Pahalgam Terror Attack: ಉಗ್ರರ ದಾಳಿ ಖಂಡಿಸಿ ಕಪ್ಪು ಬಣ್ಣದಲ್ಲಿ ಮುದ್ರಿತಗೊಂಡ ಕಾಶ್ಮೀರಿ ಪತ್ರಿಕೆಗಳು; ಫೋಟೋ ನೋಡಿ
ಪಹಲ್ಗಾಮ್ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ಪ್ರವಾಸಿಗರು ಎಂದು ಬುಧವಾರ ಕಾಶ್ಮೀರದ ಹಲವಾರು ಪ್ರಮುಖ ಪತ್ರಿಕೆಗಳು ತಮ್ಮ ಮುಖಪುಟಗಳನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಿದವು. ಗ್ರೇಟರ್ ಕಾಶ್ಮೀರ್, ರೈಸಿಂಗ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತಾಮೀಲ್ ಇರ್ಷಾದ್ ಸೇರಿದಂತೆ ಪ್ರಮುಖ ಇಂಗ್ಲಿಷ್ ಮತ್ತು ಉರ್ದು ದಿನಪತ್ರಿಕೆಗಳು



ಜಮ್ಮು ಮತ್ತು ಕಾಶ್ಮೀರದಲ್ಲಿ ಮಂಗಳವಾರ ನರಮೇಧವೇ ನಡೆದಿದೆ. ಈ ವರೆಗೆ 26 ಜನರು ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕ್ರೂರ ಭಯೋತ್ಪಾದಕ ದಾಳಿಯ ವಿರುದ್ಧ ಬುಧವಾರ ಕಾಶ್ಮೀರದ ಪ್ರಮುಖ ಪತ್ರಿಕೆಗಳ ಮುಖಪುಟಗಳು ಕಪ್ಪು ಬಣ್ಣಕ್ಕೆ ತಿರುಗಿದವು.

ಕಾಶ್ಮೀರದಲ್ಲಿ ಕಳೆದ 35 ವರ್ಷಗಳಿಂದೀಚೆಗೆ ಇಂತಹ ಭೀಕರ ದಾಳಿ ಸಂಭವಿಸಿರಲಿಲ್ಲ ಎಂದು ತಿಳಿದು ಬಂದಿದೆ. ಗ್ರೇಟರ್ ಕಾಶ್ಮೀರ್ , ರೈಸಿಂಗ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ , ಅಫ್ತಾಬ್ ಮತ್ತು ತೈಮೀಲ್ ಇರ್ಷಾದ್ ಸೇರಿದಂತೆ ಹಲವು ಪತ್ರಿಕೆಗಳು ತಮ್ಮ ಮುಖಪುಟವನ್ನು ಕಪ್ಪು ಬಣ್ಣಕ್ಕೆ ತಿರುಗಿಸಿವೆ. ಭಯೋತ್ಪಾದಕರ ನೀಚ ಕೃತ್ಯವನ್ನು ಈ ಮೂಲಕ ಕಾಶ್ಮೀರದ ಪತ್ರಿಕೆಗಳು ಖಂಡಿಸಿವೆ.

ಕಾಶ್ಮೀರ ನಾಶವಾಗಿದೆ, ಕಾಶ್ಮೀರಿಗಳು ದುಃಖಿಸುತ್ತಿದ್ದಾರೆ ಎಂದು ಕಾಶ್ಮೀರದ ಇಂಗ್ಲಿಷ್ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ಬರೆದಿದೆ. ರಕ್ತಸಿಕ್ತ ಕಾಶ್ಮೀರ, 26 ಸಾವು ಎಂದು ಮತ್ತೊಂದು ಉರ್ದು ಪತ್ತಿಕೆಯೊಂದು ಪ್ರಕಟಿಸಿದೆ. ಕಪ್ಪು ಪೇಜ್ನಲ್ಲಿ ಬಿಳಿ ಅಕ್ಷರಗಳಿಂದ ಇದನ್ನು ಮುದ್ರಿಸಲಾಗಿದೆ.

ಕಾಶ್ಮೀರದಲ್ಲಿ ಹತ್ಯಾಕಂಡ ; ಹಿಂದೂಗಳ ನರಮೇಧ ಎಂದು ಮತ್ತೊಂದು ಪತ್ರಿಕೆ ಮುಖಪುಟದಲ್ಲಿ ಮುದ್ರಿಸಿದೆ. ಈ ಘಟನೆಯು "ಭೂಮಿಯ ಮೇಲಿನ ಸ್ವರ್ಗ" ಎಂಬ ತನ್ನ ಇಮೇಜ್ ಅನ್ನು ಮರಳಿ ಪಡೆಯಲು ಇನ್ನೂ ಶ್ರಮಿಸುತ್ತಿರುವ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ ಮೇಲೆ ಕರಾಳ ನೆರಳು ಬೀರಿದೆ ಎಂದು ಎಚ್ಚರಿಸಿದೆ. "ಕಾಶ್ಮೀರದ ಜನರು ಬಹಳ ಸಮಯದಿಂದ ಹಿಂಸಾಚಾರವನ್ನು ಸಹಿಸಿಕೊಂಡಿದ್ದಾರೆ, ಆದರೂ ಅವರ ಚೈತನ್ಯವು ಮುರಿಯದೆ ಉಳಿದಿದೆ. ಈ ದಾಳಿಯು ವಿಭಜನೆಯನ್ನು ಬಿತ್ತಬಾರದು, ಬದಲಾಗಿ ಭಯೋತ್ಪಾದನೆಯ ವಿರುದ್ಧ ನಮ್ಮನ್ನು ಒಗ್ಗೂಡಿಸಬೇಕು ಎಂದು ಪತ್ರಿಕೆಯಲ್ಲಿ ಬರೆಯಲಾಗಿದೆ.

ಸದ್ಯ ಜಮ್ಮು ಕಾಶ್ಮೀರ ಸ್ತಬ್ಧವಾಗಿದೆ. ಕಣಿವೆ ನಾಡಿನಲ್ಲಿ ಸೇನೆ ತನ್ನ ಕಾರ್ಯಾಚರಣೆ ಪ್ರಾರಂಭ ಮಾಡಿದೆ. ಈ ವರೆಗೆ ಘಟನೆಯಲ್ಲಿ 26 ಮಂದಿ ಮೃತಪಟ್ಟಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.