ವಿಕಸಿತ ಭಾರತ 2047ಕ್ಕೆ ಕೇಂದ್ರದಿಂದ 23 ಅಂಶಗಳ ಕಾರ್ಯಯೋಜನೆ; ಕ್ರೀಡೆ, ಕೌಶಲ್ಯಾಭಿವೃದ್ಧಿ, AIಗೆ ಒತ್ತು
Viksit Bharat: ವಿಕಸಿತ ಭಾರತ 2047 ಗುರಿ ಸಾಧನೆಗಾಗಿ ಕೇಂದ್ರ ಸರ್ಕಾರ 23 ಅಂಶಗಳ ಕಾರ್ಯಯೋಜನೆ ರೂಪಿಸಿದೆ. ಕ್ರೀಡೆ, ಕೌಶಲ್ಯಾಭಿವೃದ್ಧಿ, ದೇಶೀಯ ತಂತ್ರಜ್ಞಾನ, ಎಐ, ಶಿಕ್ಷಣ, ಕೈಗಾರಿಕಾ ಸಾಮರ್ಥ್ಯ, ಸಂಶೋಧನೆ ಹಾಗೂ ಆಡಳಿತ ಸುಧಾರಣೆಗೆ ಆದ್ಯತೆ ನೀಡಲಾಗಿದೆ.
ವಿಕಸಿತ ಭಾರತ (ಎಐ ಚಿತ್ರ) -
ನವದೆಹಲಿ, ಆ. 22: ವಿಕಸಿತ ಭಾರತ 2047 (Viksit Bharat 2047) ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 23 ಅಂಶಗಳ ಕಾರ್ಯಯೋಜನೆಯನ್ನು ರೂಪಿಸಿದೆ. ಕ್ರೀಡೆ, ಕೌಶಲ್ಯಾಭಿವೃದ್ಧಿ, ದೇಶೀಯ ತಂತ್ರಜ್ಞಾನ, ಕೃಷಿ ಶಿಕ್ಷಣ, ಕೈಗಾರಿಕಾ ಸಾಮರ್ಥ್ಯ ಹಾಗೂ ಆಡಳಿತ ಸುಧಾರಣೆ ಸೇರಿ ಹಲವು ಕ್ಷೇತ್ರಗಳಿಗೆ ಈ ಯೋಜನೆಯಲ್ಲಿ ಆದ್ಯತೆ ನೀಡಲಾಗಿದೆ. ಆಗಸ್ಟ್ 22ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಕೇಂದ್ರ ಸರ್ಕಾರದ ಕಾರ್ಯದರ್ಶಿಗಳೊಂದಿಗೆ ನಡೆಸಿದ ಸಭೆಯಲ್ಲಿ ಹೊರಬಂದ ಅಂಶಗಳನ್ನು ಜುಲೈ 29ರಂದು ಸಂಪುಟ ಕಾರ್ಯದರ್ಶಿ ಟಿ.ವಿ. ಸೋಮನಾಥನ್ ಕಾರ್ಯದರ್ಶಿಗಳಿಗೆ ಕಳುಹಿಸಿದ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಪ್ರಧಾನಿ ಅವರೊಂದಿಗೆ ನಡೆದ ಸಭೆಯಲ್ಲಿ ಪ್ರತಿಯೊಬ್ಬ ಕಾರ್ಯದರ್ಶಿಯೂ ಮೂರು ನಿಮಿಷಗಳ ಪ್ರಸ್ತುತಿ ನೀಡಿದ್ದು, ಬಳಿಕ ಈ 23 ಅಂಶಗಳು ರೂಪುಗೊಂಡಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಕಸಿತ ಭಾರತ 2047ರ ಕಾರ್ಯ ಯೋಜನೆ:
Viksit Bharat @2047: PM’s 23 Key Action Points — Cabinet Secretary Directs Ministries to Initiate Actionhttps://t.co/8bJhIkbqsu pic.twitter.com/O0VPc7Sfon
— Staff News (@StaffNews_In) August 21, 2026
ಜನರ ಚಳವಳಿಯಾಗಬೇಕು ವಿಕಸಿತ ಭಾರತ
ವಿಕಸಿತ ಭಾರತ 2047 ಎಂಬುದು ಕೇವಲ ಸರ್ಕಾರದ ಗುರಿಯಾಗದೆ, ಸಾಮಾನ್ಯ ನಾಗರಿಕನ ಗುರಿಯಾಗಬೇಕು ಎಂದು ಕಾರ್ಯಯೋಜನೆ ಒತ್ತಿಹೇಳಿದೆ. ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಇದನ್ನು ಜನಾಂದೋಲನವಾಗಿ ರೂಪಿಸುವುದು ಹಾಗೂ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಮೂಲಕ ಯುವಜನತೆಯನ್ನು ಈ ಅಭಿಯಾನದಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಲಾಗಿದೆ. ಯುವಕರಲ್ಲಿ ಮಾದಕ ವ್ಯಸನ ತಡೆಗಟ್ಟಲು ‘ಮೈ ಭಾರತ್’ ಅಭಿಯಾನ ಮತ್ತು ಪೋರ್ಟಲ್‌ಗಳನ್ನು ಬಳಸುವ ಬಗ್ಗೆಯೂ ಸಲಹೆ ನೀಡಲಾಗಿದೆ.
ಕ್ರೀಡಾ ಕ್ಷೇತ್ರಕ್ಕೆ ವಿಶೇಷ ಆದ್ಯತೆ
2036ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಅನೇಕ ಕ್ರೀಡಾಪಟುಗಳು ಪ್ರಸ್ತುತ 5ರಿಂದ 10 ವರ್ಷದೊಳಗಿನ ಮಕ್ಕಳು ಹಾಗೂ ಶಾಲಾ ವಿದ್ಯಾರ್ಥಿಗಳಾಗಿದ್ದಾರೆ ಎಂದು ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಶಾಲೆ, ಕಾಲೇಜು ಹಾಗೂ ವಿವಿಧ ಹಂತಗಳಲ್ಲಿ ಮಕ್ಕಳ ಕ್ರೀಡಾ ಪ್ರತಿಭೆ ಪ್ರದರ್ಶನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ.
ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ‘ಸಂಪೂರ್ಣ ಸರ್ಕಾರದ’ ವಿಧಾನ ಅನುಸರಿಸುವುದು, ಕ್ರೀಡೆ ಮತ್ತು ಪ್ರವಾಸೋದ್ಯಮ ಸಚಿವಾಲಯಗಳು ಒಟ್ಟಾಗಿ ಕ್ರೀಡಾ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವುದು ಹಾಗೂ MSMEಗಳು, ಐಟಿ ಇಲಾಖೆ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಕ್ರೀಡಾ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಸ್ತಾಪಿಸಲಾಗಿದೆ.
ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಒತ್ತು
ಶಾಲಾ ಪಠ್ಯಕ್ರಮದೊಂದಿಗೆ ಕೌಶಲ್ಯ ತರಬೇತಿ ಕೋರ್ಸ್‌ಗಳನ್ನು ಸಂಯೋಜಿಸುವುದು ಹಾಗೂ ITI ಪಠ್ಯಕ್ರಮಗಳನ್ನು ಪರಿಷ್ಕರಿಸುವಂತೆ ಸೂಚಿಸಲಾಗಿದೆ. ನಿವೃತ್ತ ಹಿರಿಯ ನಾಗರಿಕರನ್ನು ITIಗಳಲ್ಲಿ ಗೌರವಧನದ ಆಧಾರದ ಮೇಲೆ ಮಾರ್ಗದರ್ಶಕರಾಗಿ ಬಳಸಿಕೊಳ್ಳುವ ಪ್ರಸ್ತಾಪವೂ ಇದೆ.
ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳು 2ರಿಂದ 3 ತಿಂಗಳ ಕಾಲ ಸ್ವಯಂಸೇವಕರಾಗಿ ITI ವಿದ್ಯಾರ್ಥಿಗಳಿಗೆ ಆಧುನಿಕ ತಾಂತ್ರಿಕ ಜ್ಞಾನ ಹಂಚಿಕೊಳ್ಳುವ ವ್ಯವಸ್ಥೆ ರೂಪಿಸುವ ಬಗ್ಗೆಯೂ ಯೋಜನೆಯಲ್ಲಿ ಉಲ್ಲೇಖಿಸಲಾಗಿದೆ. ITI ಡಿಪ್ಲೊಮಾ ಪಡೆದವರಿಗೆ ಪದವಿ ಶಿಕ್ಷಣಕ್ಕೆ ಅವಕಾಶ ಕಲ್ಪಿಸುವ ಮಾರ್ಗಗಳನ್ನೂ ಪರಿಶೀಲಿಸಲು ಸೂಚಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವ ಕೌಶಲ್ಯಗಳಿಗೆ ಬೇಡಿಕೆ ಇದೆ ಎಂಬುದನ್ನು ಗುರುತಿಸಿ, ಅದಕ್ಕೆ ಅನುಗುಣವಾಗಿ ತರಬೇತಿ ನೀಡುವಂತೆ ಸಲಹೆ ನೀಡಲಾಗಿದೆ. ವಿದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸಲು ಸಾಫ್ಟ್ ಸ್ಕಿಲ್ ಹಾಗೂ ಡಿಜಿಟಲ್ ತಂತ್ರಜ್ಞಾನಕ್ಕೂ ಹೆಚ್ಚಿನ ಒತ್ತು ನೀಡಲಾಗಿದೆ.
ಸರ್ಕಾರಿ ಅಧಿಕಾರಿಗಳ ಸಾಮರ್ಥ್ಯ ವೃದ್ಧಿ
ಟೆಂಡರ್ ಪ್ರಕ್ರಿಯೆ, ಕಾನೂನು ಕರಡು ರಚನೆ, ವಿವಾದ ಪರಿಹಾರ ಸೇರಿದಂತೆ ವಿಶೇಷ ಕೌಶಲ್ಯಗಳಲ್ಲಿ ಅಧಿಕಾರಿಗಳಿಗೆ ತರಬೇತಿ ನೀಡಬೇಕು. ಈ ಕ್ಷೇತ್ರಗಳಲ್ಲಿ ಹೊರಗಿನ ಸಲಹೆಗಾರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಸರ್ಕಾರಿ ವ್ಯವಸ್ಥೆಯಲ್ಲೇ ಪರಿಣತಿ ಬೆಳೆಸುವಂತೆ ಸೂಚಿಸಲಾಗಿದೆ.
ಕೈಗಾರಿಕೆ ಮತ್ತು ದೇಶೀಯ ಉತ್ಪಾದನೆಗೆ ಉತ್ತೇಜನ
ಸಂಕೀರ್ಣ ಯೋಜನೆಗಳನ್ನು ಕೈಗೊಳ್ಳಬಲ್ಲ ನಿರ್ಮಾಣ ಕಂಪನಿಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಭಾರಿ ಮತ್ತು ಸಂಕೀರ್ಣ ಯಂತ್ರೋಪಕರಣಗಳ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಬಲಪಡಿಸುವುದು ಕಾರ್ಯಯೋಜನೆಯ ಪ್ರಮುಖ ಅಂಶಗಳಾಗಿವೆ. ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳ ನಡುವಿನ ಸಹಕಾರ ಹೆಚ್ಚಿಸುವುದು, ತಂತ್ರಜ್ಞಾನ ಮತ್ತು ಕೈಗಾರಿಕಾ ಅಗತ್ಯಗಳಿಗೆ ಅನುಗುಣವಾಗಿ ಕಾಲೇಜು-ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ನಿರಂತರವಾಗಿ ಪರಿಷ್ಕರಿಸುವಂತೆಯೂ ಸೂಚಿಸಲಾಗಿದೆ. ಔಷಧೀಯ ಕ್ಷೇತ್ರದಲ್ಲಿ ಪ್ರಕ್ರಿಯೆ ಸುಧಾರಣೆ ಮತ್ತು ನಿಯಂತ್ರಣ ಸರಳೀಕರಣದ ಅಗತ್ಯವನ್ನೂ ಯೋಜನೆ ಒತ್ತಿಹೇಳಿದೆ.
AI, ಡೇಟಾ, ಸಂಶೋಧನೆಗೆ ಆದ್ಯತೆ
ಇತ್ತೀಚಿನ ಕಾರ್ಯದರ್ಶಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಸರ್ಕಾರಿ ವ್ಯವಸ್ಥೆಯಲ್ಲಿ ಡೇಟಾ ಮತ್ತು ಕೃತಕ ಬುದ್ಧಿಮತ್ತೆ (AI)ಯ ಪರಿಣಾಮಕಾರಿ ಬಳಕೆಗೆ ಒತ್ತು ನೀಡಿದ್ದಾರೆ. ವಿಶ್ವವಿದ್ಯಾಲಯಗಳೊಂದಿಗೆ ಹೆಚ್ಚಿನ ಸಹಭಾಗಿತ್ವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ನವೀನತೆಗೆ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.
‘ಸರ್ಕಾರಿ ಇಲಾಖೆ’ಗಿಂತ ‘ಸಂಪೂರ್ಣ ಸರ್ಕಾರ’ದ ಚಿಂತನೆ
ಸಚಿವಾಲಯಗಳ ನಡುವಿನ ಸಮನ್ವಯ ಹೆಚ್ಚಿಸುವುದು, ಸಂಪುಟ ಪ್ರಸ್ತಾವನೆಗಳನ್ನು ಅಂತಿಮಗೊಳಿಸುವ ಮುನ್ನ ಸಂಬಂಧಿತ ಇಲಾಖೆಗಳು ಪರಸ್ಪರ ಚರ್ಚೆ ನಡೆಸುವಂತೆ ಮಾಡುವುದರಿಂದ ವಿಳಂಬ ತಪ್ಪಿಸಿ ಪರಿಣಾಮಕಾರಿ ಅನುಷ್ಠಾನಕ್ಕೆ ನೆರವಾಗಲಿದೆ ಎಂದು ಕಾರ್ಯಯೋಜನೆ ಹೇಳಿದೆ.
ಅಂತಿಮವಾಗಿ, ಕಾರ್ಯದರ್ಶಿಗಳು “ಇಲಾಖೆಯ ಹಿತಾಸಕ್ತಿಯ ಅನುಯಾಯಿಗಳಲ್ಲ, ಸಾರ್ವಜನಿಕ ಹಿತಾಸಕ್ತಿಯ ನಾಯಕರಾಗಬೇಕು” ಎಂದು ಸೂಚಿಸಲಾಗಿದೆ. ಸ್ವಚ್ಛತೆ, ಸ್ವದೇಶಿ, ನಿಯಂತ್ರಣ ಸರಳೀಕರಣ ಹಾಗೂ ಅಪರಾಧೀಕರಣ ಕಡಿತದಂತಹ ಅಡ್ಡ-ವಿಭಾಗೀಯ ವಿಚಾರಗಳಲ್ಲಿ ಎಲ್ಲಾ ಇಲಾಖೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಕೇಂದ್ರ ಸರ್ಕಾರ ಒತ್ತಿಹೇಳಿದೆ.