IPL 2025: ಆರ್ಸಿಬಿ ಪರ ಅಚ್ಚರಿಯ ಹೇಳಿಕೆ ಕೊಟ್ಟ ಅಂಬಾಟಿ ರಾಯುಡು!
ಹಾಲಿ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ ಸದ್ಯ ಮೂರನೇ ಸ್ಥಾನದಲ್ಲಿದೆ. ಇನ್ನುಳಿದ 6 ಪಂದ್ಯಗಳ ಪೈಕಿ ಕನಿಷ್ಠ ಮೂರು ಪಂದ್ಯ ಗೆದ್ದರೂ ತಂಡ ಪ್ಲೇ ಆಫ್ ಪ್ರವೇಶಿಸಲಿದೆ. ಆದರೆ ತಂಡಕ್ಕೆ ತವರಿನ ತಂದ್ಯಗಳು ಕಂಟಕವಾಗುತ್ತಿದೆ. ಆಡಿದ ಎಲ್ಲ ಮೂರು ಪಂದ್ಯಗಳನ್ನು ಸೋತಿದೆ.
-
Abhilash BC
Apr 22, 2025 12:54 PM
ಕಳೆದ ಕೆಲ ದಿನಗಳಿಂದ ಆರ್ಸಿಬಿ ತಂಡವನ್ನು ಟೀಕೆ ಮಾಡುತ್ತಿದ್ದ ಮಾಜಿ ಟೀಂ ಇಂಡಿಯಾ ಹಾಗೂ ಸಿಎಸ್ಕೆ ಆಟಗಾರ ಅಂಬಾಟಿ ರಾಯುಡು ಅವರು ಇದೀಗ ಅಚ್ಚರಿ ಎಂಬಂತೆ ಆರ್ಸಿಬಿ ತಂಡದ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ. ಹಾಲಿ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಉತ್ತಮವಾಗಿದ್ದು, ಪ್ಲೇಆಫ್ ಗೇರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಾಯುಡು, ತವರು ಮೈದಾನ ಹೊರತು ಪಡಿಸಿ ಹೊರಗಿನ ಮೈದಾನಗಳಲ್ಲಿ ಆರ್ಸಿಬಿ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಇದೇ ಪ್ರದರ್ಶನವನ್ನು ಮುಂದುವರಿಸಿದರೆ ಆರ್ಸಿಬಿ ಪ್ಲೇ-ಆಫ್ ಪ್ರವೇಶಿಸುವುದು ಖಚಿತ. ತವರಿನಲ್ಲಿಯೂ ಆರ್ಸಿಬಿ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲಿದೆ ಎಂದು ರಾಯುಡು ಹೇಳಿದ್ದಾರೆ.
ರಾಯುಡು ಅವರ ಈ ಹೇಳಿಕೆ ಆರ್ಸಿಬಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. ಹೌದು, ಇದುವರೆಗೂ ಆರ್ಸಿಬಿ ವಿರುದ್ಧ ಟೀಕೆ ಮತ್ತು ಕೇಡು ಬಯಸುತ್ತಿದ್ದ ರಾಯುಡು ಇದೀಗ ತಂಡದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಆರ್ಸಿಬಿ ತಂಡವನ್ನು ಪ್ಲೇಆಫ್ ಹಂತಕ್ಕೇರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ರಾಯುಡು ಹೇಳಿದ್ದಾರೆ.
ಆರ್ಸಿಬಿ ಈ ಬಾರಿ ಕಪ್ ಗೆಲ್ಲಲಿದೆ ಎಂದು ಕೂಡ ರಾಯುಡು ಹೇಳಿದ್ದಾರೆ. ಆರ್ಸಿಬಿ ಪ್ಲೇ-ಆಫ್ ಹಂತ ದಾಟೀದರೆ ಅವರನ್ನು ತಡೆಯುವುದು ಕಷ್ಟ. ಅಭಿಮಾನಿಗಳ ಬಹು ವರ್ಷದ ಕಪ್ ಕನಸು ಈ ಬಾರಿ ನನಸಾಗುವ ಸಾಧ್ಯತೆ ಇದೆ ಎಂದು ರಾಯುಡು ಅಭಿಪ್ರಾಯಪಟ್ಟಿದ್ದಾರೆ.
ರಾಯುಡು ಹೇಳಿಕೆಗೆ ಕೆಲ ಆರ್ಸಿಬಿ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದು, ಊಸರವಳ್ಳಿ ಬಣ್ಣ ಬದಲಿಸುವುದು ಗೊತ್ತು. ಚೆನ್ನೈ ಸೂಪರ್ ಕಿಂಗ್ಸ್ ಇನ್ನೇನು ಈ ಬಾರಿಯ ಟೂರ್ನಿಯಿಂದ ಹೊರಬೀಳಲಿದೆ. ಚೆನ್ನೈ ಸೋಲುತ್ತಿದ್ದಂತೆ ನೀವು ಟ್ರೋಲ್ ಆಗುತ್ತೀರಿ. ಹೀಗಾಗಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಆರ್ಸಿಬಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದೀರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ IPL 2025: ರಾಜಸ್ಥಾನ್ ವಿರುದ್ಧ ಕೇಳಿಬಂತು ಮ್ಯಾಚ್ ಫಿಕ್ಸಿಂಗ್ ಆರೋಪ