“ಹೆಣ್ಣು ಮಗು ಹುಟ್ಟಿದರೂ ಕೇಂದ್ರ ಸರ್ಕಾರವನ್ನೇ ದೂಷಿಸುತ್ತೀರಿ”: ವಿವಾದ ಹುಟ್ಟು ಹಾಕಿದ ಬಿಜೆಪಿ ಶಾಸಕ
AAP Slams BJP MLA: ಪಂಜಾಬ್ ಬಿಜೆಪಿ ಶಾಸಕ ಅಶ್ವನಿ ಶರ್ಮಾ ಹೆಣ್ಣುಮಕ್ಕಳ ಜನನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಯಾರದ್ದಾದರೂ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ ಅದು ಕೂಡ ಕೇಂದ್ರದ ತಪ್ಪಾಗುತ್ತದೆ ಎಂದು ಶಾಸಕರು ಹೇಳಿದ್ದು ವಿವಾದಕ್ಕೆ ಕಾರಣವಾಗಿದೆ.
ಪಂಜಾಬ್ ಬಿಜೆಪಿ ಶಾಸಕ ಅಶ್ವನಿ ಶರ್ಮಾ (ಸಂಗ್ರಹ ಚಿತ್ರ) -
ಚಂಡೀಗಢ, ಆ. 6: ಪಂಜಾಬ್ ವಿಧಾನಸಭೆಯಲ್ಲಿ ಗಣಿಗಾರಿಕೆ ಆದಾಯದ ಕುರಿತು ನಡೆದ ತೀವ್ರ ಚರ್ಚೆಯು ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಬಿಜೆಪಿ ಶಾಸಕ ಅಶ್ವನಿ ಶರ್ಮಾ (MLA Ashwani Sharma) ಈ ವೇಳೆ ಹೆಣ್ಣುಮಕ್ಕಳ ಜನನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಇದಕ್ಕೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (Aam Aadmi Party) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮಹಿಳೆಯರ ಬಗ್ಗೆ ಅವರು ತಾರತಮ್ಯದ ಮನೋಭಾವ ಪ್ರದರ್ಶಿಸಿದ್ದಾರೆ ಎಂದು ಎಎಪಿ ಆರೋಪಿಸಿತು.
ಪಂಜಾಬ್ ಬಿಜೆಪಿಯ ಮಾಜಿ ಅಧ್ಯಕ್ಷರಾಗಿದ್ದ ಅಶ್ವನಿ ಶರ್ಮಾ ನಂತರ ಕ್ಷಮೆಯಾಚಿಸಿ, ವ್ಯಾಪಕವಾಗಿ ಬಳಸಲಾಗುತ್ತಿರುವ ಒಂದು ಉದಾಹರಣೆಯನ್ನು ಉಲ್ಲೇಖಿಸಿರುವುದಾಗಿ ಹೇಳಿದರು. ಗಣಿ ಮತ್ತು ಭೂವಿಜ್ಞಾನ ಸಚಿವ ನರಿಂದರ್ ಕುಮಾರ್ ಗೋಯಲ್ ರಾಜ್ಯವು ಈ ವಲಯದಿಂದ ಗರಿಷ್ಠ ಆದಾಯವನ್ನು ಗಳಿಸಲು ಸಾಧ್ಯವಾಗದಿರುವ ಕಾರಣ ಕೇಂದ್ರವನ್ನು ದೂಷಿಸಿದಾಗ ವಿವಾದ ಆರಂಭವಾಯಿತು.
“ಕೇಂದ್ರ ಸರ್ಕಾರ ನಮಗೆ ಬೆಂಬಲ ನೀಡಿದ್ದರೆ, ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದಂತೆ ಗಣಿಗಾರಿಕೆ ಆದಾಯ 20,000 ಕೋಟಿ ರುಪಾಯಿ ತಲುಪುತ್ತಿತ್ತು. ಪಂಜಾಬ್ ಅಭಿವೃದ್ಧಿ ಹೊಂದುವುದನ್ನು ಕೇಂದ್ರ ಸರ್ಕಾರ ಬಯಸುವುದಿಲ್ಲ. ಅಕ್ರಮ ಗಣಿಗಾರಿಕೆಯ ಪ್ರತಿಯೊಂದು ದೂರಿನ ಮೇಲೂ ನಾವು ಕ್ರಮ ಕೈಗೊಳ್ಳುತ್ತೇವೆ. ಅಗತ್ಯವಿರುವಲ್ಲೆಲ್ಲ ಎಫ್‌ಐಆರ್‌ಗಳನ್ನು ದಾಖಲಿಸುತ್ತೇವೆ. ಅಲ್ಲದೆ ಅಕ್ರಮ ಗಣಿಗಾರಿಕೆಯ ವಿರುದ್ಧದ ನಮ್ಮ ಕ್ರಮಕ್ಕಾಗಿ ಕೇಂದ್ರ ಸರ್ಕಾರದಿಂದ ಮೆಚ್ಚುಗೆಯ ಪ್ರಶಸ್ತಿಯನ್ನು ಸಹ ಪಡೆದಿದ್ದೇವೆ” ಎಂದು ಗೋಯಲ್ ಹೇಳಿದರು.
ಪಂಜಾಬ್ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ: ಕಾನೂನು ಸುವ್ಯವಸ್ಥೆ ಬಗ್ಗೆ ಸರ್ಕಾರಕ್ಕೆ ಬಿಜೆಪಿ ಪ್ರಶ್ನೆ
ವಿವಾದದ ಕಿಡಿ ಹೊತ್ತಿದ್ದು ಹೇಗೆ?
ಕೇಂದ್ರ ಸರ್ಕಾರದ ಮೇಲೆ ಪದೇ ಪದೆ ಆರೋಪ ಹೊರಿಸುತ್ತಿರುವುದಕ್ಕೆ ಸಿಟ್ಟಿಗೆದ್ದ ಅಶ್ವನಿ ಶರ್ಮಾ, ʼʼಯಾರದ್ದಾದರೂ ಕುಟುಂಬದಲ್ಲಿ ಹೆಣ್ಣು ಮಗು ಹುಟ್ಟಿದರೆ ಅದು ಕೂಡ ಕೇಂದ್ರದ ತಪ್ಪಾಗುತ್ತದೆ. ಆದರೆ ಗಂಡು ಮಗು ಹುಟ್ಟಿದರೆ ಅದು ನಿಮ್ಮ ಕಠಿಣ ಪರಿಶ್ರಮದಿಂದ ಎಂಬಂತೆ ವರ್ತಿಸುತ್ತೀರಿ. ಎಲ್ಲದಕ್ಕೂ ಕೇಂದ್ರವನ್ನೇ ದೂಷಿಸುತ್ತೀರಿ” ಎಂದು ಎಎಪಿಯನ್ನು ಶರ್ಮಾ ತರಾಟೆಗೆ ತೆಗೆದುಕೊಂಡರು.
ಇದು ಆಪ್ ನಾಯಕರ ಆಕ್ರೋಶಕ್ಕೆ ಕಾರಣವಾಯಿತು. “ನೀವು ಹುಡುಗರು ಮತ್ತು ಹುಡುಗಿಯರ ನಡುವೆ ವ್ಯತ್ಯಾಸ ಮಾಡುತ್ತೀರಾ? ಹುಡುಗಿಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ನಿಮ್ಮ ಪ್ರಧಾನಿ 'ಬೇಟಿ ಬಚಾವೋ, ಬೇಟಿ ಪಡಾವೋ' ಬಗ್ಗೆ ಮಾತನಾಡುತ್ತಾರೆ. ಆದರೆ, ಹೆಣ್ಣುಮಕ್ಕಳು ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಅಶ್ವನಿ ಶರ್ಮಾ ಪ್ರತಿ ಹೆಣ್ಣು ಮಗುವಿನ ಕ್ಷಮೆಯಾಚಿಸಬೇಕು. ಅವರು ತಮ್ಮ ಕಿವಿಗಳನ್ನು ಹಿಡಿದು ಕ್ಷಮೆಯಾಚಿಸಬೇಕು” ಎಂದು ಸಚಿವ ಅಮನ್ ಅರೋರಾ ಹೇಳಿದರು.
ಈ ಗದ್ದಲದ ನಂತರ ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ ಶರ್ಮಾ, ಪಂಜಾಬ್‌ನಲ್ಲಿ ಪ್ರಚಲಿತದಲ್ಲಿರುವ ಒಂದು ಪದಗುಚ್ಛವನ್ನು ತಾವು ಬಳಸಿರುವುದಾಗಿ ಹೇಳಿದರು. “ನಾನು ಪಂಜಾಬ್‌ನಲ್ಲಿ ಸಾಮಾನ್ಯವಾಗಿ ಮಾತನಾಡುವ ಒಂದು ನುಡಿಗಟ್ಟು ಬಳಸಿದ್ದೇನೆ. ಅದರ ನಂತರವೂ, ಆ ಹೇಳಿಕೆ ಅನುಚಿತವೆಂದು ಭಾವಿಸಿದರೆ, ಅದನ್ನು ದಾಖಲೆಯಿಂದ ತೆಗೆದುಹಾಕಬೇಕು. ನಮ್ಮ ಹೆಣ್ಣುಮಕ್ಕಳ ಆಶೀರ್ವಾದವನ್ನು ಪಡೆದ ನಂತರ ನಾವು ನಮ್ಮ ಮನೆಯಿಂದ ಹೊರಬರುತ್ತೇವೆ. ನಾನು ಬಳಸಿದ ಯಾವುದೇ ಪದದಿಂದ ಯಾರಿಗಾದರೂ ನೋವಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಶರ್ಮಾ ತಿಳಿಸಿದರು.