IPL 2025: MI vs DC ಪಂದ್ಯ ಮಳೆಯಿಂದ ರದ್ದಾದರೆ ಯಾವ ತಂಡಕ್ಕೆ ಲಾಭ? ಇಲ್ಲಿದೆ ಲೆಕ್ಕಾಚಾರ!
IPL 2025 Playoffs Scenario: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೂರು ತಂಡಗಳು ಈಗಾಗಲೇ ಪ್ಲೇಆಫ್ಸ್ಗೆ ಅರ್ಹತೆ ಪಡೆದಿವೆ. ಇನ್ನುಳಿದ ಒಂದು ಸ್ಥಾನಕ್ಕೆ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪೈಪೋಟಿ ನಡೆಸುತ್ತಿವೆ. ಈ ಎರಡೂ ತಂಡಗಳು ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಕಾದಾಟ ನಡೆಸಲಿವೆ. ಪ್ಲೇಆಫ್ಸ್ಗೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಈ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ.



ಮುಂಬೈ ಇಂಡಿಯನ್ಸ್ vs ಡೆಲ್ಲಿ ಕ್ಯಾಪಿಟಲ್ಸ್
ಹದಿನೆಂಟನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇಆಫ್ಸ್ ರೇಸ್ನಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುವ 63ನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯ ಈ ಎರಡೂ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿದೆ.

ನಾಲ್ಕನೇ ಸ್ಥಾನದಲ್ಲಿ ಮುಂಬೈ
ಮುಂಬೈ ಇಂಡಿಯನ್ಸ್ ತಂಡ ಇಲ್ಲಿಯವರೆಗೂ ಆಡಿದ 12 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಪಡೆಯುವ ಮೂಲಕ 14 ಅಂಕಗಳೊಂದಿಗೆ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ. ಟೂರ್ನಿಯ ಪ್ಲೇಆಫ್ಸ್ಗೆ ಅರ್ಹತೆ ಪಡೆಯಬೇಕೆಂದರೆ ಮುಂಬೈ ಇಂಡಿಯನ್ಸ್ ತಂಡ ಇನ್ನುಳಿದ ಎರಡೂ ಪಂದ್ಯಗಳಲ್ಲಿ ಗೆಲುವು ಪಡೆಯಬೇಕಾಗಿದೆ.

ಐದನೇ ಸ್ಥಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್
ಇನ್ನು ಅಕ್ಷರ್ ಪಟೇಲ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇಲ್ಲಿಯವರೆಗೂ ಆಡಿದ 12 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ಪಡೆಯುವ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಐದನೇ ಸ್ಥಾನವನ್ನು ಪಡೆದಿದೆ. ಇದೀಗ ಪ್ಲೇಆಫ್ಸ್ಗೆ ಡೆಲ್ಲಿ ಅರ್ಹತೆ ಪಡೆಯಬೇಕೆಂದರೆ ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಬೇಕಾಗಿದೆ.

ಮುಂಬೈನ ಹವಾಮಾನ ವರದಿ
ಮುಂದಿನ ನಾಲ್ಕು ದಿನಗಳ ಕಾಲ ಮುಂಬೈನ ಮಳೆಯಾಗಲಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇದೆ. ಮುಂಬೈ ನಗದರಲ್ಲಿ ಶೇ 80 ರೆಷ್ಟು ಮಳೆಯಾಗುವ ಸಾಧ್ಯತೆ ಇದೆ. ರಾತ್ರಿ ವೇಳೆ ಶೇ 25ರಷ್ಟು ಮಳೆಯಾಗಲಿದೆ ಎಂದು ವರದಿ ಹೇಳಿದೆ. ಹಾಗಾಗಿ ಪಂದ್ಯಕ್ಕೆ ಮಳೆ ಅಡ್ಡಿ ಉಂಟು ಮಾಡುವ ಸಾಧ್ಯತೆ ಇದೆ.

ಡೆಲ್ಲಿ-ಮುಂಬೈ ಪಂದ್ಯ ಮಳೆಗೆ ರದ್ದಾದರೆ ಏನು?
ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಣ ಪಂದ್ಯ ಮಳೆಯಿಂದ ರದ್ದಾದರೆ, ಇದು ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈಗೆ ಲಾಭವಾಗಲಿದೆ. ಏಕೆಂದರೆ ಡೆಲ್ಲಿ ತಂಡಕ್ಕಿಂತ ಮುಂಬೈ ಖಾತೆಯಲ್ಲಿ ಒಂದು ಅಂಕ ಹೆಚ್ಚುವರಿ ಇದೆ. ಒಂದು ವೇಳೆ ಮಳೆಯ ಕಾರಣ ಪಂದ್ಯದಲ್ಲಿ ಫಲಿತಾಂಶ ಮೂಡಿ ಬಂದಿಲ್ಲವಾದರೆ, ಉಭಯ ತಂಡಗಳು ಒಂದೊಂದು ಅಂಕವನ್ನು ಹಂಚಿಕೊಳ್ಳಲಿವೆ.

ಡೆಲ್ಲಿಯ ಪ್ಲೇಆಫ್ಸ್ ಲೆಕ್ಕಾಚಾರ ಏನು?
ಮಳೆಯಿಂದ ಪಂದ್ಯ ರದ್ದಾದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗೆಲ್ಲಬೇಕು. ಒಂದು ವೇಳೆ ಗೆದ್ದರೂ ಅಕ್ಷರ್ ಪಟೇಲ್ ನಾಯಕತ್ವದ ಡೆಲ್ಲಿಯ ಪ್ಲೇಆಫ್ಸ್ ಭವಿಷ್ಯ ಮೇ 26 ರಂದು ನಡೆಯುವ ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ಫಲಿತಾಂಶವನ್ನು ಅವಲಂಬಿಸಲಿದೆ. ಈ ಪಂದ್ಯದಲ್ಲಿ ಮುಂಬೈ ಸೋಲು ಅನುಭವಿಸಿದರೆ ಮಾತ್ರ ಡೆಲ್ಲಿ ನಾಕ್ಔಟ್ಗೆ ಅರ್ಹತೆ ಪಡೆಯಲಿದೆ.

ಮುಂಬೈ ಪ್ಲೇಆಫ್ಸ್ ಲೆಕ್ಕಾಚಾರ ಏನು?
ಬುಧವಾರದ ಪಂದ್ಯ ಮಳೆಗೆ ರದ್ದಾದರೆ ಮುಂಬೈ ಇಂಡಿಯನ್ಸ್ ಖಾತೆಯಲ್ಲಿ 15 ಅಂಕಗಳು ಸೇರ್ಪಡೆಯಾಗಲಿವೆ. ನಂತರ ಮೇ 24 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಅನುಭವಿಸಿದರೆ ಮುಂಬೈ ಅಧಿಕೃತವಾಗಿ ಪ್ಲೇಆಫ್ಸ್ಗೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಈ ಪಂದ್ಯದಲ್ಲಿ ಡೆಲ್ಲಿ ಗೆದ್ದರೆ, ಮುಂಬೈ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಪಂಜಾಬ್ ಎದುರು ಗೆಲ್ಲಬೇಕಾಗುತ್ತದೆ. ಇನ್ನು ಈ ಪಂದ್ಯ ಮಳೆಯಿಂದ ರದ್ದಾಗಿ ಒಂದು ಅಂಕ ಸಿಕ್ಕರೂ ಮುಂಬೈ 16 ಅಂಕಗಳೊಂದಿಗೆ ನಾಕ್ಔಟ್ಗೇರಲಿದೆ.