ ಇದೆ. 2027 ಮತ್ತು 2028ರಲ್ಲಿ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ಮತ್ತು 2029ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಇದನ್ನು ದೃಷ್ಟಿಕೋನದಲ್ಲಿ ಇರಿಸಿಕೊಂಡು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮರುಸಂಘಟನೆ ಮಾಡುವ ಯೋಜನೆ ಹೊಂದಿದೆ.
ಸದ್ಯ ಮಂಡಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಜೆ.ಪಿ. ನಡ್ಡಾ ಅವರಿದ್ದು, ಹೊಸ ಸಂಸದೀಯ ಮಂಡಳಿಯಲ್ಲಿ ಮೂರರಿಂದ ನಾಲ್ಕು ಮುಖ್ಯಮಂತ್ರಿಗಳು ಸ್ಥಾನ ಪಡೆಯುವ ನಿರೀಕ್ಷೆ ಇದೆ. ಜತೆಗೆ ಪಕ್ಷದ ಮಾಜಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಸಂಸದೀಯ ಮಂಡಳಿಯಿಂದ ಕೈಬಿಡುವ ಸಾಧ್ಯತೆ ಇದೆ. ಪ್ರಮುಖ ಸಮುದಾಯ ಮತ್ತು ಪ್ರದೇಶಗಳ ಪ್ರಾತಿನಿಧ್ಯವನ್ನು ಪರಿಗಣಿಸಿ ಬದಲಾವಣೆ ಮಾಡುತ್ತಿರುವುದರಿಂದ ದಕ್ಷಿಣ ಭಾರತದ ನಾಯಕರೊಬ್ಬರು ಸ್ಥಾನ ಪಡೆಯಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪ್ರಸ್ತುತ ಸಂಸದೀಯ ಮಂಡಳಿಯಲ್ಲಿ ಮಹಾರಾಷ್ಟ್ರದವರು ಯಾರೂ ಇಲ್ಲ. ಹಿಂದೆ ನಿತಿನ್ ಗಡ್ಕರಿ ಇದರ ಸದಸ್ಯರಾಗಿದ್ದರು. ಹೀಗಾಗಿ ಆರ್‌ಎಸ್‌ಎಸ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಕೇಂದ್ರ ರಾಜಕೀಯಕ್ಕೆ ಕರೆತರಲು ಆರ್‌ಎಸ್‌ಎಸ್ ಹೆಚ್ಚು ಉತ್ಸುಕವಾಗಿದೆ. ಆದರೆ ಇವರ ನೇಮಕಕ್ಕೆ ಕೆಲವರ ವಿರೋಧವೂ ಇದೆ. ದೇವೇಂದ್ರ ಫಡ್ನವೀಸ್ ಬಿಜೆಪಿಯ ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದರೆ ಮುಂದೆ ಅವರು ಪ್ರಧಾನ ಮಂತ್ರಿ ಹುದ್ದೆಯ ಸ್ಪರ್ಧೆಯಲ್ಲಿರುತ್ತಾರೆ ಎನ್ನುತ್ತಾರೆ ಕೆಲವು ಬಿಜೆಪಿ ನಾಯಕರು.
ಭವಿಷ್ಯದ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಸಂಸದೀಯ ಮಂಡಳಿಯನ್ನು ಬಳಸಿಕೊಳ್ಳುವುದು ಹೊಸದೇನಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು 2006ರಲ್ಲಿ ಮಂಡಳಿಯಿಂದ ತೆಗೆದು ಹಾಕಲಾಗಿತ್ತು. ಬಳಿಕ 2013ರಲ್ಲಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಒಂದು ವರ್ಷದ ಮೊದಲು ಸಂಸದೀಯ ಮಂಡಳಿಗೆ ಮತ್ತೆ ಸೇರಿಸಲಾಗಿತ್ತು. ಹೀಗಾಗಿ ಸಂಸದೀಯ ಮಂಡಳಿಯ ಬದಲಾವಣೆ ದೇಶದ ರಾಜಕೀಯದಲ್ಲಿ ಒಂದು ಮಹತ್ವದ ಸ್ಥಿತ್ಯಂತರದ ಸೂಚನೆ ಕೂಡ ಹೌದು.
ಬಿಜೆಪಿ ಸಂಸದೀಯ ಮಂಡಳಿ ಪುನರ್‌ರಚನೆಯಾದ ಬಳಿಕ ಕೇಂದ್ರ ಚುನಾವಣಾ ಸಮಿತಿ ಮತ್ತು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯಲ್ಲೂ ಬದಲಾವಣೆಗಳಾಗುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.