ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣ: ₹7 ಕೋಟಿ ದುರ್ಬಳಕೆ ಆರೋಪ, 8 ಮಂದಿ ಬಂಧನ
ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ದೇವಸ್ಥಾನದ ದೇಣಿಗೆ ಹಣ ದುರ್ಬಳಕೆ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ
ಬಂಧಿತ ಆರೋಪಿಗಳು -
ಅಯೋಧ್ಯೆ, ಜೂ. 26: ಅಯೋಧ್ಯೆ (Ayodhya) ಯ ಶ್ರೀರಾಮ ಜನ್ಮಭೂಮಿ ದೇವಸ್ಥಾನಕ್ಕೆ (Shri Ram Janmabhoomi Temple) ಭಕ್ತರು ನೀಡಿದ ದೇಣಿಗೆಯ ಹಣ (donation funds) ದುರ್ಬಳಕೆಯಾಗಿದೆ (misappropriation) ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು (Uttar Pradesh Police) ಮಹತ್ವದ ಕ್ರಮ ಕೈಗೊಂಡಿದ್ದು, ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಎಲ್ಲಾ ಎಂಟು ಆರೋಪಿಗಳನ್ನು (accused) ಬಂಧಿಸಿದ್ದಾರೆ (arrested). ವಿಶೇಷ ತನಿಖಾ ತಂಡ (SIT) ನೀಡಿದ ಪ್ರಾಥಮಿಕ ವರದಿಯ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಿದ ಬಳಿಕ ಈ ಬಂಧನಗಳು ನಡೆದಿವೆ.
ಬಂಧಿತರಲ್ಲಿ ದೇವಸ್ಥಾನದ ಪರಿಚಾರಕ ಅವಿನಾಶ್ ಶುಕ್ಲಾ, ಮಾಜಿ ಬ್ಯಾಂಕ್ ಉದ್ಯೋಗಿ ಸುಭಾಷ್ ಶ್ರೀವಾಸ್ತವ, ದೇಣಿಗೆ ಎಣಿಕೆ ಸಿಬ್ಬಂದಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಅಧಿಕಾರಿಗಳು, ದೇಣಿಗೆ ಪೆಟ್ಟಿಗೆಯ ಕೀಲಿಯ ಜವಾಬ್ದಾರಿ ಹೊಂದಿದ್ದ ವ್ಯಕ್ತಿ ಸೇರಿದಂತೆ ಒಟ್ಟು ಎಂಟು ಮಂದಿ ಸೇರಿದ್ದಾರೆ. ಇವರು ದೇವಸ್ಥಾನಕ್ಕೆ ಬಂದ ನಗದು ಹಾಗೂ ಅಮೂಲ್ಯ ವಸ್ತುಗಳ ಎಣಿಕೆ ಮತ್ತು ನಿರ್ವಹಣೆ ಪ್ರಕ್ರಿಯೆಗೆ ನೇರವಾಗಿ ಸಂಬಂಧ ಹೊಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ತನಿಖೆ ವೇಳೆ ಕೆಲ ಆರೋಪಿಗಳ ಬ್ಯಾಂಕ್ ಖಾತೆಗಳಲ್ಲಿ ಹಾಗೂ ಮನೆಗಳಲ್ಲಿ ಅನುಮಾನಾಸ್ಪದ ಹಣ ಪತ್ತೆಯಾಗಿದೆ. ಅವಿನಾಶ್ ಶುಕ್ಲಾ ಅವರ ಖಾತೆಯಲ್ಲಿ ಸುಮಾರು ₹5 ಲಕ್ಷ ಪತ್ತೆಯಾಗಿದ್ದು, ಮತ್ತೊಬ್ಬ ಆರೋಪಿ ಮನೀಶ್ ಕುಮಾರ್ ಯಾದವ್ ಅವರ ಮನೆಯಿಂದಲೂ ಕಳುವಾಗಿದೆ ಎನ್ನಲಾದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಹತ್ಯೆಗೈದ ಸಿಯಾ; ಸಹೋದರಿಯ ಅನುಮಾನದಿಂದ ಬಯಲಾಯ್ತು ಭೀಕರ ಸಂಚು
ಪ್ರಾಥಮಿಕ ತನಿಖೆಯ ಪ್ರಕಾರ, 2025ರ ಏಪ್ರಿಲ್‌ನಿಂದ 2026ರ ಫೆಬ್ರವರಿವರೆಗೆ ದೇವಸ್ಥಾನಕ್ಕೆ ಬಂದ ದೇಣಿಗೆಯಲ್ಲಿ ಸುಮಾರು ₹7 ರಿಂದ ₹7.5 ಕೋಟಿ ಮೊತ್ತದ ಅಕ್ರಮ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಳವು, ನಂಬಿಕೆ ದ್ರೋಹ, ವಂಚನೆ, ಕಳುವಿನ ಆಸ್ತಿ ಸ್ವೀಕಾರ ಹಾಗೂ ಕ್ರಿಮಿನಲ್ ಸಂಚು ಸೇರಿದಂತೆ ವಿವಿಧ ಐಪಿಸಿ/ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೇಣಿಗೆಯ ನಗದು ಎಣಿಕೆ ಕಾರ್ಯವನ್ನು ಎಸ್‌ಬಿಐಗೆ ವಹಿಸಲಾಗಿದ್ದು, ಬ್ಯಾಂಕ್ ಖಾಸಗಿ ಸಂಸ್ಥೆಯ ಮೂಲಕ ಎಣಿಕೆ ನಡೆಸುತ್ತಿತ್ತು. ಈ ಪ್ರಕ್ರಿಯೆಯಲ್ಲೇ ಅಕ್ರಮ ನಡೆದಿದೆ ಎಂಬ ಆರೋಪದ ಕುರಿತು ಪೊಲೀಸರು ಮತ್ತು ಎಸ್‌ಐಟಿ ತನಿಖೆ ಮುಂದುವರಿಸಿದ್ದು, ಇನ್ನೂ ಕೆಲವರ ಪಾತ್ರವೂ ಪರಿಶೀಲನೆಯಲ್ಲಿದೆ.
ಇದಕ್ಕೂ ಮುನ್ನ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳಿತ್ತು. ಆದರೆ ತನಿಖೆ ಮುಂದುವರಿದಂತೆ ಪ್ರಕರಣ ತೀವ್ರಗೊಂಡಿದ್ದು, ಇದೀಗ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.