Waqf Amendment Act 2025: ವಕ್ಫ್ ಮಂಡಳಿಗಳ ನೇಮಕಾತಿಗೆ ಸುಪ್ರೀಂ ಕೋರ್ಟ್ ತಡೆ
Waqf Amendment Act 2025: ಬಹು ಚರ್ಚಿತ ಮತ್ತು ವಿವಾದಿತ 2025 ರ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಕ್ಕೆ ಒಂದು ವಾರದ ಕಾಲಾವಕಾಶ ನೀಡಿದೆ. ಇಂದು ನಡೆದ ವಿಚಾರಣೆ ವೇಳೆ ಕೇಂದ್ರವು ಮುಸ್ಲಿಮೇತರರನ್ನು ಕೇಂದ್ರ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ನೇಮಿಸಲಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ.


ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯಿದೆಗೆ(Waqf Amendment Act 2025) ಸಂಬಂಧಿಸಿದಂತೆ ಸುಪ್ರೀಂಕೋರ್ಟ್(Supreme Court) ಮಹತ್ವದ ಆದೇಶ ಹೊರಡಿಸಿದೆ. ಮುಂದಿನ ವಿಚಾರಣೆವರೆಗೆ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕ ಸೇರಿದಂತೆ ವಿವಾದಾತ್ಮಕ ವಕ್ಫ್ ಕಾನೂನಿನ ಕೆಲವು ತಿದ್ದುಪಡಿ ಮಾಡಲಾಗಿರುವ ಸಂಗತಿಗಳನ್ನು ಅನುಷ್ಠಾನಕ್ಕೆ ತರುವ ಮೇಲೆ ತಡೆ ಹೇರಿದೆ. ಬಹು ಚರ್ಚಿತ ಮತ್ತು ವಿವಾದಿತ 2025 ರ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೇ 5 ರವರೆಗೆ ವಿಚಾರಣೆ ಮುಂದೂಡಿದ್ದು, ಅಲ್ಲಿಯವರೆಗೆ ಈ ತಡೆಯಾಜ್ಞೆಯನ್ನು ಜಾರಿಗೊಳಿಸಿ ಮಹತ್ವದ ಆದೇಶ ಹೊರಡಿಸಿದೆ.
2025 ರ ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರಕ್ಕೆ ಒಂದು ವಾರದ ಕಾಲಾವಕಾಶ ನೀಡಿದೆ. ಇಂದು ನಡೆದ ವಿಚಾರಣೆ ವೇಳೆ ಕೇಂದ್ರವು ಮುಸ್ಲಿಮೇತರರನ್ನು ಕೇಂದ್ರ ಅಥವಾ ರಾಜ್ಯ ವಕ್ಫ್ ಮಂಡಳಿಗಳಿಗೆ ನೇಮಿಸಲಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದೆ. ಅಲ್ಲದೇ ಮುಂದಿನ ವಿಚಾರಣೆಯ ದಿನಾಂಕದವರೆಗೆ, ಅಧಿಸೂಚನೆಯ ಮೂಲಕ ಘೋಷಿಸಲಾದ ಅಥವಾ ಬಳಕೆದಾರರಿಂದ ವಕ್ಫ್ ಎಂದು ನೋಂದಾಯಿಸಲಾದ ಯಾವುದೇ ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡಲಾಗುವುದಿಲ್ಲ ಎಂದು ಕೇಂದ್ರ ಭರವಸೆ ನೀಡಿದೆ.
ಈ ಸುದ್ದಿಯನ್ನೂ ಓದಿ: Kerala Waqf protest: ಎಲ್ಲಿಯ ವಕ್ಫ್ ಮಸೂದೆ.... ಎಲ್ಲಿಯ ಹಮಾಸ್ ಉಗ್ರರು? ಕೇರಳ ಪ್ರತಿಭಟನೆಯಲ್ಲಿ ಇವರ ಫೊಟೋ ಏಕೆ?
ವಿಚಾರಣೆಯ ಸಮಯದಲ್ಲಿ, ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಕ್ಫ್ ಕಾನೂನು ತಿದ್ದುಪಡಿ ಕಾಯಿದೆ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಒಂದು ವಾರದ ಸಮಯವನ್ನು ಕೋರಿದರು. ಈ ಮಧ್ಯೆ, ಹೊಸ ಕಾನೂನಿನ ಸೆಕ್ಷನ್ 9 ಮತ್ತು 14ರ ಅಡಿಯಲ್ಲಿ ಸರ್ಕಾರ ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ಅವರು ಹೇಳಿದರು.
ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಪಿವಿ ಸಂಜಯ್ ಕುಮಾರ್ ಮತ್ತು ಕೆವಿ ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಈ ವಿಷಯದಲ್ಲಿ ನೀಡಿದ ಭರವಸೆಯನ್ನು ದಾಖಲಿಸಿಕೊಂಡ ನಂತರ ಈ ಮಹತ್ವದ ಆದೇಶ ಹೊರಬಿದ್ದಿದೆ.