IPL 2025: ಐದನೇ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಕೆಎಲ್ ರಾಹುಲ್!
ಗುಜರಾತ್ ಟೈಟನ್ಸ್ ವಿರುದ್ದದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೆಎಲ್ ರಾಹುಲ್ ಶತಕವನ್ನು ಸಿಡಿಸಿದ್ದಾರೆ. ಆ ಮೂಲಕ ತಮ್ಮ ಐಪಿಎಲ್ ವೃತ್ತಿ ಜೀವನದಲಿ ಐದನೇ ಶತಕವನ್ನು ಪೂರ್ಣಗೊಳಿಸುವ ಮೂಲಕ ಹಲವು ದಾಖಲೆಗಳನ್ನು ಬರೆದಿದ್ದಾರೆ.



ಗುಜರಾತ್ vs ಡೆಲ್ಲಿ
ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಶುಭಮನ್ ಗಿಲ್, ಎದುರಾಳಿ ಡೆಲ್ಲಿ ತಂಡವನ್ನು ಮೊದಲ ಬ್ಯಾಟಿಂಗ್ಗೆ ಆಹ್ವಾನ ನೀಡಿದ್ದರು.

ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಕೆಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದರು. ಅವರು ಆಡಿದ್ದ 65 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 112 ರನ್ಗಳನ್ನು ದಾಖಲಿಸಿದರು. ಆ ಮೂಲಕ ಮೂರು ವರ್ಷಗಳ ಬಳಿಕ ಮೊದಲ ಶತಕವನ್ನು ಪೂರ್ಣಗೊಳಿಸಿದರು.

ಶುಭಮನ್ ಗಿಲ್ ದಾಖಲೆ ಮುರಿದ ರಾಹುಲ್
2022ರ ಬಳಿಕ ಇದೇ ಮೊದಲ ಬಾರಿ ಕೆಎಲ್ ರಾಹುಲ್ ಐಪಿಎಲ್ ಟೂರ್ನಿಯಲ್ಲಿ ಶತಕವನ್ನು ಬಾರಿಸಿದರು. ಅವರು ತಮ್ಮ ಐಪಿಎಲ್ ವೃತ್ತಿ ಜೀವನದಲ್ಲಿ ಐದನೇ ಶತಕವನ್ನು ಪೂರ್ಣಗೊಳಿಸಿದ್ದಾರೆ. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಸಿಡಿಸಿದ ಬ್ಯಾಟ್ಸ್ಮನ್ಗಳ ಸಾಲಿನಲ್ಲಿ ಶುಭಮನ್ ಗಿಲ್ (4 ಶತಕ) ಅವರನ್ನು ರಾಹುಲ್ ಹಿಂದಿಕ್ಕಿದ್ದಾರೆ.

ಐದನೇ ಬ್ಯಾಟ್ಸ್ಮನ್
ವಿಕೆಟ್ ಕೀಪರ್ ಕೆಎಲ್ ರಾಹುಲ್ ಪ್ರಸ್ತುತ ನಡೆಯುತ್ತಿರುವ 2025ರ ಐಪಿಎಲ್ ಟೂರ್ನಿಯಲ್ಲಿ ಶತಕ ಸಿಡಿಸಿದ ಐದನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪ್ರಿಯಾಂಶ್ ಆರ್ಯ, ಇಶಾನ್ ಕಿಶನ್, ವೈಭವ್ ಸೂರ್ಯವಂಶಿ ಹಾಗೂ ಅಭಿಷೇಕ್ ಶರ್ಮಾ ಅವರು ಈ ಸೀಸನ್ನಲ್ಲಿ ಶತಕಗಳನ್ನು ಬಾರಿಸಿದ್ದಾರೆ.

ಮೊದಲ ಭಾರತೀಯ ಬ್ಯಾಟ್ಸ್ಮನ್
ಐಪಿಎಲ್ ಟೂರ್ನಿಯಲ್ಲಿ ಮೂರು ವಿಭಿನ್ನ ಫ್ರಾಂಚೈಸಿಗಳ ಪರ ಶತಕವನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಕೆಎಲ್ ರಾಹುಲ್ ಬರೆದಿದ್ದಾರೆ. ಇವರು ಪಂಜಾಬ್ ಕಿಂಗ್ಸ್, ಲಖನೌ ಸೂಪರ್ ಜಯಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಶತಕಗಳನ್ನು ಬಾರಿಸಿದ್ದಾರೆ. 2020ರಲ್ಲಿ ಶಿಖರ್ ಧವನ್ ಬಳಿಕ ಡೆಲ್ಲಿ ಪರ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ದಾಖಲೆ ಮುರಿದ ಕೆಎಲ್
ಗುಜರಾತ್ ಟೈಟನ್ಸ್ ವಿರುದ್ದ ಶತಕ ಸಿಡಿಸುವ ಜೊತೆಗೆ ಕೆಎಲ್ ರಾಹುಲ್ ಅವರು ತಮ್ಮ ಟಿ20 ಕ್ರಿಕೆಟ್ ವೃತ್ತಿ ಜೀವನದಲ್ಲಿ 8000 ರನ್ಗಳನ್ನು ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ವೇಗವಾಗಿ 8000 ರನ್ಗಳನ್ನು ಪೂರ್ಣಗೊಳಿಸಿದ ಮೊದಲ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಳ್ಳುವ ಮೂಲಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದ್ದಾರೆ.