ಕೆ.ಸಿ. ವೇಣುಗೋಪಾಲ್‌ಗೆ ಕೇರಳದ ಮುಖ್ಯಮಂತ್ರಿ ಸ್ಥಾನ ತಪ್ಪಿದ್ದೇಗೆ? ಇಲ್ಲಿದೆ ನೋಡಿ ಕಾರಣ
ಕೇರಳ ವಿಧಾನಸಭಾ ಚುನಾವಣೆಯ ಬಳಿಕ ನಡೆದ ಸುದೀರ್ಘ ಚರ್ಚೆಗಳಿಗೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಮೈತ್ರಿ ಪಕ್ಷಗಳ ಬೆಂಬಲ, ಸಾರ್ವಜನಿಕ ಅಭಿಪ್ರಾಯ ಹಾಗೂ ಉಪಚುನಾವಣೆಯ ರಾಜಕೀಯ ಭೀತಿಯನ್ನು ಗಮನದಲ್ಲಿಟ್ಟುಕೊಂಡು ಕೆ.ಸಿ. ವೇಣುಗೋಪಾಲ್ ಬದಲು ಸತೀಶನ್ ಆಯ್ಕೆಯಾಗಿದ್ದಾರೆ.
ವಿ.ಡಿ. ಸತೀಶನ್ -
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ (Kerala Assembly Election)ಯ ಫಲಿತಾಂಶ ಪ್ರಕಟವಾಗಿ ಹತ್ತು ದಿನಗಳ ಕಾಲ ನಡೆದ ಸುದೀರ್ಘ ಚರ್ಚೆ ಮತ್ತು ಕುತೂಹಲಕ್ಕೆ ತೆರೆ ಬಿದ್ದಿದೆ. ಕಾಂಗ್ರೆಸ್ ಹೈಕಮಾಂಡ್ (Congress High Command) ಅಂತಿಮವಾಗಿ 'ಜನರ ಆಯ್ಕೆ' ಎಂದೇ ಬಿಂಬಿತವಾಗಿದ್ದ ವಿ.ಡಿ. ಸತೀಶನ್ (VD Satheesan) ಅವರನ್ನು ಕೇರಳದ ನೂತನ ಮುಖ್ಯಮಂತ್ರಿಯಾಗಿ ಘೋಷಿಸಿದೆ. ಮೇ 18 ರಂದು ಅವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ.
ವೇಣುಗೋಪಾಲ್ ರೇಸ್‌ನಲ್ಲಿ ಮುಂದಿದ್ದರೂ ಸತೀಶನ್ ಆಯ್ಕೆಯಾಗಿದ್ದು ಏಕೆ?
ಕೆ.ಸಿ. ವೇಣುಗೋಪಾಲ್ ಅವರು ಗಾಂಧಿ ಕುಟುಂಬಕ್ಕೆ ಆಪ್ತರು ಮತ್ತು 63 ಶಾಸಕರ ಪೈಕಿ 47 ಮಂದಿಯ ಬೆಂಬಲ ಹೊಂದಿದ್ದರು. ಆದರೂ ಕಾಂಗ್ರೆಸ್ ಸತೀಶನ್ ಅವರನ್ನೇ ಆರಿಸಲು ಕೆಲವು ಪ್ರಮುಖ ಕಾರಣಗಳಿವೆ:
ಮೈತ್ರಿ ಪಕ್ಷಗಳ ಒತ್ತಡ: ಕಾಂಗ್ರೆಸ್‌ನ ಪ್ರಮುಖ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸತೀಶನ್ ಅವರನ್ನು ಬೆಂಬಲಿಸಿತ್ತು. 22 ಶಾಸಕರನ್ನು ಹೊಂದಿರುವ ಐಯುಎಂಎಲ್ ಬೆಂಬಲ ಹಿಂತೆಗೆದುಕೊಂಡರೆ ಸರ್ಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿತ್ತು. ಕೇರಳ ಕಾಂಗ್ರೆಸ್ ಮತ್ತು ಆರ್‌ಎಸ್‌ಪಿ ಕೂಡ ಸತೀಶನ್ ಪರ ನಿಂತಿದ್ದವು.
ಪೋಸ್ಟರ್ ಸಮರ ಮತ್ತು ಸಾರ್ವಜನಿಕ ಅಭಿಪ್ರಾಯ: ವಯನಾಡ್ ಸೇರಿದಂತೆ ಕೇರಳದಾದ್ಯಂತ ವೇಣುಗೋಪಾಲ್ ವಿರುದ್ಧ ಮತ್ತು ಸತೀಶನ್ ಪರವಾಗಿ ಭಾರಿ ಜನಬೆಂಬಲ ವ್ಯಕ್ತವಾಗಿತ್ತು. 'ಬಾಹ್ಯ ಶಕ್ತಿ'ಗಿಂತ ನೆಲದ ನಾಯಕನೇ ಮುಖ್ಯಮಂತ್ರಿ ಆಗಬೇಕೆಂಬ ಕೂಗು ಬಲವಾಗಿತ್ತು.
ಕೇರಳ ಮುಖ್ಯಮಂತ್ರಿ ಆಯ್ಕೆಯ ಕಗ್ಗಂಟು: ಒಂದೆಡೆ ಪೋಸ್ಟರ್ ಸಮರ, ಹೈಕಮಾಂಡ್ ಮೇಲೆ ಹೆಚ್ಚಿದ ಒತ್ತಡ
ಉಪಚುನಾವಣೆಯ ಭೀತಿ: ವೇಣುಗೋಪಾಲ್ ಪ್ರಸ್ತುತ ಆಲಪ್ಪುಳ ಲೋಕಸಭಾ ಸಂಸದರಾಗಿದ್ದಾರೆ. ಅವರು ಸಿಎಂ ಆದರೆ, ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು ಮತ್ತು ಆರು ತಿಂಗಳೊಳಗೆ ಶಾಸಕರಾಗಿ ಆಯ್ಕೆಯಾಗಬೇಕಿತ್ತು. ಇದು ಎರಡು ಉಪಚುನಾವಣೆಗಳಿಗೆ ಕಾರಣವಾಗುತ್ತಿತ್ತು, ಇದು ಅನಗತ್ಯ ರಾಜಕೀಯ ರಿಸ್ಕ್ ಎಂದು ಹೈಕಮಾಂಡ್ ಭಾವಿಸಿದೆ.
ಸಾಂಘಿಕ ಸಾಮರ್ಥ್ಯ: ಸತೀಶನ್ ಅವರು ಕಳೆದ ಐದು ವರ್ಷಗಳಿಂದ ವಿರೋಧ ಪಕ್ಷದ ನಾಯಕರಾಗಿ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಸಮರ್ಥವಾಗಿ ಹೋರಾಡಿದ್ದರು. ಅಲ್ಲದೆ, ಚುನಾವಣೆಯಲ್ಲಿ ವ್ಯೂಹಾತ್ಮಕವಾಗಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಗ್ಗಟ್ಟಿನ ಮಂತ್ರ ಪಠಿಸಿದ ನಾಯಕರು:
ನೇಮಕಾತಿ ಬೆನ್ನಲ್ಲೇ ಮಾತನಾಡಿದ ವಿ.ಡಿ. ಸತೀಶನ್, "ಇದು ನನ್ನ ವೈಯಕ್ತಿಕ ಸಾಧನೆಯಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ನವ ಕೇರಳ ನಿರ್ಮಿಸುತ್ತೇನೆ" ಎಂದಿದ್ದಾರೆ. ಇತ್ತ ಕೆ.ಸಿ. ವೇಣುಗೋಪಾಲ್ ಕೂಡ ಹೈಕಮಾಂಡ್ ನಿರ್ಧಾರವನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಹಿಡಿತ:
ಈ ಆಯ್ಕೆಯೊಂದಿಗೆ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ತನ್ನ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದ ನಂತರ ಈಗ ಕೇರಳದಲ್ಲೂ ಕಾಂಗ್ರೆಸ್ ನೇರ ಅಧಿಕಾರ ಹಿಡಿದಿದೆ. ತಮಿಳುನಾಡಿನಲ್ಲಿ ನಟ ವಿಜಯ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದಲ್ಲಿದೆ. ಆಂತರಿಕ ಭಿನ್ನಮತವನ್ನು ತಡೆದು ಐದು ವರ್ಷಗಳ ಸುಸ್ಥಿರ ಆಡಳಿತ ನೀಡುವುದು ಈಗ ಸತೀಶನ್ ಮುಂದಿರುವ ದೊಡ್ಡ ಸವಾಲು. ಅಂತಿಮವಾಗಿ ಕಾಂಗ್ರೆಸ್ ತನಗೆ ಬೇಕಾದವರಿಗಿಂತ (ವೇಣುಗೋಪಾಲ್), ಅನಿವಾರ್ಯವಾಗಿದ್ದವರನ್ನು (ಸತೀಶನ್) ಆರಿಸುವ ಮೂಲಕ ಜಾಣ್ಮೆ ಮೆರೆದಿದೆ.