Duniya Vijay: ಮತ್ತೊಂದು ತೆಲುಗು ಚಿತ್ರದಲ್ಲಿ ದುನಿಯಾ ವಿಜಯ್; ಪುರಿ ಜಗನ್ನಾಥ್-ವಿಜಯ್ ಸೇತುಪತಿ ಸಿನಿಮಾಕ್ಕೆ ಎಂಟ್ರಿ
ಪೋಷಕ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟು ಬಳಿಕ ನಾಯಕನಾಗಿ ಭಡ್ತಿ ಪಡೆದು, ಇದೀಗ ನಿರ್ಮಾಪಕ, ನಿರ್ದೇಶಕನಾಗಿ ಮಿಂಚುತ್ತಿರುವ ದುನಿಯಾ ವಿಜಯ್ ಪರಭಾಷೆಯಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ʼಮೂಕುತಿ ಅಮ್ಮನ್ 2ʼ ಸಿನಿಮಾ ಮೂಲಕ ಕಾಲಿವುಡ್ಗೆ ಕಾಲಿಟ್ಟಿದ್ದ ಅವರು ಇದೀಗ 2ನೇ ತೆಲುಗು ಸಿನಿಮಾ ಒಪ್ಪಿಕೊಂಡಿದ್ದಾರೆ. ಟಾಲಿವುಡ್ನ ಮಾಸ್ ಚಿತ್ರಗಳ ನಿರ್ದೇಶಕ ಪುರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಲಿರುವ ಈ ಚಿತ್ರದಲ್ಲಿ ವಿಜಯ್ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ವಿಜಯ್ ಸೇತುಪತಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಾರ್ಮಿ ಕೌರ್, ದುನಿಯಾ ವಿಜಯ್, ವಿಜಯ್ ಸೇತುಪತಿ -
Ramesh B
Apr 29, 2025 3:11 PM
ಟಾಲಿವುಡ್ ಚಿತ್ರ ಒಪ್ಪಿಕೊಂಡ ದುನಿಯಾ ವಿಜಯ್
ಹೈದರಾಬಾದ್: ಟಾಲಿವಿಡ್ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಕಾಂಬಿನೇಷನ್ ಸಿನಿಮಾ ಈಗಾಗಲೇ ತಾರಾಬಳಗದ ಮೂಲಕ ಕುತೂಹಲ ಹೆಚ್ಚಿಸಿದೆ. ಬಹುಭಾಷಾ ನಟಿ ಟಬು ಇತ್ತೀಚೆಗಷ್ಟೇ ಚಿತ್ರತಂಡ ಸೇರಿಕೊಂಡಿದ್ದು, ಇದೀಗ ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ ಎಂಟ್ರಿ ಕೊಟ್ಟಿದ್ದಾರೆ.
2ನೇ ತೆಲುಗು ಚಿತ್ರ
ʼವೀರ ಸಿಂಹ ರೆಡ್ಡಿʼ ಬಳಿಕ ವಿಜಯ್ ನಟಿಸಲಿರುವ ಎರಡನೇ ತೆಲುಗು ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ದುನಿಯಾ ವಿಜಯ್ ಅಭಿನಯಿಸಲಿದ್ದು, ಅವರನ್ನು ತಮ್ಮ ತಂಡಕ್ಕೆ ಪುರಿ ಜಗನ್ನಾಥ್ ಹಾಗೂ ನಿರ್ಮಾಪಕಿ ಚಾರ್ಮಿ ಬರ ಮಾಡಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾ ಸಿನಿಮಾ
ಪುರಿ ಜಗನ್ನಾಥ್ ಬರೆದು, ನಿರ್ದೇಶಿಸುತ್ತಿರುವ ಈ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಪುರಿ ಕನೆಕ್ಟ್ ಬ್ಯಾನರ್ನಡಿ ಮೂಡಿಬರಲಿದೆ. ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ಪುರಿ ಜಗನ್ನಾಥ್ ಹಾಗೂ ಚಾರ್ಮಿ ಕೌರ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಜೂನ್ನಿಂದ ಚಿತ್ರತಂಡ ಶೂಟಿಂಗ್ ಅಖಾಡಕ್ಕೆ ಇಳಿಯಲಿದೆ.
ವಿಲನ್ ಪಾತ್ರದಲ್ಲಿ ಮೋಡಿ ಮಾಡಿದ್ದ ವಿಜಯ್
ಈ ಹಿಂದೆ ದುನಿಯಾ ವಿಜಯ್ 2023ರಲ್ಲಿ ಬಿಡುಗಡೆಯಾದ ʼವೀರ ಸಿಂಹ ರೆಡ್ಡಿʼ ತೆಲುಗು ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ನಂದಮೂರಿ ಬಾಲಕೃಷ್ಣ, ವರಲಕ್ಷ್ಮೀ ಶರತ್ ಕುಮಾರ್, ಶ್ರುತಿ ಹಾಸನ್ ಮತ್ತಿತರರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ನೆಗೆಟಿವ್ ರೋಲ್ನಲ್ಲಿ ವಿಜಯ್ ಮಿಂಚಿದ್ದರು. ಅವರ ಅಭಿನಯಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲದೆ ಫಿಲ್ಮ್ಫೇರ್ ಪ್ರಶಸ್ತಿಗೂ ಭಾಜನರಾಗಿದ್ದರು.
5 ವರ್ಷಗಳ ಬಳಿಕ ಟಾಲಿವುಡ್ಗೆ ಮರಳಿದ ಟಬು
ಬಹುಭಾಷಾ ನಟಿ ಟಬು ಸುಮಾರು 5 ವರ್ಷಗಳ ಬಳಿಕ ಟಾಲಿವುಡ್ಗೆ ಮರಳಿದ್ದಾರೆ. 2020ರಲ್ಲಿ ತೆರೆಕಂಡ ಅಲ್ಲು ಅರ್ಜುನ್-ಪೂಜಾ ಹೆಗಡೆ ನಟನೆಯ ʼಅಲ ವೈಕುಂಠಪುರಮುಲೋ ʼತೆಲುಗು ಚಿತ್ರದಲ್ಲಿ ಟಬು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಇದೀಗ 5 ವರ್ಷಗಳ ಬಳಿಕ ಮತ್ತೆ ಟಾಲಿವುಡ್ಗೆ ಕಾಲಿಟ್ಟದ್ದಾರೆ.