ವಂದೇ ಮಾತರಂಗೆ 150 ವರ್ಷ; ಭಾರತ ಮಾತೆಯ ಭವ್ಯತೆಯನ್ನು ಸಾರುವ ಈ ಗೀತೆಯನ್ನು ನೆನಪಿಸಿಕೊಳ್ಳುವ ಹೊತ್ತು
150 Years Of Vande Mataram: ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಬರೆದ ಮತ್ತು 1896 ರಲ್ಲಿ ರವೀಂದ್ರನಾಥ ಟ್ಯಾಗೋರ್ ಮೊದಲು ಹಾಡಿದ ರಾಷ್ಟ್ರೀಯ ಗೀತೆಯ 150 ವರ್ಷಗಳನ್ನು ಸ್ಮರಿಸಲು ದೇಶಾದ್ಯಂತ 'ವಂದೇ ಮಾತರಂ'ಗೆ ಸಂಬಂಧಿಸಿದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆ ದೇಶ ಪ್ರೇಮದ ಭಾವವನ್ನು ಸಾರುವ ವಂದೇ ಮಾತರಂ ಗೀತೆಯ ಮಹತ್ವ, ವಿಶೇಷತೆ ಇತ್ಯಾದಿ ಮಾಹಿತಿ ಇಲ್ಲಿದೆ
ಬಂಕಿಮಚಂದ್ರ ಚಟರ್ಜಿ -
ನವದೆಹಲಿ: ‘ವಂದೇ ಮಾತರಂ..’ (Vande Mataram) ಈ ಹಾಡನ್ನು ಕೇಳಿದಾಗ ಭಾರತೀಯರಾದ ನಮ್ಮ ಮೈ ರೋಮಾಚಂನಗೊಳ್ಳುತ್ತದೆ, ಮನ ಪುಳಕಿತಗೊಳ್ಳುತ್ತದೆ. ಸಂತ ಬಂಕಿಮಚಂದ್ರ ಚಟರ್ಜಿ ಅವರ ಕೃತು ಶಕ್ತಿಯಿಂದ ಮೂಡಿಬಂದಿರುವ ಗೀತೆ ಶತಮಾನಗಳಿಂದ ಇಂದಿನವರೆಗೂ ನಮ್ಮಲ್ಲಿ ನವ ಚೈತನ್ಯವನ್ನು ಮತ್ತು ದೇಶ ಪ್ರೇಮದ ಭಾವವನ್ನು ಉದ್ದೀಪನಗೊಳಿಸುತ್ತಿದೆಯೆಂದರೆ ಈ ಹಾಡಿಗಿರುವ ಶಕ್ತಿಗೆ ಸಾಕ್ಷಿಯಾಗಿದೆ. ಈ ದೇಶ ಪ್ರೇಮವನ್ನು ಉದ್ದೀಪನಗೊಳಿಸುವ ಈ ಗೀತೆಗೆ ಇದೇ ನ.07ಕ್ಕೆ 150 ವರ್ಷ ತುಂಬುತ್ತಿದೆ. ಚಟರ್ಜಿ ಅವರು ಈ ಹಾಡನ್ನು ಬರೆದಿರುವ ದಿನಾಂಕದ ಕುರಿತಾಗಿ ಗೊಂದಲಗಳಿದ್ದರೂ ಇದೀಗ ಈ ಹಾಡಿನ ಕಾಲ ನಿರ್ಣಯ ಖಚಿತಗೊಂಡಿದ್ದು, 1875ನೇ ಇಸವಿ ನ.07ರಂದು ಈ ಹಾಡು ಬರೆಯಲ್ಪಟ್ಟಿದೆ ಎಂಬ ನಿರ್ಣಯಕ್ಕೆ ಬರಲಾಗಿದೆ. ಬಂಕಿಮಚಂದ್ರ ಚಟರ್ಜಿ ಅವರ ಮಹೋನ್ನತ ಕೃತಿಯಾಗಿರುವ ಆನಂದ ಮಠಕ್ಕಿಂತ ಬಹಳ ಮೊದಲೇ ಈ ಹಾಡು ಚಟರ್ಜಿ ಅವರ ಲೇಖನಿಯಿಂದ ಮೂಡಿ ಬಂದಿರುವುದು ವಿಶೇಷ.
‘ವಂದೇ ಮಾತರಂ’ ಎಂಬುದು ಕೇವಲ ಒಂದು ದೇಶಭಕ್ತಿ ಗೀತೆಯಲ್ಲ, ಬದಲಿಗೆ ಅಂದಿನ ಬ್ರಿಟಿಷ್ ಆಡಳಿತದ ವಿರುದ್ಧ ಸಮಸ್ತ ಭಾರತೀಯರನ್ನು ಒಗ್ಗೂಡಿಸುವ ಒಂದು ಶಕ್ತಿ ಗೀತೆಯಾಗಿ ಪ್ರಚಲಿತಗೊಂಡಿತ್ತು. ಭಾರತ ಮಾತೆಯ ಸಮೃದ್ಧತೆಯನ್ನು ಮತ್ತು ಇಲ್ಲಿನ ವೈವಿಧ್ಯತೆಯನ್ನು ಸಮರ್ಥವಾಗಿ ಶತಮಾನಗಳ ಕಾಲ ಬಿಂಬಿಸುವ ಸಾಮರ್ಥ್ಯವನ್ನು ಈ ಗೀತೆ ಅಂದಿನಿಂದ ಇಂದಿನವರೆಗೂ ಉಳಿಸಿಕೊಂಡು ಬಂದಿರುವುದು ವಿಶೇಷವೇ ಸರಿ.
ಈ ಸುದ್ದಿಯನ್ನು ಓದಿ: Viral Video: ಎಕ್ಸ್ಟ್ರಾ ರೇಟ್ ಏಕೆ ಎಂದು ಕೇಳಿದ್ದೇ ತಪ್ಪಾಯ್ತಾ? ಪ್ರಯಾಣಿಕನನ್ನು ಹಿಗ್ಗಾಮುಗ್ಗಾ ಥಳಿಸಿದ ಪಾಪಿಗಳು! ವಿಡಿಯೊ ನೋಡಿ
ತನ್ನ ಈ ಗೀತೆಯ ಬಗ್ಗೆ ಸರ್ ಅರಬಿಂದೋ ಅವರು, ಸರ್ ಅರಬಿಂದೋ ಆಂಡ್ ನ್ಯೂ ಥಾಟ್ ಇನ್ ಇಂಡಿಯನ್ ಪಾಲಿಟಿಕ್ಸ್ ಲೇಖನದಲ್ಲಿ ಬರೆದುಕೊಂಡಿರುವಂತೆ, ‘ವಂದೇ ಮಾತರಂ ಗೀತೆಯನ್ನು 1874ರ ಪ್ರಾರಂಭದಲ್ಲೇ ಬರೆದಿದ್ದರೂ, ಇದು ಭಾರತೀಯರ ಮನಸ್ಸಿನಲ್ಲಿ ದೇಶಪ್ರೇಮದ ಕಿಚ್ಚನ್ನು ಹಚ್ಚಿದ್ದು 1905ರಲ್ಲಿ. ಆ ವರ್ಷ ಬಂಗಾಲ ವಿಭಜನೆ ವಿರುದ್ಧ ಎದ್ದ ಜನಾಕ್ರೋಶ ಸ್ವದೇಶಿ ಚಳುವಳಿಯ ರೂಪವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಅದಕ್ಕೊಂದು ಸಮಿದೆಯಾಗಿ ಈ ಗೀತೆ ಮೂಡಿಬಂತು.
ಸ್ವದೇಶಿ ಚಳುವಳಿಗಾರರ ವಲಯದಲ್ಲಿ ‘ವಂದೇ ಮಾತರಂ’ ಒಂದು ಪವಿತ್ರ ಮಂತ್ರವಾಗಿ, ತಾಯ್ನಾಡನ್ನು ಪ್ರಶಂಸಿಸುವ ಒಂದು ಶ್ಲೋಕದ ರೂಪವನ್ನು ಪಡೆದುಕೊಂಡಿತು.’ವಂದೇ ಮಾತರಂ ಗೀತೆಯ ಪ್ರಭಾವ ನಮ್ಮ ಜನಮಾನಸದಲ್ಲಿ ಎಷ್ಟರಮಟ್ಟಿಗೆ ಪ್ರಭಾವ ಬೀರಿದೆಯೆಂದರೆ, ಈ ಹೆಸರಿನಲ್ಲಿ ದೇಶಾದ್ಯಂತ ಹಲವಾರು ವೃತ್ತಪತ್ರಿಕೆಗಳು ಪ್ರಕಟಗೊಂಡಿವೆ ಎಂಬ ವಿಚಾರವೂ ಅಚ್ಚರಿದಾಯಕವಾದ ವಿಚಾರವೇ ಸರಿ.
ತಾಯ್ನಾಡನ್ನು ಮಾತೃ ಸ್ವರೂಪದಲ್ಲಿ ನೋಡುವ ಯೋಚನೆಯಡಿಯಲ್ಲಿ ಬಿಪಿನ್ ಚಂದ್ರ ಪಾಲ್ ಬಂದೆ ಮಾತರಂ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಅರಬಿಂದೋ ಅವರು ಬಂಕಿಮ ಚಂದ್ರ ಚಟರ್ಜಿ ಅವರನ್ನು ಭಾರತೀಯ ರಾಷ್ಟ್ರೀಯತೆಯ ಪ್ರಚಾರಕ ಎಂದು ಪ್ರಶಂಸಿದ್ದಾರೆ. ಭಾರತ ಮಾತೆಯನ್ನು ಶಕ್ತಿ ಮಾತೆಯ ಸ್ವರೂಪದಲ್ಲಿ ಕಂಡು ಆಕೆಯ ಮಹತ್ತಿಕೆಯನ್ನು ಈ ಹಾಡಿನುದ್ದಕ್ಕೂ ಪ್ರಶಂಸಿಸಲಾಗಿದೆ.
ವಂದೇ ಮಾತರಂ ಗೀತೆಯಲ್ಲಿ ಭಾರತದ ಸಮೃದ್ಧತೆ ಮತ್ತು ವೈವಿಧ್ಯತೆಯನ್ನು ಅನಾವರಣಗೊಳಿಸುತ್ತಾ ಆ ಮೂಲಕ ಭಾರತೀಯರ ಮನಗಳಲ್ಲಿ ದೇಶದ ಬಗ್ಗೆ ಒಂದು ಫಲವಂತಿಕೆಯ ಸ್ವರೂಪವನ್ನು ಮೂಡಿಸುವ ಮಹತ್ಕಾರ್ಯವನ್ನು ಈ ಹಾಡು ಮಾಡಿದೆ ಎಂದರೆ ತಪ್ಪಾಗಲಾರದು.
ದೇಶ ಪ್ರೇಮದ ಈ ಹಾಡು ಸ್ವಾತಂತ್ರಯ ಹೋರಾಟಗಾರರ ಪಾಲಿಗೆ ಒಂದು ಕ್ರಾಂತಿ ಗೀತೆಯಾಗಿ ಕಾಣಿಸಿಕೊಳ್ಳುವ ಮೂಲಕ ವಸಾಹತುಶಾಹಿ ವಿರುದ್ಧದ ಹೋರಾಟದಲ್ಲಿ ಇದೊಂದು ಸ್ಪೂರ್ತಿಯ ನುಡಿಯಾಗಿ, ಕ್ರಾಂತಿಯ ಕಿಡಿಯಾಗಿ, ದಾಸ್ಯದ ಕತ್ತಲನ್ನು ಕಳೆಯುವ ಹೊಂಬೆಳಕಾಗಿ ಗೋಚರಿಸಿತ್ತು. ಮತ್ತು ಇಂದಿಗೂ ಈ ಗೀತೆ ಭಾರತಿಯರ ಮನದಲ್ಲಿ ದೇಶಪ್ರೇಮದ ಕಿಚ್ಚನ್ನು ಜೀವಂತವಾಗಿಡುವ ಒಂದು ಪವಿತ್ರ ಜ್ಯೋತಿ ಸ್ವರೂಪದಲ್ಲಿ ಪ್ರಕಾಶಿಸುತ್ತಿದೆ.