ಚಮನ್ ಕಾಲಿಯಾ, ಹಾಖ್, ಕಾನಾ ಗುಚ್ ಪಲಾವ್: ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷರಿಗೆ ರಾಷ್ಟ್ರಪತಿ ಭವನದಲ್ಲಿ ಕಾಶ್ಮೀರಿ-ಲಡಾಖಿ ಭೋಜನ
President Droupadi Murmu: ಭಾರತದ ಮೂರು ದಿನಗಳ ಪ್ರವಾಸದಲ್ಲಿರುವ ಸ್ವಿಟ್ಜರ್‌ಲ್ಯಾಂಡ್ ಅಧ್ಯಕ್ಷ ಗೈ ಪಾರ್ಮೆಲಿನ್ ಅವರಿಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅದ್ಧೂರಿ ಭೋಜನಕೂಟವನ್ನು ಆಯೋಜಿಸಿದ್ದರು. ಸ್ವಿಸ್ ಅಧ್ಯಕ್ಷರಿಗಾಗಿ ಲಡಾಖ್‌ನ ಸಾಂಪ್ರದಾಯಿಕ ಬೆಣ್ಣೆ ಚಹಾ ಗುರ್ ಗುರ್ ಚಾಯ್, ನೆಟಲ್ ಸೂಪ್ ಹಾಗೂ ಕಾಶ್ಮೀರದ ನದುರ್ ಕಬಾಬ್ ಸೇರಿ ಹಿಮಾಲಯನ್ ಕಣಿವೆಯ ಅಪರೂಪದ ಸಾಂಪ್ರದಾಯಿಕ ಅಡುಗೆಗಳನ್ನು ಬಡಿಸಲಾಯಿತು.
ದೆಹಲಿಯಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಅಧ್ಯಕ್ಷ ಗೈ ಪಾರ್ಮೆಲಿನ್ ಅವರನ್ನು ಭೇಟಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು -
ನವದೆಹಲಿ, ಅ. 6: ಮೂರು ದಿನಗಳ ಅಧಿಕೃತ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿರುವ ಸ್ವಿಟ್ಜರ್‌ಲ್ಯಾಂಡ್‌ನ ಅಧ್ಯಕ್ಷ ಗೈ ಪಾರ್ಮೆಲಿನ್ (Guy Parmelin) ಹಾಗೂ ಅವರ ಧರ್ಮಪತ್ನಿ ಪ್ರಥಮ ಮಹಿಳೆ ಕ್ಯಾರೋಲಿನ್ ಪಾರ್ಮೆಲಿನ್ (Caroline Parmelin) ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ರಾಜಕೀಯ ಔಟಣಕೂಟ ಆಯೋಜಿಸಿದರು. ಸ್ವಿಸ್ ಅಧ್ಯಕ್ಷರಿಗೆ ಭಾರತದ ಹಿಮಾಲಯನ್ ಪ್ರದೇಶಗಳಾದ ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಶೈಲಿಯ ಸಾಂಪ್ರದಾಯಿಕ ಮತ್ತು ಅಪರೂಪದ ಖಾದ್ಯಗಳನ್ನು ಉಣಬಡಿಸಲಾಯಿತು. ಸ್ವಿಟ್ಜರ್‌ಲ್ಯಾಂಡ್‌ನ ಆಲ್ಪ್ಸ್ ಪರ್ವತಗಳು ಹಾಗೂ ಭಾರತದ ಹಿಮಾಲಯನ್ ಪರ್ವತ ಶ್ರೇಣಿಗಳ ನಡುವೆ ಇರುವ ಸೌಂದರ್ಯದ ಸಾಮ್ಯತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ವಿಶೇಷ ‘ಹಿಮಾಲಯನ್ ಭೋಜನ’ವನ್ನು ಸಿದ್ಧಪಡಿಸಲಾಗಿತ್ತು.
ಔಟಣಕೂಟವು ಲಡಾಖ್‌ನ ಕಾಡುಪ್ರದೇಶದಲ್ಲಿ ಸಿಗುವ ನೆಟಲ್ ಗಿಡಮೂಲಿಕೆಯಿಂದ ತಯಾರಿಸಿದ ಝಾ ಥುಕ್ ಸೂಪ್‌ನೊಂದಿಗೆ ಪ್ರಾರಂಭವಾಯಿತು. ಇದರೊಂದಿಗೆ ಹಿಮಾಲಯನ್ ಪ್ರದೇಶಗಳ ಸಾಂಪ್ರದಾಯಿಕ ಗಿಣ್ಣುಗಳಾದ ಲಡಾಖ್‌ನ ಚುರ್ಪಿ ಹಾಗೂ ಜಮ್ಮುವಿನ ಕಲಾರಿ ಗಿಣ್ಣುಗಳನ್ನು ಒಳಗೊಂಡ ವಿಶೇಷ ಸಾಲಡ್ ನೀಡಲಾಯಿತು. ಮುಖ್ಯ ಅಡುಗೆಯಲ್ಲಿ ಕಾಶ್ಮೀರದ ಖ್ಯಾತ ಚಮನ್ ಕಾಲಿಯಾ (ಪನೀರ್ ಖಾದ್ಯ), ಹಾಖ್ (ಸೊಪ್ಪಿನ ಖಾದ್ಯ), ದಮ್ ಆಲೂ ಹಾಗೂ ಕಣಿವೆಯ ಅಪರೂಪದ ಮೊರೆಲ್ ಅಣಬೆಗಳಿಂದ ಸಿದ್ಧಪಡಿಸಿದ ಕಾನಾ ಗುಚ್ ಪಲಾವ್ ನೀಡಲಾಯಿತು. ತಿಂಡಿಯಾಗಿ ಕಮಲದ ದಂಟಿನಿಂದ ಮಾಡಿದ ನದುರ್ ಕಬಾಬ್ ಹಾಗೂ ಜಮ್ಮುವಿನ ಸ್ಟ್ರೀಟ್ ಫುಡ್ ಕಿಂಬ್ ಚಾಟ್ ಬಡಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸ್ವಿಟ್ಜರ್‌ಲ್ಯಾಂಡ್‌ನ ಅಧ್ಯಕ್ಷ ಗೈ ಪಾರ್ಮೆಲಿನ್ ಅವರನ್ನು ಭೇಟಿಯಾದ ರಾಷ್ಟ್ರಪತಿ ದ್ರೌಪದಿ ಮುರ್ಮು:
Glimpses of the meeting of President Guy Parmelin of the Swiss Confederation with President Droupadi Murmu at Rashtrapati Bhavan https://t.co/YTbbvXbMrf
— President of India (@rashtrapatibhvn) October 6, 2026
ಗುರ್ ಗುರ್ ಚಾಯ್ ಮತ್ತು ಕಹ್ವಾ
ಸಿಹಿ ತಿನಿಸುಗಳಾಗಿ ಕಾಶ್ಮೀರದ ಸಾಂಪ್ರದಾಯಿಕ ಶುಫ್ತಾ, ಕೇಸರಿ ಹಲ್ವಾ ಗೂ ಲಡಾಖಿ ಶೈಲಿಯ ಫೇಮರ್ ಸಿದ್ಧಪಡಿಸಲಾಯತು. ಪಾನೀಯವಾಗಿ ಲಡಾಖ್‌ನ ಖ್ಯಾತ ಬೆಣ್ಣೆ ಚಹಾ ಗುರ್ ಗುರ್ ಚಾಯ್ ಹಾಗೂ ಕಾಶ್ಮೀರಿ ಸಾಂಬಾರ ದ್ರವ್ಯಗಳ ಕಹ್ವಾ ನೀಡುವ ಮೂಲಕ ಹಿಮಾಲಯನ್ ಸಂಸ್ಕೃತಿಯನ್ನು ಅನಾವರಣಗೊಳಿಸಲಾಯಿತು.
ಕಾಶ್ಮೀರ ಮತ್ತು ಲಡಾಖಿ ಸಂಸ್ಕೃತಿಯ ಸಿಹಿ ತಿನಿಸುಗಳು
ಭೋಜನಕೂಟದ ಸಿಹಿ ತಿನಿಸುಗಳು ಕಾಶ್ಮೀರ ಮತ್ತು ಲಡಾಖ್ ಪ್ರದೇಶಗಳ ಸಾಂಪ್ರದಾಯಿಕ ವೈವಿಧ್ಯತೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿತು. ಈ ವಿಶೇಷ ಮೆನುವಿನಲ್ಲಿ ಬೇಯಿಸಿದ ಒಣ ಖರ್ಜೂರ, ಗೋಡಂಬಿ, ಒಣದ್ರಾಕ್ಷಿ ಹಾಗೂ ಒಣ ಕೊಬ್ಬರಿಯ ಮಿಶ್ರಣಕ್ಕೆ ಗಸಗಸೆಯನ್ನು ಉದುರಿಸಿ ತಯಾರಿಸಲಾದ ಕಾಶ್ಮೀರಿ ಶೈಲಿಯ ಶುಫ್ತಾ ಸಿಹಿ ಖಾದ್ಯ ಪ್ರಮುಖ ಆಕರ್ಷಣೆಯಾಗಿತ್ತು. ಇದರ ಜೊತೆಗೆ ರವೆ ಮತ್ತು ಹಾಲಿನಿಂದ ಸಿದ್ಧಪಡಿಸಿ ಕೇಸರಿ, ಏಲಕ್ಕಿ ಹಾಗೂ ಒಣಹಣ್ಣುಗಳ ಸಿಹಿ ಪಾಯಸ ಫಿರಿನ್ ನೀಡಲಾಯಿತು. ಆದರೆ ಈ ಎಲ್ಲ ತಿನಿಸುಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಗಮನಸೆಳೆದದ್ದು ಲಡಾಖ್‌ನ ಸಾಂಪ್ರದಾಯಿಕ ಸಿಹಿಯಾದ ಫೇಮರ್. ಹುರಿದ ಬಾರ್ಲಿ, ಬೆಲ್ಲ ಹಾಗೂ ಬೆಣ್ಣೆಯ ಮಿಶ್ರಣದಿಂದ ತಯಾರಿಸಲಾದ ಈ ಲಡಾಖಿ ಖಾದ್ಯವನ್ನು ಸಾಫ್ಟ್ ಚೀಸ್ ಆದ ಚುರಾ ಜತೆಗೆ ಉಣಬಡಿಸಲಾಯಿತು. ಅಂತಿಮವಾಗಿ ತಾಜಾ ಹಣ್ಣುಗಳನ್ನು ನೀಡುವ ಮೂಲಕ ಈ ರಾಜಕೀಯ ಔಟಣಕೂಟವನ್ನು ಪೂರ್ಣಗೊಳಿಸಲಾಯಿತು.
ರಾಷ್ಟ್ರಪತಿ ದ್ರೌಪದಿ ಮುರ್ಮು ಬಯೋಪಿಕ್ ಮಾಡಲು ಮುಂದಾದ ಆಮೀರ್ ಖಾನ್
ದ್ವಿಪಕ್ಷೀಯ ಬಾಂಧವ್ಯ ವೃದ್ಧಿ
ಔಟಣಕೂಟದ ವೇಳೆ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತ ಹಾಗೂ ಸ್ವಿಟ್ಜರ್‌ಲ್ಯಾಂಡ್ ನಡುವಿನ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಮುಕ್ತ ವ್ಯಾಪಾರ ಒಪ್ಪಂದಗಳ ಮಹತ್ವವನ್ನು ಪುನರುಚ್ಚರಿಸಿದರು. ಸ್ವಿಸ್ ಅಧ್ಯಕ್ಷರ ಈ ಭೇಟಿಯು ಎರಡೂ ದೇಶಗಳ ನಡುವಿನ ತಂತ್ರಜ್ಞಾನ, ವ್ಯಾಪಾರ ಹಾಗೂ ಸಂಸ್ಕೃತಿ ರಂಗದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ಆಶಿಸಿದರು.