ಸ್ಯಾಂಡಲ್ವುಡ್ನಲ್ಲಿ ಮರುಕಳಿಸಲಿದೆ 2022ರ ಸುವರ್ಣ ಯುಗ; ಭರವಸೆ ಮೂಡಿಸಿದ ಚಿತ್ರಗಳಿವು
ಇದುವರೆಗೆ ಸೋತು ಸೊರಗಿದ ಸ್ಯಾಂಡಲ್ವುಡ್ಗೆ ʼಸೋ ಫ್ರಮ್ ಸೋʼ ಚಿತ್ರದ ಮೂಲಕ ಗೆಲುವಿನ ಸಿಂಚನವಾಗಿದೆ. ದ್ವಿತೀಯಾರ್ಧದಲ್ಲಿ ಸಾಲು ಸಾಲು ಸ್ಟಾರ್ಗಳ ಚಿತ್ರ ತೆರೆಗೆ ಬರಲಿದ್ದು, 2022ರ ಸುವರ್ಣ ಯುಗ ಮತ್ತೆ ಮರುಕಳಿಸುವ ಎಲ್ಲ ಸಾಧ್ಯತೆ ಇದೆ. 2022ರಲ್ಲಿ ತೆರೆಕಂಡ ʼಕೆಜಿಎಫ್ 2ʼ, ʼಕಾಂತಾರʼ, ʼ777 ಚಾರ್ಲಿʼ, ʼವಿಕ್ರಾಂತ್ ರೋಣʼ ಮತ್ತು ʼಜೇಮ್ಸ್ʼ ಸಿನಿಮಾಗಳು 100 ಕೋಟಿ ರೂ. ಕ್ಲಬ್ ಸೇರಿದ್ದವು. ಅದೇ ರೀತಿಯ ಗೆಲುವು ಈ ವರ್ಷದ ದ್ವಿತೀಯಾರ್ಧದಲ್ಲಿ ದೊರೆಯುವ ಸಾಧ್ಯತೆ ಇದೆ ಎಂದು ಬಾಕ್ಸ್ ಆಫೀಸ್ ತಜ್ಞರು ಊಹಿಸಿದ್ದಾರೆ. ರಿಲೀಸ್ ಆಗಲಿರುವ ಸಿನಿಮಾಗಳು ಈಗಾಗಲೇ ಅಂತಹ ಭರವಸೆ ಮೂಡಿಸಿದ್ದು, ಆ ಮೂಲಕ ಸ್ಯಾಂಡಲ್ವುಡ್ ಮತ್ತೊಮ್ಮೆ ಮಿಂಚಲು ಸಜ್ಜಾಗಿದೆ. ಗೆಲುವಿನ ಭರವಸೆ ಮೂಡಿಸಿರುವ ಚಿತ್ರಗಳ ಪಟ್ಟಿ ಇಲ್ಲಿದೆ.



ʼಕಾಂತಾರ: ಚಾಪ್ಟರ್ 1ʼ
ಸ್ಯಾಂಡಲ್ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯಿಸಿ, ಆ್ಯಕ್ಷನ್ ಕಟ್ ಹೇಳಿರುವ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ʼಕಾಂತಾರ: ಚಾಪ್ಟರ್ 1ʼ. ʼಕಾಂತಾರʼ ಸಿನಿಮಾದ ಕಥೆ ನಡೆಯುದಕ್ಕೆ ಮೊದಲು ಏನಾಗಿತ್ತು ಎನ್ನುವುದನ್ನು ರಿಷಬ್ ಶೆಟ್ಟಿ ಈ ಭಾಗದಲ್ಲಿ ವಿವರಿಸಲಿದ್ದಾರೆ. ಇದೇ ಕಾರಣಕ್ಕೆ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಇದು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣಲಿದ್ದು, ಈಗಾಗಲೇ ಅದ್ಧೂರಿ ಮೇಕಿಂಗ್ ಮೂಲಕ ಗಮನ ಸೆಳೆದಿದೆ. ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸುತ್ತಿದೆ.

ʼದಿ ಡೆವಿಲ್ʼ
ಸದ್ಯ ಸ್ಯಾಂಡಲ್ವುಡ್ನಲ್ಲಿ ಭಾರಿ ಕುತೂಹಲ ಮೂಡಿಸಿರುವ ಚಿತ್ರಗಳ ಪೈಕಿ ʼದಿ ಡೆವಿಲ್ʼ (The Devil) ಕೂಡ ಒಂದು. ದರ್ಶನ್ ಅಭಿನಯದ ಸಿನಿಮಾ ಎನ್ನುವ ಕಾರಣಕ್ಕೆ ಇದು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಬಳಿಕ ತೆರೆ ಕಾಣಲಿರುವ ದರ್ಶನ್ ಚಿತ್ರ ಇದಾಗಿದ್ದು, ಈಗಾಗಲೇ ಶೂಟಿಂಗ್ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇತ್ತೀಚೆಗೆ ದರ್ಶನ್ ಥಾಯ್ಲೆಂಡ್ಗೆ ತೆರಳಿ ಹಾಡಿನ ಚಿತ್ರೀಕರಣ ನಡೆಸಿ ಬಂದಿದ್ದಾರೆ. ಈ ವರ್ಷವೇ ಸಿನಿಮಾ ತೆರೆಕಾಣಲಿದ್ದು, ಡೇಟ್ ಅನೌನ್ಸ್ ಆಗಬೇಕಿದೆ. ʼತಾರಕ್ʼ ಬಳಿಕ ಪ್ರಕಾಶ್ ವೀರ್ ಚಾಲೆಂಜಿಂಗ್ ಸ್ಟಾರ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದೆ.

ʼ45ʼ
ಕರುನಾಡ ಚಕ್ರವರ್ತಿ ಶಿವ ರಾಜಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ. ಶೆಟ್ಟಿ ಮೊದಲ ಬಾರಿಗೆ ಜತೆಯಾಗಿ ನಟಿಸುತ್ತಿರುವ ಚಿತ್ರ ʼ45ʼ ಕೂಡ ಗೆಲುವಿನ ನಿರೀಕ್ಷೆ ಮೂಡಿಸಿದೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದಾಗಿದ್ದು, ಎಂ. ರಮೇಶ್ ರೆಡ್ಡಿ ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ನಲ್ಲಿ ನಿರ್ಮಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡು ಹಾಗೂ ಟೀಸರ್ ಜನರ ಮನ ಗೆದ್ದಿದೆ. ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಸಿನಿಮಾತಂಡ ಪ್ರಚಾರ ಕಾರ್ಯ ಆರಂಭಿಸಿದೆ.

ʼಕೆಡಿʼ
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ಜೋಗಿ ಪ್ರೇಮ್ ಮೊದಲ ಬಾರಿ ಒಂದಾಗುತ್ತಿರುವ ʼಕೆಡಿʼ ದೇಶದ ಚಿತ್ರಪ್ರೇಮಿಗಳ ಗಮನ ಸೆಳೆದಿದೆ. ಘಟಾನುಘಟಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ನ ಸಂಜಯ್ ದತ್, ಶಿಲ್ಪಾ ಶೆಟ್ಟಿ ಅನೇಕ ವರ್ಷಗಳ ಬಳಿಕ ಸ್ಯಾಂಡಲ್ವುಡ್ಗೆ ಮರಳಿದ್ದು, ವಿ. ರವಿಚಂದ್ರನ್, ರಮೇಶ್ ಅರವಿಂದ್, ರೀಷ್ಮಾ ನಾಣಯ್ಯ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಿಲೀಸ್ ದಿನಾಂಕ ಸದ್ಯದಲ್ಲೇ ಘೋಷಣೆಯಾಗಲಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಇದು ತೆರೆ ಕಾಣಲಿದೆ.

ʼಕೊತ್ತಲವಾಡಿʼ
ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ತಮ್ಮದೇ ಪಿಎ ಪ್ರೊಡಕ್ಷನ್ಸ್ ಸ್ಥಾಪಿಸಿ ಅದರ ಮೂಲಕ ನಿರ್ಮಿಸಿರುವ ಮೊದಲ ಚಿತ್ರ ʼಕೊತ್ತಲವಾಡಿʼ ಈಗಾಗಲೇ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದೆ. ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿರುವ ಇದು ಆಗಸ್ಟ್ 1ರಂದು ರಿಲೀಸ್ ಆಗಲಿದೆ. ಪೃಥ್ವಿ ಅಂಬಾರ್ ಮತ್ತು ಕಾವ್ಯಾ ಶೈವ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಯುವ ಪ್ರತಿಭೆ ಶ್ರೀರಾಜ್ ಅವರ ನಿರ್ದೇಶನವಿದೆ. ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ.