IPL 2025: ಆರ್ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಎಲ್ಲಾ ತಂಡಗಳ ಪ್ಲೇಆಫ್ಸ್ ಲೆಕ್ಕಾಚಾರ!
IPL 2025 Playoffs Scenario: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಅವಧಿಯ ಪಂದ್ಯಗಳ ಮುಗಿದಿವೆ. ಇದೀಗ ಟೂರ್ನಿಯ ಎರಡನೇ ಅವಧಿಯ ಪಂದ್ಯಗಳು ನಡೆಯುತ್ತಿವೆ. ಪ್ಲೇಆಫ್ಸ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಎಲ್ಲಾ ತಂಡಗಳು ಕೂಡ ಪ್ರಯತ್ನದಲ್ಲಿವೆ. ಈ ಹಿನ್ನೆಲೆಯಲ್ಲಿ ಮುಂದಿನ ಪಂದ್ಯಗಳು ಅತ್ಯಂತ ತೀವ್ರ ಕುತೂಹಲ ಕೆರಳಿಸಿವೆ. ಅಂದ ಹಾಗೆ ಎಲ್ಲಾ ತಂಡಗಳ ಪ್ಲೇಆಫ್ಸ್ ಲೆಕ್ಕಚಾರ ಇಲ್ಲಿದೆ.



ಗುಜರಾತ್ ಟೈಟನ್ಸ್
ಕಳೆದ ಆವೃತ್ತಿಯಲ್ಲಿ ನೀರಸ ಪ್ರದರ್ಶನ ತೋರಿದ್ದ ಗುಜರಾತ್ ಟೈಟನ್ಸ್ ತಂಡ, ಪ್ರಸಕ್ತ ಋತುವಿನಲ್ಲಿ ಅತ್ಯುತ್ತಮವಾಗಿ ಕಮ್ಬ್ಯಾಕ್ ಮಾಡಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳಿಂದ 6 ರಲ್ಲಿ ಗೆಲುವು ಪಡೆದು ಒಟ್ಟು 12 ಅಂಕಗಳನ್ನು ಹೊಂದಿದ್ದು ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ. +1.104ರ ಅತ್ಯುತ್ತಮ ರನ್ ರೇಟ್ ಹೊಂದಿರುವ ಗುಜರಾತ್ ಟೈಟನ್ಸ್ ಇನ್ನುಳಿದ 6 ಪಂದ್ಯಗಳ ಪೈಕಿ ಎರಡರಲ್ಲಿ ಗೆಲುವು ಪಡೆದರೆ ಪ್ಲೇಆಫ್ಸ್ಗೆ ಅಧಿಕೃತವಾಗಿ ಅರ್ಹತೆ ಪಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್
ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ 2025ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದೆ. ಇಲ್ಲಿಯತನಕ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಇನ್ನುಳಿದ 7 ಪಂದ್ಯಗಳ ಪೈಕಿ ಡೆಲ್ಲಿ ತಂಡ ಮೂರರಲ್ಲಿ ಗೆಲುವು ಪಡೆದರೆ, ಟೂರ್ನಿಯ ಪ್ಲೇಆಫ್ಸ್ಗೆ ಲಗ್ಗೆ ಇಡಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಈ ಸೀಸನ್ನಲ್ಲಿ ಗಮನಾರ್ಹ ಪ್ರದರ್ಶನವನ್ನು ತೋರುತ್ತಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ ಆರ್ಸಿಬಿ 5ರಲ್ಲಿ ಗೆಲುವು ಪಡೆದಿದೆ ಹಾಗೂ +1.104ರ ರನ್ರೇಟ್ ಆಧಾರದ ಮೇಲೆ ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನವನ್ನು ಅಲಂಕರಿಸಿದೆ. ಇನ್ನುಳಿದ 6 ಪಂದ್ಯಗಳ ಪೈಕಿ 3 ಪಂದ್ಯಗಳನ್ನು ಗೆದ್ದರೆ ಆರ್ಸಿಬಿ ಪ್ಲೇಆಫ್ಸ್ಗೆ ಅಧಿಕೃತವಾಗಿ ಪ್ರವೇಶ ಮಾಡಲಿದೆ.

ಪಂಜಾಬ್ ಕಿಂಗ್ಸ್, ಲಖನೌ ಸೂಪರ್ ಜಯಂಟ್ಸ್
ಪಂಜಾಬ್ ಕಿಂಗ್ಸ್ (+0.177) ಹಾಗೂ ಲಖನೌ ಸೂಪರ್ ಜಯಂಟ್ಸ್ (+0.088) ತಂಡಗಳು ಕೂಡ ಆರ್ಸಿಬಿ (+1.104) ತಂಡದಂತೆ 10 ಅಂಕಗಳನ್ನು ಕಲೆ ಹಾಕಿವೆ. ಆದರೆ, ರನ್ರೇಟ್ ಕಡಿಮೆ ಇರುವ ಕಾರಣ ಪಾಯಿಂಟ್ಸ್ ಟೇಬಲ್ನಲ್ಲಿ ಕ್ರಮವಾಗಿ 4 ಮತ್ತು 5 ನೇ ಸ್ಥಾನಗಳನ್ನು ಅಲಂಕರಿಸಿವೆ. ಆದರೆ, ಈ ಎರಡೂ ತಂಡಗಳು ಕೂಡ ತಮ್ಮ-ತಮ್ಮ ಕೊನೆಯ 6 ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದರೆ, ಪ್ಲೇಆಫ್ಸ್ಗೆ ಲಗ್ಗೆ ಇಡಲಿವೆ.

ಮುಂಬೈ ಇಂಡಿಯನ್ಸ್
ಸ್ಟಾರ್ ಆಟಗಾರರನ್ನು ಒಳಗೊಂಡಿದ್ದರೂ ಮುಂಬೈ ಇಂಡಿಯನ್ಸ್ ತಂಡ ಟೂರ್ನಿಯ ಮೊದಲ ಅವಧಿಯಲ್ಲಿ ಸತತ ವೈಫಲ್ಯ ಅನುಭವಿಸಿತ್ತು. ಆದರೆ, ಇದೀಗ ಹ್ಯಾಟ್ರಿಕ್ ಗೆಲುವು ಪಡೆಯುವ ಮೂಲಕ 8 ಅಂಕಗಳನ್ನು ಕಲೆ ಹಾಕಿದೆ. ಇನ್ನುಳಿದ 6 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದರೆ ಐದು ಬಾರಿ ಚಾಂಪಿಯನ್ಸ್ ಪ್ಲೇಆಫ್ಸ್ಗೆ ಅಧೀಕೃತವಾಗಿ ಲಗ್ಗೆ ಇಡಲಿದೆ.

ಕೋಲ್ಕತಾ ನೈಟ್ ರೈಡರ್ಸ್
ಗುಜರಾತ್ ಟೈಟನ್ಸ್ ವಿರುದ್ದ ತನ್ನ ಕೊನೆಯ ಪಂದ್ಯದಲ್ಲಿ 39 ರನ್ಗಳಿಂದ ಸೋಲು ಅನುಭವಿಸಿದ ಬಳಿಕ ಕೋಲ್ಕತಾ ನೈಟ್ ರೈಡರ್ಸ್ ತಂಡದ ಪ್ಲೇಆಫ್ಸ್ ಹಾದಿ ಕಠಿಣವಾಗಿದೆ. ಇಲ್ಲಿಯವರೆಗೂ ಆಡಿದ 8 ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 3ರಲ್ಲಿ ಮಾತ್ರ. ಇನ್ನುಳಿದ 6 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಪಡೆದರೆ, ಕೆಕೆಆರ್ ಪ್ಲೇಆಫ್ಸ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಇದರಲ್ಲಿ ಎರಡರಲ್ಲಿ ಸೋತರೂ ಟೂರ್ನಿಯಿಂದ ಹೊರಬೀಳಲಿದೆ.

ರಾಜಸ್ಥಾನ್, ಹೈದರಾಬಾದ್, ಚೆನ್ನೈ
ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು 2025ರ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ಗೆ ಅರ್ಹತೆ ಪಡೆಯಬೇಕೆಂದರೆ, ಇನ್ನುಳಿದ ಆರೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾದ ಅಗತ್ಯವಿದೆ. ಇದರಲ್ಲಿ ಒಂದರಲ್ಲಿ ಸೋತರೂ ಈ ತಂಡಗಳ ನಾಕ್ಔಟ್ ಹಾದಿ ಅತ್ಯಂತ ಕಠಿಣವಾಗಲಿದೆ. ಇನ್ನು ಸನ್ರೈಸರ್ ರೈಸರ್ಸ್ ಹೈದರಾಬಾದ್ ತಂಡ ಇನ್ನುಳಿದ 7 ಪಂದ್ಯಗಳ ಪೈಕಿ 6 ರಲ್ಲಿ ಗೆಲುವು ಪಡೆದರೆ, ಪ್ಲೇಆಫ್ಸ್ಗೆ ಅರ್ಹತೆ ಪಡೆಯಲಿದೆ.