Operation Sindoor: ಆಪರೇಷನ್ ಸಿಂದೂರ್‌ನಲ್ಲಿ 5 ಭಯೋತ್ಪಾದಕರ ಹತ್ಯೆ; ಪಾಕಿಸ್ತಾನದ ಸೇನೆ-ಭಯೋತ್ಪಾದಕರ ಸಂಬಂಧ ಬಯಲು
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೊಯ್ಬಾಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ 5 ಭಯೋತ್ಪಾದಕರನ್ನು ಭಾರತೀಯ ಸೇನೆ ಮೇ 7ರಂದು ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೊದಲ ಹಂತದಲ್ಲಿ ಹತ್ಯೆಗೈದಿದೆ ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಸಿಂಧೂರ ದಾಳಿಯಲ್ಲಿ ಸತ್ತ ಭಯೋತ್ಪಾದಕರ ಶವಗಳು

ಪಾಕಿಸ್ತಾನ (Pakistan) ಮೂಲದ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (Jash-e-Mohammed) ಮತ್ತು ಲಷ್ಕರ್-ಎ-ತೊಯ್ಬಾಗಳಲ್ಲಿ (Lashkar-e-Taiba) ಪ್ರಮುಖ ಪಾತ್ರ ವಹಿಸಿದ್ದ 5 ಭಯೋತ್ಪಾದಕರನ್ನು ಭಾರತೀಯ ಸೇನೆಯು ಮೇ 7ರಂದು ನಡೆದ ಆಪರೇಷನ್ ಸಿಂದೂರ್‌ನ (Operation Sindoor) ಮೊದಲ ಹಂತದಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (Pakistan-Occupied Kashmir) ಒಳಗಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಿ ಹತ್ಯೆಗೈದಿದೆ ಎಂದು ಮೂಲಗಳು ತಿಳಿಸಿವೆ. ಈ ಭಯೋತ್ಪಾದಕರನ್ನು ಮುದಸ್ಸರ್ ಖಾದಿಯನ್ ಖಾಸ್, ಹಫೀಜ್ ಮುಹಮ್ಮದ್ ಜಮೀಲ್, ಮೊಹಮ್ಮದ್ ಯೂಸುಫ್ ಅಝರ್, ಖಾಲಿದ್ ಎನಿಸಿಕೊಂಡ ಅಬು ಅಕಾಶ, ಮತ್ತು ಮೊಹಮ್ಮದ್ ಹಸನ್ ಖಾನ್ ಎಂದು ಗುರುತಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಉನ್ನತ ಸೇನಾಧಿಕಾರಿಗಳು ಸೈನಿಕ ಸಮವಸ್ತ್ರದಲ್ಲಿ ಭಾಗವಹಿಸಿರುವ ಫೋಟೋಗಳು ವೈರಲ್ ಆಗಿದ್ದು, ಪಾಕಿಸ್ತಾನದ ಸೇನೆ ಮತ್ತು ಭಯೋತ್ಪಾದಕರ ನಡುವಿನ ದಶಕಗಳ ಹಳೆಯ ಸಂಬಂಧವನ್ನು ಬಯಲು ಮಾಡಿವೆ. ಒಬ್ಬ ಭಯೋತ್ಪಾದಕನ ಶವಪೆಟ್ಟಿಗೆಯನ್ನು ಪಾಕಿಸ್ತಾನದ ಧ್ವಜದಲ್ಲಿ ಸುತ್ತಿರುವ ಚಿತ್ರವನ್ನು ಭಾರತವು ಸಾಕ್ಷ್ಯವಾಗಿ ಗುರುತಿಸಿದೆ.
ಮುದಸ್ಸರ್ ಖಾದಿಯನ್ ಖಾಸ್: ಮುದಸ್ಸರ್ ಮತ್ತು ಅಬು ಜುಂಡಾಲ್ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಖಾಸ್, ಲಷ್ಕರ್-ಎ-ತೊಯ್ಬಾದ ಸದಸ್ಯನಾಗಿದ್ದ. ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಮರ್ಕಝ್ ತೈಬ ಭಯೋತ್ಪಾದಕ ಶಿಬಿರದ ಉಸ್ತುವಾರಿಯನ್ನು ಇವನು ವಹಿಸಿದ್ದ. ಈ ಶಿಬಿರವು ಭಾರತದ ಗಡಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿದ್ದು, ಲಷ್ಕರ್‌ನ ಪ್ರಧಾನ ಕಚೇರಿಯಾಗಿತ್ತು. 2008ರ ಮುಂಬೈ ದಾಳಿಯಲ್ಲಿ ಜೀವಂತವಾಗಿ ಸಿಕ್ಕಿದ ಏಕೈಕ ಭಯೋತ್ಪಾದಕ ಅಜ್ಮಲ್ ಕಸಾಬ್ ಈ ಶಿಬಿರದಲ್ಲಿ ತರಬೇತಿ ಪಡೆದಿದ್ದನೆಂದು ಒಪ್ಪಿಕೊಂಡಿದ್ದ. 26/11 ದಾಳಿಯಲ್ಲಿ ಭಾಗಿಯಾಗಿದ್ದ ಡೇವಿಡ್ ಹೆಡ್ಲಿಯೂ ಇಲ್ಲಿ ತರಬೇತಿ ಪಡೆದಿದ್ದ ಎಂದು ವರದಿಯಾಗಿದೆ. ಖಾಸ್‌ನ ಅಂತ್ಯಕ್ರಿಯೆಯನ್ನು ಜಾಗತಿಕ ಭಯೋತ್ಪಾದಕ ಹಫೀಜ್ ಅಬ್ದುಲ್ ರೌಫ್ ಸರ್ಕಾರಿ ಶಾಲೆಯೊಂದರಲ್ಲಿ ನಡೆಸಿದ್ದು, ಪಾಕಿಸ್ತಾನದ ಜನರಲ್ ಆಸಿಮ್ ಮುನೀರ್ ಮತ್ತು ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಪರವಾಗಿ ಉನ್ನತ ಸೇನಾಧಿಕಾರಿಗಳು ಗೌರವ ಸಲ್ಲಿಸಿದ್ದಾರೆ. ಈ ಸಮಾರಂಭದಲ್ಲಿ ಪಾಕಿಸ್ತಾನದ ಸೇನೆಯ ಲೆಫ್ಟಿನೆಂಟ್ ಜನರಲ್ ಶ್ರೇಣಿಯ ಅಧಿಕಾರಿಯೊಬ್ಬರು ಮತ್ತು ಪಂಜಾಬ್ ಪ್ರಾಂತ್ಯದ ಪೊಲೀಸ್ ಇನ್‌ಸ್ಪೆಕ್ಟರ್ ಜನರಲ್ ಭಾಗವಹಿಸಿದ್ದರು.
ಹಫೀಜ್ ಮುಹಮ್ಮದ್ ಜಮೀಲ್: ಜೈಶ್-ಎ-ಮೊಹಮ್ಮದ್‌ನ ಸದಸ್ಯನಾಗಿದ್ದ ಜಮೀಲ್, ಜೈಶ್ ಸಂಸ್ಥಾಪಕ ಮಸೂದ್ ಅಝರ್‌ನ ಒಡಹುಟ್ಟಿದವನಾಗಿದ್ದ. ಪಾಕಿಸ್ತಾನದ ಒಳಗಿನ ಬಹವಾಲ್ಪುರದ ಮರ್ಕಝ್ ಸುಭಾನ್ ಅಲ್ಲಾ ಶಿಬಿರದ ಉಸ್ತುವಾರಿಯನ್ನು ಇವನು ವಹಿಸಿದ್ದ. ಜತೆಗೆ ಜೈಶ್‌ಗೆ ಹಣ ಸಂಗ್ರಹಣೆಯಲ್ಲಿ ಸಕ್ರಿಯನಾಗಿದ್ದ ಎಂದು ಮೂಲಗಳು ತಿಳಿಸಿವೆ. ಬಹವಾಲ್ಪುರ ಶಿಬಿರವು ನೇಮಕಾತಿ, ತರಬೇತಿ, ಮತ್ತು ಮತಾಂಧತೆಗೆ ಬಳಸಲ್ಪಡುತ್ತಿತ್ತು ಮತ್ತು ಅಝರ್ ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ. ಮೇ 7ರಂದು ಈ ಶಿಬಿರದ ಮೇಲಿನ ದಾಳಿಯಲ್ಲಿ ಅಝರ್‌ನ ಕನಿಷ್ಠ 10 ಕುಟುಂಬದ ಸದಸ್ಯರು ಮತ್ತು ಆತನ ನಾಲ್ಕು ಸಹಾಯಕರು ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಮೊಹಮ್ಮದ್ ಯೂಸುಫ್ ಅಝರ್: ಉಸ್ತಾದ್ ಜಿ ಮತ್ತು ಮೊಹದ್ ಸಲೀಂ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಯೂಸುಫ್ ಅಝರ್ ಕೂಡ ಜೈಶ್‌ನ ಸದಸ್ಯನಾಗಿದ್ದ. ಇವನೂ ಮಸೂದ್ ಅಝರ್‌ನ ಒಡಹುಟ್ಟಿದವನಾಗಿದ್ದು, ಜೈಶ್‌ಗೆ ಶಸ್ತ್ರಾಸ್ತ್ರ ತರಬೇತಿ ನೋಡಿಕೊಳ್ಳುತ್ತಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಅನೇಕ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಇವನು, 1999ರಲ್ಲಿ ಐಸಿ-814 ವಿಮಾನ ಅಪಹರಣದಲ್ಲಿ (ಕಂದಹಾರ್ ಅಪಹರಣ) ಮಸೂದ್ ಅಝರ್‌ನ ಬಿಡುಗಡೆಗೆ ಕಾರಣನಾಗಿದ್ದ.
ಈ ಸುದ್ದಿಯನ್ನು ಓದಿ: Operation Sindoor: ಆಪರೇಷನ್ ಸಿಂದೂರ: ರಾಷ್ಟ್ರಕ್ಕೆ ರಣವೀಳ್ಯೆಯ ಮುಹೂರ್ತ
ಅಬು ಅಕಾಶ: ಖಾಲಿದ್ ಎಂದು ಕರೆಯಲ್ಪಡುತ್ತಿದ್ದ ಅಬು ಅಕಾಶ ಲಷ್ಕರ್ ಭಯೋತ್ಪಾದಕನಾಗಿದ್ದ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಹು ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದ ಇವನು, ಆಫ್ಘಾನಿಸ್ತಾನದಿಂದ ಲಷ್ಕರ್‌ಗೆ ಶಸ್ತ್ರಾಸ್ತ್ರ ಕಳ್ಳಸಾಗಾಣಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಫೈಸಲಾಬಾದ್‌ನಲ್ಲಿ ನಡೆದ ಈತನ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಫೈಸಲಾಬಾದ್‌ನ ಡೆಪ್ಯೂಟಿ ಕಮಿಷನರ್ ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಮೊಹಮ್ಮದ್ ಹಸನ್ ಖಾನ್: ನಿಷೇಧಿತ ಜೈಶ್ ಗುಂಪಿನ ಸದಸ್ಯನಾಗಿದ್ದ ಹಸನ್ ಖಾನ್, ಮೇ 7ರ ದಾಳಿಗಳಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ. ಇವನು ಪಿಒಕೆಯ ಜೈಶ್‌ನ ಕಾರ್ಯಾಚರಣೆಯ ಮುಖ್ಯಸ್ಥ ಮುಫ್ತಿ ಅಸ್ಘರ್ ಖಾನ್ ಕಾಶ್ಮೀರಿಯ ಮಗನಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಈ ಎಲ್ಲ ಭಯೋತ್ಪಾದಕರು ಮೂರು ದಿನಗಳ ಹಿಂದೆ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ಸೇನೆಯು ನಡೆಸಿದ ಮೊದಲ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ.